ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಶ್ಯರೂಪದಲ್ಲಿ ದೌರ್ಜನ್ಯ ಮುಂದುವರಿಕೆ

Last Updated 9 ಜುಲೈ 2012, 8:15 IST
ಅಕ್ಷರ ಗಾತ್ರ

ಶಿವಮೊಗ್ಗ: ಮಾತೃದೇವೋಭವ ಎಂದು ಹೇಳುತ್ತಲೇ ಅದಕ್ಕೆ ತದ್ವಿರುದ್ಧವಾಗಿ ಮಹಿಳೆಯರ ಮೇಲೆ ಇಂದಿಗೂ ಅದೃಶ್ಯರೂಪದಲ್ಲಿ ದೌರ್ಜನ್ಯಗಳು ಮುಂದುವರಿದಿವೆ ಎಂದು ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯೆ ಡಾ.ಉಷಾ ರಮೇಶ್ ವಿಷಾದ ವ್ಯಕ್ತಪಡಿಸಿದರು.

ನಗರದ ಪವಿತ್ರಾಂಗಣದಲ್ಲಿ ಭಾನುವಾರ ವಿಜಯ ಕಲಾನಿಕೇತನ ಹಮ್ಮಿಕೊಂಡಿದ್ದ ಡಾ.ಕೆ.ಎಸ್. ಪವಿತ್ರಾ ಅವರ `ಇಂದಿನ ಮಹಿಳೆಯ ಮಾನಸಿಕ ಸವಾಲುಗಳು~ ಹಾಗೂ `ಓ ಸಖಿ ನೀನೆಷ್ಟು ಸುಖಿ~ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕುಟುಂಬ ಅಥವಾ ಸಮಾಜದಲ್ಲಿ ಮಹಿಳೆ ಇಂದಿಗೂ ನಾನಾ ಆಯಾಮಗಳಲ್ಲಿ ಶೋಷಣೆಗಳನ್ನು ಅನುಭವಿಸುತ್ತಿದ್ದಾಳೆ. ತನ್ನ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶವಿಲ್ಲದೆ, ಸೂಕ್ತ ವೇದಿಕೆ ಇಲ್ಲದೆ ಎಲ್ಲಾ ಭಾವನೆಗಳನ್ನು ತನ್ನ ಮನಸ್ಸಿನಲ್ಲಿಯೇ ಹುದುಗಿಟ್ಟುಕೊಂಡು  ವೇದನೆಪಡುತ್ತಿದ್ದಾಳೆ ಎಂದು ವಿಷಾದಿಸಿದರು.

ಡಾ.ಪವಿತ್ರಾ ಅವರ ಪುಸ್ತಕಗಳು ಇಂತಹ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಮಹಿಳೆಯರ ಧೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಬಹಳ ಮುಖ್ಯವಾಗಿ ಯಾವುದೇ ಪುರುಷ ವಿರೋಧಿ ನಿಲುವನ್ನು ವ್ಯಕ್ತಪಡಿಸದೆ, ಮಹಿಳೆ ಪುರುಷರಿಬ್ಬರೂ ಸಮಾನರಾಗಿ ಸುಖ ದುಃಖಗಳಲ್ಲಿ ಭಾಗಿಯಾಗಬೇಕು ಎಂದು ನೀಡಲಾಗಿರುವ ಸಲಹೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸಮಾಜ ಮಾನವೀಯಗೊಂಡಿಲ್ಲ: ಪುಸ್ತಕಗಳ ಕುರಿತಾಗಿ ಮಾತನಾಡಿದ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ, ಸಮಾಜ ಇಂದಿಗೂ ಮಾನವೀಯಗೊಂಡಿಲ್ಲ. ಇದು ಮಹಿಳೆಯರ ಇಂದಿನ ಸ್ಥಿತಿಗತಿಗಳಿಂದ ಸಾಬೀತಾಗಿದೆ. ಏಕೆಂದರೆ ಒಂದೆಡೆ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಸಾಧನೆಗಳನ್ನು ತೋರುತ್ತಿದ್ದರೂ ಅದಕ್ಕೆ ತದ್ವಿರುದ್ಧವಾಗಿ ದೌರ್ಜನ್ಯಗಳು ಮುಂದುವರಿದಿವೆ ಎಂದು ತಿಳಿಸಿದರು.

ಹೆಣ್ಣು ಭ್ರೂಣಹತ್ಯೆ ಸಮಸ್ಯೆ ಇಂದಿಗೂ ಜೀವಂತವಾಗಿದ್ದು, 1996ರಿಂದ 2001ರ ನಡುವೆ 5 ಮಿಲಿಯನ್‌ನಷ್ಟು ಹುಟ್ಟಬಹುದಾಗಿದ್ದ ಕಂದಮ್ಮಗಳನ್ನು ಮೊಗ್ಗಿನಲ್ಲಿಯೇ ಚಿವುಟಿ ಹಾಕಲಾಗಿದೆ ಎಂಬ ಅಂಕಿ ಅಂಶಗಳು ಸಮಾಜವನ್ನು ದಂಗುಗೊಳಿಸಿದೆ. ಸಾಕ್ಷರತೆ ಪ್ರಮಾಣದಲ್ಲಿ ಪುರುಷ ಶೇಕಡ 76ರಿಂದ 78ನ್ನು ಮುಟ್ಟಿದ್ದರೆ ಮಹಿಳೆ ಶೇಕಡ 46 ನ್ನೂ ಮೀರಲಾಗಿಲ್ಲ. ಪೋಷಕಾಂಶಯುಕ್ತ ಆಹಾರದ ಕೊರತೆಯಿಂದಾಗಿ ಹೆರಿಗೆ ಸಂದರ್ಭದಲ್ಲಿ ಮರಣ ಹೊಂದುತ್ತಿದ್ದಾಳೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾಜ ಏನೇ ಆಧುನಿಕತೆ ಎಡೆ ಸಾಗಿದೆ ಎಂದು ಹೇಳಲಾಗುತ್ತಿದ್ದರೂ ಮಹಿಳೆಗೆ ಸಿಗಬೇಕಾಗಿದ್ದ ಸೂಕ್ತ ಭದ್ರತೆ ಯಾವುದೇ ಕ್ಷೇತ್ರದಲ್ಲಿ ದೊರೆಯುತ್ತಿಲ್ಲ. ಪರಿಣಾಮವಾಗಿ ಕುಟುಂಬ ಅಥವಾ ಸಮಾಜದಲ್ಲಿ ನಾನಾ ಒತ್ತಡಗಳನ್ನು ಎದುರಿಸುತ್ತಿದ್ದಾಳೆ ಎಂದು ವಿಷಾದ ವ್ಯಕ್ತಪಡಿಸಿದರು.

ಇವುಗಳ ಪರಿಹಾರದ ಕುರಿತಾಗಿ ಮಾತನಾಡುತ್ತಾ, ಮಹಿಳೆ ಮೊದಲಿಗೆ ತನ್ನ ಭಾವನೆಗಳನ್ನು ತಾನಾಗಿಯೇ ಬದಲಾಯಿಸಿ ಕೊಳ್ಳಬೇಕು. ಬದಲಾವಣೆಯ ಆರಂಭ ಇರುವುದು ಇಲ್ಲಿಯೇ. ಹಾಗೆಯೇ ಮಹಿಳೆಯನ್ನು ನೋಡುವ ಮನೋಭಾವನೆ ಹಾಗೂ ದೃಷ್ಟಿಕೋನಗಳಲ್ಲಿಯೂ ಬದಲಾವಣೆ ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಮಹಿಳೆಗೆ ಸ್ವಂತ ವ್ಯಕ್ತಿತ್ವವನ್ನು ಹೊಂದಿರುವವಳು ಎಂದು ಪರಿಗಣಿಸುವ ಕೆಲಸ ಮೊತ್ತಮೊದಲು ನಡೆಯಬೇಕಿದೆ. ಹುಟ್ಟಿನಿಂದಲೇ ಆಕೆಗೆ ಕೀಳರಿಮೆ ಬದಲಿಗೆ ನಂಬಿಕೆ, ಆತ್ಮವಿಶ್ವಾಸ, ಧೈರ್ಯ ತುಂಬುವಂತಹ ಕೆಲಸಗಳು ನಡೆಯಬೇಕು. ಸಾಂಘಿಕವಾಗಿ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರವೇ ಮಹಿಳೆಯರ ಬದುಕಿನಲ್ಲಿ ಏನಾದರೂ ಬದಲಾವಣೆಯನ್ನು ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.

ಇಂತಹ ಎಲ್ಲಾ ಮಾರ್ಗದರ್ಶನಗಳನ್ನು ಪವಿತ್ರಾ ಅವರ ಪುಸ್ತಕ ಒಳಗೊಂಡಿದೆ. ನಮ್ಮ ಭಾರತೀಯ ವೈದ್ಯೆಯರು ಇಂತಹ ಕೆಲಸಗಳನ್ನು ಹೆಚ್ಚು ಹೆಚ್ಚಾಗಿ ನಿರ್ವಹಿಸಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ಇಂತಹ ಸಾಹಿತ್ಯಗಳನ್ನಾಗಲೀ, ಸನ್ನಿವೇಶವನ್ನಾಗಲೀ ಕಾಣಲು ಸಾಧ್ಯವಿಲ್ಲ. ಮುಸ್ಲಿಂ ಹಾಗೂ ದಲಿತ ಮಹಿಳೆಯರ ನೋವುಗಳಿಗೆ ಸಂಬಂಧಿದಂತೆಯೂ ಪುಸ್ತಕಗಳು ಹೊರಬರಬೇಕು ಎಂದು ತಿಳಿಸಿದರು.
ವಿಜಯ ಕಲಾನಿಕೇತನದ ಅಧ್ಯಕ್ಷ ಡಾ.ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು.

ಲೇಖಕಿ ಡಾ.ಕೆ.ಎಸ್. ಪವಿತ್ರಾ ಉಪಸ್ಥಿತರಿದ್ದರು. ರಚನಾ ಮತ್ತು ಹಂಸಿಣಿ ಪ್ರಾರ್ಥಿಸಿದರು, ಡಾ.ಕೆ.ಎಸ್. ಶುಭ್ರತಾ  ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT