ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಷ್ಟ ಒಲಿದು ಬಂದಾಗ...

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಲವು ವಿವಾದ ಹಾಗೂ ಸಮಸ್ಯೆಗಳ ನಡುವೆಯೇ ಮತ್ತೆ ಯಶಸ್ಸಿನ ಹಾದಿ
ಹಿಡಿದಿರುವ ಭಾರತ ಹಾಕಿ ತಂಡಕ್ಕೆ ಈಗ ಕರ್ನಾಟಕದ ಭರತ್ ಚೆಟ್ರಿ ನೂತನ
ನಾಯಕ. ಆದರೆ ಅವರ ಮುಂದೆ ಸವಾಲಿನ ಹಾದಿ ಇದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಚೆಟ್ರಿಗೆ ಅಗ್ನಿ ಪರೀಕ್ಷೆ ಎದುರಾಗಲಿದೆ.

`ಇಂತಹ ಅವಕಾಶಕ್ಕಾಗಿ ನಾನು ಇಷ್ಟು ವರ್ಷ ಕಾಯಬೇಕಾಯಿತು. ಆ ಕಾಯುವಿಕೆಗೆ ಕೊನೆಗೂ ಪ್ರತಿಫಲ ಸಿಕ್ಕಿದೆ~ಭಾರತ ಹಾಕಿ ತಂಡದ ನಾಯಕತ್ವ ಒಲಿದ ಖುಷಿಯಲ್ದ್ದ್‌ದ ಕರ್ನಾಟಕದ ಭರತ್ ಚೆಟ್ರಿ ಹೇಳಿದ ಮಾತಿದು.

ನಿಜ, 114 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಚೆಟ್ರಿ ನಾಯಕತ್ವದ ಆಸೆಯನ್ನು ಪೂರ್ತಿಯಾಗಿ ಕೈಬಿಟ್ಟಿರಲಿಲ್ಲ. 10 ವರ್ಷಗಳಿಂದ ಇಂತಹ ಖುಷಿಯ ಕ್ಷಣಕ್ಕಾಗಿ ಕಾಯುತ್ತಿದ್ದರು.

`ಒಂದು ದಿನ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಬೇಕು ಎಂಬ ಆಸೆ ನನಗೂ ಇತ್ತು. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದೆ. ಈಗ ಆ ಅದೃಷ್ಟ ಒಲಿದು ಬಂದಿದೆ~ ಎಂಬ ಅವರ ಮಾತೇ ಇದಕ್ಕೆ ಸಾಕ್ಷಿ.

ಅನುಭವಿ ಗೋಲ್ ಕೀಪರ್ ಚೆಟ್ರಿ ಅವರ ಈ ಕನಸು ನನಸಾಗಲು ಪ್ರಮುಖ ಕಾರಣ ನೂತನ ಕೋಚ್ ಮೈಕಲ್ ನಾಬ್ಸ್. ಪ್ರತಿ ಟೂರ್ನಿಗೆ ತಂಡದ ನಾಯಕತ್ವ ಬದಲಾವಣೆ ಮಾಡುವುದು ನಾಬ್ಸ್ ಅವರ ತಂತ್ರದ ಒಂದು ಅಂಗ.

ಆಸ್ಟ್ರೇಲಿಯಾ ಪ್ರವಾಸಕ್ಕೆ 30 ವರ್ಷ ವಯಸ್ಸಿನ ಚೆಟ್ರಿ ಅವರನ್ನು ಈಗನಾಯಕರನ್ನಾಗಿ ನೇಮಿಸಲಾಗಿದೆ. `ನನ್ನ ಮೇಲೆ ವಿಶ್ವಾಸವಿಟ್ಟು ನಾಯಕತ್ವದ ಹೊಣೆ ನೀಡ್ದ್ದಿದಾರೆ. ನಮ್ಮದು ಸಮತೋಲನದಿಂದ ಕೂಡಿದ ತಂಡ.

ಇತ್ತೀಚೆಗೆ ಚೀನಾದ ಓರ್ಡೊಸ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಜಯಿಸಿರುವುದು ನಮ್ಮಲ್ಲಿ ಮತ್ತಷ್ಟು ಹುರುಪು ತುಂಬಿದೆ.
ಆ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವುದು ನನ್ನ ಮುಂದಿರುವ ಸವಾಲು~ ಎಂದು ಚೆಟ್ರಿ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಅಕ್ಟೋಬರ್ 12ರಂದು ಭಾರತ ತಂಡ 18 ದಿನಗಳ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಲಿದೆ. ಅ.17ರಿಂದ ಪಂದ್ಯಗಳು ನಡೆಯಲಿವೆ.

ಪ್ರವಾಸದ ವೇಳೆ ಹೊಸದಾಗಿ ರೂಪಿಸಲಾಗಿರುವ ತಲಾ 9 ಆಟಗಾರರನ್ನೊಳಗೊಂಡ ಪಂದ್ಯಗಳ ಎರಡು ಟೂರ್ನಿ ಹಾಗೂ ಅಂತರರಾಷ್ಟ್ರೀಯ ಹಾಕಿ ಟೂರ್ನಿ ನಡೆಯಲಿದೆ. ಆತಿಥೇಯ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಕೊರಿಯಾ ತಂಡಗಳು ಈ ಸರಣಿಯಲ್ಲಿ ಪಾಲ್ಗೊಳ್ಳಲಿವೆ.

ಚೆಟ್ರಿ ಮೂಲತಃ ಡಾರ್ಜಿಲಿಂಗ್‌ನವರು. ಅವರು 1995ರಲ್ಲಿ ಟೂರ್ನಿಯೊಂದರಲ್ಲಿ ಆಡಲು ಕರ್ನಾಟಕಕ್ಕೆ ಆಗಮಿಸಿದ್ದರು. ಬಳಿಕ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದರು.

ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗವೂ ಲಭಿಸಿತು. 1997ರಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಟೂರ್ನಿಯಲ್ಲಿ `ಅತ್ಯುತ್ತಮ ಗೋಲ್ ಕೀಪರ್~ ಎನಿಸಿಕೊಂಡಿದ್ದರು.

2001ರಲ್ಲಿ ಢಾಕಾದಲ್ಲಿ ನಡೆದ ಪ್ರಧಾನ ಮಂತ್ರಿ ಗೋಲ್ಡ್‌ಕಪ್ ಟೂರ್ನಿಯಲ್ಲಿ ಆಡುವ ಮೂಲಕ ಅಂತರರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ್ದರು.

`ಬೆಂಗಳೂರು ನನ್ನ ನೆಚ್ಚಿನ ನಗರಿ. ನನಗೆ ಅವಕಾಶ ಕಲ್ಪಿಸಿಕೊಟ್ಟ ನಗರಿ. ಹಾಗಾಗಿ ನಾನು ಇಲ್ಲಿಯೇ ನೆಲೆಸಿದ್ದೇನೆ. ನಾನೀಗ ಕರ್ನಾಟಕದ ಆಟಗಾರ~ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
 
`ಆಸ್ಟ್ರೇಲಿಯಾ ವಿರುದ್ಧದ ಸರಣಿ ಖಂಡಿತ ಸವಾಲಿನಿಂದ ಕೂಡಿರಲಿದೆ. ಜೊತೆಗೆ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಸಮೀಪಿಸುತ್ತಿವೆ. ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವುದು ನಮ್ಮ ಮುಖ್ಯ ಗುರಿ.
 
ನಾವು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ದಕ್ಷಿಣ ಕೇಂದ್ರದಲ್ಲಿ ಸಾಕಷ್ಟು ಅಭ್ಯಾಸ ನಡೆಸಿದ್ದೇವೆ. ಈಗ ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆ. ಸಹ ಆಟಗಾರರಿಂದ ಉತ್ತಮ ಬೆಂಬಲ ದೊರೆಯಲಿದೆ ಎಂಬ ವಿಶ್ವಾಸ ನನ್ನದು~ ಎಂದು ಭರತ್ ನುಡಿದರು.

ಚೆಟ್ರಿ ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡದ ಗೋಲ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾಮನ್‌ವೆಲ್ತ್ ಕೂಟದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯ ಅವರ ಪಾಲಿಗೆ ಮರೆಯಲಾಗದ ಕ್ಷಣ.

ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಚೆಂಡನ್ನು ಅದ್ಭುತವಾಗಿ ತಡೆದು ಭಾರತ ತಂಡದ ಹೀರೊ ಆಗಿದ್ದರು. ಭಾರತ ಫೈನಲ್ ತಲುಪಲು ಕಾರಣರಾಗಿದ್ದರು. ಈಗ ಲಭಿಸಿರುವ ನಾಯಕತ್ವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಭರವಸೆ ಅವರ ಬಳಿ ಇದೆ.

ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆದ ಬಳಿಕ ಸಿಕ್ಕ ಪ್ರಚಾರ ಹಾಗೂ ನೆರವಿನ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

`ಉತ್ತಮ ಪ್ರದರ್ಶನ ನೀಡಿದರೆ ಖಂಡಿತ ಬೆಂಬಲ ಸಿಗಲಿದೆ. ಜನ ಈಗ ಮತ್ತೆ ನಮ್ಮನ್ನು ಗುರುತಿಸುತ್ತಿದ್ದಾರೆ. ಸರ್ಕಾರ ನಮ್ಮ ನೆರವಿಗೆ ಬಂದಿದೆ. ಅವರ ವಿಶ್ವಾಸವನ್ನು ಉಳಿಸಿಕೊಂಡು ಹೋಗಬೇಕು~ ಎಂದರು.

`ತಂಡದಲ್ಲಿ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ತುಂಬಾ ಪೈಪೋಟಿ ಇದೆ. ಶ್ರೀಜೇಶ್ ಅವರಂತಹ ಪ್ರತಿಭಾವಂತರಿದ್ದಾರೆ. ಆದರೆ ಇಂತಹ ಸವಾಲುಗಳಿದ್ದಾಗ ಉತ್ತಮ ಪ್ರದರ್ಶನ ಹೊರಹೊಮ್ಮುತ್ತದೆ~ ಎನ್ನುತ್ತಾರೆ ಚೆಟ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT