ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ಗೆಜ್ಜೆ ಹೊಸ ಹೆಜ್ಜೆ

ಡಾನ್ಸಿಂಗ್‌ ಸ್ಟಾರ್‌ –3
Last Updated 7 ಜುಲೈ 2016, 19:30 IST
ಅಕ್ಷರ ಗಾತ್ರ

ಕಿರುತೆರೆ ಜಗತ್ತಿನಲ್ಲಿ ಡಾನ್ಸಿಂಗ್‌ ಷೋಗಳು ಅತ್ಯಂತ ಜನಪ್ರಿಯ ಕಾರ್ಯಕ್ರಮ. ಕನ್ನಡದ ಕಿರುತೆರೆಯಲ್ಲಿ ಕಲರ್ಸ್‌ ಕನ್ನಡದ ‘ಡಾನ್ಸಿಂಗ್‌ ಸ್ಟಾರ್‌’ ಷೋದ ಎರಡು ಅವತರಣಿಕೆಗಳು ಗಳಿಸಿದ ಯಶಸ್ಸು ದೊಡ್ಡದು.

ಇದೀಗ ಕಲರ್ಸ್‌ ಕನ್ನಡ ವಾಹಿನಿಯು ಡಾನ್ಸಿಂಗ್‌ ಸ್ಟಾರ್‌ನ ಮೂರನೇ ಆವೃತ್ತಿಗೆ ಸಿದ್ಧವಾಗಿದೆ. ‘ಹೆಜ್ಜೆಗಳ ಜತೆ ಹಾರ್ಟನ್ನೂ ಕುಣಿಸುವ ರಿಯಾಲಿಟಿ ಷೋ’ ಎಂಬ ಅಡಿಟಿಪ್ಪಣಿಗೆ ಮೂರನೇ ಸೀಸನ್‌ ಕೂಡ ಅನ್ವರ್ಥವಾಗಲಿದೆ ಎಂಬ ವಿಶ್ವಾಸ ವಾಹಿನಿಯದ್ದು.

ಡಾನ್ಸಿಂಗ್‌ ಸ್ಟಾರ್‌ 3ನೇ ಅವತರಣಿಕೆಯ ಆರಂಭವನ್ನು ಜಾಹೀರುಗೊಳಿಸಲು ಕಲರ್ಸ್‌ ಕನ್ನಡ ಪತ್ರಿಕಾಗೋಷ್ಠಿ ಏರ್ಪಡಿಸಿತ್ತು.

ಈ ಸೀಸನ್‌ನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಿದ ವಾಹಿನಿಯ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌, ‘ಕಳೆದ ಎರಡು ಸೀಸನ್‌ನಲ್ಲಿ ಡಾನ್ಸಿಂಗ್‌ ಸ್ಟಾರ್‌ ಜನಪ್ರಿಯವಾಗಿತ್ತು. ಎರಡನೇ ಸೀಸನ್‌ ಅಂತೂ ದಾಖಲೆಯ ಯಶಸ್ಸು ಗಳಿಸಿತ್ತು. ಕಳೆದ ಸೀಸನ್‌ನ ಪ್ರಮುಖ ಅಂಶಗಳು ಈ ಸೀಸನ್‌ನಲ್ಲಿಯೂ ಮುಂದುವರಿಯಲಿವೆ’ ಎಂದು ವಿವರಿಸಿದರು.

ಈ ಸಲ ವಿವಿಧ ಕ್ಷೇತ್ರಗಳಲ್ಲಿ ಜನಪ್ರಿಯರಾದ 12 ಸೆಲಿಬ್ರಿಟಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಪ್ರತಿಯೊಬ್ಬರ ಜತೆಗೂ ಒಬ್ಬೊಬ್ಬ ನೃತ್ಯ ನಿರ್ದೇಶಕರಿರುತ್ತಾರೆ.
‘ಹದಿನಾಲ್ಕು ವಾರ ಪ್ರಸಾರವಾಗುವ ಈ ಡಾನ್ಸಿಂಗ್‌ ಷೋ ಕರ್ನಾಟಕದ ಜನರಿಗೆ ಡಾನ್ಸಿಂಗ್‌ನ ರಸದೌತಣ ಉಣಬಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂಬ ವಿಶ್ವಾಸ ಗುಂಡ್ಕಲ್‌ ಅವರದು.

ಎರಡನೇ ಸೀಸನ್‌ನ ನಂತರ ಬೇರೆ ಬೇರೆ ವಾಹಿನಿಗಳಲ್ಲಿ ಹಲವಾರು ಡಾನ್ಸಿಂಗ್‌ ಷೋಗಳು ಪ್ರಸಾರವಾಗಿವೆ. ಆದ್ದರಿಂದ ಡಾನ್ಸಿಂಗ್‌ ಸ್ಟಾರ್‌ನ ಮೂರನೇ ಆವೃತ್ತಿಯನ್ನು ಜನರು ಅದೇ ಪ್ರೀತಿಯಿಂದ ನೋಡುತ್ತಾರೆಯೇ ಎಂಬ ಅನುಮಾನವೂ ಒಂದು ಹಂತದಲ್ಲಿ ಅವರಿಗೆ ಕಾಡಿತ್ತಂತೆ.

ಅವರ ಅನುಮಾನವನ್ನು ನಿವಾರಿಸಿದ್ದು ನಟ ರವಿಚಂದ್ರನ್‌. ಷೋದ ಮೂವರು ನಿರ್ಣಾಯಕರಲ್ಲಿ ಒಬ್ಬರಾಗಿದ್ದ ಅವರು ‘ಕನ್ನಡದಲ್ಲಿ ಎಷ್ಟೋ ರಿಯಾಲಿಟಿ ಷೋಗಳು ಬಂದಿರಬಹುದು. ಆದರೆ ಡಾನ್ಸಿಂಗ್‌ ಸ್ಟಾರ್‌ ಅವುಗಳಲ್ಲಿ ಒಂದಾಗಲು ಸಾಧ್ಯವೇ ಇಲ್ಲ. ಇದಕ್ಕೆ ಪ್ರತ್ಯೇಕ ಅಸ್ತಿತ್ವವಿದೆ’ ಎಂದು ಹೇಳಿದ್ದು ತಂಡದ ಉತ್ಸಾಹವನ್ನು ಇಮ್ಮಡಿಸಿದೆ.

ಕಳೆದ ಸೀಸನ್‌ನಲ್ಲಿ ನಿರ್ಣಾಯಕರಾಗಿದ್ದ ರವಿಚಂದ್ರನ್‌, ಮಯೂರಿ ಮತ್ತು ಪ್ರಿಯಾಮಣಿ ಅವರೇ ಈ ಸಲವೂ ಮುಂದುವರಿಯಲಿದ್ದಾರೆ.
ಡಾನ್ಸಿಂಗ್‌ ಸ್ಟಾರ್‌ನ ಮೂರನೇ ಆವೃತ್ತಿಯ ಭಾಗವಾಗುತ್ತಿರುವುದಕ್ಕೆ ಮಯೂರಿ ಸಂತಸ ವ್ಯಕ್ತಪಡಿಸಿದರು.

‘ಡಾನ್ಸಿಂಗ್‌ ಸ್ಟಾರ್‌ ಎರಡನೇ ಸೀಸನ್‌ನಲ್ಲಿ ಪಾಲ್ಗೊಳ್ಳುವುದಕ್ಕಿಂತ ಮೊದಲು ನನ್ನನ್ನು ನೃತ್ಯಗಾರ್ತಿ, ನೃತ್ಯ ಸಂಯೋಜಕಿ ಎಂದು ಜನರು ಗುರುತಿಸುತ್ತಿದ್ದರು. ಆದರೆ ಈಗ ಎಲ್ಲರೂ ಡಾನ್ಸಿಂಗ್‌ ಸ್ಟಾರ್‌ ನಿರ್ಣಾಯಕಿ ಎಂದು ಗುರ್ತಿಸುತ್ತಾರೆ. ಈ ಷೋ ನನ್ನ ವೃತ್ತಿ ಬದುಕಿನ ಮಹತ್ವದ ಭಾಗ. ಮೂರನೇ ಆವೃತ್ತಿಯಲ್ಲಿಯೂ ನಿರ್ಣಾಯಕಿಯಾಗಿ ಮುಂದುವರಿಯುತ್ತಿರುವುದಕ್ಕೆ ಹೆಮ್ಮೆಯೆನಿಸುತ್ತಿದೆ’ ಎಂದು ಅವರು ಸಂತೋಷ ಹಂಚಿಕೊಂಡರು.

‘ಈ ಷೋದಿಂದ ನಾನೂ ಸಾಕಷ್ಟು ಕಲಿತುಕೊಂಡಿದ್ದೇನೆ’ ಎಂದ ನಟಿ ಪ್ರಿಯಾಮಣಿ ಮೂರನೇ ಸೀಸನ್‌ಗೂ ನಿರ್ಣಾಯಕಿಯಾಗಲು ಅವಕಾಶ ಕಲ್ಪಿಸಿದ್ದಕ್ಕೆ ವಾಹಿನಿಗೆ ಕೃತಜ್ಞತೆಯನ್ನೂ ಸಲ್ಲಿಸಿದರು.

ನಂತರ ಮೈಕ್‌ ಕೈಗೆತ್ತಿಕೊಂಡ ರವಿಚಂದ್ರನ್‌, ‘ಸುತ್ತಿಗೆ ಹಿಡಿದುಕೊಂಡು ಡಾನ್ಸಿಂಗ್ ಸ್ಟಾರ್‌ಗೆ ಎಂಟ್ರಿ ಆದೆ. ಈಗ ಅದೇ ಸುತ್ತಿಗೆಯಲ್ಲಿ ನನ್ನ ತಲೆಯನ್ನೇ ಜಜ್ಜಿಕೊಂಡು ವಾಪಸ್ಸಾಗುತ್ತಿದ್ದೇನೆ’ ಎಂದು ‘ಅಪೂರ್ವ’ ಸಿನಿಮಾದ ಸೋಲನ್ನು ನೆನಪಿಸಿಕೊಂಡು ತಮ್ಮನ್ನು ತಾವೇ ಲೇವಡಿ ಮಾಡಿಕೊಳ್ಳುತ್ತಾ ಮಾತು ಆರಂಭಿಸಿದರು.

ಈ ಸಲ ನಿರೂಪಕನಾಗಿ ಅಕುಲ್‌ ಬಾಲಾಜಿ ಇಲ್ಲದಿರುವುದು ಒಂದು ಕೊರತೆ ಎಂದು ಒಪ್ಪಿಕೊಂಡ ಅವರು ‘ಕಳೆದೆರಡು ಸೀಸನ್‌ಗಳು ಸಾಕಷ್ಟು ಯಶಸ್ವಿಯಾಗಿದ್ದರಿಂದ ಈಗ ನಮ್ಮ ಮೇಲೆ ನಿರೀಕ್ಷೆ ಜಾಸ್ತಿಯಾಗಿದೆ. ಜನರ ನಿರೀಕ್ಷೆಯ ಮಟ್ಟವನ್ನು ಖಂಡಿತ ಮುಟ್ಟುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಲ ಡಾನ್ಸಿಂಗ್ ಸ್ಟಾರ್‌ನ ನಿರೂಪಣೆಯ ನೊಗವನ್ನು ಶ್ರದ್ಧಾ ಮತ್ತು ಜಗನ್‌ ಹೊರಲಿದ್ದಾರೆ.

ಡಾನ್ಸಿಂಗ್‌ ಸ್ಟಾರ್‌ನ ಹದಿನಾಲ್ಕು ಸಂಚಿಕೆಗಳನ್ನೂ ಒಂದೊಂದು ಥೀಮ್‌ ಇರಿಸಿಕೊಂಡು ರೂಪಿಸಲಾಗುತ್ತಿದ್ದು, ಪ್ರತಿ ಥಿಮ್‌ಗೂ ಅದಕ್ಕೆ ಸಂಬಂಧಿಸಿದ ಒಬ್ಬರು ಸೆಲಿಬ್ರಿಟಿಯನ್ನು ಅತಿಥಿಗಳಾಗಿ ಕರೆಸಲಾಗುವುದು. ಆರಂಭಿಕ ಸಂಚಿಕೆಯಲ್ಲಿ ಜೂಹಿ ಚಾವ್ಲಾ ಭಾಗವಹಿಸಿರುವುದು ವಿಶೇಷ.

ಇದೇ ಸಂದರ್ಭದಲ್ಲಿ ಡಾನ್ಸಿಂಗ್‌ ಸ್ಟಾರ್‌ ವೇದಿಕೆಯ ಮೇಲೆ ‘ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ’ ಹಾಡಿಗೆ ಜೂಹಿ ಚಾವ್ಲಾ ಡ್ಯಾನ್ಸ್ ಮಾಡಿರುವ ದೃಶ್ಯದ ತುಣುಕನ್ನೂ ತೋರಿಸಲಾಯಿತು.

***
ಡಾನ್ಸಿಂಗ್ ಸ್ಟಾರ್‌ ಸೀಸನ್‌ 3 ಇದೇ ಜುಲೈ (ಭಾನುವಾರ) ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿದೆ. ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಚಿತ್ರಗಳು: ಕೆ.ಎನ್‌.ನಾಗೇಶ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT