ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಭುತ ಸಾಹಸಿಗ ಕೋಟೆ ಜಿಗಿಯುವ ಜ್ಯೋತಿ

Last Updated 22 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ನೀವು ಏದುಸಿರು ಬಿಡುತ್ತಾ ಅತ್ಯಂತ ಕಡಿದಾದ ಬಂಡೆಯನ್ನು ತಬ್ಬಿ ತೆವಳುತ್ತಾ ಬೆಟ್ಟ ಏರುವಾಗ, ಆ ಬಂಡೆಯ ತುದಿಯಿಂದ ನಿಮ್ಮ ಪಕ್ಕದಲ್ಲೆ ಯಾರೋ ಕೆಳಮುಖವಾಗಿ ಓಡಿ ಹೋದರೆ ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಬೆಟ್ಟದ ತುದಿಯನ್ನು ಏರಿ ಕುಳಿತು ಬಿಟ್ಟರೆ, ಇದು ಫ್ಯಾಂಟಸಿ ಕಥೆಯಲ್ಲ, ಕನಸೂ ಅಲ್ಲ, ಸ್ಪೈಡರ್‌ಮ್ಯಾನ್‌ನ ಸಿನಿಮಾವೂ ಅಲ್ಲ. ಕೋತಿರಾಜು ಎಂದೇ ಹೆಸರಾಗಿರುವ ಜ್ಯೋತಿರಾಜುವಿನ ನಿಜ ಬದುಕಿನ ರೋಚಕ ಕಥೆ.

ಸಾಧನೆಗೆ ನೂರಾರು ಮಾರ್ಗಗಳಿವೆ. ನಮ್ಮ ಆಸಕ್ತಿ, ಕೌಶಲ, ಅರ್ಹತೆಗೆ ತಕ್ಕ ಗುರಿಯನ್ನು ಇಟ್ಟುಕೊಂಡು ನಿರಂತರವಾಗಿ ಶ್ರಮಿಸಿದಾಗ ಮಾತ್ರ ಖಂಡಿತ ಯಶಸ್ಸು ಸಿಗುತ್ತದೆ. ಆದರೆ ಕೆಲವರಿಗೆ ದೈವದತ್ತವಾಗಿ ಕೆಲವೊಂದು ಕೌಶಲಗಳು ಸಿದ್ಧಿಸಿ ಬಿಟ್ಟಿರುತ್ತದೆ. ಅಂತಹ ಕೌಶಲದಿಂದ ಅನಾಯಾಸವಾಗಿ ಸಾಧನೆಯ ಶಿಖರವನ್ನು ಏರಿ ಕುಳಿತುಬಿಡುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಜ್ಯೋತಿರಾಜು.

ಜ್ಯೋತಿರಾಜು ತಮಿಳುನಾಡಿನ ಕಾಮಾಚಿಪುರದವರು. ತಂದೆ ಈಶ್ವರನ್, ತಾಯಿ ಕುಂಜಾರಂ. ಅವರದು ಮಧ್ಯಮ ವರ್ಗದ ರೈತ ಕುಟುಂಬ. ಜ್ಯೋತಿರಾಜುವಿಗೆ ಚಿಕ್ಕಂದಿನಿಂದಲೂ ಓದುವುದರಲ್ಲಿ ಅಂತಹ ಆಸಕ್ತಿ ಇರಲಿಲ್ಲ. ಒಂದನೇ ತರಗತಿಗೆ ಸ್ವಲ್ಪ ದಿನಗಳ ಕಾಲ ಶಾಲೆಗೆ ಹೋಗಿ ನಂತರ ಶಾಲೆ ಬಿಟ್ಟು ಬಂದವರು ಮತ್ತೆ ಹಿಂತಿರುಗಿ     ನೋಡಲಿಲ್ಲ.

 ಕೋಟೆಯನ್ನೆ ಅರಸುತ್ತಾ 6ನೇ ವಯಸ್ಸಿನಲ್ಲಿ ಮನೆಬಿಟ್ಟು ಕಾಲ್ನಡಿಗೆಯಲ್ಲೆ ಊರೂರು ತಿರುಗುತ್ತಾ ತನ್ನ ನೆಚ್ಚಿನ ಕೋಟೆಯನ್ನು ಹುಡುಕುತ್ತಿದ್ದರಂತೆ. ಹೀಗೆ ಅಲೆಮಾರಿಯಾಗಿ ತಿರುಗುತ್ತಾ ಒಂದು ದಿನ ತಲುಪಿದ್ದು ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯನ್ನು. ಆ ಊರಲ್ಲಿ ಅವರ ಕನಸಿನ ಕೋಟೆ ಇರಲಿಲ್ಲ. ಆಗ ಹೊಟ್ಟೆಪಾಡಿಗೆ ಅನಿವಾರ್ಯವಾಗಿ ಹೋಟೆಲ್ ಕೆಲಸಕ್ಕೆ ಸೇರಿ ಸುಮಾರು 6 ವರ್ಷಗಳ ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಹೋದರೆ ಒಳ್ಳೆಯ ಕೆಲಸ ಸಿಗುತ್ತದೆ ಎಂದು ಯಾರೋ ಸಲಹೆ ನೀಡಿದರು. ಆದರೆ ಹೋಗಲು ಹಣವಿಲ್ಲ, ಆದ್ದರಿಂದ ಕಾಲ್ನಡಿಗೆಯಲ್ಲೆ ಬಾಗಲಕೋಟೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿದರು. ಹೀಗೆ ನಡೆದುಕೊಂಡು ಹೋಗುವಾಗ ಸಿಕ್ಕ ಊರು ಚಿತ್ರದುರ್ಗ. ಅಲ್ಲಿಂದ ಇಲ್ಲಿಯ ಕೋಟೆ ಅವರ ನೆಚ್ಚಿನ ತಾಣವಾಯಿತು.

ಜ್ಯೋತಿರಾಜು ಚಿತ್ರದುರ್ಗದಲ್ಲೆ ಉಳಿದುಕೊಂಡು ಹೊಟ್ಟೆಪಾಡಿಗಾಗಿ ಗಾರೆ ಕೆಲಸಕ್ಕೆ ಸೇರಿದರು. ಅಲ್ಲಿ ತುಂಬಾಕಷ್ಟವಿತ್ತು. ವೇತನವು ಕಡಿಮೆ. ಮೇಸ್ತ್ರಿಗಳ ಬೈಗುಳ ಇವೆಲ್ಲವುಗಳಿಂದ ಬೇಸತ್ತು ನಾನು ಇದ್ದು ಸಾಧನೆ ಮಾಡುವುದು ಏನೂ ಇಲ್ಲ, ಎಂದು ತೀರ್ಮಾನಿಸಿ, ಕೋಟೆಯನ್ನು ಹಿಂಬದಿಯಿಂದ ಹತ್ತಿದರು. ಅಲ್ಲಿಯೇ ಪಕ್ಕ ಒಂದು ಬೃಹದಾಕಾರದ ಬಂಡೆ ಕಾಣಿಸಿತು. ಅದನ್ನು ಏರಿ ಸಾಯೋಣವೆಂದು ಬಂಡೆಯ ಮೇಲೆ ನಿಂತಿದ್ದರು. ಆಗ ಅಲ್ಲಿ ಬಂದ ಪ್ರವಾಸಿಗರು ಇವರು ಬಂಡೆ ಏರಿ ನಿಂತಿದ್ದನ್ನು ನೋಡಿ ಸಾಹಸವೆಂದು ಚಪ್ಪಾಳೆ, ಸಿಳ್ಳೆ ಹಾಕಿದರು. ಆಗ ಜ್ಯೋತಿರಾಜು ಆತ್ಮಹತ್ಯೆಯ ಪ್ರಯತ್ನವನ್ನು ಬಿಟ್ಟು ಅಲ್ಲಿಂದ ಮನೆಗೆ ಹೋದರು.

ನಂತರ ಮತ್ತೊಂದು ದಿನ ಕೋಟೆ ಪ್ರವೇಶಿಸಿದಾಗ ಅಲ್ಲಿ ಕೋತಿಗಳು ಬಂಡೆಯಿಂದ ಬಂಡೆಗೆ, ಹಾರುತ್ತಾ ಸಾಗುತ್ತಿದ್ದವು. ಅದರಂತೆಯೇ ಚಿಕ್ಕ ಚಿಕ್ಕ ಬಂಡೆಯನ್ನು ಏರಲು ಪ್ರಯತ್ನಿಸಿ ಸಫಲರಾದರು. ಆಗ ಅವರಿಗೆ ತಮ್ಮಲಿರುವ ಶಕ್ತಿಯ ಅರಿವಾಯಿತು. ಒಂದೊಂದೆ ಬಂಡೆಗಳನ್ನು, ಏರುತ್ತಾ, ಜಿಗಿಯುತ್ತಿದ್ದರೆ ಅವರಿಗೆ ಯಾವ ಅಳುಕಾಗಲಿ, ಜಾರುವುದಾಗಲಿ ಆಗುತ್ತಿರಲಿಲ್ಲ. ಕೈ ಕಾಲುಗಳು ಬಂಡೆಯನ್ನು ಬಿಗಿಯಾಗಿ ಹಿಡಿದಿರುತ್ತಿದ್ದವು. ಅತ್ಯಂತ ಕಡಿದಾದ, ಎತ್ತರದ ಬಂಡೆಗಳನ್ನು ಏರುವಾಗಲು ಅವರಿಗೆ ಯಾವುದೇ ರೀತಿ ಅಪಾಯವಾಗಲಿಲ್ಲ. ಇದರಿಂದ ಜ್ಯೋತಿರಾಜು ಸ್ಪೂರ್ತಿ ಹೊಂದಿದರು.

ಅಂದಿನಿಂದ ಕೋಟೆಯಲ್ಲೆ ಹೆಚ್ಚು ಕಾಲ ಅಭ್ಯಾಸ ಮಾಡತೊಡಗಿದರು. ಅಲ್ಲಿಗೆ ಬಂದಂತಹ ಪ್ರವಾಸಿಗರು ಇವರ ಸಾಹಸ, ಧೈರ್ಯಕ್ಕೆ ಮನಸೋತರೆ, ಮಕ್ಕಳು ಸ್ಪೈಡರ್‌ಮ್ಯಾನ್... ಸ್ಪೈಡರ್‌ಮ್ಯಾನ್... ಎಂದು ಕೂಗುತ್ತಿದ್ದರು. ಇವರು ಕೋತಿಯಂತೆ ಜಿಗಿಯುವುದನ್ನು, ಹಾರುವುದನ್ನು ನೋಡಿ ಇವರಿಗೆ ‘ಕೋತಿರಾಜು’ ಎಂಬ ಹೆಸರು ಬಂತು. ಆದರೆ ಈ ಸಾಧಕನ ಮತ್ತೊಂದು ಮುಖ ಬಹುತೇಕ ಜನರಿಗೆ ಗೊತ್ತಿಲ್ಲ.
ಇವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ಲೈಂಬಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಹೈದರಾಬಾದ್, ದೆಹಲಿ,      ಚಂಡೀಗಡ, ಮುಂಬೈ, ಕುಲುಮನಾಲಿ, ಕಾಶಿ, ಹೀಗೆ ಭಾರತದಾದ್ಯಂತ ನಡೆದ ಕ್ಲೈಂಬಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮೈಸೂರು ದಸರಾ ವಾಲ್ ಕ್ಲೈಂಬಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಬಾರಿ ಪ್ರಶಸ್ತಿ ಗಳಿಸಿದ್ದಾರೆ. ಜೊತೆಗೆ ತಾನು ಕಲಿತ ವಿದ್ಯೆಯನ್ನು ಇತರರಿಗೆ ಕಲಿಸಬೇಕು, ಕ್ಲೈಂಬಿಂಗ್ ವಿದ್ಯೆಯನ್ನು ಮತ್ತಷ್ಟು ಜನಪ್ರಿಯಗೊಳಿಸಬೇಕು ಎಂದು ಉಚಿತವಾಗಿ ಐದಾರು ಮಂದಿಗೆ ರಾಕ್ ಕ್ಲೈಂಬಿಂಗ್ ಅನ್ನು ಹೇಳಿಕೊಡುತ್ತಿದ್ದಾರೆ. ಇವರ ಶಿಷ್ಯರಾದ ಮಹಮದ್ ಭಾಷಾ, ಮಹಮದ್ ರಫಿ, ಶಶಿಕುಮಾರ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಇವರ ಸಾಧನೆಯನ್ನು ನೋಡಿ ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ 35 ಸಾವಿರ ರೂ. ಪ್ರೋತ್ಸಾಹ ಧನ ನೀಡಿದ್ದರು. ‘ನನ್ನ ಹತ್ತಿರ ಬಡ  ಕುಟುಂಬದ ಸಾಹಸ ಪ್ರವೃತ್ತಿಯುಳ್ಳ ಅವಿವಾಹಿತ ಯುವಕರು ಬಂದರೆ ಉಚಿತವಾಗಿ ಈ ವಿದ್ಯೆ ಕಲಿಸುತ್ತೇನೆ ಎನ್ನುತ್ತಾರೆ ಜ್ಯೋತಿರಾಜು.ನೀರಿನಲ್ಲಿ ಬಿದ್ದವರನ್ನು ಕಾಪಾಡುವುದು, ಹೆಜ್ಜೇನು ಕಾಟವಿದ್ದರೆ ಅಲ್ಲಿಗೆ ಧಾವಿಸಿ ಹೆಜ್ಜೇನು ಮುರಿಯುವುದು ಮುಂತಾದ ರೀತಿಯಲ್ಲಿ ಜನಸೇವೆಯನ್ನು ಮಾಡುತ್ತಾರೆ. ತನ್ನ ತಲೆಯ ಕೂದಲಿನಿಂದ ಆಟೋರಿಕ್ಷಾಗಳನ್ನು ಎಳೆಯುವ ಸಾಹಸವನ್ನೂ ಮಾಡಿದ್ದಾರೆ. ಜೋಗ ಜಲಪಾತದಲ್ಲಿ 600, 700 ಅಡಿ ಆಳದಲ್ಲಿ ಸಿಲುಕಿದ್ದ ಶವಗಳನ್ನು ತೆಗೆಯಲು ಎಲ್ಲರು ಹರಸಾಹಸ ಪಡುತ್ತಿದ್ದಾಗ ಇವರು ಪ್ರಪಾತದೊಳಗೆ ಇಳಿದು ಶವವನ್ನು ಮೇಲಕ್ಕೆ ತಂದಿದ್ದು ಹೆಚ್ಚು ನೆನಪಿನಲ್ಲಿ ಉಳಿದಿರುವ ಘಟನೆ ಎಂದು ನೆನಪಿಸಿಕೊಳ್ಳುತ್ತಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂಬ ಮಹತ್ವದ ಆಸೆಯನ್ನು ಹೊಂದಿದ್ದಾರೆ. ಆದರೆ ಇವರಿಗೆ ಆರ್ಟಿಫಿಶಿಯಲ್ ವಾಲ್ ಕ್ಲೈಂಬಿಂಗ್ ಕಲಿಸುವಂತಹ, ತಂತ್ರಗಳನ್ನು ಹೇಳಿಕೊಡುವ ಕೋಚ್ ಕೊರತೆ ಇದೆ. ಇವರಿಗೆ ಸರ್ಕಾರದಿಂದ ಪ್ರೋತ್ಸಾಹ ಧನ ಸಿಗುತ್ತಿಲ್ಲ. ಇಂತಹ ಅಪರೂಪದ ಗ್ರಾಮೀಣ ಪ್ರತಿಭೆಗೆ ಸೂಕ್ತ ಬೆಂಬಲ ಕೊಟ್ಟರೆ ಭವಿಷ್ಯದ ಕ್ರೀಡಾತಾರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT