ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧರ ಉದರ ಪದರ!

ಚಿತ್ರ: ಸಿಲ್ಕ್
Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನಿರ್ಮಾಪಕ: ಆರ್. ವೆಂಕಟಪ್ಪ
ನಿರ್ದೇಶಕ: ತ್ರಿಶೂಲ್
ತಾರಾಗಣ: ಅಕ್ಷಯ್, ವೀಣಾ ಮಲಿಕ್, ಸನಾ, ಶ್ರೀನಿವಾಸಮೂರ್ತಿ, ಅವಿನಾಶ್, ಅಚ್ಯುತ್‌ಕುಮಾರ್, ಅನಿತಾ ಭಟ್ ಇತರರು.

ಸುತ್ತ ಕತ್ತಲು. ಎದುರಿಗೆ ಲಾಟೀನು. ಪತಂಗಗಳಿಗೆ ಬೆಳಕೆಂದರೆ ಪ್ರಾಣ. ಎಲ್ಲವೂ ಲಾಟೀನಿನ ಸುತ್ತ ಸುತ್ತುತ್ತಿವೆ. ಒಂದು ಮಾತ್ರ ಆ ಬೆಳಕನ್ನು ಬಿಡಲಾರೆ ಎನ್ನುತ್ತ ಅಪ್ಪಿಕೊಳ್ಳುತ್ತದೆ. ಮೊದಲು ರೆಕ್ಕೆ, ನಂತರ ಅದರ ಮೆತ್ತನೆ ಕೈಕಾಲುಗಳು, ಆಮೇಲೆ ಇಡೀ ದೇಹ ಬೂದಿ. ಸಿನಿಮಾ ಕೂಡ ಬೆಳಕಿನ ಲೋಕ. ಅಲ್ಲಿನ ಪತಂಗಗಳ ಕತೆ ಹೇಳಲು ಹೊರಡುತ್ತದೆ `ಸಿಲ್ಕ್'.

ಮಸಾಲೆಯ ಮಳೆ ಸುರಿಸುತ್ತಲೇ ಚಿತ್ರದ ಆರಂಭ. `ಸಖತ್ ಹಾಟ್' ಎಂಬ ಚಿತ್ರದ ಅಡಿಬರಹಕ್ಕೆ ತಕ್ಕಂತೆ ವೀಣಾ ಮಲಿಕ್ ಇದ್ದಾರೆ. ಸಿನಿಮಾ ದುರಂತ ಕತೆಯನ್ನು ಹೇಳುತ್ತಿದೆಯೋ ಅಥವಾ ಅದನ್ನು ಆಸ್ವಾದಿಸುತ್ತಿದೆಯೋ ಎಂದು ಅನುಮಾನಿಸುವಂತಿದೆ ವೀಣಾ ಮೈಮಾಟ. ಅಧರ ಉದರದ ಮಾಯೆ ಎಲ್ಲೆಲ್ಲೂ ಪದರ ಪದರವಾಗಿ ಹರಡಿಕೊಂಡಿದೆ. ಇಷ್ಟೆಲ್ಲ ಆದ ಮೇಲೆ ಕತೆಗೆ ಗಂಭೀರ ಸ್ವರೂಪ. ಪಾಪಕೂಪಗಳಲ್ಲಿ ನರಳುವ ಹೂಗಳ ಚಿತ್ರಣ. ಇದರೊಂದಿಗೆ ರೌಡಿಯೊಬ್ಬನ ಜೀವನ ಚರಿತ್ರೆಯೂ ತಳಕು ಹಾಕಿಕೊಂಡಿದೆ. ಆತ ವೇಶ್ಯೆಯಲ್ಲಿ ಒಲವನ್ನು ಅರಸುವವನು. ಆಕೆಯನ್ನು `ಮಾಂಸದಂಗಡಿ'ಯಿಂದ ಹೊರತರಲು ಯತ್ನಿಸುವವನು. ಕಡೆಗೆ ಅದರ ಸುಳಿಯಲ್ಲೇ ಸಿಲುಕಿ ಇಲ್ಲವಾಗುವವನು. ಆ ಪಾತ್ರವನ್ನು ಅಕ್ಷಯ್ ಪೋಷಿಸಿದ್ದಾರೆ.  ಶೀರ್ಷಿಕೆ ಹೊರತುಪಡಿಸಿದರೆ ದಕ್ಷಿಣ ಭಾರತದ ಒಂದು ಕಾಲದ ಮಾದಕನಟಿಗೂ, ಚಿತ್ರದ ಕತೆಗೂ ಸಂಬಂಧವಿಲ್ಲ. ಹಾಗೆಯೇ ಇದು ಹಿಂದಿಯ `ಡರ್ಟಿ ಪಿಕ್ಚರ್'ನ ಪಡಿಯಚ್ಚಲ್ಲ. ಮೊದಮೊದಲು ಆ ಚಿತ್ರದ ನೆರಳಿನಲ್ಲಿ ಸಾಗಿದರೂ ಆಮೇಲೆ ಕತೆ ದಿಕ್ಕು ಬದಲಿಸುತ್ತದೆ.  

`ಸಿಲ್ಕ್' ಹಾಗೂ ವೀಣಾ ಮಲಿಕ್ ಎಂಬ ಹೆಸರುಗಳೇ ಚಿತ್ರದ ಬಂಡವಾಳ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು `ಸಿಲ್ಕ್' ಹೆಸರು ಬೇಕು; ಸಿನಿಮಾ ಮುಗಿಯುವವರೆಗೂ ಅವರನ್ನು ಚಿತ್ರಮಂದಿರದಲ್ಲಿ ಉಳಿಸಿಕೊಳ್ಳಲು ವೀಣಾ ಬೇಕು ಎಂದು ನಿರ್ದೇಶಕರು ಭಾವಿಸಿದಂತಿದೆ. ಮನರಂಜನೆಯ ಜತೆಗೆ ಮನಕಲಕುವ ದೃಶ್ಯಗಳನ್ನು ಹದವಾಗಿ ಬೆರೆಸುವುದು ಅವರಿಗೆ ಸಾಧ್ಯವಾಗಿಲ್ಲ. ಸಡಿಲ ನಿರೂಪಣೆಯ `ತ್ರಿಶೂಲ'ವೂ ನೋಡುಗರನ್ನು ಆಗಾಗ ಇರಿಯುವುದುಂಟು. ಆರ್ದ್ರಗೊಳ್ಳಬಹುದಾದ ಸನ್ನಿವೇಶಗಳು ನೆಪಮಾತ್ರಕ್ಕೆ ಬಂದು ಹೋಗಿವೆ. ನೋಡುಗರ ಭಾವನೆಗಳನ್ನು ಮೀಟುವಲ್ಲಿ ಅವು ವಿಫಲ.

ಮೈ ಸೂರೆಗೊಳಿಸಿರುವ ವೀಣಾ ಅಭಿನಯದಲ್ಲಿ ಮಾತ್ರ ಶೂನ್ಯ. ದೇಹವೇ ದೇಗುಲ ಎಂದು ನಂಬಿದ ಸಿನಿಮಾದಲ್ಲಿ ಸ್ಪೆಷಲ್ ನಂಬರ್ ಹಾಡೂ ಉಂಟು. ತಮಾಷೆ ಎಂದರೆ ವೀಣಾ ಮಾದಕತೆಯ ಮುಂದೆ ಆ ಹಾಡು ಸೊರಗಿದೆ ! ಅಭಿನಯದ ವಿಚಾರದಲ್ಲಿ ನಾಯಕಿಯ ಹಾದಿಯಲ್ಲೇ ಅಕ್ಷಯ್ ಸಾಗಿದ್ದಾರೆ. ಸಾಹಸ ದೃಶ್ಯಗಳಲ್ಲಿ ಅವರು ಒಂದಷ್ಟು ಚೇತೋಹಾರಿ. ಚಿತ್ರವನ್ನು ಇಡಿಯಾಗಿ ತುಂಬಿಕೊಂಡಿರುವುದು ತೆಲುಗು ನಟಿ ಸನಾ. `ಅಮ್ಮಣ್ಣಿ' ಅವತಾರದಲ್ಲಿ ಅವರದು ವಿಶಿಷ್ಟ ಅಭಿನಯ. ಶ್ರೀನಿವಾಸಮೂರ್ತಿ, ಅವಿನಾಶ್, ಅಚ್ಯುತ್‌ಕುಮಾರ್ ಅವರ ಪಾತ್ರಗಳು ಇದ್ದೂ ಇಲ್ಲದಂತಿವೆ. ಸಾಧು ಕೋಕಿಲ ನಗೆಯ ಝಲಕ್ ಚೆನ್ನಾಗಿದೆ. ಸುಂದರ ತಾಣಗಳಲ್ಲಿ ನಡೆದಿರುವ ಹಾಡುಗಳ ಚಿತ್ರೀಕರಣ ಇಷ್ಟವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT