ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಇರುವುದು ನಿಭಾಯಿಸಲು

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಅಧಿಕಾರ ಇರುವುದು ನಿಭಾಯಿಸಲು, ಚಲಾಯಿಸಲು ಅಲ್ಲ~ ಎಂದು ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ. ಅಜಯ್ ಕುಮಾರ್ ಸಿಂಹ ಹೇಳಿದರು.ಭಾರತೀಯ ವಿದ್ಯಾಭವನ ಮತ್ತು ಮಾಧ್ಯಮ ಭಾರತಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಪೊಲೀಸರು, ವಕೀಲರು ಮತ್ತು ಪತ್ರಕರ್ತರ ಪಾತ್ರ~ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಯಾವುದೇ ವ್ಯಕ್ತಿ ತನಗೆ ಇರುವ ಅಧಿಕಾರ ನಿಭಾಯಿಸಲು ಎಂಬುದನ್ನು ಅರ್ಥ ಮಾಡಿಕೊಂಡು, ಅದರಂತೆ ಕಾರ್ಯ ನಿರ್ವಹಿಸಿದರೆ ಸಮಾಜದಲ್ಲಿ ನೆಮ್ಮದಿ ಇರುತ್ತದೆ. ಅಧಿಕಾರವನ್ನು ಚಲಾಯಿಸಲು ಹೋದಾಗ ಸಮಸ್ಯೆಗಳು ಉದ್ಭವಿಸುತ್ತವೆ~ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯಸಭಾ ಸದಸ್ಯ ಎಂ. ರಾಮಾ ಜೋಯಿಸ್, `ಪೊಲೀಸರು, ಪತ್ರಕರ್ತರು ಮತ್ತು ವಕೀಲರು ವೃತ್ತಿಯಲ್ಲಿ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಆದರೆ ಇಂದು ವೃತ್ತಿಪರತೆ ಕಳೆದು ಹೋಗುತ್ತಿರುವುದರಿಂದ ಸಂಘರ್ಷಗಳು ಉಂಟಾಗುತ್ತಿವೆ. ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕು~ ಎಂದು ಹೇಳಿದರು.

ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಸಚಿವರ ವಿರುದ್ಧ ಸಾರ್ವಜನಿಕರು ದೂರು ನೀಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, `ಸದನದಲ್ಲಿ ಘಟನೆ ನಡೆದಿರುವುದರಿಂದ ಸಾರ್ವಜನಿಕರು ಈ ಬಗ್ಗೆ ದೂರು ನೀಡಲು ಬರುವುದಿಲ್ಲ. ಸಭಾಧ್ಯಕ್ಷರು ಈ ಬಗ್ಗೆ ಕ್ರಮ ಕೈಗೊಳ್ಳಬಹುದು. ಏನು ಕ್ರಮ ಜರುಗಿಸಬೇಕೆಂಬುದು ಅವರಿಗೇ ಬಿಟ್ಟದ್ದು~ ಎಂದರು.

ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್. ಟ್ಯಾಗೋರ್, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ವಿ.ಎನ್. ಸುಬ್ಬರಾವ್, `ಪ್ರಜಾವಾಣಿ~ ಸಹಾಯಕ ಸಂಪಾದಕ ಎಂ.ಎ. ಪೊನ್ನಪ್ಪ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್, ಪತ್ರಕರ್ತರಾದ ಆರ್. ವೆಂಕಟೇಶ್, ಕೆ.ಎಚ್. ಸಾವಿತ್ರಿ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT