ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ತ್ಯಜಿಸಲಾರೆ: ಮುಬಾರಕ್ ಪಟ್ಟು

Last Updated 4 ಫೆಬ್ರುವರಿ 2011, 15:40 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಚಳವಳಿಗಾರರು ಶುಕ್ರವಾರದವರೆಗೆ ನೀಡಿದ್ದ ಗಡುವನ್ನು ಲೆಕ್ಕಿಸಿದ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್, ತಾವು ಈ ಕೂಡಲೇ ಅಧಿಕಾರ ತ್ಯಜಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದ ಮುಬಾರಕ್ ವಿರುದ್ಧ ನಡೆಯುತ್ತಿರುವ ಜನಾಂದೋಲನ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಕಳೆದ ಮೂರು ದಿನಗಳಿಂದ ಸರ್ಕಾರದ ಪರ ಮತ್ತು ವಿರೋಧಿ ಗುಂಪುಗಳ ನಡುವೆ ನಡೆದ ಸಂಘರ್ಷದಿಂದ ಚಿಂತಾಕ್ರಾಂತವಾಗಿರುವ ಸೇನೆಪಡೆಯು ಹೇಗಾದರೂ ಮಾಡಿ ಈ ಚಳವಳಿಯನ್ನು ಶಮನ ಮಾಡಬೇಕು ಎಂದು ಕಂಕಣ ಕಟ್ಟಿ ನಿಂತಿದೆ. ಆದರೆ ಚಳವಳಿಗಾರರು ಶುಕ್ರವಾರವನ್ನು ‘ನಿರ್ಗಮನದ ದಿನ’ ಎಂದು ಹೇಳಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಶುಕ್ರವಾರ ತಹ್ರೀರ್ ಚೌಕದಲ್ಲಿ ನಡೆದ ರ್ಯಾಲಿಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ಈ ಮಧ್ಯೆ ’ಎಬಿಸಿ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮುಬಾರಕ್, ‘ದೇಶದಲ್ಲಿ ಈಗ ಉಂಟಾಗಿರುವ ಪರಿಸ್ಥಿತಿ ತಲೆಚಿಟ್ಟು ಹಿಡಿಸಿದ್ದು ಅತ್ಯಂತ ಬೇಸರ ತಂದಿದೆ. ಅಧಿಕಾರ ಸಾಕಾಗಿದೆ. ಆದರೆ, ನಾನು ಕೂಡಲೇ ಅಧಿಕಾರ ತ್ಯಜಿಸಿದರೆ ದೇಶ ಅರಾಜಕತೆಯಿಂದ ತತ್ತರಿಸುತ್ತದೆ’ ಎಂದಿದ್ದಾರೆ.

‘ನನ್ನನ್ನು ಟೀಕಿಸುವ ಜನರನ್ನು ನಾನು ಲೆಕ್ಕಿಸುವುದಿಲ್ಲ. ನನಗೆ ದೇಶವೇ ಮುಖ್ಯ. ಹಾಗಾಗಿ ದೇಶದ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದೇನೆ’ ಎಂದು ಅಂಗರಕ್ಷರ ಬೆಂಗಾವಲಿನಲ್ಲಿರುವ ಮುಬಾರಕ್ ಎರಡು ಟಿವಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಈಜಿಪ್ಟ್ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದಿರುವುದಕ್ಕೆ ಪ್ರತಿಕ್ರಿಯಿಸಿರುವ ಮುಬಾರಕ್, ‘ನಿಮಗೆ (ಒಬಾಮ) ಈಜಿಪ್ಟ್‌ನ ಸಂಸ್ಕೃತಿ ಗೊತ್ತಿಲ್ಲ. ನಾನು ಅಧಿಕಾರದಿಂದ ಈಗ ಕೆಳಗಿಳಿದರೆ ಏನಾಗುತ್ತದೆ ಎಂಬುದೂ ನಿಮಗೆ ತಿಳಿದಿಲ್ಲ’ ಎಂದಿದ್ದಾರೆ.

ಈ ಮಧ್ಯೆ ವಿದೇಶಿ ಪತ್ರಕರ್ತರ ಮೇಲೆ ಮುಬಾರಕ್ ಪರ ಗುಂಪಿನವರು ಹಲ್ಲೆ ಮಾಡಿರುವ ಆಪಾದನೆಗಳು  ಕೇಳಿಬರುತ್ತಿವೆ.

ಗುರುವಾರ ನಡೆದ ಹಿಂಸಾಚಾರಕ್ಕೆ ಈಜಿಪ್ಟ್‌ನ ಆಂತರಿಕ ಗುಪ್ತಚರ ಖಾತೆ ಸಚಿವರು ಕ್ಷಮೆ ಕೋರಿದ್ದಾರೆ ಎಂದು ಪ್ರಧಾನ ಅಹ್ಮದ್ ಷಫಿ ಹೇಳಿದ್ದಾರೆ.

ಇರಾನ್ ನಾಯಕ ಖೊಮೇನಿ ಹರ್ಷ
ಟೆಹರಾನ್ (ಎಎಫ್‌ಪಿ): ಈಜಿಪ್ಟ್, ಟ್ಯುನೀಷಿಯಾ ಮತ್ತಿತರ ರಾಷ್ಟ್ರಗಳಲ್ಲಿನ ಪ್ರಭುತ್ವದ ವಿರುದ್ಧ ದಂಗೆಗೆ ಹರ್ಷ ವ್ಯಕ್ತಪಡಿಸಿರುವ ಇರಾನ್, ಈ ಬೆಳವಣಿಗೆಗಳನ್ನು ‘ಇಸ್ಲಾಮ್ ಜಾಗೃತಿ’ಯ ಪ್ರತೀಕ ಎಂದು ಬಣ್ಣಿಸಿದೆ.

ಟೆಹರಾನ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಧಾರ್ಮಿಕ ಉಪನ್ಯಾಸ ನೀಡಿದ ಇರಾನ್‌ನ ಸರ್ವೋಚ್ಚ ನಾಯಕ ಹಾಗೂ ಧಾರ್ಮಿಕ ಗುರು ಅಯಾತುಲ್ಲಾ ಖೊಮೇನಿ, 1979ರ ಇರಾನ್ ಕ್ರಾಂತಿಯ ವೇಳೆ ಯಾವ ‘ಇಸ್ಲಾಮ್ ಜಾಗೃತಿ’ಯ ಕನಸು ಕಾಣಲಾಗಿತ್ತೋ ಅದು ಇದೀಗ ಸಾಕಾರಗೊಳ್ಳುತ್ತಿದೆ ಎಂದಿದ್ದಾರೆ.

ತಮ್ಮ ಮಾರ್ಗದರ್ಶಕನ ಮಾತುಗಳನ್ನು ಆಲಿಸಿ ಸಂಭ್ರಮೋದ್ಗಾರಗಳ ಸುರಿಮಳೆ ಸುರಿಸಿದ ನೆರೆದಿದ್ದ ಜನತೆ ಇದೇ ವೇಳೆ ‘ಅಮೆರಿಕ ನಾಶವಾಗಲಿ, ಇಸ್ರೇಲ್ ನಿರ್ಮೂಲನೆ    ಯಾಗಲಿ’ ಎಂಬ ಘೋಷಣೆಗಳನ್ನು ಕೂಗಿದರು.

ಕಳೆದ ಏಳು ತಿಂಗಳ ನಂತರ ಶುಕ್ರವಾರದ ಪ್ರಾರ್ಥನೆ ವೇಳೆ ಖೊಮೇನಿ ಮಾಡಿದ ಮೊತ್ತಮೊದಲ ಭಾಷಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT