ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಬಿಡಿ: ಅಣ್ಣಾ ಗುಡುಗು

Last Updated 30 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ಪ್ರಬಲ ಲೋಕಪಾಲ ಮಸೂದೆ ಜಾರಿಗೆ ತನ್ನಿ. ಇಲ್ಲವೆ ಅಧಿಕಾರ ಬಿಡಿ~ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಡಾ. ಮನಮೋಹನ್ ಸಿಂಗ್ ಸರ್ಕಾರದ ವಿರುದ್ಧ ಸೋಮವಾರ ಗುಡುಗಿದ್ದಾರೆ.

ಅಣ್ಣಾ ಆರಂಭಿಸಿರುವ ಉಪವಾಸ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು, ಜನ ಬೆಂಬಲ ಪಡೆಯುತ್ತಿದೆ.

ಅರವಿಂದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಹಾಗೂ ಗೋಪಾಲ್ ರೈ ಅವರ ಉಪವಾಸ ಐದನೇ ದಿನದಲ್ಲಿ ಮುಂದುವರಿದಿದೆ. ಅಣ್ಣಾ ಆರೋಗ್ಯ ಉತ್ತಮವಾಗಿದೆ. ರಕ್ತದೊತ್ತಡ, ಮಧು ಮೇಹ ಹಾಗೂ ನಾಡಿ ಮಿಡಿತ ಎಲ್ಲವೂ ಸಹಜ ಸ್ಥಿತಿಯಲ್ಲಿವೆ ಎಂದು ಅಣ್ಣಾ ತಂಡ ತಿಳಿಸಿದೆ.

ಪ್ರಬಲ ಜನ ಲೋಕಪಾಲ ಮಸೂದೆಗೆ ಪಟ್ಟು ಹಿಡಿದಿರುವ ಹಿರಿಯ ಗಾಂಧಿವಾದಿಗೆ ಬೆಂಬಲ ವ್ಯಕ್ತಪಡಿಸಲು ಜನ ತಂಡೋಪತಂಡವಾಗಿ ಜಂತರ್ ಮಂತರ್‌ಗೆ ಬರುತ್ತಿದ್ದಾರೆ. ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಈಡೇರಿಸುವ ಆಸಕ್ತಿ ಇದ್ದರೆ ಸತ್ಯಾಗ್ರಹ ಸ್ಥಳಕ್ಕೆ ಸಂಧಾನಕಾರರನ್ನು ಕಳುಹಿಸುವಂತೆ ಅಣ್ಣಾ ತಂಡ ಹೇಳಿದೆ.
 
ಆದರೆ, ಸರ್ಕಾರ ಚಳವಳಿ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ ತಟಸ್ಥವಾಗಿದೆ. ಕಾದು ನೋಡುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಚಳವಳಿಯ ದಿಕ್ಕುದೆಸೆ ನೋಡಿಕೊಂಡು ಒಂದೆರಡು ದಿನಗಳ ಬಳಿಕ  ಸರ್ಕಾರ ತನ್ನ ನಿಲುವು ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಶನಿವಾರ ಪ್ರಧಾನಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದ ಕೆಲವು ಅಣ್ಣಾ ಬೆಂಬಲಿಗರು ಸೋಮವಾರ ಜನಪಥ್‌ನಲ್ಲಿರುವ ಕೃಷಿ ಸಚಿವ ಶರದ್ ಪವಾರ್ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಸುಮಾರು 50 ಯುವಕರು ಪವಾರ್ ಮನೆಗೆ ನುಗ್ಗಲು ಪ್ರಯತ್ನಿಸಿದರು. ಅವರನ್ನು ಭದ್ರತಾ ಸಿಬ್ಬಂದಿ ತಡೆದರು. ಸ್ವಲ್ಪ ಹೊತ್ತಿನಲ್ಲೇ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಬಂಧಿಸಿದರು. ಆದರೆ, ಅಣ್ಣಾ ತಂಡ ಈ ಪ್ರತಿಭಟನೆ ಹಿಂದೆ ತನ್ನ ಪಾತ್ರವೇನೂ ಇಲ್ಲ ಎಂದು ಹೇಳಿದೆ.

ಜಂತರ್ ಮಂತರ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾ ಹಜಾರೆ, `ಚಳವಳಿಗೆ ಸಿಗುತ್ತಿರುವ ಜನ ಬೆಂಬಲವನ್ನು ಗಮನಿಸಿದರೆ ಪ್ರಬಲ ಲೋಕಪಾಲ ಮಸೂದೆ ಜಾರಿ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಇಲ್ಲವಾದರೆ ಅಧಿಕಾರ ಬಿಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ತಮ್ಮ ಚಳವಳಿಯನ್ನು ಹಗುರವಾಗಿ ಪರಿಗಣಿಸಬಾರದು~ ಎಂದು ಎಚ್ಚರಿಕೆ ನೀಡಿದರು.

`ಇದು ಮಾಡು ಇಲ್ಲವೆ ಮಡಿ~ ಚಳವಳಿಯಾಗಿದ್ದು ಪ್ರತಿಯೊಬ್ಬರೂ ಕೆಲಸ ಕಾರ್ಯಗಳನ್ನು ಬಿಟ್ಟು ಚಳವಳಿ ಬೆಂಬಲಿಸುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಶಾಲಾ- ಕಾಲೇಜು ತ್ಯಜಿಸುವಂತೆ ವಿದ್ಯಾರ್ಥಿಗಳಿಗೆ `ಟ್ವಿಟರ್~ನಲ್ಲಿ ಮನವಿ ಮಾಡಿದ್ದಾರೆ.

`ಪತ್ರಕರ್ತರ ಜತೆ ಮಾತನಾಡಿದ ಅಣ್ಣಾ ತಂಡದ ಸದಸ್ಯೆ ಕಿರಣ್ ಬೇಡಿ, ಭ್ರಷ್ಟಾಚಾರ ನಿಯಂತ್ರಣಕ್ಕೆ ಪ್ರಬಲ ಲೋಕಪಾಲ ಸಂಸ್ಥೆ ಅಸ್ತಿತ್ವಕ್ಕೆ ಬರಬೇಕು. ಯಾವುದೇ ರಾಜಕೀಯ ಒತ್ತಡಗಳಿಗೆ ಸೊಪ್ಪು ಹಾಕದ ಸ್ವತಂತ್ರ ತನಿಖಾ ಸಂಸ್ಥೆ ರಚಿಸಬೇಕು. ಪ್ರಧಾನಿ ಮನಮೋಹನ್‌ಸಿಂಗ್ ಒಳಗೊಂಡು ಹದಿನೈದು ಸಚಿವರ ಮೇಲಿನ ಆರೋಪಗಳ ವಿಚಾರಣೆಗೆ ವಿಶೇಷ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

 ಈ ಮಧ್ಯೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಜತೆ ವೇದಿಕೆ ಹಂಚಿಕೊಂಡ ಯೋಗ ಗುರು ಬಾಬಾ ರಾಮ್‌ದೇವ್ ಅವರನ್ನು ಟೀಕಿಸಿದ್ದ ಅಣ್ಣಾ ತಂಡದ ಸದಸ್ಯರು ಸೋಮವಾರ ತಮ್ಮ ನಿಲುವನ್ನು ಮೃದುಗೊಳಿಸಿದ್ದಾರೆ. ಯೋಗ ಗುರು ಯಾರನ್ನೂ ಬೇಕಾದರೂ ಭೇಟಿ ಮಾಡಬಹುದು ಎಂದು ಕಿರಣ್ ಬೇಡಿ ಮತ್ತಿತರರು ಹೇಳಿದ್ದಾರೆ. ಹಿಂದೆ ನಾವೂ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದೆವು ಎಂದೂ ಬೇಡಿ ತಿಳಿಸಿದ್ದಾರೆ.  

ಕೇಂದ್ರದ ಸಂಚು
ಭಾನುವಾರವಷ್ಟೇ ಅಣ್ಣಾ ಹಜಾರೆ ಅವರು ಇಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಬಳಿಕ ನವದೆಹಲಿಯಲ್ಲಿ ಹೊಸ ರೀತಿಯ ಬೆಳವಣಿಗೆಗಳು ಆಗುತ್ತಿವೆ. ಉತ್ತರ ಭಾರತಕ್ಕೆ ವಿದ್ಯುತ್ ಪೂರೈಸುವ ಸಂಪರ್ಕ ಜಾಲ ಸೋಮವಾರ ಸ್ಥಗಿತಗೊಳ್ಳಲು ಇದು ಕೂಡ ಒಂದು ಕಾರಣ ಇರಬಹುದು ಎಂದು ಅಣ್ಣಾ ತಂಡದ ಸದಸ್ಯರು ಆರೋಪ ಮಾಡಿದ್ದಾರೆ.

ಸರ್ಕಾರ ಏನೂ ಬೇಕಾದರು ಮಾಡಲಿ. ಆದರೆ ಜನ ಮಾತ್ರ ಅಣ್ಣಾ ನಡೆಸುತ್ತಿರುವ ಉಪವಾಸ ಸ್ಥಳಕ್ಕೆ ಬಂದೇ ಬರುತ್ತಾರೆ ಎಂದು ಅಣ್ಣಾ ತಂಡದ ಕೋರ್ ಕಮಿಟಿ ಸದಸ್ಯರಾದ ಕುಮಾರ್ ವಿಶ್ವಾಸ್ ಮತ್ತು ಕಾರ್ಯಕರ್ತ ಸಂಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT