ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ವ್ಯವಸ್ಥೆಯ ವೈಫಲ್ಯ

Last Updated 3 ಜನವರಿ 2011, 7:05 IST
ಅಕ್ಷರ ಗಾತ್ರ

ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯ ವರದಿಯನ್ನಾಧರಿಸಿ ಹಿಂದುಳಿದ 15 ಜಿಲ್ಲೆಗಳಲ್ಲಿನ ಅಭಿವೃದ್ಧಿಗಾಗಿ  ‘ವಿಶೇಷ ಅಭಿವೃದ್ಧಿ ಯೋಜನೆ’ಯನ್ನೇ ರೂಪಿಸಿ, ಎಂಟು ವರ್ಷಗಳಲ್ಲಿ 31 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುವ ಗುರಿಯನ್ನು ಹೊಂದಲಾಗಿದೆ. ಈ ಯೋಜನೆ ಜಾರಿಗೆ ಬಂದು ಮೂರು ವರ್ಷಗಳೇ ಆದವು. ಪ್ರತಿ ವರ್ಷವೂ ಬಜೆಟ್ಟಿನಲ್ಲಿ ಹೆಚ್ಚಿನ ಹಣವನ್ನು ಕಾಯ್ದಿರಿಸಿದರೂ, ಕಾರ್ಯಕ್ರಮಗಳ ಜಾರಿಯಲ್ಲಿ ಆಗುತ್ತಿರುವ ವಿಳಂಬ ನೀತಿಯ ಹಳೇ ಚಾಳಿಯೇ ಈಗಲೂ ಮುಂದುವರಿದಿದೆ. ಈ ಬಾಬ್ತಿಗಾಗಿ 1910-11ರ ಬಜೆಟ್ಟಿನಲ್ಲಿ 2,674 ಕೋಟಿ ರೂಪಾಯಿಯನ್ನು ಕಾಯ್ದಿರಿಸಲಾಗಿದೆಯಾದರೂ, ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಅಭಿವೃದ್ಧಿಯ ಕಾಮಗಾರಿಗಳಿಗಾಗಿ ಮಾಡಿರುವ ಖರ್ಚು ಕೇವಲ 646.10 ಕೋಟಿ ರೂಪಾಯಿ. ಅಂದರೆ ಏಳು ತಿಂಗಳ ಅವಧಿಯಲ್ಲಿ ಶೇ 24ರಷ್ಟು ಹಣವನ್ನು ಮಾತ್ರ ಖರ್ಚು ಮಾಡಲಾಗಿದೆ. ಇನ್ನು ಐದು ತಿಂಗಳ ಅವಧಿಯಲ್ಲಿ ಉಳಿದ ಕಾಮಗಾರಿಗಳಿಗೆ 2,028 ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇದು ಸಾಧ್ಯವೇ? ಇಲ್ಲಿ ಕೇವಲ ಹಣ ಖರ್ಚು ಮಾಡುವುದಲ್ಲ. ಆ ಭಾಗದ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕು. ಈ ವಿಳಂಬಕ್ಕೆ ಕಾರಣ ಏನು ಎನ್ನುವುದನ್ನು ದಿನ ನಿತ್ಯ ಅಭಿವೃದ್ಧಿಯ ಮಂತ್ರ ಪಠಿಸುವ ಮುಖ್ಯಮಂತ್ರಿಯವರೇ ಜನರಿಗೆ ಸ್ಪಷ್ಟಪಡಿಸಬೇಕು.

ವಿಶೇಷ ಅಭಿವೃದ್ಧಿ ಯೋಜನೆ ಕುರಿತು ಕಳೆದ ವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿರುವ ಮುಖ್ಯಮಂತ್ರಿ ಅವರ ಗಮನಕ್ಕೆ ಬಂದಿರುವ ವಾಸ್ತವ ಇದು. ಅಭಿವೃದ್ಧಿ ಕಾರ್ಯಕ್ರಮಗಳನ್ನು ಬದಿಗೊತ್ತಿ ಸೀರೆ ಹಂಚಿಕೆಯಂತಹ ಅಗ್ಗದ ಪ್ರಚಾರ ತಂದು ಕೊಡುವ ಕಾರ್ಯಕ್ರಮಗಳಿಗೆ ಸರ್ಕಾರಿ ಯಂತ್ರವನ್ನು ಬೇಕಾಬಿಟ್ಟಿ ಬಳಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ಅಭಿವೃದ್ಧಿಯಲ್ಲಿನ ಈ ವಿಳಂಬ ಮತ್ತು ನಿರ್ಲಕ್ಷ್ಯಕ್ಕೆ ರಾಜಕೀಯ ಅಧಿಕಾರಸ್ಥರು ಪೂರ್ಣವಾಗಿ ವಿಫಲಗೊಂಡಿರುವುದನ್ನು ಈ ಅಂಕಿ ಅಂಶಗಳು ತೋರಿಸುತ್ತವೆ. 2011ನೇ ವರ್ಷ ರಾಜ್ಯದ ಮಟ್ಟಿಗೆ ‘ಅಭಿವೃದ್ಧಿ ಪರ್ವ’ ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯಕ್ರಮಗಳ ಜಾರಿಯಲ್ಲಿ ಆಗುತ್ತಿರುವ ವೈಫಲ್ಯದತ್ತ ಗಂಭೀರವಾಗಿ ಗಮನ ಹರಿಸಬೇಕಿದೆ. ಈ ವೈಫಲ್ಯ ಮತ್ತು ವಿಳಂಬಕ್ಕೆ ಕಾರಣಗಳೇನೆಂಬುದನ್ನು ತಿಳಿದು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಮುಖ್ಯಮಂತ್ರಿ ರಾಜ್ಯದಾದ್ಯಂತ ಪ್ರವಾಸ ಮಾಡಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವಿಧಾನಸೌಧದಲ್ಲಿ ಕುಳಿತು ಅಧಿಕಾರಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳದೆ, ಕಡತಗಳನ್ನು ಪರಿಶೀಲಿಸದೆ, ಯೋಜನೆಗಳ ಪ್ರಗತಿ ಪರಿಶೀಲನೆ ಮಾಡದೇ ಆಡಳಿತವನ್ನು ನಿರ್ಲಕ್ಷಿಸಿದರೆ ಪರಿಣಾಮ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಜನತಾ ಪರಿವಾರದ 50 ವರ್ಷಗಳ ಆಡಳಿತಾವಧಿಯಲ್ಲಿ ಮಾಡದ ಸಾಧನೆಯನ್ನು ಎರಡೂವರೆ ವರ್ಷಗಳಲ್ಲಿ ಮಾಡಿರುವುದಾಗಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಮುಖ್ಯಮಂತ್ರಿಗಳಿಗೆ ಈಗಿನ ಕಳಪೆ ಸಾಧನೆ ಆಡಳಿತದಲ್ಲಿ ಮಾಡಬೇಕಾದದು ಎಷ್ಟಿದೆ ಎಂಬುದನ್ನು ತಿಳಿಯಲು ಒಂದು ಪಾಠವಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT