ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಸವಿ ಉಂಡವರಲ್ಲಿ ನಡುಕ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯದ ಒಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಮೂವರು ಮಾಜಿ ಸಚಿವರು ಜೈಲಿನಲ್ಲಿ ಬಂಧಿಯಾಗಿದ್ದಾರೆ. ಈ ಬೆಳವಣಿಗೆ ಕೇವಲ ಬಿಜೆಪಿಗಷ್ಟೇ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗಿಯಾದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಲ್ಲೂ ನಡುಕ ಹುಟ್ಟಿಸಿದೆ.

ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಖಾಸಗಿ ದೂರಿನ ಸಂಬಂಧ ಜಾಮೀನು ಅರ್ಜಿ ತಿರಸ್ಕೃತವಾಗಿರುವುದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರನ್ನು `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
 
ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆಗಸ್ಟ್ 8ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರ ಆರೋಪದಡಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಸೆಪ್ಟೆಂಬರ್ 5ರಂದು ಬಂಧಿಸಿದ್ದು, ಆಂಧ್ರಪ್ರದೇಶದ ಚಂಚಲಗೂಡ ಜೈಲಿನಲ್ಲಿದ್ದಾರೆ.

ಬಂಧಿತರಾಗಿರುವವರಲ್ಲಿ ಮೂವರು ವಿಧಾನಸಭೆಯ ಬಿಜೆಪಿ ಸದಸ್ಯರು. ಜನಾರ್ದನ ರೆಡ್ಡಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ. ಹೀಗೆ ಸಾಲು ಸಾಲು ಶಾಸಕರು ಭ್ರಷ್ಟಾಚಾರ ಆರೋಪದಡಿ ಬಂಧನಕ್ಕೆ ಒಳಗಾಗಿರುವುದು ರಾಜ್ಯ ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿದೆ. ಮಾಜಿ ಮುಖ್ಯಮಂತ್ರಿಯೇ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವುದು `ಕಮಲ ಪಾಳೆಯ~ಕ್ಕೆ ನುಂಗಲಾರದ ತುತ್ತಾಗಿದೆ.

ಸಂಪಂಗಿಗೂ ಭಯ: ಲಂಚ ಪ್ರಕರಣದಲ್ಲಿ 2009ರ ಜನವರಿ 29ರಂದು ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದ ಕೆಜಿಎಫ್ ಶಾಸಕ ವೈ.ಸಂಪಂಗಿ ವಿರುದ್ಧದ ಪ್ರಕರಣದ ವಿಚಾರಣೆ ಇದೇ 20ರಿಂದ ಆರಂಭವಾಗಲಿದೆ.

ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್. ಕೆ.ಸುಧೀಂದ್ರ ರಾವ್ ಈಗಾಗಲೇ ಸಂಪಂಗಿ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ.

ಲಂಚ ಪ್ರಕರಣದಲ್ಲಿ ಬಂಧಿತರಾದ ವೇಳೆ ಸಂಪಂಗಿ ಜೈಲು ವಾಸ ತಪ್ಪಿಸಿಕೊಂಡು ಆಸ್ಪತ್ರೆಯಲ್ಲೇ ಉಳಿದಿದ್ದರು. ಅನಾರೋಗ್ಯದ ಕಾರಣ ನೀಡಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಮೊದಲ ದಿನವೇ ಸ್ಥಳಾಂತರ ಹೊಂದಿದ್ದ ಅವರು, ಜಾಮೀನು ದೊರೆಯುವವರೆಗೂ ಆಸ್ಪತ್ರೆಯಲ್ಲೇ ಉಳಿದಿದ್ದರು. ಈಗ ಪ್ರಕರಣದ ವಿಚಾರಣೆ ಅ.20ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಂಪಂಗಿ ಕೂಡ ಭಯದಲ್ಲಿದ್ದಾರೆ.

ಜೆಡಿಎಸ್ ನಾಯಕರೂ ಕಟಕಟೆಯಲ್ಲಿ: ಭ್ರಷ್ಟಾಚಾರ ಪ್ರಕರಣದಡಿ ಬಂಧನದ ಭಯ ಆಡಳಿತ ಪಕ್ಷದ ಮುಖಂಡರನ್ನು ಮಾತ್ರ ಕಾಡುತ್ತಿಲ್ಲ. ಹಲವು ವರ್ಷಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದು, ಅಧಿಕಾರದ `ಸವಿ~ ಉಂಡಿದ್ದ ವಿರೋಧ ಪಕ್ಷಗಳಲ್ಲೂ ನಡುಕ ಹುಟ್ಟಿಸಿದೆ.

ಈ ಪೈಕಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಒಂದು ಖಾಸಗಿ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ದಂಪತಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ದೊರೆತಿರುವುದರಿಂದ ಸದ್ಯ ನಿರಾಳವಾಗಿದ್ದಾರೆ.

ಆದರೆ ಕುಮಾರಸ್ವಾಮಿ ಅವರ ಹಿರಿಯ ಅಣ್ಣ ಎಚ್.ಡಿ. ಬಾಲಕೃಷ್ಣೇಗೌಡ ಅವರ ವಿರುದ್ಧ ಭದ್ರಾವತಿ ಮೂಲದ ಎಸ್.ಎನ್. ಬಾಲಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನ ತನಿಖೆಯನ್ನು ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಿದೆ.

ಅಚ್ಚರಿಯ ಸಂಗತಿ ಎಂದರೆ ಕುಮಾರಸ್ವಾಮಿ ಮತ್ತು ಅವರ ಮತ್ತೊಬ್ಬ ಸಹೋದರ ಎಚ್.ಡಿ.ರೇವಣ್ಣ ಅವರ ಕಾರಣಕ್ಕಾಗಿ ಆಗಾಗ ಸುದ್ದಿಯಲ್ಲಿದ್ದ ಕೆಲ ಉದ್ಯಮ ಸಂಸ್ಥೆಗಳ ಜೊತೆ ಬಾಲಕೃಷ್ಣೇಗೌಡ ನಂಟಿನ ಬಗ್ಗೆ ಈ ದೂರಿನಲ್ಲಿ ಉಲ್ಲೇಖವಿದೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ರೇವಣ್ಣ ಅವರು ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆಲ ಕಂಪೆನಿಗಳ ಮೂಲಕ ಲಾಭ ಪಡೆದಿದ್ದಾರೆ ಎಂಬ ಆರೋಪ ಹಲವು ಬಾರಿ ಪ್ರತಿಧ್ವನಿಸಿತ್ತು.

ಬಿಎಸ್‌ಕೆ ಟ್ರೇಡರ್ಸ್, ಬಿಎಸ್‌ಕೆ ಎಂಟರ್‌ಪ್ರೈಸಸ್, ಶಾಖಾಂಬರಿ ಎಂಟರ್‌ಪ್ರೈಸಸ್, ರಾಜರಾಜೇಶ್ವರಿ ಪಾಲಿಮರ್ಸ್‌ನ ವ್ಯವಹಾರಗಳ ಜೊತೆ ಸಹೋದರರ ಹೆಸರು ತಳಕು ಹಾಕಿಕೊಂಡಿತ್ತು. ಬಾಲಕೃಷ್ಣೇಗೌಡ ವಿರುದ್ಧದ ಪ್ರಕರಣದಲ್ಲಿ ಈ ಕಂಪೆನಿಗಳ ಬಗ್ಗೆಯೂ ತನಿಖೆ ನಡೆಯುವುದರಿಂದ ಮುಂದೆ ಅದು ಕುಮಾರಸ್ವಾಮಿ ಮತ್ತು ರೇವಣ್ಣ ಅವರನ್ನೂ ತಲುಪಿದರೆ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಕಾಂಗ್ರೆಸ್‌ನಲ್ಲೂ ಭಯ: ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಗಣಿ ಗುತ್ತಿಗೆ ನವೀಕರಣದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಹಾಲಿ ಶಾಸಕ ವಿ.ಮುನಿಯಪ್ಪ ಸಿಬಿಐ ತನಿಖೆ ಎದುರಿಸುತ್ತಿದ್ದಾರೆ.

ಈಗಿನ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುನಿಯಪ್ಪ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಈ ಪ್ರಕರಣ ಯಾವ ಹಾದಿಯಲ್ಲಿ ಸಾಗಬಹುದು ಎಂಬ ಆತಂಕ ಕಾಂಗ್ರೆಸ್‌ನ ಕೆಲ ಮುಖಂಡರನ್ನು ಕಾಡುತ್ತಿದೆ.

ಇನ್ನು ಇತರೆ ಪಕ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರ ಅನುಭವಿಸಿರುವ ಕಾಂಗ್ರೆಸ್‌ಗೂ ಖಾಸಗಿ ದೂರಿನ ಭಯ ಬಿಟ್ಟಿಲ್ಲ. ಹಲವು ವರ್ಷಗಳ ಕಾಲ ಸಚಿವರಾಗಿದ್ದ ಹಲವರು ಈಗ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿನ ಬೆಳವಣಿಗೆಗಳ ಕಡೆ ದೃಷ್ಟಿ ನೆಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT