ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಶಾಹಿ ಅಸಡ್ಡೆ: ಸೌಲಭ್ಯ ಮರೀಚಿಕೆ

Last Updated 13 ಸೆಪ್ಟೆಂಬರ್ 2011, 7:00 IST
ಅಕ್ಷರ ಗಾತ್ರ

ಚಾಮರಾಜನಗರ: `ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದರೂ ಅರ್ಹರಿಗೆ ಸವಲತ್ತು ಲಭಿಸುತ್ತಿಲ್ಲ. ಇದಕ್ಕೆ ಅಧಿಕಾರಶಾಹಿ ಯಲ್ಲಿರುವ ತರಬೇತಿಯ ಕೊರತೆಯೇ ಕಾರಣ~ ಎಂದು ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಕಿಡಿಕಾರಿದರು.

ತಾಲ್ಲೂಕಿನ ಉಮ್ಮತ್ತೂರು ಗ್ರಾಮದಲ್ಲಿ 3.44 ಕೋಟಿ ರೂ ವೆಚ್ಚದಡಿ ನಿರ್ಮಿಸಿರುವ ಮೊರಾರ್ಜಿ ದೇಸಾಯಿ ವಸತಿಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

`ನನಗೆ ಸಚಿವ ಸ್ಥಾನ ಸಿಕ್ಕಿ ಒಂದು ವರ್ಷವೂ ಕಳೆದಿಲ್ಲ. ಇಲಾಖೆಯಲ್ಲಿರುವ ಅಡೆಂಟರ್‌ನಿಂದ ಹಿಡಿದು ಐಎಎಸ್ ಅಧಿಕಾರಿಗಳಿಗೆ ಸೂಕ್ತ ತರಬೇತಿಯೇ ಇಲ್ಲ. ಇದರ ಪರಿಣಾಮ ಸವಲತ್ತು ತಲುಪುತ್ತಿಲ್ಲ. ಇದು ನನಗೆ ಅಸಮಾಧಾನ ತಂದಿದೆ. ಎಲ್ಲ ಹಂತದ ಅಧಿಕಾರಿಗಳಿಗೂ ಸೂಕ್ತ ತರಬೇತಿ ನೀಡಲು ನಿರ್ಧರಿಸಿದ್ದೇನೆ~ ಎಂದರು.

ಶಿಕ್ಷಣ ಪಡೆದ ತಕ್ಷಣ ಅಕ್ಷರ ಜ್ಞಾನ ಲಭಿಸುವುದಿಲ್ಲ. ಸಮಾಜವನ್ನು ಅರ್ಥೈಸಿಕೊಳ್ಳದಿದ್ದರೆ ಅಧಿಕಾರದ ಗದ್ದುಗೆ ಏರುವ ಆವಶ್ಯಕತೆಯಿಲ್ಲ. ಅಧಿಕಾರಶಾಹಿಯಲ್ಲಿ ಬದ್ಧತೆಯ ಕೊರತೆಯಿದೆ. ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿ ಸೂಕ್ತ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಆ ತೀರ್ಪು ಓದಲು ಅಧಿಕಾರಿಗಳಿಗೆ ಸಮಯವೇ ಇಲ್ಲ ಎಂದು ವಿಷಾದಿಸಿದರು.

ಶೋಷಿತರಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಕಲ್ಪಿಸಿದೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಪ್ರೀತಿಸಿ ಆರಾಧಿಸುವ ಗುಣ ಬೆಳೆಸಿಕೊಳ್ಳಬೇಕು. ಮೊರಾರ್ಜಿ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಬಿಜೆಪಿ ರಾಜ್ಯ ಸರ್ಕಾರ ಓಟ್‌ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಶೋಷಿತರಿಗೆ ಸೌಲಭ್ಯ ಕಲ್ಪಿಸುತ್ತಿದೆ ಎಂದು ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್. ಪ್ರತಿಭಾ ಪ್ರಾಸ್ತಾವಿಕ ಮಾತನಾ ಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ. ರಾಜೇಶ್ವರಿ ಮಾತನಾಡಿದರು. ಶಾಸಕ ಜಿ.ಎನ್. ನಂಜುಂಡಸ್ವಾಮಿ ಅಧ್ಯಕ್ಷತೆವಹಿಸಿದ್ದರು.

ಸಂಸದ ಆರ್. ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜು ನಪ್ಪ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ, ಜಿ.ಪಂ. ಉಪಾಧ್ಯಕ್ಷ ಎಂ. ಸಿದ್ದರಾಜು, ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಬಿ.ಪಿ. ಪುಟ್ಟಬುದ್ಧಿ, ತಾ.ಪಂ. ಅಧ್ಯಕ್ಷೆ ಪದ್ಮಾ ಚಂದ್ರು, ಉಪಾಧ್ಯಕ್ಷ ಪಿ. ಮಹಾಲಿಂಗಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಭಾಗ್ಯಾ, ತಾ.ಪಂ. ಸದಸ್ಯರಾದ ಮಂಜುಳಾ, ಪಾರ್ವತಮ್ಮ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT