ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಾವಧಿ ಪೂರ್ಣಗೊಳಿಸಲು ಅವಕಾಶ ನೀಡಿ

Last Updated 26 ಜೂನ್ 2012, 9:50 IST
ಅಕ್ಷರ ಗಾತ್ರ

ಬೆಳಗಾವಿ: `ಮಹಾನಗರ ಪಾಲಿಕೆಯ ಸಭೆಯನ್ನು ಪುನಃ ಅಸ್ತಿತ್ವಕ್ಕೆ ತರುವ ಮೂಲಕ ಚುನಾಯಿತ ಜನಪ್ರತಿನಿಧಿಗಳಿಗೆ ಅವರ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು~ ಎಂದು ಪಾಲಿಕೆಯ ಬಹುತೇಕ ಸದಸ್ಯರು, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ತಮ್ಮ ನಿಲುವನ್ನು ದಾಖಲಿಸಿದರು.

ರಾಜ್ಯ ಸರ್ಕಾರವು ಡಿಸೆಂಬರ್ 15, 2011ರಂದು ಪಾಲಿಕೆಯನ್ನು `ಸೂಪರ್‌ಸೀಡ್~ ಮಾಡಿರುವ ಆದೇಶವನ್ನು ಜೂನ್ 19ರಂದು ರದ್ದುಗೊಳಿಸಿದ್ದ ಹೈಕೋರ್ಟ್, ಸಂವಿಧಾನದ ಆರ್ಟಿಕಲ್ 243(ಯು) ಪ್ರಕಾರ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಕಲ್ಪಿಸಲು ಜೂನ್ 25ರಂದು ಸಭೆ ನಡೆಸುವಂತೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ, ಪಾಲಿಕೆಗೆ ನವೆಂಬರ್ 24, 2011ರಂದು 20 ಅಂಶಗಳನ್ನೊಳಗೊಂಡ ಕಾರಣ ಕೇಳಿ ನೋಟಿಸ್ ನೀಡಿರುವುದರ ಮುಂದುವರಿಕೆ ಪ್ರಕ್ರಿಯೆಯಾಗಿ ನಗರಾಭಿವೃದ್ಧಿ ಇಲಾಖೆಯು ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಸದಸ್ಯರು, ಸರ್ಕಾರದ `ಸೂಪರ್‌ಸೀಡ್~ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ ಅವರ ಎದುರು ಹೈಕೋರ್ಟ್‌ಗೆ ಹೋಗಿದ್ದ 24 ಸದಸ್ಯರು ಮೊದಲು ತಮ್ಮ ಹೇಳಿಕೆಯನ್ನು ದಾಖಲಿಸಿದರು.

ಮೊದಲಿಗೆ ಹೇಳಿಕೆ ನೀಡಿದ ಮಾಜಿ ಉಪ ಮೇಯರ್ ಧನರಾಜ ಗವಳಿ, “ಕೆಎಂಸಿ ಕಾಯ್ದೆ 1976ರ ಪ್ರಕಾರ ಜೂನ್ 14ಕ್ಕೆ ಪಾಲಿಕೆಯ ಆಡಳಿತಾಧಿಕಾರಿಯ ಅವಧಿ ಮುಗಿಯುತ್ತದೆ. ಹೀಗಾಗಿ ಸದ್ಯ ನಾವು ಪಾಲಿಕೆಯ ಸದಸ್ಯರಾಗಿ ಕಾರ್ಯನಿರ್ವಹಿಸಬಹುದೇ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು” ಎಂದು ಕೋರಿದರು.

“ಪಾಲಿಕೆಯನ್ನು `ಸೂಪರ್‌ಸೀಡ್~ ಮಾಡಿ ಆಡಳಿತಾಧಿಕಾರಿ ನೇಮಿಸಿದ ಬಳಿಕ ನಗರದಲ್ಲಿ ಆರೋಗ್ಯ ವ್ಯವಸ್ಥೆಯು ಬಿಗಡಾ ಯಿಸಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಜನರು ಚುನಾ ಯಿತ ಸದಸ್ಯರಾದ ನಮ್ಮನ್ನು ಕೇಳುತ್ತಿದ್ದಾರೆ. ಅವಧಿ ಮುಗಿದ ಬಳಿಕವೂ ಆಡಳಿತಾಧಿಕಾರಿ ಅಧಿಕಾರ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಕೂಡಲೇ ಪಾಲಿಕೆಯ ಸಭೆಯನ್ನು ಪುನಃ ಅಸ್ತಿತ್ವಕ್ಕೆ ತಂದು, ಸದಸ್ಯರ ಅಧಿಕಾರಾವಧಿ (ಮಾರ್ಚ್ 13, 2013) ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕು” ಎಂದು ವಾದ ಮಂಡಿಸಿದರು.

“ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಹಾಗೂ ಮೇಯರ್ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದೇ ಇರುವ ಹಿನ್ನೆಲೆಯಲ್ಲಿ ಪಾಲಿಕೆಯ ಸಾಮಾನ್ಯ ಸಭೆಗಳು ಸಮರ್ಪಕವಾಗಿ ನಡೆದಿಲ್ಲ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಅಭಿನಂದನಾ ನಿರ್ಣಯ ಮಂಡನೆಯಾದಾಗ ಒಬ್ಬ ಸದಸ್ಯರು ವಿರೋಧಿಸಿದಾಗ ಗದ್ದಲ ಉಂಟಾಗಿ ಆಡಳಿತ ಪಕ್ಷದ ಕನ್ನಡ ಹಾಗೂ ಉರ್ದು ಭಾಷಿಕ 22 ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು. ಅವರು ಸಭೆಯಲ್ಲಿ ಇದ್ದು ಮತ ಚಲಾಯಿಸಿದ್ದರೆ, ಅಭಿನಂದನಾ ನಿರ್ಣಯ ಪಾಸಾಗುತ್ತಿತ್ತು” ಎಂದು ಧನರಾಜ ಗವಳಿ ಲಿಖಿತವಾಗಿ ಹೇಳಿಕೆ ನೀಡಿದರು. ಸದಸ್ಯ ಸಂಜೀವ ಪ್ರಭು, “ಪಾಲಿಕೆಯಲ್ಲಿ 2425 ನೌಕರರು ಇರಬೇಕು. ಆದರೆ, ಕೇವಲ 912 ನೌಕರರು ಕೆಲಸ ಮಾಡುತ್ತಿರುವುದರಿಂದ ಪಾಲಿಕೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಸಕಾಲಕ್ಕೆ ಕೈಗೊಳ್ಳಲು ಆಗುತ್ತಿಲ್ಲ. ಕೌನ್ಸಿಲ್ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆಗಳು ಖಾಲಿ ಇರುವುದು ಹಾಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಾಮಾನ್ಯ ಸಭೆ ಸರಿಯಾಗಿ ನಡೆಯಲಿಲ್ಲ. ಕಂಬಾರರ ಅಭಿನಂದನಾ ಠರಾವಿಗೆ ನಮ್ಮ ವಿರೋಧವಿರಲಿಲ್ಲ. ಚರ್ಚೆಯ ಮೊದಲೇ ಗದ್ದಲ ಮಾಡಿರುವುದರಿಂದ ಸಮಸ್ಯೆ ನಿರ್ಮಾಣವಾಯಿತು” ಎಂದು ಅಭಿಪ್ರಾಯವನ್ನು ತಿಳಿಸಿದರು.

“ಪಾಲಿಕೆಯಲ್ಲಿ ಸಭೆ ನಡೆಸಲು ಅವಕಾಶ ನೀಡದವರ ಮೇಲೆ ಹಾಗೂ ಕನ್ನಡ ವಿರೋಧಿ ಸದಸ್ಯರ ಮೇಲೆ ಸರ್ಕಾರವು ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಪಾಲಿಕೆಯನ್ನು ವಿಸರ್ಜಿಸಿದರೆ, ತಪ್ಪು ಮಾಡದ ಸದಸ್ಯರಿಗೆ ಅನ್ಯಾಯ ಮಾಡಿದಂತಾಗುತ್ತದೆ” ಎಂದು ಮಾಜಿ ಮೇಯರ್ ಎನ್.ಬಿ. ನಿರ್ವಾಣಿ ಸೇರಿದಂತೆ ಹಲವು ಕನ್ನಡಪರ ಸದಸ್ಯರು ತಮ್ಮ ಹೇಳಿಕೆಯನ್ನು ನೀಡಿದರು.

ನಗರಾಭಿವೃದ್ಧಿ ಕಾರ್ಯದರ್ಶಿಗಳ ಎದುರು ತಮ್ಮ ಹೇಳಿಕೆಯನ್ನು ನೀಡಿದ ಬಳಿಕ `ಪ್ರಜಾವಾಣಿ~ ಜೊತೆ ಮಾತನಾಡಿದ ಮೇಯರ್ ಮಂದಾ ಬಾಳೇಕುಂದ್ರಿ, “ರಾಜ್ಯ ಸರ್ಕಾರವು ನೀಡಿದ್ದ ಎರಡು ನೋಟಿಸ್‌ಗಳಿಗೆ ಈಗಾಗಲೇ ನಾನು ಉತ್ತರ ನೀಡಿದ್ದೇನೆ. ಇಂದು ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಹೈಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ. ಸರ್ಕಾರದಿಂದಲೂ ನ್ಯಾಯ ಸಿಗಬಹುದು ಎಂಬ ವಿಶ್ವಾಸವಿದೆ. ಪುನಃ ಪಾಲಿಕೆಯನ್ನು `ಸೂಪರ್‌ಸೀಡ್~ ಮಾಡಿದರೆ ನಗರದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ” ಎಂದು ಅಭಿಪ್ರಾಯ ಪಟ್ಟರು.

ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಡೆದ ಸಭೆಯಲ್ಲಿ ಒಟ್ಟು 58 ಸದಸ್ಯರ ಪೈಕಿ 56 ಸದಸ್ಯರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಕೆಲವರು ಲಿಖಿತವಾಗಿ ಹೇಳಿಕೆ ನೀಡಿದರೆ, ಹಲವರು ಮೌಖಿಕವಾಗಿ ಅಭಿಪ್ರಾಯ ಮಂಡಿಸಿದರು.

ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಸಿ. ಬಸವರಾಜು, ಎಸ್.ಎಂ. ಸೊನ್ನದ, ಅಧೀನ ಕಾರ್ಯದರ್ಶಿ ಮಹೇಶಕುಮಾರ, ಕಾನೂನು ಇಲಾಖೆಯ ಕೆ.ಡಿ. ದೇಶಪಾಂಡೆ, ಪಾಲಿಕೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಅಧಿಕಾರಿಗಳು ಸದಸ್ಯರ ಹೇಳಿಕೆ ದಾಖಲಿಸಿಕೊಳ್ಳಲು ಸಹಕರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT