ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿ ನಾಪತ್ತೆ: ವರದಿಗೆ ಸೂಚನೆ

Last Updated 4 ಅಕ್ಟೋಬರ್ 2011, 7:30 IST
ಅಕ್ಷರ ಗಾತ್ರ

ಲಿಂಗಸುಗೂರ: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಮತ್ತು ತ್ರೈಮಾಸಿಕ ಕೆಡಿಪಿ ಸಭೆಗಳಿಗೆ ಸಮರ್ಪಕ ಮಾಹಿತಿ ನೀಡದೆ, ಸಭೆಗೆ ಗೈರು ಹಾಜರಾಗಿರುವ ಜಲಾನಯನ ಅಧಿಕಾರಿ ವಿರುದ್ಧ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಸುವಂತೆ ಶಾಸಕ ಮಾನಪ್ಪ ವಜ್ಜಲ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಕೆಡಿಪಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು.

ಸೋಮವಾರ ಜರುಗಿದ ಸಭೆಯಲ್ಲಿ ಜಲಾನಯನ ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಮಧ್ಯೆ ನಡೆದಿರುವ ಪ್ರಕರಣಗಳು ಅಭಿವೃದ್ಧಿಗೆ ಮಾರಕವಾಗಿವೆ. ಅಧಿಕಾರಿಗಳು ತಮ್ಮ ಮೇಲಧಿಕಾರಿಗಳ ಗಮನಕ್ಕೆ ಬಾರದಂತೆ ಮನಸೋ ಇಚ್ಛೆ ನಡೆದುಕೊಳ್ಳುತ್ತಿದ್ದಾರೆ. ಕಚೇರಿಗೆ ಹೋಗಿ ಮಾಹಿತಿ ಕೇಳಲು ಸಾಧ್ಯವಿಲ್ಲವಾಗಿದೆ. ಸಭೆಗೂ ಬಾರದೆ ಹೋದರೆ ಹೇಗೆ? ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಭೂಪನಗೌಡ ಕರಡಕಲ್ಲ, ಜಿಪಂ ಸದಸ್ಯ ಎಚ್.ಬಿ.ಮುರಾರಿ ಖೇದ ವ್ಯಕ್ತಪಡಿಸಿದರು.

ತಾಲ್ಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ಪೌಷ್ಟಿಕ ಆಹಾರ ಅತ್ಯಂತ ಕಳಪೆಯಾಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ತಿರಸ್ಕರಿಸಲ್ಪಟ್ಟ ಆಹಾರವನ್ನು ಪೂರೈಸಲಾಗುತ್ತಿದೆ. ಮಕ್ಕಳು ಸಮರ್ಪಕವಾಗಿ ಸೇವನೆ ಮಾಡದೆ ವ್ಯರ್ಥವಾಗುತ್ತಿದೆ. ಪೂರೈಕೆಯಾಗುತ್ತಿರುವ ಆಹಾರ ಜಾನುವಾರುಗಳ ಪಾಲಾಗುತ್ತಿದೆ. ಕೋಟ್ಯಾಂತರ ಹಣ ಖರ್ಚು ಮಾಡಿ ಪೂರೈಸುವ ಪೌಷ್ಟಿಕ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಪಂ ಸದಸ್ಯ ಎಚ್.ಬಿ. ಮುರಾರಿ ಒತ್ತಾಯಿಸಿದರು.

ತಾಲ್ಲೂಕಿನಾದ್ಯಂತ ಶಂಕಿತ ಡೆಂಗೆಜ್ವರದ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆಯೊಂದೆ ಡೆಂಗೆ ಜ್ವರ ನಿಯಂತ್ರಣ ಮಾಡುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಆಡಳಿತ ಮಂಡಳಿ ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡುವ ಅಗತ್ಯವಿದೆ. ಆರೋಗ್ಯ ಕವಚದ 108 ವಾಹನದ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ಯಾವುದೆ ತೊಂದರೆ ಆಗಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯಕುಮಾರ ಸಭೆಗೆ ಮಾಹಿತಿ ನೀಡಿದರು.

ಮಕ್ಕಳ ಹಕ್ಕು ರಕ್ಷಿಸಬೇಕಾದವರು ತಾಳ್ಮೆಯಿಂದ ಕೆಲಸ ಮಾಡುವುದನ್ನು ಮೇಲ್ವಿಚಾರಣೆ ಮಾಡುವಲ್ಲಿ ಹಿರಿಯ ಅಧಿಕಾರಿಗಳು ವಿಫಲವಾಗಿರುವ ಬಗ್ಗೆ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಭೂಪನಗೌಡ ಖೇದ ವ್ಯಕ್ತಪಡಿಸಿದರು.

ವಸತಿ ನಿಲಯದ ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸಭೆ ಮೂಲಕ ಸೂಚನೆ ನೀಡಲಾಯಿತು.
ಶಾಸಕ ಮಾನಪ್ಪ ವಜ್ಜಲ ಸಭೆ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಮಾಕಾಪುರ,  ಸಂಗಮ್ಮ ಪಾಟೀಲ, ದುರುಗಮ್ಮ ಗುಂಡಪ್ಪ ನಾಯಕ,  ಡಿ. ಮೋಹನಕುಮಾರ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT