ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಕೈವಾಡದ ಶಂಕೆ- ಸಿಬಿಐ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಅರ್ಥ್ ಮೂವರ್ಸ್‌ ಲಿಮಿಟೆಡ್‌ನಲ್ಲಿ (ಬಿಇಎಂಎಲ್) 2006-08ರವರೆಗೆ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳ ಅವ್ಯವಹಾರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಕೈವಾಡ ಇರುವ ಶಂಕೆಯನ್ನು ಸಿಬಿಐ ವ್ಯಕ್ತಪಡಿಸಿದೆ.

ಈ ಕುರಿತು ಅದು ಹೈಕೋರ್ಟ್‌ಗೆ ಸೋಮವಾರ ಮಾಹಿತಿ ನೀಡಿದೆ. `ಇಲ್ಲಿಯವರೆಗೆ ನಡೆದಿರುವ ತನಿಖೆಯಿಂದ ಈ ಶಂಕೆ ವ್ಯಕ್ತವಾಗಿದೆ. ಆದರೆ ಅವ್ಯವಹಾರದಲ್ಲಿ ತೊಡಗಿರುವ ಆರೋಪ ಹೊತ್ತ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸುವಂತಹ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ. ಈ ಕುರಿತು ಹೆಚ್ಚಿನ ತನಿಖೆ ಅಗತ್ಯ ಇದೆ.

`ಇವರೆಲ್ಲ ಕೇಂದ್ರ ಸರ್ಕಾರಿ ನೌಕರರಾಗಿರುವ ಕಾರಣ, ಇವರ ವಿರುದ್ಧ ತನಿಖೆ ಕೈಗೊಳ್ಳಲು ಕೇಂದ್ರ ಸರ್ಕಾರದ ಅನುಮತಿ ಕೋರಲಾಗಿದೆ. ಅನುಮತಿ ಸಿಕ್ಕ ತಕ್ಷಣ ತನಿಖೆ ಮುಂದುವರಿಸಲಾಗುವುದು~ ಎಂದು ಸಿಬಿಐ ವಿವರಿಸಿದೆ.

ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ಕೋರಿ ಕೆ.ಎಸ್ ಶಾಸ್ತ್ರಿ ಎನ್ನುವವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐ ಈ ಮಾಹಿತಿ ನೀಡಿದೆ.
ಸಿಬಿಐ ತನಿಖೆ ಮುಂದುವರಿಸಿರುವ ಹಿನ್ನೆಲೆಯಲ್ಲಿ ತನಿಖೆಗೆ ಕೋರಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾಗೊಳಿಸಿತು. ಸಿಬಿಐ ಅಂತಿಮ ವರದಿ ನೀಡಿದ ನಂತರ ಬೇಕಿದ್ದರೆ ಪುನಃ ಅರ್ಜಿ ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ಪೀಠ ಸೂಚಿಸಿದೆ.

ಆರೋಪಿಗಳೆಂದರೆ ಬಿಇಎಂಎಲ್‌ನ ವಿವಿಧ ವಿಭಾಗಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಬಿ.ಆರ್.ವಿಶ್ವನಾಥ, ಎಸ್.ವೆಂಕಟೇಶನ್ ಹಾಗೂ ಎಸ್.ವೆಂಕಟರಾಮನ್.ನೇತ್ರಾಣಿ- ನೌಕಾಪಡೆಗೆ ಸೂಚನೆ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇರುವ ನೇತ್ರಾಣಿ ನಡುಗಡ್ಡೆಯಲ್ಲಿ ನೌಕಾದಳದಿಂದ ಶಸ್ತ್ರಾಸ್ತ್ರ ತರಬೇತಿ ನಡೆಸುವ ಬದಲು ವಿದೇಶದಲ್ಲಿ ಕೆಲವೊಂದು ಕಡೆಗಳಲ್ಲಿ ಇರುವಂತೆ ಕೃತಕ ಪರಿಸರ ನಿರ್ಮಿಸಿ ಏತಕ್ಕೆ ಅಲ್ಲಿ ತರಬೇತಿ ನೀಡಬಾರದು ಎಂದು ಹೈಕೋರ್ಟ್, ನೌಕಾಪಡೆಗೆ ಮೌಖಿಕವಾಗಿ ಪ್ರಶ್ನಿಸಿತು.

ಈ ತರಬೇತಿಯ ಹಿನ್ನೆಲೆಯಲ್ಲಿ ನಡುಗಡ್ಡೆ ವಿನಾಶದ ಅಂಚಿನಲ್ಲಿರುವುದಾಗಿ ದೂರಿ ಬೆಂಗಳೂರಿನ ಎ.ಎನ್.ಕಾರ್ತಿಕ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ. `ಪಾರಿವಾಳಗಳ ನಡುಗಡ್ಡೆ ಎಂದೇ ಇದನ್ನು ಕರೆಯಲಾಗುತ್ತದೆ.

ಇದನ್ನು ರಾಷ್ಟ್ರೀಯ ಜೀವ ವೈವಿಧ್ಯ ಪಾರಂಪರಿಕ ತಾಣವನ್ನಾಗಿಸಲು ಚಿಂತನೆ ನಡೆಸಲಾಗಿದೆ. ಸಮುದ್ರ ರಾಷ್ಟ್ರೀಯ ಉದ್ಯಾನ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಇದಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ನಡುಗಡ್ಡೆಯನ್ನು ಹಾಳುಗೆಡವಲು ನೌಕಾಪಡೆ ಮುಂದಾಗಿದೆ~ ಎನ್ನುವುದು ಅರ್ಜಿದಾರರ ದೂರು.
ವಿದೇಶದಲ್ಲಿ ಕೃತಕ ಪರಿಸರ ನಿರ್ಮಿಸಿ ತರಬೇತಿ ನೀಡುತ್ತಿರುವ ಬಗ್ಗೆ ಅರ್ಜಿದಾರ ಪರ ವಕೀಲರು ಕೋರ್ಟ್ ಗಮನ ಸೆಳೆದ ಹಿನ್ನೆಲೆಯಲ್ಲಿ ಆ ಕುರಿತು ಚಿಂತಿಸುವಂತೆ ಪೀಠ ಸೂಚಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಿ ಪೀಠ ವಿಚಾರಣೆ ಮುಂದೂಡಿತು.

ತುರ್ತು ನೋಟಿಸ್

`ನೈಸ್~ ರಸ್ತೆ ವಿರೋಧಿ ಹೋರಾಟಗಾರ ಸಿದ್ದಲಿಂಗಪ್ರಭು ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐಗೆ ಹೈಕೋರ್ಟ್ ಸೋಮವಾರ ತುರ್ತು ನೋಟಿಸ್ ಜಾರಿಗೆ ಆದೇಶಿಸಿದೆ.

ಕಳೆದ ನವೆಂಬರ್ 17ರಂದು ಕೊಲೆ ನಡೆದಿತ್ತು. ಕೊಲೆಯಲ್ಲಿ ನೈಸ್ ಮುಖ್ಯಸ್ಥ ಅಶೋಕ ಖೇಣಿ ಹಾಗೂ ಕಂಠೀರವ ಸ್ಟುಡಿಯೋದ ಅಧ್ಯಕ್ಷ ಎಂ.ರುದ್ರೇಶ್ ಅವರ ಕೈವಾಡ ಇದ್ದು, ಅವರ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ಸಿದ್ಧಲಿಂಗಪ್ರಭು ಅವರ ಸಂಬಂಧಿ ಬಸಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನಡೆಸುತ್ತಿದ್ದಾರೆ.

ಖೇಣಿ ಹಾಗೂ ಇತರರ ವಿರುದ್ಧ ತಾವು ದೂರು ದಾಖಲು ಮಾಡಿದರೂ, ಪ್ರಥಮ ಮಾಹಿತಿ ವರದಿಯಲ್ಲಿ ಅವರ ಹೆಸರನ್ನು ಪೊಲೀಸರು ಉಲ್ಲೇಖಿಸುತ್ತಿಲ್ಲ ಎನ್ನುವುದು ಬಸಪ್ಪ ಅವರ ದೂರು.

`ಸಿದ್ದಲಿಂಗಪ್ರಭುವಿನ ರಕ್ತ ಸಂಬಂಧಿ ಚನ್ನವೀರಯ್ಯನಪಾಳ್ಯದ ಪ್ರಕಾಶ್ ಮತ್ತು ಆತನ ಸಹಚರರಾದ ಶಾಂತಕುಮಾರ್, ಹನುಮಯ್ಯ, ರಾಜೇಶ್ ಮತ್ತು ಜನಾರ್ದನ್ ಅವರು ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ. ಆದರೆ ಖೇಣಿ ಹಾಗೂ ರುದ್ರೇಶ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ~ ಎನ್ನುವುದು ಅವರ ಆರೋಪ. ವಿಚಾರಣೆಯನ್ನು ಮುಂದೂಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT