ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಧಿಕಾರಿಗಳ ತಪ್ಪಿನಿಂದಾಗಿ ಬಡವರಿಗೆ ಶಿಕ್ಷೆ

Last Updated 26 ಡಿಸೆಂಬರ್ 2012, 8:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಭೂಮಿ ಹಕ್ಕು ನೀಡುವಂತೆ ಒತ್ತಾಯಿಸಿ ಕಳಸ ಸುತ್ತಮುತ್ತಲ ಇನಾಂ ಭೂಮಿ ಕೃಷಿಕರು ತಮ್ಮ ಕುಟುಂಬಗಳೊಂದಿಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಳಸದಿಂದ ವಾಹನಗಳಲ್ಲಿ ಬಂದಿಳಿದ ಪ್ರತಿಭಟನಾಕಾರರು, ಸಿಪಿಐ ನೇತೃತ್ವದಲ್ಲಿ  ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕೆಲ ಕಾಲ ಧರಣಿ ನಡೆಸಿದರು.

`ಇನಾಂ ಭೂಮಿ ಖುಲ್ಲಾಕ್ಕೆ ನಾವು ಬಿಡೋದಿಲ್ಲ' `ನಮ್ಮದು ನಮ್ಮದು ಇನಾಂ ಭೂಮಿ ನಮ್ಮದು' `ಪ್ರಾಣ ಬಿಟ್ಟೇವು ಭೂಮಿ ಬಿಡೆವು' ಎಂದು ಘೋಷಣೆ ಕೂಗಿದರು. ಬ್ರಿಟಿಷರ ಕಾಲದ ಕಾನೂನಿಗೆ, ಸರ್ಕಾರ ಮತ್ತು ಅಧಿಕಾರಿಗಳ ತಪ್ಪಿಗೆ  ಬಡ ಕೃಷಿಕರು ಶಿಕ್ಷೆ ಅನುಭವಿಸುವಂತಾಗಿದೆ ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.

ಇನಾಂ ಭೂಮಿ ಹಕ್ಕಿಗಾಗಿ, ಕೃಷಿಕರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ, ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಒತ್ತಾಯಿಸಿ ಕಳಸ ನಾಡ ಕಚೇರಿಯಲ್ಲಿ ಹಲವು ದಿನಗಳಿಂದ ಧರಣಿ ನಡೆಸುತ್ತಿದ್ದ ಕಳಸ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒಕ್ಕೊರಲಿನಿಂದ ಒತ್ತಾಯಿಸಿ, ಜಿಲ್ಲಾಧಿಕಾರಿ ಎಸ್.ಟಿ. ಅಂಜನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾನಿರತನ್ನು ಉದ್ದೇಶಿಸಿ ಮಾತನಾಡಿದ ಮಲೆನಾಡು ಸಮಗ್ರ ಭೂ ಹೋರಾಟ ಸಮಿತಿ ಕಾರ್ಯದರ್ಶಿ ಗೋಪಾಲ್ ಎನ್.ಶೆಟ್ಟಿ ಈಗಾಗಲೇ ಕಳಸ ಸುತ್ತಮುತ್ತ ಒಟ್ಟು 6777 ಎಕರೆ ಜಮೀನನ್ನು ಬಡವರು ಸಾಗುವಳಿ ಮಾಡಿ ಜೀವನ ಸಾಗಿಸುತ್ತಿದ್ದರು. ಈ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು, ಜನವರಿ 31ರೊಳಗೆ ಖುಲ್ಲಾ ಪಡಿಸುವಂತೆ ನ್ಯಾಯಾಲಯ ಸೂಚನೆ ನೀಡಿರುವುರಿಂದ ಬಹುತೇಕ ಜನರು ಬೀದಿಗೆ ಬರಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕಷ್ಟಪಟ್ಟು ಸಾಗುವಳಿ ಮಾಡಿದ್ದ ಭೂಮಿ ಕೈತಪ್ಪಿ ಹೋಗುತ್ತದೆ ಎಂಬ ಭಯದಿಂದ ಈಗಾಗಲೇ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ  ಹಲವು ಕುಟುಂಬಗಳು ಬೀದಿಗೆ ಬೀಳುವ ಅಪಾಯವಿದೆ. ಅರಣ್ಯ ಹಕ್ಕು ಪಾರಂಪರಿಕ ಕಾಯ್ದೆಯ ಪ್ರಕಾರ ಈ ಭೂಮಿ ಉಳಿಸಿಕೊಡಬೇಕೆಂದು ಆಗ್ರಹಿಸಿದರು.

ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ಬಡವರ ಜಮೀನನ್ನು ಉಳಿಸಿಕೊಡಲು ಸರ್ಕಾರ ಮುಂದಾಗಬೇಕೆಂದು ಮಾಗಲ ಹರೀಶ್ ಕೋರಿದರು.

ಕಳಸದಲ್ಲಿ ತಿಂಗಳುಗಟ್ಟರೆ ಧರಣಿ ನಡೆಸಿದರೂ ಸಂಸದರನ್ನು ಹೊರತು ಪಡಿಸಿ ಬೇರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಲಿಲ್ಲ. ಅಧಿಕಾರಿಗಳ ಗಮನ ಸೆಳೆಯಲು ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದ ಪ್ರತಿಭಟನಾಕಾರರು, ಸ್ಪಷ್ಟ ಭರವಸೆ ನೀಡುವ ತನಕ ಈ ಜಾಗಬಿಟ್ಟು ಕದಲದಿರಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಸಾತಿಸುಂದರೇಶ್, ಎಚ್.ಎಂ.ರೇಣುಕಾರಾಧ್ಯ, ಬಿ.ಅಮ್ಜದ್, ಎ.ಎಸ್.ಮೋನಪ್ಪ, ನಾಗೇಶ್, ಹರೀಶ್, ರಮೇಶ್, ಗುಣಶೇಖರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

31ರಂದು ಸಂತ್ರಸ್ತರ ಸಭೆ
ಚಿಕ್ಕಮಗಳೂರು: ಕೇಂದ್ರ ಸರ್ಕಾರದ 2005ರ ಪಾರಂಪಾರಿಕ ಅರಣ್ಯ ಹಕ್ಕು ಕಾಯ್ದೆ ಪ್ರಕಾರವೇ ಕಳಸ ಇನಾಂ ಭೂಮಿ ಸಾಗುವಳಿದಾರರ ಸಮಸ್ಯೆ ಬಗೆಹರಿಸಬೇಕೆಂಬ ನಿಟ್ಟಿನಲ್ಲಿ ಇನಾಂ ಭೂಮಿ ವಾಸಿಗಳ ಸಭೆಯನ್ನು ಇದೇ 31ರಂದು ಕುದುರೆಮುಖದಲ್ಲಿ ಕರೆಯಲಾಗಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಕೊಡಗು ಮತ್ತು ಕೇರಳದಲ್ಲಿ ಕೇಂದ್ರ ಸರ್ಕಾರದ 2005ರ ಕಾಯ್ದೆ ಜಾರಿಗೆ ಬಂದಿದೆ. ಈ  ಕಾಯ್ದೆ ಪ್ರಕಾರವೇ ಇನಾಂ ಭೂಮಿ ರೈತರ ಹಕ್ಕುಗಳನ್ನು ರಕ್ಷಿಸಬೇಕೆನ್ನುವುದು ನಮ್ಮ ಒತ್ತಾಯ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವುದು ಮತ್ತು ಇನಾಂ ಭೂಮಿ ಸಾಗುವಳಿದಾರರಿಗೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿದೆ. ಇನಾಂ ಭೂಮಿ ಸಾಗುವಳಿದಾರರು ಮತ್ತು ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡು, ಮುಕ್ತವಾಗಿ ಸಲಹೆ ನೀಡಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT