ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಜರಿಗೆ ಬೀಳದ ನಜರಾಪುರ

Last Updated 9 ಜೂನ್ 2011, 7:05 IST
ಅಕ್ಷರ ಗಾತ್ರ

ಗುರುಮಠಕಲ್: ಬಿಸಿಲ ನಾಡಿನಲ್ಲೊಂದು ಮಿನಿ ಜೋಗಕ್ಕೆ ಪ್ರಸಿದ್ದಿ ಪಡೆದು, ರಾಜ್ಯದಲ್ಲಿ ಗುರುತಿಸಲಾಗುವ ಗ್ರಾಮವೆಂದರೆ ಅದು ನಜರಾಪುರ ಗ್ರಾಮ. ಗುರುಮಠಕಲ್ ಪಟ್ಟಣದಿಂದ ಸುಮಾರು 4 ಕಿ.ಮೀ. ದೂರವಿರುವ ಈ ಗ್ರಾಮ, ಪ್ರಕೃತಿಯ ಸುಂದರ ಸೊಬಗಿಗೆ ಎಂಥವರನ್ನು ಸೆಳೆಯುವ ಸಾಮರ್ಥ್ಯ ಹೊಂದಿದೆ. ಪ್ರವಾಸಿಗರ ಆಕರ್ಷಣೆಯ ಕೇಂದ್ರವನ್ನು ಹೊಂದಿದ ಗ್ರಾಮ ಇದೀಗ ಅವ್ಯವಸ್ಥೆಯ ಆಗರವಾಗಿದೆ.

ಚುನಾವಣೆ ಬಂತೆಂದರೆ ಸಾಕು ಗ್ರಾಮದಲ್ಲಿ ಜಿದ್ದಾ ಜಿದ್ದಿನ ಪೈಪೋಟಿ. ಪ್ರತಿಷ್ಠೆಗಾಗಿ ತೀವ್ರ ಸೆಣೆಸಾಟ ನಡೆಯುತ್ತದೆ. ಯಾದಗಿರಿ ತಾಲ್ಲೂಕಿನಲ್ಲಿ ನಜರಾಪುರ ಗ್ರಾಮವನ್ನು ಸೂಕ್ಷ್ಮ ಮತಗಟ್ಟೆ ಎಂದೇ ಗುರುತಿಸಲಾಗಿದೆ. ಪ್ರತಿಷ್ಠೆಗಾಗಿ ಸ್ಪರ್ಧಿಸುವ ಗ್ರಾಮದ ಜನಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿ ಹಾಗೂ ಅವ್ಯವಸ್ಥೆ ಬಗೆಗೆ ಏಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಬಡ ಜನರ ಪ್ರಶ್ನೆ.

ಹರಿಜನ ಬಡಾವಣೆ ಅವ್ಯವಸ್ಥೆ: 30 ಹರಿಜನ ಕುಟುಂಬಗಳಿಗೆ ಸರ್ಕಾರವು ಸುಮಾರು 25 ವರ್ಷಗಳ ಹಿಂದೆ ಜನತಾ ಮನೆಗಳು ನಿರ್ಮಿಸಿ ಕೊಟ್ಟಿದೆ. ಅಂದು ಮೂಲಸೌಲಭ್ಯಕ್ಕಾಗಿ ಪರದಾಡುವ ಪರಿಸ್ಥಿತಿ ಇತ್ತು. ಕೆಲ ವರ್ಷಗಳ ಹಿಂದೆ ವಿದ್ಯುತ್ ಪೂರೈಸಲಾಗಿದೆ. ಆದರೆ ಸಂಪೂರ್ಣ ಬಡಾವಣೆಗೆ ನೀರು ಪೂರೈಸಲು ಒಂದೇ ನಳ ಇದೆ. ಇನ್ನು ಬಡಾಣೆಯಲ್ಲಿ ರಸ್ತೆಗಾಗಿ ಸ್ಥಳಾವಕಾಶ ಇದ್ದರೂ, ಇಲ್ಲಿಯವರೆಗೆ ಕಾಣದ ರಸ್ತೆಗಾಗಿ ಹುಡುಕಾಡುವಂತಾಗಿದೆ. ಮನೆಗಳ ಚರಂಡಿ ನೀರು ರಸ್ತೆಯಲ್ಲಿಯೇ ಹರಿಯುತ್ತವೆ. ಮುಂದಿನ ಮನೆಗಳ ಜನರು ರಸ್ತೆಯನ್ನು ಹುಡುಕುತ್ತಾ ಕೆಸರು ನೀರಿನ ಮಧ್ಯೆಯೇ ಸಾಗುವ ಪರಿಸ್ಥಿತಿ ಇಲ್ಲಿಯದು. ಹಲವು ಬಾರಿ ಗ್ರಾಮ ಪಂಚಾಯಿತಿ ಬಾಗಿಲು ತಟ್ಟಿದರೂ ಪ್ರಯೋಜನವಾಗಿಲ್ಲ ಎಂದು ಬಡಾವಣೆಯ ಚನ್ನಪ್ಪ ನರಸಪ್ಪ ಶಿವಮೋಳ್, ಗೌಡಪ್ಪ ಚನ್ನಪ್ಪ ಗಂಟಲ್ ಹಾಗೂ ಇತರರು ಆರೋಪಿಸುತ್ತಾರೆ.

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ: ಗ್ರಾಮದ ಮುಖ್ಯ ಸಿಸಿ ರಸ್ತೆಗಳಲ್ಲಿ ಚರಂಡಿ ನೀರು ಹರಿಯುವುದು ಸಾಮಾನ್ಯವಾಗಿದೆ, ಕುಡಿಯುವ ನೀರಿನ ಟ್ಯಾಂಕ್‌ಗಳ ನೀರು ಸಂಪೂರ್ಣ ರಸ್ತೆಯ ಮೇಲೆ ಹರಿಯುವ ವ್ಯವಸ್ಥೆ ಇಲ್ಲಿಯದ್ದಾಗಿದೆ.

ಕುಡಿಯುವ ನೀರಿಗಾಗಿ ಪಂಚಾಯಿತಿಯಿಂದ ಅಳವಡಿಸಲಾದ ನಳ ಹಾಗೂ ಕೈ ಪಂಪ್‌ಗಳು ತಿಪ್ಪೆ ಗುಂಡಿಗಳ ಮಧ್ಯದಲ್ಲಿಯೇ ಇರುವುದು ಗ್ರಾಮಸ್ಥರ ಅನಾರೋಗ್ಯಕ್ಕೆ ಕಾರಣವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಂಚಾಯಿತಿ ಹಾಗೂ ಇಲಾಖೆಯೊಂದರಿಂದ ನಿರ್ಮಿಸಲಾದ ಕುಡಿಯುವ ನೀರು ಪೂರೈಕೆಯ ಟ್ಯಾಂಕ್‌ಗಳು ಉಪಯೋಗಕ್ಕಿಲ್ಲದಂತೆ ಹಾಳು ಬಿದ್ದಿವೆ ಎಂದು ಗ್ರಾಮದ ನಾರೆಡ್ಡಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಜರಾಪುರ ಗ್ರಾಮದಲ್ಲಿ ಕಬ್ಬಿಣದ ವಿದ್ಯುತ್ ಕಂಬಗಳಿದ್ದು, ಅವುಗಳಿಗೆ ಅಳವಡಿಸಲಾದ ವಿದ್ಯುತ್ ನಿರೋಧಕಗಗಳು ಹಾಳಾಗಿವೆ. ತಿಂಗಳ ಹಿಂದೆ ಎಮ್ಮೆಯೊಂದು ಕಂಬಕ್ಕೆ ಇರುವ ತಂತಿಗೆ ತಗುಲಿ ಮೃತಪಟ್ಟಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಂಬಗಳ ಬದಲಾವಣೆ ಅವಶ್ಯಕವಾಗಿದೆ. ಗ್ರಾಮಕ್ಕೆ ಬಗುರ ಮಾರ್ಗದ ಬೆಟ್ಟದಲ್ಲಿನ ಅಪಾಯಕಾರಿ ತಿರುವುಗಳು ಕೂಡ ಮೃತ್ಯುಕೂಪವಾಗಿದೆ ಎಂದು ಭಿಮಪ್ಪ ಕುರುಮಪ್ಪ ಬ್ಯಾಗಾರ್ ತಿಳಿಸುತ್ತಾರೆ.

ಕೂಡಲೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಗ್ರಾಮಸ್ಥರ ಸಂಚಾರಕ್ಕೆ ಅವಶ್ಯಕವಾದ ಬೆಟ್ಟದ ರಸ್ತೆ ವಿಸ್ತಾರ, ಗ್ರಾಮದ ಜನತಾ ಮನೆಗಳ ಬಡಾವಣೆಯ ಸಿಸಿ ರಸ್ತೆ, ಹಾಳು ಬಿದ್ದ ಕುಡಿಯುವ ನೀರಿನ ಟ್ಯಾಂಕ್‌ಗಳ ಬಳಕೆ, ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಕಂಬಗಳ ಬದಲಾವಣೆ, ತಿಪ್ಪೆಗುಂಡಿಗಳ ಮಧ್ಯದಲ್ಲಿರುವ ನಳ ಹಾಗೂ ಕೈಪಂಪ್ ಸ್ಥಳಾಂತರ ಸೇರಿದಂತೆ ಗ್ರಾಮದ ನೈರ್ಮಲ್ಯ ಮತ್ತು ಅಭಿವೃದ್ಧಿಗಾಗಿ ಪಂಚಾಯಿತಿಯವರು ಕ್ರಮ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT