ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರಾಸಕ್ತಿ, ಸದಸ್ಯರ ಗೈರು

Last Updated 23 ಫೆಬ್ರುವರಿ 2011, 8:20 IST
ಅಕ್ಷರ ಗಾತ್ರ

ಕುಷ್ಟಗಿ: ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಆಡಳಿತ ವ್ಯವಸ್ಥೆ ಸುಧಾರಣೆ ಹಿನ್ನೆಲೆಯಲ್ಲಿ ಸದಸ್ಯರನ್ನು ಸಜ್ಜುಗೊಳಿಸುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮ ಇಲ್ಲಿ ಅವ್ಯವಸ್ಥೆಯ ಆಗರವಾಗಿತ್ತು.

ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಗ್ರಾಪಂಗಳ ನೂತನ ಸದಸ್ಯರಿಗಾಗಿ ನಡೆಯುವ ಎರಡು ಹಂತದ ‘ಮುಖಾಮುಖಿ’ ತರಬೇತಿ ವ್ಯವಸ್ಥೆ ಇದಾಗಿದ್ದು ತಾಲ್ಲೂಕಿನ 28 ಗ್ರಾಪಂಗೆ ಸೇರಿದ ಸದಸ್ಯರ ಆರು ತಂಡಗಳನ್ನು ರೂಪಿಸಿ ಈಗಾಗಲೇ ಎರಡು ತಂಡಗಳಿಗೆ ತರಬೇತಿ ನೀಡಲಾಗಿದೆ.

ಅದರಂತೆ ಫೆ. 21ರಿಂದ 23ರವರೆಗೆ ಮೂರನೇ ತಂಡಕ್ಕೆ ತರಬೇತಿ ನೀಡಲಾಗುತ್ತಿದ್ದು ಹಿರೇಮನ್ನಾಪೂರ ಮತ್ತು ನಿಲೋಗಲ್ ಗ್ರಾಪಂ ಸದಸ್ಯರು ಇದರಲ್ಲಿ ಭಾಗವಹಿಸಬೇಕಿತ್ತು. ಮೊದಲ ದಿನ ನಿಲೋಗಲ್ ಗ್ರಾಪಂನ 18 ಸದಸ್ಯರ ಪೈಕಿ 8 ಮತ್ತು ಎರಡನೇ ದಿನ 15 ಸದಸ್ಯರು ಭಾಗವಹಿಸಿದ್ದರು. ಆದರೆ ಹಿರೇಮನ್ನಾಪೂರ ಗ್ರಾಮದ ಏಕೈಕ ಸದಸ್ಯ ಮಾತ್ರ ಹಾಜರಾದರೆ ಉಳಿದ 22 ಜನ ಗೈರು ಹಾಜರಾಗಿದ್ದು ಕಂಡುಬಂದಿತು.

ತರಬೇತಿಗೆ ಹಾಜರಾಗುವ ಸದಸ್ಯರಿಗೆ ಮಾಹಿತಿ ನೀಡಬೇಕಿದ್ದ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಜವಾಬ್ದಾರಿ ನಿರ್ವಹಿಸದ ಕಾರಣ ಸದಸ್ಯರಿಗೆ ತರಬೇತಿ ವಿಷಯ ತಿಳಿದಿಲ್ಲ ಎಂದು ಗೊತ್ತಾಗಿದೆ. ತರಬೇತಿ ನಡೆಯುವ ಹಿಂದಿನ ರಾತ್ರಿ ಕಾರ್ಯದರ್ಶಿ ಕಾಟಾಚಾರಕ್ಕೆ ಮಾಹಿತಿ ನೀಡಿದ್ದಾರೆ ಎಂಬುದನ್ನು ನಿಲೋಗಲ್ ಗ್ರಾಪಂ ಸದಸ್ಯರು ‘ಪ್ರಜಾವಾಣಿ’ಗೆ ವಿವರಿಸಿದರು.

ಅಲ್ಲದೆ ಹಿರೇಮನ್ನಾಪೂರ ಗ್ರಾಪಂ ಕಾರ್ಯದರ್ಶಿ, ಪಿ.ಡಿ.ಒಗಳು ತರಬೇತಿ ಕುರಿತ ನೋಟಿಸ್ ಅನ್ನು ತೆಗೆದುಕೊಂಡು ಹೋಗಿದ್ದರೂ ಅದನ್ನು ಸದಸ್ಯರಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ.ನಿಲೋಗಲ್ ಗ್ರಾಪಂ ಕಾರ್ಯದರ್ಶಿ ಸದಸ್ಯರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಗ್ರಾಪಂ ಸಭೆಯ ಠರಾವುಗಳನ್ನು ಸದಸ್ಯರ ಗಮನಕ್ಕೆ ತರುವುದಿಲ್ಲ. ಕೇಳಿದರೆ ಅದೆಲ್ಲ ನಿಮಗೇಕೆ ಬೇಕು ಎಂದು ದರ್ಪದಿಂದ ವರ್ತಿಸುತ್ತಾರೆ ಎಂದು ಅಲ್ಲಿಯ ಸದಸ್ಯರು ದೂರಿದರು.

ಹಳಸಿದ ಚಪಾತಿ: ತರಬೇತಿ ಸ್ಥಳದಲ್ಲಿ ಸದಸ್ಯರಿಗೆ ಊಟ, ಉಪಾಹಾರ, ಚಹಾ, ಬಿಸ್ಕತ್ ವ್ಯವಸ್ಥೆ ಮಾಡಬೇಕಿದ್ದರೂ ಅಂಥ ವ್ಯವಸ್ಥೆ ಇರಲಿಲ್ಲ. ಅಷ್ಟೇ ಏಕೆ ಕುಡಿಯಲು ನೀರು ಸಹ ಇರಲಿಲ್ಲ. ಊಟಕ್ಕೆ ಖಾನಾವಳಿಗೆ ಕರೆದೊಯ್ಯಲಾಗುತ್ತದೆ. ಮಂಗಳವಾರ ಮಧ್ಯಾಹ್ನ ಖಾನಾವಳಿಯವರು ಹಳಸಿದ ಗೋಧಿಹಿಟ್ಟಿನಲ್ಲಿ ಚಪಾತಿ ಮಾಡಿದ್ದರಿಂದ ವಾಂತಿ ಬಂದಂತಾಯಿತು. ತರಬೇತಿಯ ಎಲ್ಲ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಳ್ಳಬೇಕಿರುವ ತಾ.ಪಂ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂಬ ಆರೋಪಗಳು ಕೇಳಿಬಂದವು.

ಪ್ರತಿ ತಂಡದ ತರಬೇತಿಯ ಮೂರನೇ ದಿನ ತಾ.ಪಂ ಕಾರ್ಯನಿರ್ವಾಹಕರು ಹಾಜರಾಗಿ ಸದಸ್ಯರೊಂದಿಗೆ ಚರ್ಚಿಸಿ ಸಂದೇಹಗಳನ್ನು ಪರಿಹರಿಸಬೇಕು. ಆದರೆ ಒಂದು ದಿನವೂ ತಾ.ಪಂ ಇ.ಒ ತರಬೇತಿ ಕೇಂದ್ರಕ್ಕೆ ಹಾಜರಾಗಿಲ್ಲ ಎಂಬ ದೂರು ಕೇಳಿಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT