ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೇ ಚರ್ಚೆ

Last Updated 22 ಜೂನ್ 2011, 7:05 IST
ಅಕ್ಷರ ಗಾತ್ರ

ಮಡಿಕೇರಿ: ಶಿಕ್ಷಕರ ಕೊರತೆ, ವೈದ್ಯರ ಕೊರತೆ, ನರ್ಸ್‌ಗಳ ಕೊರತೆ, ಕೆಇಬಿಯಲ್ಲೂ ಸಿಬ್ಬಂದಿ ಕೊರತೆ... ಹೀಗೆ ಪ್ರತಿ ಇಲಾಖೆ ಹಾಗೂ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇರುವುದು ಮಂಗಳವಾರ ನಡೆದ ಮಡಿಕೇರಿ ತಾಲ್ಲೂಕು ಪಂಚಾಯಿತಿಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.

ಮತ್ತೊಂದೆಡೆ ಸಭೆಗೆ ಹಾಜರಾಗದ ಇಲಾಖೆಗಳ ಹಿರಿಯ ಅಧಿಕಾರಿಗಳ ವಿರುದ್ಧ ಪಂಚಾಯಿತಿಯು ಅಸಮಾಧಾನ ವ್ಯಕ್ತಪಡಿಸಿತು.

ವಿಶೇಷವಾಗಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಇದುವರೆಗೆ ಒಂದೂ ಸಭೆಗೆ ಹಾಜರಾಗಿಲ್ಲ. ಇವರ ವಿರುದ್ಧ ಷೋಕಾಸ್ ನೋಟಿಸ್ ಜಾರಿ ಮಾಡಿ ಎಂದು ತಾ.ಪಂ. ಅಧ್ಯಕ್ಷೆ ಕವಿತಾ ಪ್ರಭಾಕರ್ ಹೊಸಮನೆ ಆದೇಶ ಹೊರಡಿಸಿದರು.

ಇದನ್ನು ಬೆಂಬಲಿಸಿ ಮಾತನಾಡಿದ ತಿತಿಮತಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯೂ ಆದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ. ಅಲೆಗ್ಸಾಂಡರ್, `ಸಭೆಯ ಬಗ್ಗೆ ಅಧಿಕಾರಿಗಳು ಅಸಡ್ಡೆ ತೋರಬಾರದು. ಇದು ಕಾಟಾಚಾರದ ಸಭೆ ಎಂದುಕೊಳ್ಳಬೇಡಿ~ ಎಂದು ತಾಕೀತು ಮಾಡಿದರು.

ಕೋರ್ಟ್ ಕೇಸುಗಳಿದ್ದರೆ, ಅಥವಾ ತುರ್ತು ಕೆಲಸವಿದ್ದರೆ ಅಧ್ಯಕ್ಷರ ಪೂರ್ವಾನುಮತಿ ಪಡೆಯಬೇಕು. ಇಲ್ಲದಿದ್ದರೆ ಸೂಚನೆ ನೀಡದೇ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕ್ರಮಕೈ ಗೊಳ್ಳಲಾಗುವುದು ಎಂದರು.

`ಸಬಲ~ ಜಾರಿಗೆ ಕ್ರಮ
ಗ್ರಾಮೀಣ ಭಾಗದ 11 ರಿಂದ 18 ವರ್ಷದ ಪ್ರಾಯ ಪೂರ್ವ ಹೆಣ್ಣುಮಕ್ಕಳ ಹಿತಾಸಕ್ತಿಗಾಗಿ ಈ ವರ್ಷದಿಂದ ರಾಜ್ಯ ಸರಕಾರ ಜಾರಿಗೆ ತಂದಿರುವ `ಸಬಲ~ ಯೋಜನೆಯನ್ನು ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೇಷಾದ್ರಿ ತಿಳಿಸಿದರು.

ಈ ಯೋಜನೆಯ ಅನ್ವಯ ಪ್ರಾಯಪೂರ್ವ ಹೆಣ್ಣು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದರೆ, ಪೌಷ್ಠಿಕ ಆಹಾರ ಒದಗಿಸುವುದು, ಅವರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಹಾಗೆಯೇ ಅವರ ಶಿಕ್ಷಣದ ಬಗ್ಗೆಯೂ ಗಮನ ಹರಿಸುವುದು ಸೇರಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. 

ಅಂಗನವಾಡಿ ಕೇಂದ್ರ
ತಾಲ್ಲೂಕಿನಲ್ಲಿ ಏಳು ಅಂಗನವಾಡಿ ಕೇಂದ್ರಗಳ ಕಟ್ಟಡ ಕಾಮಗಾರಿಗಳು ಮುಗಿದಿವೆ, ಇನ್ನು ಮೂರು ನಾಲ್ಕು ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿವೆ ಎಂದು ಶೇಷಾದ್ರಿ ಮಾಹಿತಿ ನೀಡಿದರು.

ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ನೇಮಕಾತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 45 ಮಂದಿ ಕಾರ್ಯಕರ್ತೆಯರು ನಿವೃತ್ತಿ ಹೊಂದಿದ್ದು, ಇವರ ಹುದ್ದೆ ಖಾಲಿ ಇವೆ. ಇವುಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯೇ ನೇಮಕಾತಿಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಕಾರ್ಯ ನಿರ್ವಹಣಾಧಿಕಾರಿ ಅಲೆಗ್ಸಾಂಡರ್ ಮಾತನಾಡಿ, ಶೋಚನೀಯ ಸ್ಥಿತಿಯಲ್ಲಿರುವ ಅಂಗನವಾಡಿ ಕೇಂದ್ರ ಪರಿಶೀಲಿಸಲು ತಿಳಿಸಿದರು.

ಮಳೆಗಾಲದಲ್ಲಿ ಗಾಳಿ ಮಳೆಯಿಂದಾಗಿ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ  ಸೂಚಿಸಿದರು. ಪ್ರತೀ ಅಂಗನವಾಡಿ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ಅವರು ಸೂಚಿಸಿದರು.

ಶಿಕ್ಷಕರ ಕೊರತೆ

ಶಿಕ್ಷಕರ ವರ್ಗಾವಣೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ಶಿಕ್ಷಕರ ಕೊರತೆ ಕಂಡುಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ತಿಳಿಸಿದರು.

ಇತ್ತೀಚೆಗೆ ನಡೆದ ಕೌನ್ಸೆಲಿಂಗ್‌ನಲ್ಲಿ ಜ್ಯೇಷ್ಠತೆ ಆಧಾರದಲ್ಲಿ ಅನೇಕರು ವರ್ಗಾವಣೆ ಪಡೆದುಕೊಂಡಿರುವುದರಿಂದ ತಾಲ್ಲೂಕಿನ ಬಹುತೇಕ ಕಡೆ ಈ ಸಮಸ್ಯೆ ತಲೆದೋರಿದೆ ಎಂದು ಅವರು ಹೇಳಿದರು. `ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಈ ಕೊರತೆಯನ್ನು ತುಂಬಿಕೊಳ್ಳಬಹುದಲ್ಲ~ ಎಂದು ಅಧ್ಯಕ್ಷರು ಸಲಹೆ ನೀಡಿದಾಗ, `ಶಿಕ್ಷಕರು ದೀರ್ಘಕಾಲೀನ ರಜೆಯಲ್ಲಿ ತೆರಳಿ ಈ ರೀತಿ ಸಮಸ್ಯೆಯಾದಾಗ, ನಿವೃತ್ತ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅವಕಾ ಶವಿದೆ. ಅವರಿಗೆ ಕಾರ್ಯನಿರ್ವಹಿಸಿದ ದಿನಗಳಿಗೆ ತಲಾ 100 ರೂ.ನಂತೆ ನೀಡುವ ಕ್ರಮವಿದೆ. ಆದರೆ, ಯಾರೂ ಇದಕ್ಕೆ ಮುಂದೆ ಬರುವುದಿಲ್ಲ ಎಂದು ಮರಿಸ್ವಾಮಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. `ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಅಕ್ಕಪಕ್ಕದ ಕೆಲವೊಂದು ಕಡೆಗಳಿಂದ ನಿಯೋಜಿಸಲು ಜುಲೈನಲ್ಲಿ ಕ್ರಮ ಕೈಗೊಳ್ಳಲಾ ಗುವುದು~ ಎಂದು ಬಿಇಒ ವಿವರಣೆ ನೀಡಿದರು.

ಮಡಿಕೇರಿಯಲ್ಲೂ ಆಂಗ್ಲ ಮಾಧ್ಯಮ ಶಾಲೆಗೆ ಪ್ರಸ್ತಾವ
ಸರ್ಕಾರದ ಹೊಸ ಆದೇಶದಂತೆ ಆಂಗ್ಲ ಮಾಧ್ಯಮ ಶಾಲೆಯನ್ನು ಮೂರ್ನಾಡಿನಲ್ಲಿ ಪ್ರಸಕ್ತ ವರ್ಷದಿಂದ ಆರಂಭಿಸಲಾಗಿದೆ.

ಒಟ್ಟು 82 ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯನ್ನು ನಡೆಸಿದಾಗ  ಇವರಲ್ಲಿ ಉತ್ತಮ ಸಾಧನೆ ತೋರಿದ 38 ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಆಯ್ಕೆ ಮಾಡಲಾಯಿತು. ಇವರ ಪೋಷಕರೂ ಕೂಡ ಮಕ್ಕಳ ಆಂಗ್ಲ ಮಾಧ್ಯಮ ಕಲಿಕೆಗೆ ಆಸಕ್ತಿ ತೋರಿಸಿದ್ದಾರೆ ಎಂದರು.

ಮಡಿಕೇರಿಯಲ್ಲೂ ಇದೇ ರೀತಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಬೇಕೆಂಬ ಪ್ರಸ್ತಾವನೆ ಇದೆ ಎಂದರು. ಈಗಾಗಲೇ ತಾಲ್ಲೂಕಿನ ಶಾಲಾ ವಿದ್ಯಾರ್ಥಿಗಳಿಗೆ 3900 ಸೈಕಲ್‌ಗಳನ್ನು ವಿತರಿಸಲಾಗಿದೆ. ಸಮವಸ್ತ್ರ ಹಾಗೂ ಪುಸ್ತಕಗಳ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಕುರಿತ ಚರ್ಚೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ರೇಣುಕಾ ಚೆನ್ನಿಗಯ್ಯ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಪ್ರತೀಜಾ ಅಚ್ಚಪ್ಪ ಕೂಡ ಭಾಗವಹಿಸಿದ್ದರು.

ವೈದ್ಯರ ಕೊರತೆ
ತಾಲ್ಲೂಕಿನಲ್ಲಿ ಇರುವ 9 ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಇಬ್ಬರು ವೈದ್ಯರು ಕಾರ್ಯ ನಿರ್ವಹಿ ಸುತ್ತಿದ್ದಾರೆ ಎನ್ನುವ ಆಘಾತಕಾರಿ ಅಂಶವನ್ನು ವೈದ್ಯಾಧಿಕಾರಿ ಡಾ.ಚಿದಾನಂದ ಸಭೆಯ ಗಮನಕ್ಕೆ ತಂದರು. ಕೊರತೆ ತುಂಬಿಸಿಕೊಳ್ಳಲು ಹೊರಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ. ಆದರೆ, ಇದರತ್ತ ಯಾವ ವೈದ್ಯರೂ ಆಸಕ್ತಿ ತೋರುತ್ತಿಲ್ಲ ಎಂದರು.

ನಾಲ್ಕು ವಿದ್ಯಾರ್ಥಿಗಳಿಗೆ        ಬಕೆಟ್ ತುಂಬಾ ಸಾರು!
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕರಿಕೆ ಚೆತ್ತುಕಾಯದ ಹಾಸ್ಟೆಲ್‌ನಲ್ಲಿ ಕೇವಲ ನಾಲ್ವರು ವಿದ್ಯಾರ್ಥಿಗಳು ಮಾತ್ರವಿದ್ದರೂ ಇಲ್ಲಿ ಬಕೆಟ್ ತುಂಬಾ ಸಾರು ತಯಾರಿಸಲಾಗುತ್ತಿದೆ. ಏಕೆ ಇಷ್ಟೊಂದು ಎಂದು ಪ್ರಶ್ನಿದಾಗ ಅಡುಗೆಯವರಿಗೂ ಬೇಕು ಎನ್ನುವ ಕೇಳಿಬಂತು....

ಹೀಗೊಂದು ಪ್ರಸಂಗವನ್ನು ತಾ.ಪಂ. ಅಧ್ಯಕ್ಷೆ ಕವಿತಾ ಪ್ರಭಾಕರ್ ಹೊಸಮನೆ ನೆನಪಿಸಿದರು.
ತಾವು ಭೇಟಿ ನೀಡಿದಾಗ ಅಲ್ಲಿ ಕಾಫಿ ಮಾಡಿಡಲಾಗಿತ್ತು, ಆದರೆ ಹಾಲಿರಲಿಲ್ಲ. ಮೆನು ಚಾರ್ಟ್‌ನಲ್ಲಿ ಹಾಲು ಇದೆ, ಆದರೆ ವಾಸ್ತವದಲ್ಲಿ ಇಲ್ಲ. ತರಕಾರಿಗಳು ಕೊಳೆತು ನಾರುತ್ತಿತ್ತು, ಕರೆಂಟ್ ಇಲ್ಲ ಎನ್ನುವ ಕಾರಣಕ್ಕೆ ಒಂದು ಬಕೆಟ್ ಸಾಂಬಾರ್ ಮಾಡಿದ್ದರು. ಏಕೆ ಎಂದು ಅಲ್ಲಿಯವರನ್ನು ಪ್ರಶ್ನಿಸಿದಾಗ, `ಅಡುಗೆಯವರಿಗೂ ಬೇಕಂತೆ~ ಎನ್ನುವ ಉತ್ತರ ಸಿಕ್ಕಿತು ಎಂದರು.

ಅಲ್ಲಿರುವ ಅಡುಗೆಯವರು ಒಬ್ಬರ ಮೇಲೊ ಬ್ಬರು ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಹಾಜರಾಗಿದ್ದ ಆಹಾರ ಇಲಾಖೆಯ ಅಧಿಕಾರಿ ಮಾತನಾಡಿ, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT