ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಬೆವರಿಳಿಸಿದ ಮಾಣಿಪ್ಪಾಡಿ

Last Updated 26 ಮಾರ್ಚ್ 2011, 7:20 IST
ಅಕ್ಷರ ಗಾತ್ರ

ಮೈಸೂರು: ‘ಶಾಲೆಗಳಲ್ಲಿ ಬಳಸುವ ಟೇಬಲ್‌ನ ಅಳತೆ ಎಷ್ಟು? ಕಲಿಕಾ ಸಾಧನ ಮತ್ತು ಪೀಠೋಪಕರಣಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲವೇ? ಇಲಾಖೆಯಲ್ಲಿ ನಿಮ್ಮಂತವರಿದ್ದರೆ ಸರ್ಕಾರಕ್ಕೇ ಕೆಟ್ಟ ಹೆಸರು.. ನಾಮ್ ಕಾ ವಾಸ್ತೆ ಕೆಲ್ಸ ಮಾಡಬೇಡ್ರಿ.. ಕಾಳಜಿಯಿಂದ ಕೆಲಸ ಮಾಡಿ’...

-ಹೀಗೆ ತರಾಟೆಗೆ ತೆಗೆದುಕೊಂಡವರು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ. ತರಾಟೆಗೆ ಒಳಗಾದವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗೇಂದ್ರಕುಮಾರ್.

ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪ್ರಧಾನ ಮಂತ್ರಿಗಳ 15 ಅಂಶದ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಿದ ಅವರು, ಕೆಲವು ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದ ಕಾರಣ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಸರಿಯಾದ ಮಾಹಿತಿ ನೀಡದ ಅಧಿಕಾರಿಗಳ ಬೆವರಿಳಿಸಿದರು.

‘ಉರ್ದು ಶಾಲೆಗಳಿಗೆ ಸೌಲಭ್ಯ ಒದಗಿಸುವುದು ಸೇರಿದಂತೆ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಶಾಲೆಗಳಿಗೆ ಸೌಲಭ್ಯ ಒದಗಿಸುವ ಯೋಜನೆಗಳ ಅನುಷ್ಠಾನ ತೃಪ್ತಿಕರವಾಗಿಲ್ಲ’ ಎಂದು   ಅಸಮಾಧಾನ ವ್ಯಕ್ತಪಡಿಸಿದರು. ‘ಉರ್ದು ಮತ್ತು ಇತರೆ ಅಲ್ಪ ಸಂಖ್ಯಾತ ಭಾಷಾ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಬಿಡುಗಡೆಯಾಗಿದ್ದ ರೂ. 1.42 ಲಕ್ಷ ಹಣವನ್ನು ಪುಸ್ತಕ ಖರೀದಿಗೆ ಬಳಸಿರುವುದಕ್ಕೆ ಡಿಡಿಪಿಐ ವಿರುದ್ಧ ಹರಿಹಾಯ್ದರು.

‘ಎಲ್ಲಾ ಶಾಲೆಗಳಿಗೆ ಶೌಚಾಲಯ ಒದಗಿಸಬೇಕು. ಗ್ರಂಥಾಲಯ, ವಿಜ್ಞಾನ ವಸ್ತುಪ್ರದರ್ಶನ, ಶೈಕ್ಷಣಿಕ ಪ್ರವಾಸ ಆಯೋಜಿಸಬೇಕು. ಧಾರ್ಮಿಕ ಮುಖಂಡರಿಗೆ ಜಾಗೃತಿ ಶಿಬಿರ ಏರ್ಪಡಿಸಬೇಕು.

 ಪ್ರತಿ ವರ್ಷ ಆಗಸ್ಟ್ ತಿಂಗಳ ಒಳಗೆ ಕಲಿಕಾ ಸಾಮಗ್ರಿ ಹಾಗೂ ಪೀಠೋಪಕರಣಗಳನ್ನು ಒದಗಿಸಬೇಕು’ ಎಂದು ಡಿಡಿಪಿಐಗೆ ಸೂಚಿಸಿದರು.ಜಿಲ್ಲೆಯಲ್ಲಿ 57 ಮಂದಿ ಹೆಚ್ಚುವರಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಇದೆ.
ಆ ಜಿಲ್ಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು. ಮುಂದಿನ ಸಭೆಗೆ ಸೂಕ್ತ ದಾಖಲೆಗಳೊಂದಿಗೆ ಬರಬೇಕು ಎಂದು ಆದೇಶ ನೀಡಿದರು.

ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗಾಗಿ ತೆರೆಯಲಾಗಿರುವ ಅಂಗನವಾಡಿ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಪ್ರತಿ ಅಂಗನವಾಡಿಯ ಹೆಸರು, ಫಲಾನುಭವಿ ಕಿಶೋರಿಯರ ಹೆಸರನ್ನು ಆಯೋಗಕ್ಕೆ ಕಳುಹಿಸಿ ಕೊಡುವಂತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಸರ್ವ ಶಿಕ್ಷಣ ಅಭಿಯಾನ, ಕೈಗಾರಿಕಾ ತರಬೇತಿ ಕೇಂದ್ರ, ಮೀನುಗಾರಿಕೆ, ಪಶುಪಾಲನಾ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಭೆಯಲ್ಲಿ ಜಿಲ್ಲಾಧಿಕಾರಿ ಹರ್ಷಗುಪ್ತ, ಜಿ.ಪಂ. ಸಿಇಓ ಜಿ.ಸತ್ಯವತಿ, ಡಿಸಿಪಿ (ಸಂಚಾರ ಮತ್ತು ಅಪರಾಧ) ರಾಜೇಂದ್ರ ಪ್ರಸಾದ್, ಹೆಚ್ಚುವರಿ ಎಸ್‌ಪಿ ವೆಂಕಟಸ್ವಾಮಿ, ಆಯೋಗದ ಕಾರ್ಯದರ್ಶಿ ಅತೀಕ್ ಅಹಮದ್, ಸದಸ್ಯರಾದ ಪದ್ಮಾ ಜೈನ್, ದೊನಿ ಬಿ.ಡಿಸೋಜ, ಪೀರ್‌ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT