ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಮೇಲೆ ಆಯೋಗದ ಹದ್ದಿನ ಕಣ್ಣು!

ಗದ್ದುಗೆಗೆ ಕಾದಾಟ, ಮತಕ್ಕೆ ಹೋರಾಟ 2013
Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯಯುತವಾಗಿ ನಡೆಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ರಾಜ್ಯ ಚುನಾವಣಾ ಆಯೋಗ, ಚುನಾವಣಾ ಅಧಿಕಾರಿಗಳ ಮೇಲೆಯೇ ಹದ್ದಿನ ಕಣ್ಣಿಡಲು ನಿರ್ಧರಿಸಿದೆ!

ಈವರೆಗಿನ ಚುನಾವಣೆಗಳ ಸಂದರ್ಭದಲ್ಲಿ ತವರು ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬಾರದು ಎಂಬ ನಿಯಮ ವಿಧಿಸಿದ್ದ ಆಯೋಗ, ಆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸುತ್ತಿತ್ತು.

ಆದರೆ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಆಯೋಗ, ಚುನಾವಣಾ ಅಧಿಕಾರಿಗಳಾಗಿ ನೇಮಕಗೊಂಡವರಿಗೆ ರಾಜಕೀಯ ವ್ಯಕ್ತಿಗಳ ಜೊತೆ `ಕೌಟುಂಬಿಕ ಸಂಬಂಧ' ಇದೆಯೇ ಎಂದು ಮಾಹಿತಿ ಸಂಗ್ರಹಿಸಲು ತೀರ್ಮಾನಿಸಿದೆ. ತಮ್ಮ ಸಂಬಂಧಿಕರು ಯಾರಾದರೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ, ಅಂತಹ ಚುನಾವಣಾ ಅಧಿಕಾರಿಗಳು ಈ ಬಗ್ಗೆ ತಕ್ಷಣ `ಪ್ರಮಾಣಪತ'್ರ ಸಲ್ಲಿಸುವಂತೆ ಸೂಚಿಸಿದೆ.

`ಯುಗಾದಿ' ಸಂಭ್ರಮದ ಮಧ್ಯೆಯೇ ಗುರುವಾರ ದಿನವಿಡೀ ಜಿಲ್ಲಾ ಚುನಾವಣಾ ಅಧಿಕಾರಿ, ಚುನಾವಣಾ ಅಧಿಕಾರಿ, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಿದ ಮುಖ್ಯ ಚುನಾವಣಾ ಆಯುಕ್ತ, ಅನಿಲ್‌ಕುಮಾರ್ ಝಾ ಈ ನಿರ್ದೇಶನ ನೀಡಿದ್ದಾರೆ.

ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವವರ ಸಂಬಂಧಿಗಳು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೆ ಆ ಕುರಿತು ತಕ್ಷಣವೇ ಫ್ಯಾಕ್ಸ್ ಮೂಲಕ ಆಯೋಗಕ್ಕೆ ಮಾಹಿತಿ ನೀಡಬೇಕು. ಆ ಮಾಹಿತಿಯ ಆಧಾರದ ಮೇಲೆ ಚುನಾವಣಾ ಅಧಿಕಾರಿ ಕರ್ತವ್ಯವನ್ನು ಮುಂದುವರಿಸುವ ಬಗ್ಗೆ ಆಯೋಗ ಮರು ಪರಿಶೀಲನೆ ನಡೆಸುವ ಸಾಧ್ಯತೆಯೂ ಇದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

`ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ಸೂಕ್ಷ್ಮ ನಿಗಾ ವಹಿಸುವಂತೆ ಚುನಾವಣಾ ವೀಕ್ಷಕರಿಗೆ ಸ್ಪಷ್ಟ ನಿರ್ದೇಶನ ನೀಡಿರುವ ಆಯೋಗ, ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಎಲ್ಲ ಮತ ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರು ಆಗಮಿಸಿ, ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೆಲನ್ಸ್ ತಂಡ, ವಿಡಿಯೊ  ಸರ್ವೆಲನ್ಸ್ ತಂಡದ ಜೊತೆ ಸಭೆ ನಡೆಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ನಾಲ್ವರು ಸದಸ್ಯರಿರುವ ಒಂದೊಂದು ಫ್ಲೈಯಿಂಗ್ ಮತ್ತು ಸ್ಟ್ಯಾಟಿಕ್ ಸ್ಕ್ವಾಡ್‌ನ ಮುಖ್ಯಸ್ಥರಿಗೆ ಮ್ಯಾಜಿಸ್ಟ್ರಿಯಲ್ ಅಧಿಕಾರ ನೀಡಲಾಗಿದೆ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಮತಕ್ಷೇತ್ರದ ಚುನಾವಣಾ ಅಧಿಕಾರಿ ವೈ.ಎಸ್.ಪಾಟೀಲ `ಪ್ರಜಾವಾಣಿ'ಗೆ ತಿಳಿಸಿದರು.

`ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಯ ವಾಹನ ಹೊರತುಪಡಿಸಿ ಜೊತೆಗೆ ರ‌್ಯಾಲಿ ನಡೆಸುತ್ತಾ ಬರುವ ಇತರೆಲ್ಲ ವಾಹನಗಳನ್ನು ಬಾಡಿಗೆ ವಾಹನಗಳೆಂದು ಪರಿಗಣಿಸಿ ಅಭ್ಯರ್ಥಿಯ ಚುನಾವಣಾ ವೆಚ್ಚದಲ್ಲಿ ಸೇರಿಸಲಾಗುವುದು. ಚುನಾವಣಾ ಪ್ರಚಾರ ವೆಚ್ಚ, ಹಣ ಹಂಚಿಕೆ, ಸಾಗಣೆ ಸಹಿತವಾದ ಅಕ್ರಮಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ದಿನ 24 ಗಂಟೆಯೂ ಈ ಫ್ಲೈಯಿಂಗ್ ಮತ್ತು ಸ್ಟ್ಯಾಟಿಕ್ ಸರ್ವೆಲನ್ಸ್ ತಂಡಗಳು ಜಾಗೃತವಾಗಿದ್ದು, ನೀತಿಸಂಹಿತೆ ಅಥವಾ ಚುನಾವಣಾ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸಿದ ಮಾಹಿತಿ ಬಂದ ತಕ್ಷಣ ಆ ಜಾಗಕ್ಕೆ ಕ್ಷಣ ಮಾತ್ರದಲ್ಲಿ ತಲುಪಿ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಚುನಾವಣಾ ವೀಕ್ಷಕರಾದ ಆರ್.ಆರ್. ಬೆಹಲ್ ತಿಳಿಸಿದರು.

ವಿಮಾನ, ರೈಲು, ಬಸ್ ನಿಲ್ದಾಣಗಳಲ್ಲಿ ಜಾಗೃತಿ
ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ `ಸಿಸ್ಟಮೆಟಿಕ್ ವೋಟರ್ಸ್‌ ಎಜುಕೇಶನ್ ಅಂಡ್ ಎಲೆಕ್ಟೋರಲ್ ಪಾರ್ಟಿಸಿಪೇಶನ್ ಪ್ಲ್ಯಾನ್' (ಸ್ವೀಪ್) ಯೋಜನೆಯಡಿ ವಿಮಾನ, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಆಯೋಗ ವಿಶೇಷ ಯೋಜನೆ ರೂಪಿಸಿದೆ.

ಈ ನಿಟ್ಟಿನಲ್ಲಿ ಉಚಿತವಾಗಿ ನೆರವಾಗಲು ಕೆಎಸ್‌ಆರ್‌ಟಿ ಮತ್ತು ಬಿಎಂಟಿಸಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.  ಮತದಾನ, ಮತದಾರರ ಜಾಗೃತಿಗಾಗಿ ಆಯೋಗ ಸಿದ್ಧಪಡಿಸಿದ ಆಡಿಯೊ, ವಿಡಿಯೊ ಸಾಮಗ್ರಿಗಳನ್ನು  ತಲುಪಿಸಲಾಗುತ್ತಿದೆ. ಕೆಎಸ್‌ಆರ್‌ಟಿಸಿ 2,000, ಬಿಎಂಟಿಸಿ, ವಾಯವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ನಿಗಮದ ತಲಾ 1,500 ಬಸ್‌ಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

ಬೆಂಗಳೂರಿನ ನಾಲ್ಕು ಡಿಪೊಗಳ ಆಯ್ದ 600 ವೊಲ್ವೊ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಫಲಕ ಅಳವಡಿಸಲು ತೀರ್ಮಾನಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳ ಸಹಿತ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮತ್ತು ರೈಲ್ವೆ ಅಧಿಕಾರಿಗಳಿಗೂ ಈ ನಿಟ್ಟಿನಲ್ಲಿ ಪತ್ರ ಬರೆಯಲಾಗಿದೆ ಎಂದು ಚುನಾವಣಾ ಆಯೋಗದ ವಿಶೇಷ ಕರ್ತವ್ಯಾಧಿಕಾರಿ (ವೆಚ್ಚ ವೀಕ್ಷಕ) ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT