ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವಿರುದ್ಧ ಸಚಿವ ಗರಂ

Last Updated 3 ಜನವರಿ 2014, 6:43 IST
ಅಕ್ಷರ ಗಾತ್ರ

ಕೊಪ್ಪ: ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರ­ದಲ್ಲಿದೆ ಗೊತ್ತಾ?... ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಯಾರೂಂತ ಗೊತ್ತೇನ್ರೀ?...
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.

ಸಭೆಯಲ್ಲಿ ಹಾಜರಿದ್ದ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡರು ‘ತಾ.ಪಂ. ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಭಾವ ಚಿತ್ರವಿರುವ ಭಿತ್ತಿಪತ್ರ ಇನ್ನೂ ಯಾಕೆ ತೆರವು­ಗೊಳಿ­ಸಿಲ್ಲ?... ಸರ್ಕಾರ ಬದಲಾಗಿದ್ದು ಗೊತ್ತಿಲ್ಲವೇ?...’ ಎಂದು ಇಒ ಅವರನ್ನು ಪ್ರಶ್ನಿಸಿದರು.

‘ಸರ್ಕಾರದ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆ ಮಾಡುವಾಗ ಸ್ಥಳೀಯ ಶಾಸಕರು, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಶಿಫಾರಸು ಪತ್ರ ತಂದವರನ್ನು ಮಾತ್ರ ಪರಿಗಣಿಸಲಾಗುತ್ತಿದೆ ಎಂಬ ಬಗ್ಗೆ  ತಮಗೆ ದೂರು­ಗಳು ಬಂದಿವೆ. ಇದರಿಂದ ಸಾಮಾನ್ಯ ಜನ ಸೌಲಭ್ಯ ವಂಚಿತರಾಗುತ್ತಿದ್ದಾರೆ’ ಎಂದಾಗ ಕಿಡಿಕಿಡಿಯಾದ ಸಚಿವರು, ಫಲಾನುಭವಿಗಳ ಆಯ್ಕೆಗೆ ಜನ ಪ್ರತಿನಿಧಿ­ಗಳ ಶಿಫಾರಸು ಪತ್ರ ಕೇಳುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ­ದರು.

ತಾಲ್ಲೂಕಿನ ಗ್ರಾ.ಪಂ., ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ಅಳವಡಿಸಿರುವ ಭಿತ್ತಿಪತ್ರಗಳ ತೆರವಿಗೆ ಸೂಚಿಸಿ, 15 ದಿನ ಕಳೆದರೂ ಕ್ರಮಕೈಗೊಳ್ಳದಿರುವ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇನ್ನೆರಡು ದಿನದೊಳಗೆ  ತೆರವುಗೊಳಿಸಿ ವರದಿ ನೀಡಲು ಸೂಚಿಸಿ­ದರು.

ತಾಲ್ಲೂಕಿನಲ್ಲಿ ನಡೆಯುವ ಸರ್ಕಾರಿ ಸಮಾರಂಭ­ಗಳಿಗೆ ಸಚಿವರು, ಸಂಸದರನ್ನು ಆಹ್ವಾನಿಸುತ್ತಿಲ್ಲ ಎಂಬ ದೂರಿಗೆ ಸಮಜಾಯಿಷಿ ನೀಡಲು ಮುಂದಾದ ಇಒಗೆ ‘ವಿಧಾನ ಪರಿಷತ್ ಸದಸ್ಯೆಯಾದ ತಮ್ಮನ್ನು ಈ ಭಾಗದ ಕಾರ್ಯಕ್ರಮಗಳಿಗೆ ಎಷ್ಟು ಬಾರಿ ಆಹ್ವಾನಿಸಿ­ದ್ದೀರಿ’ ಎಂದು  ಗಾಯತ್ರಿ ಶಾಂತೇಗೌಡರು ನೇರ ಪ್ರಶ್ನೆ ಕೇಳಿದಾಗ ‘ಇಒ’ ಉತ್ತರಿಸದಾದರು. 

ತುಳುವಿನಕೊಪ್ಪ ಗ್ರಾಮ ಪಂಚಾಯಿತಿಯವರು ನಿವೇಶನಕ್ಕಾಗಿ ಕಾಯ್ದಿರಿಸಿದ ಜಾಗವನ್ನು ಸ್ಥಳೀಯ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿ ವಿದ್ಯುತ್ ತಂತಿ­ಬೇಲಿ ನಿರ್ಮಿಸಿದರೂ ತೆರವುಗೊಳಿಸದೆ, ಪಂಚಾಯಿತಿ ಜಾಗದಲ್ಲಿ ಗಿಡ ನೆಡಲು ಮುಂದಾಗಿರುವ ಅರಣ್ಯ ಇಲಾಖಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದು­ಕೊಂಡ ಸಚಿವರು, ಇನ್ನೆರಡು ದಿನದಲ್ಲಿ ಒತ್ತುರಿ ತೆರವುಗೊಳಿಸದಿದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾ­ಗುತ್ತದೆ ಎಂದರಲ್ಲದೆ, ಶೀಘ್ರ ಅರಣ್ಯ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಿ ಇಲಾಖೆಯ ಹಲವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಎಡಗುಂದ ಗಿರಿಜನ ಪ್ರದೇಶಕ್ಕೆ ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮುತ್ತಿನಕೊಪ್ಪದಿಂದ ಕೊಪ್ಪಕ್ಕೆ 33ಕೆ.ವಿ. ವಿದ್ಯುತ್ ಮಾರ್ಗದ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಕಲ್‌ಬಸ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ಕೋಳಿ ಅಂಗಡಿ ನಿರ್ಮಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಹಾಲ್ಮುತ್ತೂರಿನಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ ಇಂಗುಗುಂಡಿಯಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡಬೇಕೆಂದು  ಸೂಚಿಸಿದರು.

ಸಭೆಗೆ ಮುನ್ನ ಪುರಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ, ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಬೆಳೆಗಾರರು ಅಡಿಕೆ ನಿಷೇಧದ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಷೇಧದ ಭೀತಿ ಸೃಷ್ಟಿಸಿ ಅಡಿಕೆ ಧಾರಣೆ ಕುಸಿತಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂದರ­ಲ್ಲದೆ ಸಂಸದ ಜಯಪ್ರಕಾಶ ಹೆಗ್ಡೆಯವರು ಅಡಿಕೆ ಬೆಳೆಗಾರರ ಪರವಾಗಿ ನಿರಂತರ ಹೋರಾಟ ನಡೆಸುತ್ತಿ­ದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ,   ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್, ಮುಖಂಡರಾದ ಟಿ.ಡಿ. ರಾಜೇಗೌಡ, ಎಚ್.ಎಂ. ಸತೀಶ್, ಓಣಿತೋಟ ರತ್ನಾಕರ್,ಮೀಗ ಚಂದ್ರಶೇಖರ್, ಚನ್ನಗಿರಿ, ಅಬುಲ್ ಕಲಾಂ, ಡಿ.ಎಸ್. ಸತೀಶ್, ಸೀತಾಲಕ್ಷ್ಮಿ, ಸುಬ್ರಹ್ಮಣ್ಯ, ನಾರ್ವೆ ಅಶೋಕ್, ನವೀನ್ ಮಾವಿನಕಟ್ಟೆ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT