ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಇಒ

Last Updated 12 ಮೇ 2012, 4:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ಸರ್ಕಾರದಿಂದ ಇಲಾಖೆಗೆ ಬಂದಿದ್ದ ಹಣ ಪುನಃ ವಾಪಸು ಹೋಗಲು ನೀವೇ ಕಾರಣ. ಕ್ರಿಯಾ ಯೋಜನೆ ಅನುಸಾರವಾಗಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದರೆ ಹಣ ವಾಪಸು ಹೋಗುತ್ತಿರಲಿಲ್ಲ.

ಈಗ ನಿಮ್ಮ ಸ್ವಂತ ಹಣದಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಿ. ಸರ್ಕಾರದಿಂದ ಅಪರೂಪಕ್ಕೆ ಬರುವ ಹಣ ಸದ್ಬಳಕೆಯಾಗದಿದ್ದರೆ ನಾನು ಸುಮ್ಮನಿರೋದಿಲ್ಲ. ನಿಮ್ಮ ಸ್ವಂತ ಹಣದಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಿ~.

ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಹೀಗೆ ತರಾಟೆಗೆ ತೆಗೆದುಕೊಂಡವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ  ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆ ಪ್ರಗತಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ವಿವರಣೆ ಪಡೆದ ಅವರು, `ಸರ್ಕಾರದಿಂದ ಬಂದಿದ್ದ ಲಕ್ಷಾಂತರ ರೂಪಾಯಿ ಹಣ ಪುನಃ ವಾಪಸು ಹೋಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ~ ಎಂದರು.

ಯಂತ್ರೋಪಕರಣ ಖರೀದಿ ಮತ್ತು ಸುವರ್ಣಭೂಮಿ ಯೋಜನೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ವೆಂಕಟರಾಮ ಅವರಿಂದ ಮಾಹಿತಿ ಪಡೆದ ಅವರು, `ಮಾರ್ಚ್ 31ರವರೆಗೆ ಏನು ಮಾಡುತ್ತಿದ್ದಿರಿ? ಆಗಸ್ಟ್‌ನ್ಲ್ಲಲೇ ಕ್ರಿಯಾ ಯೋಜನೆ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದರೂ ಯೋಜನೆ ಅನುಷ್ಠಾನಗೊಳಿಸಲು ಯಾಕೆ ವಿಳಂಬ ಮಾಡಿದ್ದೀರಿ? ಪುನಃ ಸರ್ಕಾರದ ಖಜಾನೆಗೆ ಹೋಗಿರುವ ಹಣವನ್ನು ನಿಮ್ಮಿಂದ ತರಲು ಸಾಧ್ಯವೇ? ಸರ್ಕಾರ ಹಣ ನೀಡದಿದ್ದರೆ, ನಿಮ್ಮ ಸ್ವಂತ ಹಣದಿಂದ ಯೋಜನೆ ಅನುಷ್ಠಾನಗೊಳಿಸುತ್ತೀರಾ~ ಎಂದು ಪ್ರಶ್ನಿಸಿದರು.

`ಇಲಾಖೆಯ ಕಿರಿಯ ಅಧಿಕಾರಿಗಳಿಂದ ಈ ಅಚಾತುರ್ಯ ಸಂಭವಿಸಿದೆ~ ಎಂದು ವೆಂಕಟರಾಮ ಕಾರಣಗಳನ್ನು ನೀಡಲು ಮುಂದಾದಾಗ, ಅದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು. `ಕಿರಿಯ ಅಧಿಕಾರಿಗಳ ತಪ್ಪು-ಒಪ್ಪುಗಳನ್ನು ಇಲ್ಲಿ ಹೇಳಬೇಡಿ. ಇಡೀ ಇಲಾಖೆ ಹೊಣೆ ನಿಮ್ಮದು. ಸಭೆಗೆ ಬರುವಾಗ ನೀವು ಎಲ್ಲ ರೀತಿಯ ಮಾಹಿತಿಯನ್ನು ಹೊಂದಿರಬೇಕು. ಇಲ್ಲಿ ಬಂದು ಸುಮ್ಮನೆ ನಿಲ್ಲಬಾರದು~ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಶುವೈದ್ಯಕೀಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಸಭೆ ಅಧ್ಯಕ್ಷತೆ ವಹಿಸಿದ್ದ ಎಂ.ವಿ.ಕೃಷ್ಣಪ್ಪ ಮಾತನಾಡಿ, `ಅಧಿಕಾರಿಗಳಾದವರು ತಮ್ಮ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ನಿರ್ಲಕ್ಷ್ಯದಿಂದ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಳ್ಳಬಾರದು. ಜಿಲ್ಲಾ ಕೇಂದ್ರಕ್ಕೆ ಸೀಮಿತಗೊಳ್ಳದೆ ತಾಲ್ಲೂಕು ಕೇಂದ್ರಗಳಿಗೂ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಅರಿಯಬೇಕು.

ಕುಗ್ರಾಮಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವತ್ತ ವಿಶೇಷ ಆದ್ಯತೆ ನೀಡಬೇಕು~ ಎಂದು ಸೂಚಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಎನ್.ಚಿನ್ನಪ್ಪ, ಅಮರಾವತಿ ಕೃಷ್ಣಪ್ಪ ಮತ್ತು ಮಂಜುಳಾ ವೆಂಕಟೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT