ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ದಿಗ್ಬಂದನ

ಸಂತ್ರಸ್ತರ ನಿವೇಶನಗಳ ಹಸ್ತಾಂತರ
Last Updated 18 ಡಿಸೆಂಬರ್ 2012, 11:02 IST
ಅಕ್ಷರ ಗಾತ್ರ

ಬೀಳಗಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿಯ ಸಂತ್ರಸ್ತರಿಗೆ ಮೀಸಲಾಗಿಟ್ಟಿದ್ದ ನಿವೇಶನಗಳನ್ನು ಬೇರೆ ಉದ್ದೇಶಗಳಿಗಾಗಿ ಬಳಸಿಕೊಂಡು ನಿವೇಶನಗಳನ್ನು ಹಸ್ತಾಂತರಿಸಿದ ಪುನರ್ವಸತಿ ಮತ್ತು ಪುನರ್ನಿರ್ಮಾಣ ಕೇಂದ್ರದ ಅಧಿಕಾರಿಗಳ ಕೃತ್ಯವನ್ನು ಖಂಡಿಸಿದ ಸಂತ್ರಸ್ತರು ಅಧಿಕಾರಿಗಳನ್ನು ಶಾಲಾ ಆವರಣದ ಕೊಠಡಿಯಲ್ಲಿ ಕೂಡಿ ಹಾಕಿದ ಪ್ರಕರಣ ತಾಲ್ಲೂಕಿನ ಯಡಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆದಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬಾಧಿತಗೊಂಡ ಯಡಹಳ್ಳಿ ಗ್ರಾಮದ ಸಂತ್ರಸ್ತರಿಗೆ ಮುಧೋಳ ಪಕ್ಕದಲ್ಲಿ ನಿವೇಶನಗಳನ್ನು ಗುರುತಿಸಲಾಗಿದೆ. ಜೊತೆಗೆ ಗ್ರಾಮದ ಗತ ಇತಿಹಾಸ ಮರೆತು ಹೋಗಬಾರದೆನ್ನುವ ಕಾರಣವನ್ನಿಟ್ಟುಕೊಂಡು ಸದ್ಯ ವಾಸಿಸುತ್ತಿರುವ ಗ್ರಾಮದ ಪಕ್ಕದಲ್ಲಿಯೇ ಪುನರ್ವಸತಿಗೆ ನಿವೇಶನಗಳನ್ನು ನೀಡಬೇಕೆಂಬುದು ಇಲ್ಲಿನ ಗ್ರಾಮಸ್ಥರ ಕೋರಿಕೆ.

ಹೀಗಾಗಿ ಇನ್ನೂ ಒಂದಿಷ್ಟು ಜನರು ಗ್ರಾಮದ ಪಕ್ಕದಲ್ಲಿಯೇ ತಗಡಿನ ಶೆಡ್ಡುಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ. ಜೊತೆಗೆ ಅಲ್ಲಷ್ಟು, ಇಲ್ಲಷ್ಟು ಉಳಿದುಕೊಂಡಿರುವ ಭೂಮಿಯ ಸಾಗುವಳಿಗೂ ಬಹುಪಾಲು ಜನರು ಯಡಹಳ್ಳಿ ಗ್ರಾಮವನ್ನು ಇನ್ನೂ ತೊರೆದಿಲ್ಲ.

ಆದರೆ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಯಡಹಳ್ಳಿ ಗ್ರಾಮದ ಸಂತ್ರಸ್ತರಿಗೆ ಮುಧೋಳದಲ್ಲಿ ಮಂಜೂರಾದ ನಿವೇಶನಗಳನ್ನು ಸಂತ್ರಸ್ತರ ಗಮನಕ್ಕೆ ತರದೇ, ಪುನರ್ವಸತಿ ಕೇಂದ್ರದ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಸಭೆಯ ಗಮನಕ್ಕೂ ತರದೇ ಯಾರಾರಿಗೋ ನಿವೇಶನಗಳನ್ನು ವಿತರಿಸಿರುವುದ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಸಂತ್ರಸ್ತರ ನಿವೇಶನಗಳನ್ನು 6 ಎಕರೆ ಕೆ.ಇ.ಎಂ. ಆಸ್ಪತ್ರೆಗೆ, 5ಎಕರೆ ಸರಕಾರಿ ಪೊಲಿಕ್ನಿಕ್‌ಗೆ, 1ಎಕರೆ ಅಗ್ನಿಶಾಮಕ ದಳಕ್ಕೆ, ನಿರಾಣಿ ಶುಗರ್ಸ್‌ಗೆ 2ಗುಂಟೆ ಜಾಗವನ್ನು ಪರಭಾರೆ ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.

ಯಡಹಳ್ಳಿಯ ಸಂತ್ರಸ್ತರು  2009ರ ಜೂನ್ 30ರಂದು ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸು ಮಾಡಿ ಸಂತ್ರಸ್ತರ ನಿವೇಶನಗಳನ್ನು ಬೇರೆಯವರಿಗೆ ಹಸ್ತಾಂತರಿಸಿದ್ದನ್ನು, ಆ ನಿವೇಶನಗಳಲ್ಲಿ ಕಟ್ಟಡ ಕಟ್ಟಲು ನೀಡಿದ ಪರವಾನಗಿಯನ್ನು ಖಂಡಿಸಿದ್ದಲ್ಲದೇ ತಕ್ಷಣವೇ ಕಟ್ಟಡ ಪರವಾನಗಿ ರದ್ದುಪಡಿಸಲು ಹಾಗೂ ನಿವೇಶನಗಳನ್ನು ವಶಪಡಿಸಿ ಕೊಳ್ಳುವಂತೆ ಸೂಚಿಸಿತ್ತು.

ಅಧಿಕಾರಿಗಳು ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ  ಶಾಲಾ  ಕೊಠಡಿಯೊಂದರಲ್ಲಿ ಕೂಡಿ ಹಾಕಿ ಮುಧೋಳದ ಪುನರ್ವಸತಿ ಕೇಂದ್ರದ ನಿವೇಶನಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಡಾ.ಎಂ.ಆರ್.ದೇಸಾಯಿ, ಮಾಜಿ ಶಾಸಕ ಜೆ.ಟಿ.ಪಾಟೀಲ, ವಾಸಣ್ಣ ದೇಸಾಯಿ, ಜಿ.ಎಲ್.ಬಿರಾದಾರ ಪಾಟೀಲ, ರವಿ ದೇಸಾಯಿ, ಎಸ್.ಟಿ.ಪಾಟೀಲ, ಎಸ್.ಜಿ.ಪಾಟೀಲ ಮುಂದಾಳತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT