ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಧಿಕಾರಿಗಳಿಗೆ ವಿಕೇಂದ್ರೀಕರಣದ ಕಲ್ಪನೆ ಇಲ್ಲ'

Last Updated 27 ಡಿಸೆಂಬರ್ 2012, 10:03 IST
ಅಕ್ಷರ ಗಾತ್ರ

ಯಾದಗಿರಿ: ಗ್ರಾಮೀಣ ಮಟ್ಟದ ಅಧಿಕಾರಿಗಳಿಗೆ ಅಧಿಕಾರದ ವಿಕೇಂದ್ರೀಕರಣ ಬಗ್ಗೆ ಕಲ್ಪನೆಯೇ ಇಲ್ಲದಂತಾಗಿದೆ. ಲಾಭದ ಬಗ್ಗೆ ಚಿಂತನೆ ನಡೆಸುತ್ತಿರುವ ಪರಿಣಾಮ ದುರ್ಬಲ ಆಡಳಿತ ವ್ಯವಸ್ಥೆ ಉಂಟಾಗುತ್ತದೆ ಎಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ಹೇಳಿದರು.
ಮಂಗಳವಾರ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಅಟಲ್‌ಜೀ ಜನಸ್ನೇಹಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರಿಗಳು ಕುರ್ಚಿ ಮೇಲೆ ಕುಳಿತು ಲಾಭ ಮಾಡಿಕೊಳ್ಳುವ ಚಿಂತನೆ ಮಾಡುತ್ತಾರೆಯೇ ಹೊರತು ಜನಸಾಮಾನ್ಯರ ಬಗ್ಗೆ ಯೋಚಿಸುವುದು ಕಡಿಮೆಯಾಗಿದೆ ಎಂದು ಹೇಳಿದರು.

ಲಂಚರಹಿತ ಮತ್ತು ತ್ವರಿತ ಆಡಳಿತ ನೀಡುವುದೇ ಆಡಳಿತ ಪಕ್ಷದ ಉದ್ದೇಶವಾಗಿದ್ದು, ಅದಕ್ಕಾಗಿ ಜನತೆಯ ಅನುಕೂಲಕ್ಕಾಗಿ ನಾನಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಆದರೆ ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆದರೆ ಇದು ಅವರಿಗೆ ತಿಳಿಯದಂತಾಗಿದೆ ಎಂದು ದೂರಿದರು.

ಸಕಾಲಕ್ಕೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕಿದೆ. ವಿಳಂಬ ನೀತಿ ಅನುಸರಿಸಿದರೆ ಜನತೆ ರೊಚ್ಚಿಗೇಳುತ್ತಾರೆ ಎಂದ ಅವರು, ಪಾಶ್ಚಾತ್ಯ ದೇಶದ ಅಧಿಕಾರಿಗಳು ಕರ್ತವ್ಯವೇ ದೇವರು ಎಂದು ತಿಳಿದುಕೊಂಡಿದ್ದಾರೆ. ಆದರೆ ನಮ್ಮಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದೆ. ಇದು ನಿಜಕ್ಕೂ ನಾಚಿಗೇಡಿನ ಸಂಗತಿ. ಜನಸೇವೆ ಮಾಡಬೇಕು ಎಂಬ ಹಂಬಲವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದೆ ಎಂದರು.

ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ, ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಆರಂಭಿಸಲಾಗಿದೆ. ಇದರಿಂದ ಗ್ರಾಮೀಣ ಮಟ್ಟದ ಸಮಸ್ಯೆಗಳಿಗೆ ಸ್ಪಂದಿಸಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ನೂತನವಾಗಿ ಆರಂಭಿಸಲಾಗಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಒಟ್ಟು 36 ಸೌಲಭ್ಯಗಳು ಸಕಾಲದಲ್ಲಿ ನೀಡಲಾಗುತ್ತದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜನರಿಗೆ ನಿಗದಿತ ಅವಧಿಯೊಳಗೆ  ಸೌಲಭ್ಯಗಳನ್ನು ಒದಗಿಸಿಕೊಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರೂ ಕೆಲಸ ಮಾಡಬೇಕಿದೆ. ಇದಲ್ಲದೇ ಜನರಿಗೆ ತಿಳಿವಳಿಕೆ ನೀಡಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಗ್ರಾಮೀಣ ಪ್ರದೇಶದ ಜನತೆ ತಹಸೀಲ್ದಾರ ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿಯಿತ್ತು. ಆದರೆ ಇದೀಗ ಎಲ್ಲ ಸೌಲಭ್ಯಗಳು ಹೋಬಳಿ ಮಟ್ಟದಲ್ಲಿ ದೊರೆಯಲಿವೆ ಎಂದರು.

ಸರ್ಕಾರ ನೀಡುವ ಸೌಲಭ್ಯಗಳನ್ನು ಜನತೆ ಸಮರ್ಪಕವಾಗಿ ಬಳಕೆ ಮಾಡಿಕೊಂಡಾಗ ನಾವು ಅಭಿವೃದ್ಧಿಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಧನೆ ಮಾಡಬಹುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮೋ ಶಾಣ್ಯಾನೋರ್ ಕಾರ್ಯಕ್ರಮ ಉದ್ಘಾಟಿಸಿದರು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವೇಂದ್ರನಾಥ ನಾದ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡ್ರಕಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ ಇದ್ದರು.

ವಡಗೇರಾ: ಈ ಭಾಗದ ಗ್ರಾಮಸ್ಥರು ಇನ್ನು ಮುಂದೆ ಶಹಾಪುರಕ್ಕೆ ತಮ್ಮ ಕೆಲಸ ಕಾರ್ಯಕ್ಕಾಗಿ ಅಲೆಯುವ ಅವಶ್ಯಕತೆ ಇಲ್ಲ. ಇನ್ನು ಮುಂದೆ ಎಲ್ಲ ಕೆಲಸಗಳನ್ನು ಇಲ್ಲಿಯ ವಿಶೇಷ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಾಡಿಕೊಡಲಾಗುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪಾರ್ವತಮ್ಮ ಕಾಡಂನೋರ್ ಹೇಳಿದರು.

ವಡಗೇರಾದ ವಿಶೇಷ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ಅಟಲ್‌ಜೀ ಜನಸ್ನೇಹಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಂದಾಯ ನಿರೀಕ್ಷಕ ಪ್ರಭಯ್ಯಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಶಮ್ಮ ಮಲ್ಲಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲಣ್ಣ ಇಟಗಿ, ಗೌರಿಶಂಕರ, ಎಸ್‌ಡಿಎಂಸಿ ಅಧ್ಯಕ್ಷ ಉಸ್ಮಾನ್‌ಬಾಷಾ ತಡಬಿಡಿ. ಕಂದಾಯ ಸಿಬ್ಬಂದಿ ರಾಜಾಸಾಬ ಕಂದಗಲ್, ಸಂಜೀವ, ಶಿರಾಜ, ಬಸವರಾಜ ವಾಲೀಕಾರ, ಚನ್ನಬಸವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT