ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗೆ ಗುತ್ತಿಗೆದಾರರ ಸವಾಲ್!

Last Updated 30 ಆಗಸ್ಟ್ 2011, 8:40 IST
ಅಕ್ಷರ ಗಾತ್ರ

ತುಮಕೂರು: ಅಮಾನಿಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಲು ಸೋಮವಾರ ನಗರಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಂಭುದಯಾಳ್ ಮೀನಾ ಕಳಪೆ ಕಾಮಗಾರಿ ಕಂಡು ಹೌಹಾರಿದರು.

ಕೆರೆಯಲ್ಲಿ ದೋಣಿ ನಿಲ್ಲಿಸಲು ಇರುವ ಸ್ಥಳದ ಮೆಟ್ಟಿಲುಗಳಿಗೆ ಅಗತ್ಯ ಪ್ರಮಾಣದ ಸಿಮೆಂಟ್ ಬಳಸಿಲ್ಲ ಎಂದು ಮೀನಾ ಪ್ರಶ್ನಿಸಿದರು. ಸ್ಥಳದಲ್ಲಿದ್ದ ಗುತ್ತಿಗೆದಾರ ಪ್ರತಿನಿಧಿ ಮತ್ತು ಗುಣಮಟ್ಟ ಖಾತ್ರಿ ಸಂಸ್ಥೆಯ ಪ್ರತಿನಿಧಿ `ಎಲ್ಲವೂ ಸರಿಯಾಗಿದೆ. ಸಾಕಷ್ಟು ಸಿಮೆಂಟ್ ಹಾಕಿದ್ದೇವೆ~ ಎಂದು ವಾದಿಸಿದರು.

`ನಾನು ಹೇಳುವುದು ಸುಳ್ಳಾಗಿದ್ದರೆ ಇದೇ ಕ್ಷಣ ರಾಜೀನಾಮೆ ಕೊಡುತ್ತೇನೆ. ನೀವು ಸರಿಯಾಗಿ ಕೆಲಸ ಮಾಡಿಲ್ಲ ಅಂತ ಪ್ರೂವ್ ಆದ್ರೆ ಏನು ಮಾಡಬೇಕು ಹೇಳಿ?~ ಎಂದು ಮೀನಾ ತರಾಟೆಗೆ ತೆಗೆದುಕೊಂಡರು. ಮಧ್ಯ ಪ್ರವೇಶಿಸಿದ ಸಚಿವ ಎಸ್.ಸುರೇಶ್‌ಕುಮಾರ್, `ಗುಣಮಟ್ಟ ಖಾತ್ರಿ ವರದಿಯನ್ನು ಕಚೇರಿಗೆ ಕಳಿಸಿಕೊಡಿ. ನಂತರ ಮುಂದಿನದ್ದು ನೋಡುತ್ತೇವೆ~ ಎಂದರು.

`ನಾನು `ಎ~ಕ್ಲಾಸ್ ಕಂಟ್ರ್ಯಾಕ್ಟರ್ ಮಗ. ಇಂಥ ನೂರೆಂಟು ಕಾಮಗಾರಿಗಳನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಕಣ್ಣಳತೆಯಲ್ಲೇ ಎಷ್ಟು ಸಿಮೆಂಟ್ ಹಾಕಲಾಗಿದೆ ಎಂದು ಅಂದಾಜು ಮಾಡಬಲ್ಲೆ. ಸರಿಯಾಗಿ ಕೆಲಸ ಮಾಡಿದ್ದರೆ ಮಾತ್ರ ಎದುರು ಮಾತನಾಡಬೇಕು~ ಎಂದು  ಮೆಟ್ಟಿಲ ಅಂಚನ್ನು ಒದ್ದು ಉದುರಿಸಿ ಕಳಪೆ ಕಾಮಗಾರಿ ದರ್ಶನ ಮಾಡಿಸಿದರು. `ಎಲ್ರೀ ಇದೆ 1:6 ಅನುಪಾತದ ಸಿಮೆಂಟ್~ ಎಂದು ಖಾರವಾಗಿ ಪ್ರಶ್ನಿಸಿದರು.

ಗಿಡಗಳು ಮಾಯ: ಕೆರೆ ಮಧ್ಯಭಾಗದಲ್ಲಿರುವ ದ್ವೀಪಕ್ಕೆ ತೆರಳಿದ ಸಚಿವರು ಅಲ್ಲಿ ನೆಟ್ಟಿದ್ದ ಗಿಡಗಳೆಲ್ಲಾ ಒಣಗಿರುವುದನ್ನು ಗಮನಿಸಿ ಹೌಹಾರಿದರು. `ಫೆನ್ಸಿಂಗ್ ಮಾಡುವ ವಿಷಯ ಯೋಜನೆಯಲ್ಲಿ ಸೇರಿಲ್ಲ~ ಎಂದು ಗುತ್ತಿಗೆದಾರ ಪ್ರತಿನಿಧಿ ಸಮಜಾಯಿಶಿ ನೀಡಿದರು. `ಫೆನ್ಸಿಂಗ್ ಮಾಡೋಕೆ ಎಷ್ಟ್ರೀ ಖರ್ಚಾಗುತ್ತೆ?~ ಎಂದು ಸಚಿವರು ಪ್ರಶ್ನಿಸಿದರು. ಟೂಡಾ ವತಿಯಿಂದ ಗಿಡಗಳಿಗೆ ಫೆನ್ಸಿಂಗ್ ಮಾಡಿಸುವ ಹಾಗೂ ಹೊಸದಾಗಿ ಸಸಿ ನೆಡೆಸುವ ಭರವಸೆಯನ್ನು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ನೀಡಿದರು.

ಈ ದ್ವೀಪವನ್ನು ದೂರದಿಂದ ನೋಡಿದರೆ ಕಾಡಿನಂತೆ ಕಾಣಬೇಕು ಎಂಬ ಆಸೆ ನನಗಿತ್ತು. ಏನ್ರೀ ಹೀಗೆ ಹಾಳಾಗಿದೆ ಎಂದು ಸಚಿವರು ವಿಷಾದಿಸಿದರು.

ಅಳತೆ ಸರಿಯಿಲ್ಲ: ಅಮಾನಿಕೆರೆ ಅಂಗಳಕ್ಕಿಳಿದ ಸಚಿವರಿಗೆ ಮೆಟ್ಟಿಲುಗಳ ಅಳತೆಯ ಅವ್ಯವಸ್ಥೆ ಕಣ್ಣಿಗೆ ರಾಚಿತು. ಇದೇನ್ರೀ ಒಂದು ಮೆಟ್ಟಿಲು ದೊಡ್ಡದಾಗಿದೆ- ಒಂದು ಸಣ್ಣದಾಗಿದೆ. ಅಳತೆ ಇಟ್ಕೊಂಡು ಮೆಟ್ಟಿಲು ಕಟ್ಟೋಕೆ ಆಗಲ್ವೇನ್ರೀ? ನಮ್ಮ ಎಂಜಿನಿಯರ್‌ಗಳು, ಥರ್ಡ್ ಪಾರ್ಟಿ ಏಜೆನ್ಸಿಯವರು ಏನು ಮಾಡ್ತಿದ್ದಾರ‌್ರೀ? ಎಂದು ಸಚಿವರು ಪ್ರಶ್ನಿಸಿದರು.

ಸಮಾಧಾನವಿಲ್ಲ: ಅಮಾನಿಕೆರೆ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಿಸಿಲ್ಲ. 12 ತಿಂಗಳಲ್ಲಿ ಮುಗಿಯಬೇಕಿದ್ದ ಕೆಲಸ 22 ತಿಂಗಳಾದರೂ ಕುಂಟುತ್ತಿದೆ. ಈ ಕೆಲಸ ನನಗೆ ಕಿಂಚಿತ್ತೂ ಸಮಾಧಾನ ತಂದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಅಮಾನಿಕೆರೆ ಅಭಿವೃದ್ಧಿ ಕಾಮಗಾರಿಯನ್ನು ಅಕ್ಟೋಬರ್ 2ರ ಒಳಗೆ ಪೂರ್ಣಗೊಳಿಸಬೇಕು. ಅದೇ ಅಂತಿಮ ಗಡುವು. ಅಂದು ಸಿಎಂ ಕರೆತಂದು ಉದ್ಘಾಟನಾ ಸಮಾರಂಭ ನಡೆಸಲಾಗುವುದು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಅನುದಾನದಿಂದ ನಡೆಯುತ್ತಿರುವ ಈ ಕಾಮಗಾರಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯ ಸಂಕೇತ. ರೂ. 13.56 ಕೋಟಿ ವೆಚ್ಚದ ಕಾಮಗಾರಿಗೆ ಈಗಾಗಲೇ ರೂ. 11.50 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಕಾಮಗಾರಿಯ ಮೂಲ ನಿಯಮಗಳ ಪ್ರಕಾರ ಅಕ್ಟೋಬರ್ 2010ಕ್ಕೆ ಕೆಲಸ ಪೂರ್ಣಗೊಳ್ಳಬೇಕಿತ್ತು. ಆದರೆ ಗುತ್ತಿಗೆದಾರರು ಎರಡು ಬಾರಿ ತಲಾ 6 ತಿಂಗಳ ವಿಸ್ತರಣೆ ಕೋರಿದ್ದರು. ಆದರೂ ಕೆಲಸ ಮಾತ್ರ ಮುಗಿದಿಲ್ಲ. ಇದೀಗ ಡಿಸೆಂಬರ್ 31, 2012ರ ವರೆಗೆ ಅವಧಿ ವಿಸ್ತರಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಯೋಜನೆಯ ಗುಣಮಟ್ಟ ಕಾಪಾಡುವಲ್ಲಿ ಮೂರನೇ ಸಂಸ್ಥೆಯ ಪರಿಶೀಲನೆ ವಿಫಲವಾಗಿದೆ ಎಂದು ವಿಷಾದಿಸಿದರು.

ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ಪ್ರಾಜೆಕ್ಟ್ ಎಂಜಿನಿಯರ್‌ಗಳು ಇತ್ತ ಗಮನಹರಿಸಿ ನಿಯಮಿತವಾಗಿ ಫಾಲೋಅಪ್ ಮಾಡಿದ್ದರೆ ಕಾಮಗಾರಿಗೆ ವೇಗ ಸಿಗುತ್ತಿತ್ತು. ಅಗತ್ಯ ಪ್ರಮಾಣದ ಕಾರ್ಮಿಕರು, ಅಗತ್ಯ ಯಂತ್ರೋಪಕರಣಗಳನ್ನು ಬಳಸಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರನ ಮೇಲೆ ಅಧಿಕಾರಿಗಳು ಒತ್ತಡ ಹಾಕಬೇಕಿತ್ತು. ಗುತ್ತಿಗೆದಾರ ಇಲ್ಲಿಯವರೆಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದರು.

ಕೆರೆಯನ್ನು ಮೊದಲ ಬಾರಿಗೆ ಹೇಮಾವತಿ ನೀರಿನಿಂದ ತುಂಬಿಸಲಾಗುವುದು. ನಂತರದ ದಿನಗಳಲ್ಲಿ ಮಳೆ ನೀರೇ ಕೆರೆಗೆ ಆಧಾರ. ಅಭಿವೃದ್ಧಿ ಕಾಮಗಾರಿ ಪೂರ್ಣವಾಗುವುದಕ್ಕೆ ಕಾಯದೆ ನಗರಾಭಿವೃದ್ಧಿ ಪ್ರಾಧಿಕಾರ ಹುಲ್ಲು ಹಾಸು, ಹೂ ಗಿಡಗಳನ್ನು ಬೆಳೆಸಬೇಕು ಎಂದು ಸೂಚಿಸಿದರು.

ತ್ಯಾಜ್ಯ ವಿಲೇವಾರಿ: ನಗರ ಪ್ರದೇಶದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಘಟಕ ನಿರ್ಮಾಣದ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿರೋಧಿಸುತ್ತಿರುವವರನ್ನು ನಗರಸಭೆ ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಬೇಕು. ಗೊಂದಲಗಳನ್ನು ಪರಿಹರಿಸಬೇಕು.

ಚಿತ್ರದುರ್ಗದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕ ರಾಜ್ಯಕ್ಕೇ ಮಾದರಿ. ವಿರೋಧಿಸುತ್ತಿರುವವರ ತಂಡವನ್ನು ಅಲ್ಲಿಗೆ ಕಳುಹಿಸಿ ಯೋಜನೆಯ ಅಂಶಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ಅಭಿಪ್ರಾಯಪಟ್ಟರು.

`ಘನತ್ಯಾಜ್ಯ ವಿಲೇವಾರಿ ಘಟಕವು ಪರಿಸರದ ಮೇಲೆ ಉಂಟುಮಾಡುವ ಪರಿಣಾಮದ ಬಗ್ಗೆ ಪ್ರತಿಷ್ಠಿತ ಸಂಸ್ಥೆಯಿಂದ ಮೌಲ್ಯಮಾಪನ ಮಾಡಿಸಲು ಸೂಚಿಸಲಾಗಿದೆ. ಈ ತಂಡ ನಿನ್ನೆ ಸಮೀಕ್ಷೆ ನಡೆಸಲು ತೆರಳಿದಾಗ ಕೆಲವರು ವಿರೋಧಿಸಿದ್ದಾರೆ. ಕೆಲವು ಗುಂಪುಗಳಿಗೆ ವಿರೋಧಿಸುವುದೇ ಕೆಲಸವಾಗಿದೆ~ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ನಗರಸಭೆ ಆಯುಕ್ತ ಅನುರಾಗ್‌ತಿವಾರಿ, ನಗರಸಭೆ ಎಂಜಿನಿಯರ್ ಹರೀಶ್, ರಾಜ್ಯ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಸಾಯಿಬಾಬಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT