ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಯಿಂದ ಹಲ್ಲೆ: ಕ್ಷಮೆಯಾಚನೆ

Last Updated 25 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯಲ್ಲಿ ಶುಕ್ರವಾರ ನಡೆದ ಮಾಸಿಕ ಸಭೆಯಲ್ಲಿ ಕೌನ್ಸಿಲ್ ಸಹ ಕಾರ್ಯದರ್ಶಿ ಮಾರಿಯೊ ಪೈರಿಸ್ ಅವರು ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್ ಮೇಲೆ ಹಲ್ಲೆ ಮಾಡಿದ ಘಟನೆ ನಡೆಯಿತು.

ಸಭೆ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್- ಜೆಡಿಎಸ್ ಸದಸ್ಯರನ್ನು ಮೇಯರ್ ಅಮಾನತುಪಡಿಸಿದರು. ಇದನ್ನು ಖಂಡಿಸಿ ಸದಸ್ಯರು ಮೇಯರ್ ಪೀಠದ ಮುಂಭಾಗ ಧರಣಿ ಮುಂದುವರಿಸಿದರು.ಖಾಸಗಿ ಸುದ್ದಿ ವಾಹಿನಿಗಳ ಪ್ರತಿನಿಧಿಗಳು ಧರಣಿನಿರತರ ಪ್ರತಿಕ್ರಿಯೆ ಪಡೆಯಲಾರಂಭಿಸಿದರು. ಆಗ ಅಲ್ಲಿಗೆ ಬಂದ ಆಡಳಿತ ಪಕ್ಷದ ನಾಯಕ ಬಿ.ಎಸ್. ಸತ್ಯನಾರಾಯಣ, ಮಾಧ್ಯಮ ಪ್ರತಿನಿಧಿಗಳನ್ನು ಹೊರಗೆ ಕಳುಹಿಸುವಂತೆ ಸೂಚಿಸಿದರು.

ಕೂಡಲೇ ಸಹ ಕಾರ್ಯದರ್ಶಿ ಪೈರಿಸ್ ಅವರು ಕ್ಯಾಮೆರಾಮನ್ ಒಬ್ಬರನ್ನು ಹೊರ ಹೋಗುವಂತೆ ಎಳೆದಾಡಿದರು. ಆಗ ಉಂಟಾದ ನೂಕಾಟದಲ್ಲಿ ಕ್ಯಾಮೆರಾಮನ್ ಕೆಳಗೆ ಬಿದ್ದರು. ಎದ್ದು ನಿಂತ ಅವರನ್ನು ಮತ್ತೆ ತಳ್ಳಲು ಪೈರಿಸ್ ಮುಂದಾದರು.ಇದರಿಂದ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಬಳಿಕ ಅವರನ್ನು ಸಮಾಧಾನಪಡಿಸಿ ಹೊರಗೆ ಕಳುಹಿಸಲಾಯಿತು.

ಘಟನೆಯನ್ನು ಖಂಡಿಸಿ ಮಾಧ್ಯಮ ಪ್ರತಿನಿಧಿಗಳು ಕೌನ್ಸಿಲ್ ಕಟ್ಟಡದ ಮುಂಭಾಗ ಪ್ರತಿಭಟನೆ ನಡೆಸಿದರು. ಬಳಿಕ ಸತ್ಯನಾರಾಯಣ ಅವರೊಂದಿಗೆ ಆಗಮಿಸಿದ ಪೈರಿಸ್ ಕ್ಷಮೆ ಯಾಚಿಸಿದ ನಂತರ ಧರಣಿಯನ್ನು ಹಿಂಪಡೆಯಲಾಯಿತು.

ಮಾರ್ಷಲ್ ನೇಮಕಕ್ಕೆ ಒತ್ತಾಯ
‘ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್ ಹಾಗೂ ಪಾಲಿಕೆ ಅಧಿಕಾರಿ ನಡುವೆ ಜಟಾಪಟಿ ನಡೆದಿರುವುದು ದುರದೃಷ್ಟಕರ. ಈ ರೀತಿಯ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಮಾರ್ಷಲ್‌ಗಳನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಮೇಯರ್ ಎಸ್.ಕೆ. ನಟರಾಜ್ ಹೇಳಿದರು.
‘ಸಭೆ ಸುಗಮವಾಗಿ ನಡೆಯುವಂತೆ ಮಾಡುವ ನಿಟ್ಟಿನಲ್ಲಿ ಮಾರ್ಷಲ್‌ಗಳನ್ನು ನೇಮಕ ಮಾಡುವಂತೆ ಈ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಒಂದೊಮ್ಮೆ ಮಾರ್ಷಲ್‌ಗಳಿದ್ದರೆ ಈ ರೀತಿಯ ಘಟನೆ ಸಂಭವಿಸುತ್ತಿರಲಿಲ್ಲ. ಹಾಗಾಗಿ ಮಾರ್ಷಲ್‌ಗಳನ್ನು ನೇಮಿಸುವಂತೆ ಸಚಿವರ ಬಳಿ ಮತ್ತೆ ಮನವಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT