ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಸೂಚನೆ ವಿರೋಧಿಸದೆ ಎಡವಿದ ಸರ್ಕಾರ

ಕಾವೇರಿ ಐತೀರ್ಪು ವಿವಾದ: ಸಿದ್ದರಾಮಯ್ಯ ತರಾಟೆ
Last Updated 5 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:`ಕಾವೇರಿ ನ್ಯಾಯಮಂಡಳಿ ನೀಡಿರುವ ಐತೀರ್ಪಿನ ಅಧಿಸೂಚನೆಗೆ ರಾಜ್ಯ ಸರ್ಕಾರ ವಿರೋಧ ಮಾಡಿಲ್ಲ. ಯಾವುದೇ ತಕರಾರು ಇಲ್ಲದ ಕಾರಣ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿದೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಕಾವೇರಿ ನೀರು ಹಂಚಿಕೆ ವಿಷಯ ಪ್ರಸ್ತಾಪಿಸಿದ ಅವರು, `ಅಧಿಸೂಚನೆ ಹೊರಡಿಸಲು ಆಕ್ಷೇಪಣೆ ಇಲ್ಲ ಎಂದು ರಾಜ್ಯದ ಪರವಾಗಿ ವಾದ ಮಾಡುತ್ತಿರುವ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನು ಆಧರಿಸಿ, ಅಧಿಸೂಚನೆ ಹೊರಡಿಸುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ' ಎಂದರು.

`ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ರಾಜ್ಯದ ಪರವಾಗಿ ವಾದ ಮಾಡುತ್ತಿರುವ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಅವರು ಅಧಿಸೂಚನೆ ಹೊರಡಿಸುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಸರ್ಕಾರದ ಸಮ್ಮತಿ ಇತ್ತೇ' ಎಂದು ಅವರು ಪ್ರಶ್ನಿಸಿದರು.

ನ್ಯಾಯಮಂಡಳಿಯು 2007ರ ಫೆಬ್ರುವರಿ 5ರಂದು ನೀಡಿರುವ ಅಂತಿಮ ತೀರ್ಪು ರಾಜ್ಯಕ್ಕೆ ಸಮ್ಮತವಾಗಿಲ್ಲ. ಆದ್ದರಿಂದ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಲಾಗಿದೆ. ತಮಿಳುನಾಡು ಸಹ ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿಗಳು ಇತ್ಯರ್ಥವಾಗುವ ಮೊದಲೇ ಅಧಿಸೂಚನೆ ಹೊರಡಿಸಿದರೆ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ ಎಂದರು.

`ಅಧಿಸೂಚನೆ ಹೊರಡಿಸಬಾರದು ಎಂದು ಮೊದಲಿನಿಂದಲೂ ಹೇಳುತ್ತಿದ್ದೇವೆ. ಆದರೆ, ಸರ್ಕಾರ ಯಾರೊಂದಿಗೂ ಚರ್ಚೆ ಮಾಡದೆ ಒಪ್ಪಿಗೆ ನೀಡಿದೆ. ಇದು ಸರಿಯಲ್ಲ. ಒಮ್ಮೆ ಅಧಿಸೂಚನೆ ಹೊರಡಿಸಿದರೆ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗುತ್ತದೆ' ಎಂದು ಆತಂಕ ವ್ಯಕ್ತಪಡಿಸಿದರು.

`ಕಾವೇರಿ, ಕೃಷ್ಣಾ ನದಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡದೆ ಮೊದಲಿನಿಂದಲೂ ಸಹಕಾರ ಕೊಡುತ್ತಿದ್ದೇವೆ. ಆದರೆ, ಸರ್ಕಾರ ಈ ವಿಷಯದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಈ ವಿಷಯದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ' ಎಂದು ಎಚ್ಚರಿಸಿದರು.

`ನಮಗೇ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ. ನೀರು ಬಿಡಲು ಆಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಬೇಕು' ಎಂದು ಆಗ್ರಹಿಸಿದರು.

ಇಂದು ಸಭೆ
ಕಾವೇರಿ ನದಿ ನೀರಿನ ವಿಚಾರವಾಗಿ ಬುಧವಾರ ವಿಧಾನಮಂಡಲದ ಸದನ ನಾಯಕರ ಸಭೆ ಕರೆದು ಚರ್ಚಿಸಲಾಗುವುದು. ರಾಜ್ಯದ ನೆಲ, ಜಲ, ಗಡಿ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಸದನದ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿರುತ್ತದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.
`ನಿಲುವು ಬದಲಿಲ್ಲ'
ರಾಜ್ಯ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಮೊದಲಿನಿಂದಲೂ ಕಾನೂನು ಹೋರಾಟ ಮಾಡುತ್ತಿದ್ದೇವೆ. ಸದನದ ಅಭಿಪ್ರಾಯ ಆಧರಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

`ರಾಜ್ಯ ಸರ್ಕಾರದ ಅಭಿಪ್ರಾಯ ಕೇಳದೆ ಅಧಿಸೂಚನೆ ಹೊರಡಿಸಬಾರದು ಎಂದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಎರಡು ಬಾರಿ ಪತ್ರ ಬರೆಯಲಾಗಿದೆ. ಅವರ ಭೇಟಿಗೂ ಕಾಲಾವಕಾಶ ಕೇಳಲಾಗಿತ್ತು. ಆದರೆ, ಅವಕಾಶವನ್ನೇ ನೀಡಲಿಲ್ಲ' ಎಂದು ಹೇಳಿದರು.

ಸಾಮೂಹಿಕ ರಾಜೀನಾಮೆ...
`ಅಧಿಸೂಚನೆ ಹೊರಡಿಸದಂತೆ ಸದನದಲ್ಲಿ ನಿರ್ಣಯ ಅಂಗೀಕರಿಸೋಣ. ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ, ಪಕ್ಷಾತೀತವಾಗಿ ಎಲ್ಲ ಪಕ್ಷಗಳ ಪ್ರತಿನಿಧಿಗಳು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡೋಣ' ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಹೇಳಿದರು.
ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು.

ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ಅರ್ಜಿ ನ್ಯಾಯಮಂಡಳಿಯಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಕಾವೇರಿ ಕಷ್ಟ
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಕಾವೇರಿ ಕಣಿವೆಯ ಜನರ ಹಿತ ಕಾಪಾಡಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಅಥವಾ ಕಾನೂನು ಹೋರಾಟ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಪರಿಷತ್ತಿನಲ್ಲಿ ಒತ್ತಾಯಿಸಿದರು.
ಆದಿಚುಂಚನಗಿರಿ ಶ್ರೀಗಳಿಗೆ ಭಾರತರತ್ನಕ್ಕೆ ಒತ್ತಾಯ
ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ವಿಧಾನ ಪರಿಷತ್ ಸಭಾನಾಯಕ ವಿ.ಸೋಮಣ್ಣ ಆಗ್ರಹಿಸಿದರು.

ಸಂತಾಪ ಸೂಚಿಸಿ ಮಾತನಾಡಿದ ಅವರು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು. ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಸ್ವಾಮೀಜಿ ಅವರಿಗೆ ಭಾರತರತ್ನ ನೀಡುವುದಕ್ಕೆ ಪಕ್ಷದ ಅಭ್ಯಂತರ ಇಲ್ಲ ಎಂದರು.

ಮಾದಕವಸ್ತು ಮಾಫಿಯಾ
ಕರಾವಳಿ ಜಿಲ್ಲೆಗಳಲ್ಲಿ ಮಾದಕವಸ್ತು ಪೂರೈಕೆ ಜಾಲ ಬಲವಾಗಿ ಬೇರುಬಿಟ್ಟಿದ್ದು, ಪ್ರಮುಖ ಕಾಲೇಜುಗಳ ಆಸುಪಾಸಿನ ಅಂಗಡಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಲು ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಗಣೇಶ್ ಕಾರ್ಣಿಕ್ ಪರಿಷತ್ತಿನಲ್ಲಿ ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಈ ಜಾಲದಿಂದಾಗಿ ಮೂರು ದಿನಗಳ ಹಿಂದೆ ಮಂಗಳೂರಿನ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ದಾಳಿ ನಡೆಸಿದಾಗ ಕೆಲವು ದಿನಗಳ ಕಾಲ ಚಟುವಟಿಕೆ ನಿಲ್ಲುತ್ತದೆ. ಬಳಿಕ ಯಥಾಸ್ಥಿತಿ ಇರುತ್ತದೆ. ಈ ಜಾಲದ ಬೇರು ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ನ ಎಂ.ಸಿ. ನಾಣಯ್ಯ, `ರಾಜ್ಯದಾದ್ಯಂತ ಶಾಲಾ ಕಾಲೇಜುಗಳ ಸುತ್ತಮುತ್ತ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಗೆ ಅಕ್ರಮ ಜಾಲದ ಬಗ್ಗೆ ಮಾಹಿತಿ ಇದೆ. 3-4 ತಿಂಗಳಿಗೊಮ್ಮೆ ಮಾದಕ ವಸ್ತುಗಳನ್ನು ಹಿಡಿದು ಮಾಮೂಲಿ ವಸೂಲಿ ಮಾಡಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಸಭಾಪತಿ ವಿಮಲಾ ಗೌಡ, `ಬೆಂಗಳೂರಿನಲ್ಲಿ ಹಬ್ಬಿರುವ ಜಾಲದ ಬಗ್ಗೆ ಈ ಹಿಂದೆ ನಾನು ಸಹ ಗಮನ ಸೆಳೆದಿದ್ದೆ. ಈ ಮಾಫಿಯಾಕ್ಕೆ ಕೊನೆ ಹಾಡಬೇಕು' ಎಂದರು. ಗೃಹ ಸಚಿವ ಆರ್. ಅಶೋಕ ಪ್ರತಿಕ್ರಿಯಿಸಿ, ವರದಿ ತರಿಸಿಕೊಂಡು ಬುಧವಾರ ಉತ್ತರ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT