ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಸೂಚನೆ ಹೊರಬಿದ್ದ ದಿನವೇ ನಾಮಪತ್ರ ಸಲ್ಲಿಕೆ!

Last Updated 17 ಮಾರ್ಚ್ 2011, 7:20 IST
ಅಕ್ಷರ ಗಾತ್ರ

ಬಂಗಾರಪೇಟೆ: ಉಪಚುನಾವಣೆಯ ಅಧಿಸೂಚನೆ ಹೊರಬಿದ್ದ ದಿನವೇ ಬಿಜೆಪಿಯ ಅಭ್ಯರ್ಥಿಯಾಗಿ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಂ.ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸಿ ದಾಖಲೆ ನಿರ್ಮಿಸಿದರು.ಪಟ್ಟಣದ ಎ.ಪಿ.ಎಂ.ಸಿ.ಯಾರ್ಡ್ ಎದುರಿಗೆ ಬುಧವಾರ ಏರ್ಪಡಿಸಲಾಗಿದ್ದ ಕ್ಷೇತ್ರಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ನಂತರ ಅಲ್ಲಿಂದ ತೆರೆದ ಟೆಂಪೊದಲ್ಲಿ ತಹಶೀಲ್ದಾರ್ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ಅವರು ಚುನಾವಣಾಧಿಕಾರಿ ಸೈಯೀದಾ ನೀಲೂಫರ್ ಜಬೀನಾ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಕ್ಷೇತ್ರಾಭಿವೃದ್ಧಿಯೇ ನನ್ನ ಕನಸು. ಅದಕ್ಕಾಗಿಯೇ ಕಳೆದ 3 ತಿಂಗಳ ಅವಧಿಯಲ್ಲಿ ಕ್ಷೇತ್ರಕ್ಕೆ  75-80 ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಮುಖ್ಯಮಂತ್ರಿಗಳ ಮನ ಒಲಿಸಿ ಕ್ಷೇತ್ರಕ್ಕೆ ತಂದಿದ್ದೇನೆ. 7 ಸಾವಿರ ಮನೆಗಳು ಮಂಜೂರಾಗಿವೆ. ಈ ಬಾರಿಯ ಉಪ ಚುನಾವಣೆಯಲ್ಲಿ ಕ್ಷೇತ್ರದ ಮತದಾರರೆಲ್ಲರೂ ನನ್ನನ್ನು ಆಯ್ಕೆ ಮಾಡಿ ಆಶೀರ್ವದಿಸಿ ಗೆಲ್ಲಿಸಿದರೆ ಇನ್ನಷ್ಟು ಉತ್ತಮ ಅಭಿವೃದ್ಧಿ ಕೆಲಸ ಮಾಡುವುದಾಗಿ ಹೇಳಿದರು.

ಯಡಿಯೂರಪ್ಪ ನೇತೃತ್ವದ ಸರ್ಕಾರವು ಈವರೆವಿಗೂ ರಾಜ್ಯ ಕಾಣದಂತಹ ಪ್ರಗತಿಪರ ಆಡಳಿತವನ್ನು ನೀಡಿದೆ. ದೀನ ದಲಿತರು, ಬಡವರು, ರೈತರು ಬಿಜೆಪಿ ಸರ್ಕಾರವನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿಯೇ ಇಂದು ಇಡೀ ರಾಜ್ಯವೇ ಬಿಜೆಪಿಮಯವಾಗಿದೆ. ಕ್ಷೇತ್ರದ ಜನತೆಯು ಕಳೆದ 3 ತಿಂಗಳಿನಿಂದ ಲಭಿಸಿರುವ ಕೊಡುಗೆಗಳನ್ನು ನೋಡುತ್ತಿದ್ದಾರೆ. ಅವರಿಗೂ ಬಿಜೆಪಿ ಬೇಕು ಎಂಬ ಅರಿವಾಗಿದೆ ಎಂದರು.

ತಡ ಆಗಮನ: ಬೆಳಗ್ಗೆ 11ಕ್ಕೆ ಸಭೆ ಏರ್ಪಾಡಾಗಿತ್ತು. ಆದರೆ ನಾರಾಯಣಸ್ವಾಮಿ ಮಧ್ಯಾಹ್ನ 2 ಗಂಟೆಗೆ ಬಂದರು. ನಂತರ ಬಿಜೆಪಿ ಕೇಂದ್ರ ಘಟಕದ ಅಧ್ಯಕ್ಷ ಈಶ್ವರಪ್ಪ, ಶಾಸಕ ಸಿ.ಟಿ.ರವಿ ಬಂದರು. ಅಷ್ಟರೊಳಗಾಗಿ ಹಸಿವಿನಿಂದ ಬಸವಳಿದಿದ್ದ ಕಾರ್ಯಕರ್ತರು ತಿಂಡಿ ಪೊಟ್ಟಣಗಳನ್ನು ವಿತರಿಸುತ್ತಿದ್ದ ಕಡೆಗೆ ಗೇಟ್ ಮುರಿದು ನುಗ್ಗಿದ್ದರಿಂದ ಸ್ವಲ್ಪ ಹೊತ್ತು ಪರಿಸ್ಥಿತಿ ಉದ್ರಿಕ್ತವಾಗಿತ್ತು. ಅವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಕೊನೆಯ ಗಳಿಗೆಯಲ್ಲಿ ವೇದಿಕೆ ಏರಿದ ಪಕ್ಷದ ಪ್ರಮುಖರು ಮಾತನಾಡಿದರು. ಮಧ್ಯಾಹ್ನ 3 ಸಮೀಪಿಸಿದ್ದರಿಂದ ಆತುರಾತುರವಾಗಿ ಟೆಂಪೊವಿನಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿದರು. ಪ್ರಮುಖರ ಆಗಮನ, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಪಟಾಕಿ ಸಿಡಿಸಿದರು. ಜೈಕಾರ ಹಾಕಿದರು. ಬಾವುಟಗಳನ್ನು ಗಾಳಿಯಲ್ಲಿ ಹಾರಿಸಿದರು. 

ನಾಮಪತ್ರ ಸಲ್ಲಿಸುವಾಗ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ, ಕರ್ನಾಟಕ ವಿದ್ಯುತ್ ಕಾರ್ಖಾಣೆ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಯ್ಯ, ಬಜರಂಗದಳ ಮೂರ್ತಿ, ಕುಟ್ಟಿ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT