ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರ ಆಯ್ಕೆಗೆ ಶ್ರೀನಿವಾಸಗೌಡ ವಿರೋಧ

ಮುದುವತ್ತಿ ಗ್ರಾಮ ಪಂಚಾಯಿತಿ
Last Updated 13 ಡಿಸೆಂಬರ್ 2012, 10:10 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಮುದುವತ್ತಿ ಗ್ರಾ.ಪಂ.ಅಧ್ಯಕ್ಷರ ಆಯ್ಕೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಹಾಗೂ ಬೆಂಬಲಿಗರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿ ಎಂದು ಒತ್ತಾಯಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಅಧ್ಯಕ್ಷರ ಆಯ್ಕೆಗಾಗಿ ಚಲಾಯಿಸಿದ ಒಟ್ಟು 18 ಸ್ಥಾನಗಳಲ್ಲಿ ರಾಧಮ್ಮ (ಜೆಡಿಎಸ್ ಬೆಂಬಲಿತ ಅಭ್ಯರ್ಥಿ), ಅಶ್ವತ್ಥಮ್ಮ (ವರ್ತೂರು ಬೆಂಬಲಿತ ಅಭ್ಯರ್ಥಿ) ತಲಾ 9 ಮತ ಪಡೆದಿದ್ದರು. ಇದರಿಂದ ಲಾಟರಿ ಮೂಲಕ ಆಯ್ಕೆ ಮಾಡಬೇಕಿತ್ತು. ತಹಶೀಲ್ದಾರ್ ಏಕಾಏಕಿ ವರ್ತೂರು ಬಣಕ್ಕೆ ಗೆಲುವು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ತಹಶೀಲ್ದಾರ್ ಅವರನ್ನು ವರ್ತೂರು ಖರೀದಿಸಿದ್ದಾರೆ. ಕಾನೂನಿನ ಪ್ರಕಾರ ಚುನಾವಣೆ ನಡೆದಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ, ವಿಜೇತರನ್ನು ಒಂದು ಸಾರಿ ಘೋಷಿಸಿದ ನಂತರ ನಾವು ಅಸಿಂಧು ಎನ್ನಲು ಬರುವುದಿಲ್ಲ. ನಿಮ್ಮ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಸಲಹೆ ನೀಡಿದರು.

ಘಟನೆ ಕುರಿತು `ಪ್ರಜಾವಾಣಿ' ಜತೆ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಎಂ.ಗೋವಿಂದಗೌಡ, ನಮಗೆ ಆಗಿರುವ ಅನ್ಯಾಯದ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೆವೆ ಎಂದು ಹೇಳಿದರು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಸ್ಥಳಕ್ಕೆ ಆಗಮಿಸಿದರು.

ನಾವು ಖರೀದಿಸಿಲ್ಲ
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್, ಮಾಜಿ ಸಚಿವರು ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಶಾಹಿ ಚುಕ್ಕೆ ಇನ್ನೊಂದೆಡೆ ಹರಡಿದ್ದರಿಂದ ಮತ ಗುರುತಿಸಲು ಗೊಂದಲ ಉಂಟಾಗಿದ್ದು ನಿಜ. ಇದನ್ನು ತಹಶೀಲ್ದಾರ್ ಮತ್ತು ಚುನಾವಣಾಧಿಕಾರಿ ಪರಿಶೀಲಿಸಿ ತಮ್ಮ ಅಭ್ಯರ್ಥಿಗೆ ಗೆಲುವು ಎಂದು ಪ್ರಕಟಿಸಿದರು. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದಾರೆ.

`ಅಧಿಕಾರಿಗಳನ್ನು ನಾವೇನು ಖರೀದಿಸಿಲ್ಲ. ಹಣಕ್ಕೆ ಮಾರು ಹೋಗುವ ಅಧಿಕಾರಿಗಳು ಯಾರು ಇಲ್ಲಿಲ್ಲ. ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ಜೆಡಿಎಸ್ ಮುಖಂಡರು ಈ ರೀತಿ ಮಾತನಾಡಿದ್ದಾರೆ ಎಂದರು.

ಗ್ರಾ.ಪಂ. ಅಧ್ಯಕ್ಷರ ಆಯ್ಕೆ
ಕೊಂಡರಾಜನಹಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ರತ್ನಮ್ಮ, ಉಪಾಧ್ಯಕ್ಷರಾಗಿ ವಿಜಯಮ್ಮ, ಚೌಡದೇನಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಆಂಜಿನಮ್ಮ, ಉಪಾಧ್ಯಕ್ಷರಾಗಿ ವಿ.ಎಂ.ರವಿಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.

ದೊಡ್ಡ ಹಸಾಳ ಗ್ರಾ.ಪಂ.ಉಪಾಧ್ಯಕ್ಷರಾಗಿ ಎ.ರಘುಕುಮಾರ್, ಚನ್ನಸಂದ್ರ ಗ್ರಾ.ಪಂ.ಅಧ್ಯಕ್ಷೆಯಾಗಿ ಸುಧಾ ರಾಜಣ್ಣ, ಮುದುವತ್ತಿ ಗ್ರಾ.ಪಂ. ಅಧ್ಯಕ್ಷರಾಗಿ ಅಶ್ವತ್ಥಮ್ಮ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT