ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರ ವಾರ್ಡ್‌ಗೆ 67 ಕೋಟಿ, ಪಕ್ಕದ ವಾರ್ಡ್‌ಗೆ 3 ಕೋಟಿ

Last Updated 6 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಜೆಟ್ ಮಂಡಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ವಾರ್ಡ್‌ಗೆ 67 ಕೋಟಿ ಅನುದಾನ; ಅದೇ ಪಕ್ಕದ ವಾರ್ಡ್‌ಗೆ ಕೇವಲ ಮೂರು ಕೋಟಿ ಅನುದಾನ ಹಂಚಿಕೆ..

ಬಿಬಿಎಂಪಿಯ 2012-13ನೇ ಸಾಲಿನ ಬಜೆಟ್‌ನಲ್ಲಿ ತಮ್ಮ ವಾರ್ಡ್‌ಗೆ ಅನುದಾನ ಹಂಚಿಕೆಯಲ್ಲಿ ಪಕ್ಷಪಾತ ಹಾಗೂ ಭಾರಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ ಬ್ಯಾಟರಾಯನಪುರ ವಾರ್ಡ್‌ನ ಸದಸ್ಯೆ ಇಂದಿರಾ ಅಂಕಿ-ಅಂಶಗಳ ಸಹಿತ ಸಭೆಯ ಗಮನಸೆಳೆಯುವ ತಮ್ಮ ಮನದಾಳದ ನೋವು ತೋಡಿಕೊಂಡರು.

ಶುಕ್ರವಾರ ಬಜೆಟ್ ಮೇಲಿನ ಅಂತಿಮ ದಿನದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ. ಮುನೀಂದ್ರಕುಮಾರ್ ಅವರು ಪ್ರತಿನಿಧಿಸುವ ಜಕ್ಕೂರು ವಾರ್ಡ್‌ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್‌ನಲ್ಲಿ 67 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದರೆ, ನನ್ನ ವಾರ್ಡ್‌ಗೆ ಕೇವಲ 3 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಲಾಗಿದೆ. ಇಷ್ಟೊಂದು ತಾರತಮ್ಯ ಹಾಗೂ ಅನ್ಯಾಯ ಏಕೆ?~ ಎಂದು ಪ್ರಶ್ನಿಸಿದರು.

`ಜಕ್ಕೂರು ವಾರ್ಡ್‌ಗಿಂತ ಬ್ಯಾಟರಾಯನಪುರ ವಾರ್ಡ್ ವಿಸ್ತೀರ್ಣದಲ್ಲೂ ದೊಡ್ಡದು. ಜಕ್ಕೂರು ವಾರ್ಡ್‌ನ ಜನ 4.05 ಕೋಟಿ ರೂಪಾಯಿ ತೆರಿಗೆ ಪಾವತಿಸಿದರೆ, ನನ್ನ ವಾರ್ಡ್‌ನ ಜನತೆ 8.92 ಕೋಟಿ ರೂಪಾಯಿ ತೆರಿಗೆ ಕಟ್ಟುತ್ತಿದ್ದಾರೆ. ಅಲ್ಲದೆ, 110 ಹಳ್ಳಿಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 135 ಕೋಟಿ ರೂಪಾಯಿಗಳಲ್ಲೂ ಜಕ್ಕೂರು ವಾರ್ಡ್‌ಗೆ ಅನುದಾನ ಸಿಗಲಿದೆ. ಆದರೆ, ನಾನು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದೀನಿ ಎಂಬ ಕಾರಣಕ್ಕೆ ಇಷ್ಟೊಂದು ಮೋಸವೇ?~ ಎಂದು ಅವರು ಭಾವುಕರಾಗಿ ಪ್ರಶ್ನಿಸಿದರು.

`ನನ್ನ ಕ್ಷೇತ್ರದಲ್ಲಿ 68 ಸಾವಿರ ಮತದಾರರಿದ್ದಾರೆ. ಪಕ್ಕದ ವಾರ್ಡ್‌ನ ಸದಸ್ಯರು ಕೋಟಿ ಕೋಟಿ ರೂಪಾಯಿ ಅನುದಾನ ತಂದರೆ, ನೀವು ಎ.ಸಿ. ರೂಂನಲ್ಲಿ ಕೂತು ಬರಲು ಪಾಲಿಕೆ ಸಭೆಗೆ ಹೋಗಿ ಬರುತ್ತಿದ್ದೀರಾ ಎಂದು ವಾರ್ಡ್‌ನ ಜನ ಪ್ರಶ್ನಿಸುತ್ತಿದ್ದಾರೆ.

ಇದಕ್ಕೆ ನಾನು ಏನು ಉತ್ತರ ಹೇಳಲಿ. ಈ ಅನ್ಯಾಯವನ್ನು ಸರಿಪಡಿಸಲು ಆಯುಕ್ತರು ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿ ಮೇಯರ್ ಪೀಠದ ಮುಂಭಾಗಕ್ಕೆ ತೆರಳಿ ಧರಣಿ ನಡೆಸಲು ಮುಂದಾದರು.

 ಆದರೆ, ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್, ಕಾಂಗ್ರೆಸ್‌ನ ಹಿರಿಯ ಸದಸ್ಯ ಎಂ. ನಾಗರಾಜ್ ಮತ್ತಿತರರು ಮನವೊಲಿಸುವ ಮೂಲಕ ಇಂದಿರಾ ಅವರನ್ನು ತಮ್ಮ ಆಸನದಲ್ಲಿ ಕೂರಿಸುವಲ್ಲಿ ಸಫಲರಾದರು.

ಇಂದಿರಾ ಅವರನ್ನು ಬೆಂಬಲಿಸಿ ಮಾತನಾಡಿದ ಮಾಜಿ ಮೇಯರ್ ಕೆ. ಚಂದ್ರಶೇಖರ್, `ಮೇಯರ್ ಹಾಗೂ ಉಪ ಮೇಯರ್ ತಮ್ಮ ಅನುದಾನದಲ್ಲಿ ಇಂತಹ ವಾರ್ಡ್‌ನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ತಾರತಮ್ಯ ನಿವಾರಿಸಬೇಕು. ಕೊನೇ ಗಳಿಗೆವರೆಗೆ ಅನುದಾನ ಖರ್ಚು ಮಾಡದೆ ಉಳಿಸಿಕೊಂಡರೂ ಪ್ರಯೋಜನವಾಗುವುದಿಲ್ಲ~ ಎಂದು ಸಲಹೆ ಮಾಡಿದರು.

ಮಹಿಳಾ ವಾರ್ಡ್‌ಗಳ ಅನುದಾನ 25 ಲಕ್ಷ ಹೆಚ್ಚಿಸಿ: ಇದಕ್ಕೂ ಮುನ್ನ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಸದಸ್ಯೆ ಆಶಾ ಸುರೇಶ್, `ಮಹಿಳಾ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಲ್ಲಿ ಗಗನಯಾತ್ರಿ ಕಲ್ಪನಾ ಚಾವ್ಲಾ ಹೆಸರಿನಲ್ಲಿ ಮಹಿಳೆಯರ ಸಾಮಾಜಿಕ ಮತ್ತು ಶೈಕ್ಷಣಿಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ನಿಗದಿಪಡಿಸಿರುವ ತಲಾ ರೂ. 5 ಲಕ್ಷ ರೂಪಾಯಿಗಳ ಅನುದಾನವನ್ನು 25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು~ ಎಂದು ಒತ್ತಾಯಿಸಿದರು.

`ಮಹಿಳಾ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಕಲ್ಪನಾ ಚಾವ್ಲಾ ಹೆಸರಿನಲ್ಲಿ ಕೇವಲ 5 ಲಕ್ಷ ಅನುದಾನ ನೀಡುವುದು ಅಗೌರವ. ಕನಿಷ್ಠ 25 ಲಕ್ಷ ರೂಪಾಯಿಗಳ ಅನುದಾನವನ್ನಾದರೂ ಕೊಡಿ~ ಎಂದು ಅವರು ಆಗ್ರಹಿಸಿದಾಗ ಮಹಿಳಾ ಸದಸ್ಯರು ಪಕ್ಷ-ಭೇದ ಮರೆತು ಮೇಜು ಕುಟ್ಟಿ ಬೆಂಬಲ ಸೂಚಿಸಿದರು.

ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿ
ಬಿಜೆಪಿ ಸದಸ್ಯೆ ಲತಾ ನರಸಿಂಹಮೂರ್ತಿ ಮಾತನಾಡಿ, `ಬೀದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ನೀಡುವ ಬದಲು ಎಲ್ಲ ವಾರ್ಡ್‌ಗಳಲ್ಲಿಯೂ ಸುಸಜ್ಜಿತ ಮಾರುಕಟ್ಟೆ ನಿರ್ಮಿಸುವುದು ಸೂಕ್ತ~ ಎಂದು ಸಲಹೆ ಮಾಡಿದರು.

`ವ್ಯಾಪಾರಿಗಳು ಬೀದಿ ಬದಿಯಲ್ಲಿ ತಳ್ಳುವ ಗಾಡಿಗಳನ್ನಿಟ್ಟು ವ್ಯಾಪಾರ ಮಾಡಿದರೆ ಮತ್ತೆ ಅವರನ್ನು ನೀವೇ ತೆರವುಗೊಳಿಸುತ್ತೀರಿ. ಹೀಗಾಗಿ, ಪ್ರತಿ ವಾರ್ಡ್‌ಗಳಲ್ಲಿಯೂ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಪಾಲಿಕೆ ಮುಂದಾಗಬೇಕು~ ಎಂದು ಅವರು ಒತ್ತಾಯಿಸಿದರು.

ಕೇಂದ್ರ ಸರ್ಕಾರ `ನರ್ಮ್~ ಯೋಜನೆಯಡಿ ನೀಡುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ಮಾಡಿದ ಕಾಂಗ್ರೆಸ್‌ನ ಎಂ. ಉದಯಶಂಕರ್, ಜೆ.ಸಿ. ರಸ್ತೆಯ ಮಿನರ್ವ ವೃತ್ತದಿಂದ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕೆ ಶೀಘ್ರ ಶಂಕುಸ್ಥಾಪನೆ ಶೀಘ್ರ ಶಂಕುಸ್ಥಾಪನೆ ನೆರವೇರಿಸುವಂತೆ ಮನವಿ ಮಾಡಿದರು.

ಕೆಂಪೇಗೌಡ ಪ್ರಾಚ್ಯವಸ್ತು ಸಂಗ್ರಹಾಲಯವನ್ನು ನಿರ್ವಹಣೆ ಮಾಡುವಲ್ಲಿ ಆಸಕ್ತಿ ತೋರದ ಕ್ಯುರೇಟರ್ ದೇವರಕೊಂಡಾರೆಡ್ಡಿ ಅವರನ್ನು ಬದಲಾಯಿಸುವಂತೆ ಎಂ. ನಾಗರಾಜ್ ಒತ್ತಾಯಿಸಿದರು. ಸೋಮವಾರದ ವೇಳೆಗೆ ಅವರನ್ನು ಬದಲಾವಣೆ ಮಾಡುವುದಾಗಿ ಆಯುಕ್ತರು ತಿಳಿಸಿದ್ದಾರೆ ಎಂದು ಮೇಯರ್ ಸಭೆಗೆ ತಿಳಿಸಿದರು.

ಮಾಜಿ ಉಪ ಮೇಯರ್ ಎಸ್. ಹರೀಶ್, ಕಾಂಗ್ರೆಸ್‌ನ ಟಿ. ಮಲ್ಲೇಶ್, ಪಕ್ಷೇತರ ಸದಸ್ಯ ತಿಮ್ಮನಂಜಯ್ಯ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಚರ್ಚೆ ಮುಕ್ತಾಯ ಬುಧವಾರ ಪ್ರತಿಕ್ರಿಯೆ
ಬಿಬಿಎಂಪಿಯ 2012-13ನೇ ಸಾಲಿನ ಬಜೆಟ್ ಮೇಲೆ ಸೋಮವಾರದಿಂದ ಪ್ರಾರಂಭವಾದ ಚರ್ಚೆ ಶುಕ್ರವಾರ ಅಂತ್ಯಗೊಂಡಿತು. ಬುಧವಾರ ಮಧ್ಯಾಹ್ನ 3 ಗಂಟೆಗೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಪ್ರತಿಕ್ರಿಯೆ ನೀಡಲಿದ್ದಾರೆ.


ಸಭೆಯಲ್ಲಿ ಕೇಳಿಸಿದ್ದು..
ಇದು ನಾಟಿ ಕೋಳಿ ಸಾರಿಗೆ ಮಸಾಲೆ ಹಾಕದ ಬಜೆಟ್. ಯಾವುದೇ ಸಾರ-ಸತ್ವ ಇಲ್ಲ. ಅಲ್ಲದೆ, ಇಂಧನ ಇಲ್ಲದ ಶರವೇಗದ ಬಜೆಟ್
- ಪ್ರಕಾಶ್, ಜೆಡಿಎಸ್ ಸದಸ್ಯ

ಗ್ರೀನ್ ಸಿಟಿ, ಕ್ಲೀನ್ ಸಿಟಿ, ಕೂಲ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಇದೀಗ `ಗಾರ್ಬೇಜ್ ಸಿಟಿ~ಯಾಗಿ ಪರಿವರ್ತನೆಯಾಗಿದೆ
- ಎಂ. ನಾಗರಾಜ್, ಕಾಂಗ್ರೆಸ್ ಸದಸ್ಯ

ಮಹಿಳಾ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಗಗನಯಾತ್ರಿ ಕಲ್ಪನಾ ಚಾವ್ಲಾ ಹೆಸರಿನಲ್ಲಿ ಕೇವಲ 5 ಲಕ್ಷ ಅನುದಾನ ನೀಡುವುದು ಅಗೌರವ. ಕನಿಷ್ಠ 25 ಲಕ್ಷ ರೂಪಾಯಿ ಅನುದಾನವನ್ನಾದರೂ ಕೊಡಿ
- ಆಶಾ ಸುರೇಶ್, ಕಾಂಗ್ರೆಸ್ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT