ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರವಿರುದ್ಧ ಕ್ರಮಕ್ಕೆ ಆಗ್ರಹ

ಕುಕನೂರು ಪಂಚಾಯಿತಿ ಉದ್ಯೋಗ ಖಾತರಿ ಅವ್ಯವಹಾರ, ಕಾರ್ಯದರ್ಶಿ ಭಾಗಿ
Last Updated 8 ಡಿಸೆಂಬರ್ 2012, 6:35 IST
ಅಕ್ಷರ ಗಾತ್ರ

ಯಲಬುರ್ಗಾ: ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕುಕನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 2ಕೋಟಿಯಷ್ಟು ಅವ್ಯವಹಾರ ನಡೆದಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜೊತೆಗೆ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು ಅವರು ಕೂಡಾ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಜಿಪಂ ಸದಸ್ಯ ಈರಪ್ಪ ಕುಡಗುಂಟಿ ಹೇಳಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಕನೂರು ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಇನ್ನೂ ನಡೆಸಲು ಕೆಲವರು ಹುನ್ನಾರ ನಡೆಸಿದ್ದಾರೆ ಅದಕ್ಕೆ ಅವಕಾಶ ಕೊಡದಿರುವ ಕಾರಣ ತಮ್ಮ ವಿರುದ್ಧ ಕೆಲವರು ಟೀಕೆ ಮಾಡುತ್ತಿದ್ದಾರೆ. ಅಷ್ಟಕ್ಕು ದ್ಯಾಮಣ್ಣ ಹಾಗೂ ನವೀನ ಉದ್ಯೋಗ ಖಾತ್ರಿ ಯೋಜನೆಯ ಹಣ ಕೇಳಲು ಅವರೇನು ಲೇಬರಾ, ಹಣ ಕೇಳಲು ಅವರ‌್ಯಾರು, ಈ ಕುರಿತು ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಯೋಜನೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಜಿಲ್ಲಾಮಟ್ಟದಲ್ಲಿ ಆರೋಪಗಳು ಕೇಳಿಬರುತ್ತಿವೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿರುವುದೇ ಇದಕ್ಕೆಲ್ಲಾ ಕಾರಣ ಎಂದು ಜಿಪಂ ಸದಸ್ಯರಾದ ಅರವಿಂದಗೌಡ ಪಾಟೀಲ, ಅಶೋಕ ತೋಟದ ಆಕ್ರೋಶ ವ್ಯಕ್ತಪಡಿಸಿದರು.

ಖಾತ್ರಿ ಯೋಜನೆ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳನ್ನು ವೀಕ್ಷಣೆಗೆ ಕಾರ್ಯಕ್ರಮವನ್ನು ರೂಪಿಸಿ ಕೆಲಸ ಆಗಿದ್ದನ್ನು ಗಮನಿಸಿ ವೇತನ ಪಾವತಿಸಬೇಕು. ಇಲ್ಲದಿದ್ದರೆ ಹಣ ಪಾವತಿಗೆ ಅವಕಾಶ ನೀಡುವುದಿಲ್ಲ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಪಿ. ಛಲವಾದಿ ಹಾಗೂ ಜಿಪಂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ನಿರ್ಮಿತಿ ಕೇಂದ್ರದವರು ನಿರ್ಮಿಸಿರುವ ಮಾಟಲದಿನ್ನಿ ಹೈಸ್ಕೂಲ್ ತೀರಾ ಕಳಪೆಯಾಗಿದೆ, ಅರ್ಧಮರ್ಧಮಾಡಿ ಕೈಬಿಟ್ಟಿದ್ದಾರೆ. ಈ ಬಗ್ಗೆ  ಕ್ರಮ ಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅರವಿಂದಗೌಡ ಪಾಟೀಲ ತಿಳಿಸಿದರು.

ಸದ್ರಿ ಶಾಲೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಳಪೆಯಾಗಿದ್ದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳಿದ್ದು, ನಿರ್ವಹಣೆಯ ಕೊರತೆಯಿಂದ ಸರಿಯಾಗಿ ಬಳಕೆಯಾಗದಿರುವುದು ಕಂಡು ಬರುತ್ತಿದೆ. ಆದರೆ ಕೆಲವೊಂದು ಶಾಲೆಗಳಲ್ಲಿ ಜಾಗದ ಸಮಸ್ಯೆಯಿಂದ ಶೌಚಾಲಯ ನಿರ್ಮಾಣಕ್ಕೆ ಸಾಧ್ಯವಾಗಿಲ್ಲ, ಅದಕ್ಕೆ ಮಂಜುರಾಗಿದ್ದ ಹಣ ಶಾಲಾ ಮುಖ್ಯೋಪಾಧ್ಯಾಯರ ಖಾತೆಗೆ ಜಮೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ವೆಂಕಟೇಶ ತಿಳಿಸಿದರು.

ನೌಕರಿ ಬೇಸರವಾಗಿದ್ರೆ ಬಿಟ್ಟು ಹೋಗಿ: ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಯಾವೊಂದು ಅಭಿವೃದ್ಧಿ ಕೆಲಸ ಕಂಡು ಬರುತ್ತಿಲ್ಲ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಯಾವೊಂದು ಅಂಗನವಾಡಿ ಕೇಂದ್ರ ಸರಿಯಾಗಿ ನಡೆಯುತ್ತಿಲ್ಲ, ಮೇಲ್ವಿಚಾರಕರಂತೂ ಮನೆಯಲ್ಲಿ ಕುಳಿತು ನೌಕರಿ ಮಾಡಿದಂತೆ ಕಾಣುತ್ತಿದೆ. ತಾಲ್ಲೂಕು ಅಧಿಕಾರಿ ಅವರ ಮೇಲೆ ಹಾಕಿ ಕಚೇರಿಗೆ ತಿಳಿದಾಗ ಬಂದು ಹೋಗುವುದನ್ನು ಬಿಟ್ಟರೆ ಬೇರೆನೂ ಮಾಡುತ್ತಿಲ್ಲ, ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂಬ ಸಾಮಾನ್ಯ ಮಾಹಿತಿ ತಿಳಿದುಕೊಳ್ಳದೇ ಇರುವ ಅಧಿಕಾರಿ ತಾಲ್ಲೂಕಿನಲ್ಲಿರುವುದೇ ಅವಮಾನ.

ದಯಮಾಡಿ ನೌಕರಿ ಬೇಸರ ವಾಗಿದ್ರೆ ಬಿಟ್ಟು ಹೋಗಿ, ಬೇರೆ ಯಾರಾದ್ರೂ ಬರ‌್ತಾರೆ ಎಂದು ಈರಪ್ಪ ಕುಡಗುಂಟಿ ಗುಡುಗಿದರು.
ಚಿಕ್ಕಬನ್ನಿಗೋಳ-ಕಡಬಲಕಟ್ಟಿ ಗ್ರಾಮದ ಸಂಪರ್ಕ ರಸ್ತೆ ಹದೆಗೆಟ್ಟಿದ್ದು, ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ ತಳವಾರ ಒತ್ತಾಯಿಸಿದರು.

ಕುದ್ರಿಮೋತಿ ಗ್ರಾಮದ ಪ್ರೌಢ ಶಾಲಾ ಕಟ್ಟಡಕ್ಕೆ ನಿವೇಶನದ ಸಮಸ್ಯೆ ಇರುವುದಾದರೆ ಸರ್ಕಾರಿ ಜಮೀನು ಲಭ್ಯವಿದ್ದು, ಅದನ್ನು ಬಳಸಿಕೊಂಡು ಶೀಘ್ರದಲ್ಲಿ ಕಾಮಗಾರಿಯನ್ನು ಶುರು ಮಾಡುವಂತೆ ಜಿಪಂ ಸದಸ್ಯ ಅಶೋಕ ತೋಟದ ಸಲಹೆ ನೀಡಿದರು.
ತಾಪಂ ಅಧ್ಯಕ್ಷೆ ಲಕ್ಷ್ಮವ್ವ ಹಂಪಣ್ಣ ರಾಠೋಡ ಅಪ್ಪಿತಪ್ಪಿಯೂ ಒಂದು ಮಾತು ಕೂಡಾ ಆಡದೇ ಸಂಪೂರ್ಣ ಮೌನದಲ್ಲಿಯೇ ಸುಮಾರು ಮೂರ‌್ನಾಲ್ಕು ಗಂಟೆ ಅವಧಿಯ ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ತಾಪಂ ಉಪಾಧ್ಯಕ್ಷೆ ಮಹಾದೇವಿ ಕಂಬಳಿ, ಜಿಪಂ ಸದಸ್ಯ ರಾಮಣ್ಣ ಸಾಲಭಾವಿ ಹಾಜರಿದ್ದರು.

ತೋಟಗಾರಿಕೆ, ಕೃಷಿ, ರೇಷ್ಮೆ, ಸಮಾಜ ಕಲ್ಯಾಣ, ಜೆಸ್ಕಾಂ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳು ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT