ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೆ ವಿರುದ್ಧ ವಾಗ್ದಾಳಿ; ರಾಜೀನಾಮೆಗೆ ಆಗ್ರಹ

Last Updated 9 ಸೆಪ್ಟೆಂಬರ್ 2011, 8:25 IST
ಅಕ್ಷರ ಗಾತ್ರ

ತುಮಕೂರು: ಐದು ತಿಂಗಳ ಸುದೀರ್ಘ ಅವಧಿಯ ನಂತರ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪಕ್ಷಭೇದ ಮರೆತು ವಾಗ್ದಾಳಿ, ಆಕ್ರೋಶ, ಅಸಹನೆಯೊಂದಿಗೆ ಸದಸ್ಯರು ಅಧ್ಯಕ್ಷೆ ಯಶೋಧಾ ಗಂಗಪ್ಪ ಅವರ ವಿರುದ್ಧ ಮುಗಿಬಿದ್ದರು. ಇದರಿಂದಾಗಿ ಇಡೀ ಸಭೆ ಗದ್ದಲ, ಗೊಂದಲದ ಗೂಡಾಯಿತು.

ಸದಸ್ಯರ ಆಕ್ರೋಶಕ್ಕೆ ತತ್ತರಿಸಿದ ಯಶೋಧಾ ಗಂಗಪ್ಪ ಈವರಿಗೆ ತಪ್ಪಾಗಿದೆ. ಮುಂದೆ ಎಲ್ಲವನ್ನು ಸರಿ ಮಾಡೋಣ. ಸಾಮಾನ್ಯ ಸಭೆಯನ್ನು ನಿಯಮದಂತೆ ಕರೆಯುವುದಾಗಿ ಹೇಳಿದರು.

ಸದಸ್ಯ ಕೆ.ಪಿ.ಮಹೇಶ್ ಒತ್ತಾಯದಂತೆ ಸೆ. 26ರಂದು ನಗರಸಭೆ ವಿಶೇಷ ಸಭೆ ಕರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು. ಮುಂದಿನ ವಿಶೇಷ ಸಭೆಯಲ್ಲಿ ನಗರಸಭೆ ಒಂದು ವರ್ಷದ ಆಡಳಿತದ ಶ್ವೇತ ಪತ್ರ, ವಾರ್ಷಿಕ ಆಡಳಿತ ಮಂಡಳಿ ವರದಿ, ಅಭಿವೃದ್ಧಿ ಯೋಜನಾ ವರದಿ ಮಂಡಿಸುವುದಾಗಿ ಅಧ್ಯಕ್ಷರು ಪ್ರಕಟಿಸಿದರು.

ಕಾಕತಾಳೀಯವಾಗಿ ಯಶೋಧಾ ಗಂಗಪ್ಪ ಅಧ್ಯಕ್ಷೆಯಾಗಿ ವರ್ಷ ಪೂರೈಸಿ ಗುರುವಾರಕ್ಕೆ ಹದಿನೈದು ದಿನ ಸಂದಿದ್ದನ್ನೇ ಮೂಲವಾಗಿಟ್ಟುಕೊಂಡ ಸದಸ್ಯರು ಚುಚ್ಚು ಮಾತಿನ ಮಳೆಗರೆದರು. ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡು 13 ತಿಂಗಳು ಕಳೆದಿದ್ದೀರಿ. ನಿಮ್ಮ ಸಾಧನೆ ಏನು ಎಂದು ಕೇಳಿದರು.

ನಗರದ ಕಸ ವಿಲೇವಾರಿ ಸಮಸ್ಯೆ, ಸ್ಥಗಿತಗೊಂಡಿರುವ ಕಾಮಗಾರಿ ಕುರಿತು ನಗರಸಭಾ ಸದಸ್ಯರು ಜಿಲ್ಲಾಧಿಕಾರಿಗೆ ಪತ್ರ ಬರೆದು ದೂರಿದ್ದರೆ, ಅದಕ್ಕೆ ಪ್ರತಿಯಾಗಿ ಕಸ ವಿಲೇವಾರಿ ಆಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಪತ್ರ ಬರೆದು ತಿಳಿಸಿದ್ದೀರಿ ಎಂದು ಸದಸ್ಯರಾದ ದೇವಿಕಾ, ರಾಜಣ್ಣ, ನಯಾಜ್ ಅಹಮದ್, ಎಂ.ಪಿ.ಮಹೇಶ್ ಮತ್ತಿತರರು ಚುಚ್ಚಿದರು.

ಈ ಅವಧಿಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಇದೇ ಮೊದಲ ಭಾರಿಗೆ ಎರಡೂವರೆ ಗಂಟೆಗೂ ಹೆಚ್ಚು ಕಾಲವನ್ನು ಶೂನ್ಯ ವೇಳೆಗೆ ನೀಡಲಾಯಿತು. ಶೂನ್ಯ ವೇಳೆಯನ್ನು ಮೊಟುಕುಗೊಳಿಸಿ ಅಜೆಂಡಾ ಮಂಡಿಸಲು ಮುಂದಾದಾಗ ಅಧ್ಯಕ್ಷರ ಕ್ರಮಕ್ಕೆ ಸದಸ್ಯರೆಲ್ಲರೂ ಖಂಡಿಸಿದರು.

ಎಲ್ಲ ಸದಸ್ಯರೂ ಒಮ್ಮೆಗೆ ಅಧ್ಯಕ್ಷೆ ವಿರುದ್ಧ ಮುಗಿಬಿದ್ದ ಕಾರಣ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಸಭೆಯಲ್ಲಿ ಕೇಳಿಸದಾಯಿತು. ಮಧ್ಯಾಹ್ನ 2 ಗಂಟೆಯವರಿಗೂ ನಡೆದ ಶೂನ್ಯ ವೇಳೆಯಲ್ಲಿ ಮಾತಿಗೆ ಮಾತು, ಅಧ್ಯಕ್ಷರ ವಿರುದ್ಧ ಚುಚ್ಚು ನುಡಿ, ರಾಜೀನಾಮೆಗೆ ಒತ್ತಾಯ, ಅಧ್ಯಕ್ಷೆಯ ಅಸಹಾಯಕತೆ ಕಂಡುಬಂತು.

ಹೆಡೆಮುರಿ ಕಟ್ಟಿದಂತೆ ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ಆಡಳಿತ ಕಾರ್ಯವೈಖರಿ, ಬಿಜೆಪಿ ಆಪರೇಷನ್ ಕಮಲ, ನಗರಸಭೆ ಆಡಳಿತದಲ್ಲಿ ಮೂಗು ತೂರಿಸುತ್ತಿರುವ ಶಾಸಕ ಎಸ್.ಶಿವಣ್ಣ ಅವರ ಆಪ್ತ ಸಹಾಯಕರ ವಿರುದ್ಧ ಸದಸ್ಯರು ವಾಗ್ದಾಳಿ ನಡೆಸಿದರು. ಅಭಿವೃದ್ಧಿಯಲ್ಲಿ ಪಕ್ಷ ಬೇಧ ಮಾಡಲಾಗುತ್ತಿದೆ. ಕಾಂಗ್ರೆಸ್, ಜೆಡಿಎಸ್ ಸದಸ್ಯರ ವಾರ್ಡ್‌ಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದರು.

ಶಾಸಕ ಶಿವಣ್ಣ ಆಪ್ತ ಸಹಾಯಕರು ಆಡಳಿತದಲ್ಲಿ ಮೂಗು ತೂರಿಸುತ್ತಿದ್ದು ಜೆಡಿಎಸ್, ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಹಣ ನೀಡುತ್ತಿಲ್ಲ ಎಂದು ದೇವಿಕಾ ಆರೋಪಕ್ಕೆ ಇತರರು ದನಿಗೂಡಿಸಿ, `ನಗರಸಭೆಯಲ್ಲಿ ದಲ್ಲಾಳಿಗಳ ಕಾಟ ವಿಪರೀತವಾಗಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರ ಆಪ್ತ ಸಹಾಯಕರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಬಿಜೆಪಿ ಸದಸ್ಯರಾದ ಕೆ.ಪಿ.ಮಹೇಶ್, ಲಕ್ಷ್ಮೀನರಸಿಂಹರಾಜು ಆಕ್ಷೇಪಿಸಿದಾಗ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ನಗರದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಸದಸ್ಯರನ್ನು ಆಹ್ವಾನಿಸುತ್ತಿಲ್ಲ. ಎಲ್ಲೆಲ್ಲಿ ಬಿಜೆಪಿಗೆ ಮತ ಹಾಕುವವರು ಹೆಚ್ಚಿದ್ದಾರೋ ಅಲ್ಲಷ್ಟೇ ಗಿಡಗಳನ್ನು ನೆಡಲಾಗುತ್ತಿದೆ. ಜೆಡಿಎಸ್, ಕಾಂಗ್ರೆಸ್ ಮತ ಬ್ಯಾಂಕ್ ಇರುವ ಕಡೆಗಳಲ್ಲಿ ಹಾಗೂ ಕೊಳಚೆ ಪ್ರದೇಶಗಳಲ್ಲಿ ಗಿಡ ನೆಡುತ್ತಿಲ್ಲ ಎಂದು ಸದಸ್ಯ ರಾಜಣ್ಣ ದೂರಿದರು. ಕಾಂಗ್ರೆಸ್ ಸದಸ್ಯರ ಬಗ್ಗೆ ಉದಾಸೀನ ತೋರಲಾಗುತ್ತಿದೆ ಎಂದು ಕಮಲಾ ಆರೋಪಿಸಿದರು.

ಕಸ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ನಗರಸಭೆ ಎದುರು ಸದಸ್ಯರು ಎರಡು ದಿನ ಧರಣಿ ನಡೆಸಿದರೂ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದ ಅಧ್ಯಕ್ಷೆ, ಉಪಾಧ್ಯಕ್ಷ, ಆಯುಕ್ತರ ವಿರುದ್ಧ ಸದಸ್ಯೆ ವೇದಾವತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಇತರರು ದನಿ ಗೂಡಿಸಿದ್ದರಿಂದ ಸಭೆ ಗದ್ದಲದಿಂದ ತುಂಬಿ ಹೋಯಿತು. ಸಭೆಯನ್ನು ಹಿಡಿತಕ್ಕೆ ತೆಗೆದು ಕೊಳ್ಳಲಾಗದ ನೀವು (ಅಧ್ಯಕ್ಷೆ) ಆಡಳಿತ ನಡೆಸಲು ಅನರ್ಹರು. ಈಗಲೇ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ ಒತ್ತಾಯಿಸಿದರು.

ಆಯುಕ್ತರ ಬಿಡುಗಡೆ ಬೇಡ
ಆಯುಕ್ತ ಅನುರಾಗ್ ತಿವಾರಿ ಒಂದೆರಡು ದಿನಗಳಲ್ಲಿ ವರ್ಗಾವಣೆಯಾಗುವ ಸಂಭವ ವಿದ್ದು, ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡದಿರಲು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಗರದಲ್ಲಿ ಹಲವು ರಸ್ತೆಗಳ ವಿಸ್ತರಣೆ ಕೈಗೆತ್ತಿಕೊಂಡಿದ್ದು, ಈ ಕಾಮಗಾರಿ ಮುಗಿಯುವವರೆಗೂ ಇಲ್ಲಿಂದ ಬಿಡುಗಡೆ ಮಾಡುವುದಿಲ್ಲ ಎಂಬ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲು ಸಭೆ ನಿರ್ಧರಿಸಿತು.

ನಗರದ ಅಮಾನಿಕೆರೆ ಕಳಪೆ ಕಾಮಗಾರಿ ಆರೋಪದಲ್ಲಿ ಸಿಲುಕಿರುವ ಅಧಿಕಾರಿಯನ್ನು ಆಯುಕ್ತರನ್ನಾಗಿ ತರುವ ಪ್ರಯತ್ನ ನಡೆದಿದೆ. ಅವರನ್ನು ನಗರಸಭೆಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಸದಸ್ಯರು ಹೇಳಿದರು.

ಎಂ.ಜಿ.ರಸ್ತೆ ವಾರದಲ್ಲಿ ಕಾಮಗಾರಿ
ಎಂ.ಜಿ.ರಸ್ತೆ ವಿಸ್ತರಣೆ ಕಾಮಗಾರಿಗೆ ಮೂರು ಸಲ ಟೆಂಡರ್ ಕರೆದರೂ ಯಾರು ಕೂಡ ಮುಂದೆ ಬಂದಿರಲಿಲ್ಲ. ಈಗ ಸಲದ ಟೆಂಡರ್‌ನಲ್ಲಿ ಒಬ್ಬರು ಮಾತ್ರ ಭಾಗವಹಿಸಿದ್ದು ಅವರಿಗೆ ಕಾಮಗಾರಿ ನೀಡಲಾಗುವುದು. ಮುಂದಿನ ವಾರದಲ್ಲಿ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದು ಆಯುಕ್ತ ಅನುರಾಗ್ ತಿವಾರಿ ಸಭೆಗೆ ತಿಳಿಸಿದರು.

ಮುಂದುವರಿದ ಸಭೆ
ನಗರಸಭೆ ಸಾಮಾನ್ಯ ಸಭೆಯ ಚರ್ಚೆ ಮುಂದುವರಿದಿದ್ದು ಶುಕ್ರವಾರ ಕೂಡ ನಡೆಯಲಿದೆ. ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಧ್ಯಾಹ್ನದವರೆಗೂ ಶೂನ್ಯ ವೇಳೆಗೆ ಮೀಸಲಿಡಲಾಗಿತ್ತು.

ಮಧ್ಯಾಹ್ನ ನಡೆದ ಸಭೆಯಲ್ಲಿ ಅಜೆಂಡಾ ಮೇಲಿನ 2 ವಿಷಯಗಳ ಮೇಲೆ ಮಾತ್ರ ಚರ್ಚೆ ನಡೆದು ಅನುಮೋದನೆ ನೀಡಲಾಯಿತು. ಶುಕ್ರವಾರವೂ ಸಭೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT