ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೆಯಾಗಿ ಜಿ.ವಿ. ಜಯಾ ರಾಜಶೇಖರ ಆಯ್ಕೆ

Last Updated 2 ಫೆಬ್ರುವರಿ 2011, 7:20 IST
ಅಕ್ಷರ ಗಾತ್ರ

ಶಿವಮೊಗ್ಗ: 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಶಿವಮೊಗ್ಗ: ಏಳನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಜಿ.ವಿ. ಜಯಾ ರಾಜಶೇಖರ ಆಯ್ಕೆಯಾಗಿದ್ದಾರೆ.ಮಂಗಳವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಯಾ ರಾಜಶೇಖರ ಅವರನ್ನು ಮಾರ್ಚ್ 3, 4ರಂದು ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಡಾ.ಕೆ.ಎ.ಅಶೋಕ್ ಪೈ, ಎಸ್.ವಿ. ತಿಮ್ಮಯ್ಯ, ಫಾದರ್ ಮಾರ್ಕ್ ಡಿಸಿಲ್ವ ಮತ್ತಿತರರು ಉಪಸ್ಥಿತರಿದ್ದರು.

ಜಯಾ ರಾಜಶೇಖರ ಪರಿಚಯ: ಶಿವಮೊಗ್ಗ ನಗರದ ಶ್ಯಾಮ್‌ಪ್ರಸಾದ್ ಮುಖರ್ಜಿ ರಸ್ತೆಯ ಚಿಕ್ಕಬ್ರಾಹ್ಮಣರ ಬೀದಿಯ ನಿವಾಸಿ. ಜನಿಸಿದ್ದು 1933ರಲ್ಲಿ. ಪ್ರಸ್ತುತ ವಾಸ ಬೆಂಗಳೂರಿನಲ್ಲಿ. 1948ರಲ್ಲಿ ಶಿವಮೊಗ್ಗದಲ್ಲಿ ಎಸ್ಸೆಸ್ಸೆಲ್ಸಿ, 1950ರಲ್ಲಿ ಮದುವೆ. ಪತಿ ವೈದ್ಯ ಎಲೆ ರಾಜಶೇಖರ್. ಗೃಹಿಣಿಯಾಗಿದ್ದುಕೊಂಡೇ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ. ಗಮಕ, ಸಂಗೀತದಲ್ಲೂ ನೈಪುಣ್ಯತೆ.

ಕವನ ಸಂಕಲನ, ವ್ಯಕ್ತಿಚಿತ್ರ, ಜೀವನಚರಿತ್ರೆ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ರೇಡಿಯೋ ನಾಟಕ, ಸಂಶೋಧನಾ ಕ್ಷೇತ್ರಗಳಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.ಮೈಸೂರಿನ ಮಾನಸ ಗಂಗೋತ್ರಿಯ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಎಂಎ, ಹಾಡುಗಾರಿಕೆ, ವೀಣಾವಾದನದಲ್ಲಿ ಸೀನಿಯರ್, ಹಿಂದಿ ವಿಶಾರದ , ಗಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
 
15ನೇ ಶತಮಾನದಲ್ಲಿ ಶಿವಗಣ ಪ್ರಸಾದಿ ಮಹಾದೇವಯ್ಯ ಅವರಿಂದ ಸಂಪಾದಿತವಾದ ಶೂನ್ಯಸಂಪಾದನೆ, ನಂತರ ಮೂವರು ಶೂನ್ಯ ಸಂಪಾದನಾಕಾರರಿಂದ ಪರಿಷ್ಕರಣೆಗೆ ಒಳಗಾದರೆ, ಇಂಥದ್ದೊಂದು ಶ್ರೇಷ್ಠ ಸಂಕಲನ ಗ್ರಂಥವನ್ನು ಅಚ್ಚುಕಟ್ಟಾಗಿ ಸಂಪಾದಿಸಿದ ಮೊದಲ ಮಹಿಳೆ ಎಂಬ ಕೀರ್ತಿ ಜಯಾ ರಾಜಶೇಖರ ಅವರದ್ದು.

ಭೀಮಕ, ಗಮಕ ಕಲಾನಿಧಿ, ಅಭಿಜ್ಞ, ಲಿಂಗಲೀಲಾಲಾಸ ಚಾರಿತ್ರ ಸಂಗ್ರಹ, ಶೂನ್ಯ ಸಂಪಾದನೆಯ ಸಂಗ್ರಹ ಇವು ಇವರ ಸಂಪಾದಿತ ಕೃತಿಗಳು. ಶೂನ್ಯ ಸಂಪಾದನೆ ಕುರಿತಂತೆ 5ನೇ ಶೂನ್ಯ ಸಂಪಾದನೆ, ಶೂನ್ಯ ಸಂಪಾದನೆಯಲ್ಲಿ ಅಕ್ಕಮಹಾದೇವಿ ಸಂಪಾದನೆ ವ್ಯಾಖ್ಯಾನ, ಶೂನ್ಯ ಸಂಪದ ಭಾಷಣಗಳ ಸಂಕಲನ, ವೈಚಾರಿಕ ಕೃತಿ ಶೂನ್ಯ ಸಂಪಾದನೆಯಲ್ಲಿ ಸ್ತ್ರೀ ಪಾತ್ರಗಳು, ಶೂನ್ಯ ಸಂಪಾದನೆಗಳು, ಶೂನ್ಯ ಸಂಪಾದನೆಯ ಅನುಸಂದಾನ ಇತ್ಯಾದಿ ಕೃತಿಗಳನ್ನು ಹೊರತಂದಿದ್ದಾರೆ. ಶೂನ್ಯ ಸಂಪಾದನೆ ಕುರಿತಂತೆ ಜಯಾ ಅವರ ಮೂರು ಕ್ಯಾಸೆಟ್ ಬಿಡುಗಡೆಯಾಗಿವೆ. 78ರ ಹರೆಯದಲ್ಲೂ ಇವರದ್ದು ಲವಲವಿಕೆಯ ವ್ಯಕ್ತಿತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT