ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನ ಪ್ರವಾಸ ಬೇಕಾ?

Last Updated 9 ಜುಲೈ 2012, 6:10 IST
ಅಕ್ಷರ ಗಾತ್ರ

ಬೀದರ್: ಅಭಿವೃದ್ಧಿ ಕಾಣದ ಉದ್ಯಾನಗಳು, ತೆರೆದ ಚರಂಡಿಗಳು, ಪರಿಣಾಮಕಾರಿಯಾಗಿ ವಿಲೇವಾರಿಯಾಗದೇ ಅಲ್ಲಲ್ಲಿಯೇ ಉಳಿವ ತ್ಯಾಜ್ಯಗಳು. ಇದು, ಬೀದರ್ ನಗರದ ಸಂಕ್ಷಿಪ್ತ ಚಿತ್ರಣ. ಈ ಪರಿಸ್ಥಿತಿ ಬದಲಿಸಲು ಆ ಮೂಲಕ ಅಭಿವೃದ್ಧಿ ಮಾಡಲು ಅಧ್ಯಯನದ, ಇತರೆ ನಗರಗಳಿಗೆ ಪ್ರವಾಸ ತೆರಳುವ ಅಗತ್ಯವಿದೆಯಾ?

ನಗರಸಭೆಯ 35 ಸದಸ್ಯರು ಅಭಿವೃದ್ಧಿಯ ಅಧ್ಯಯನಕ್ಕಾಗಿ ವಿವಿಧ ನಗರಗಳಿಗೆ ಭೇಟಿ ನೀಡುವ ಪ್ರವಾಸ ಕಾರ್ಯಕ್ರಮದ  ಪ್ರಸ್ತಾಪ ತಿಳಿದಾದ ಇಂಥದೊಂದು ಪ್ರಶ್ನೆ ಎದುರಾದರೇ ಆಶ್ಚರ್ಯವಿಲ್ಲ. ಆದರೆ, ಅಗತ್ಯ ಎಂದು ನಗರಸಭೆಯ ಅಧಿಕಾರಿಗಳಿಗೆ ಅನ್ನಿಸಿದೆ. ಹೆಚ್ಚಿನ ಸದಸ್ಯರು ಮೌನ ವಹಿಸುವ ಮೂಲಕ ಈ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ.

ವಿವಿಧ ನಗರಗಳಿಗೆ ನಗರಸಭೆಯ ಸದಸ್ಯರ ಪ್ರವಾಸಕ್ಕಾಗಿ ಬಿ.ಆರ್.ಜಿ.ಎಫ್ ನಿಧಿಯಡಿ ಈಗಾಗಲೇ ಎರಡು ಲಕ್ಷ ರೂಪಾಯಿ ಕಾದಿರಿಸಿದ್ದರೆ; ನಗರಸಭೆಯ ವತಿಯಿಂದ ಇನ್ನೂ ಎರಡು ಲಕ್ಷ ಒದಗಿಸಲು ಯೋಜಿಸಲಾಗಿದೆ ಎನ್ನುತ್ತಾರೆ ನಗರಸಭೆಯ ಆಯುಕ್ತ ಜಿ.ರಾಮದಾಸ್.

ಈಗಾಗಲೇ ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಪ್ರವಾಸದ ವಿವರ ಕಳುಹಿಸಲಾಗಿದೆ. ವೇಳಾಪಟ್ಟಿಯ ಅನುಸಾರ ಶುಕ್ರವಾರವೇ ಸದಸ್ಯರು ತೆರಳಬೇಕಿದ್ದರೂ, ಜಿಲ್ಲಾಧಿಕಾರಿಗಳ ಅನುಮೋದನೆ ವಿಳಂಬ ಆಗಿರುವ ಕಾರಣ ತಡವಾಗಿದೆ. ಅನುಮೋದನೆ ದೊರೆತರೆ ನಗರಸಭೆಯ ಸದಸ್ಯರು ಹೆಚ್ಚು ಕಡಿಮೆ ಒಂದು ವಾರ ಕಾಲ ಪ್ರವಾಸ ತೆರಳಲಿದ್ದಾರೆ.

ಮೈಸೂರು, ಮಡಿಕೇರಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು ನಗರಸಭೆಗೆ ತೆರಳಿ ಅಲ್ಲಿ ನಗರಸಭೆ ಮತ್ತು ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಳ ಕಾರ್ಯವೈಖರಿ ಗಮನಿಸುವುದು ಈ ಭೇಟಿಯ ಉದ್ದೇಶ.
ಸದ್ಯದ ಪ್ರಸ್ತಾಪದ ಅನುಸಾರ, ಎಲ್ಲ 35 ಸದಸ್ಯರನ್ನು ಪ್ರವಾಸ ಕರೆದೊಯ್ಯಲು ಯೋಜನೆ ರೂಪಿಸಲಾಗಿದೆ.

ಪ್ರವಾಸದ ರೂಪುರೇಷೆ ನಿಗದಿಪಡಿಸಲು, ಯೋಜನೆಯಂತೆ ಪ್ರವಾಸವನ್ನು ಜಾರಿಗೊಳಿಸಲು ಸದಸ್ಯ ಫರ್ನಾಂಡೀಸ್ ಹಿಪ್ಪಳಗಾವ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ.

ಈ ಕುರಿತು ಸಂಪರ್ಕಿಸಿದಾಗ, ಫರ್ನಾಂಡೀಸ್ ಅವರು, `ವೈಯಕ್ತಿಕವಾಗಿ ಹೇಳುವಾದರೆ ನನ್ನ ಅಭಿಪ್ರಾಯದಲ್ಲಿ ಇಂಥ ಪ್ರವಾಸದ ಅಗತ್ಯವಿಲ್ಲ. ಆದರೆ, ಇದೇ ಉದ್ದೇಶಕ್ಕಾಗಿ ಬಿಆರ್‌ಜಿಎಫ್ ನಿಧಿಯಲ್ಲಿ ಹಣ ಕಾದಿರಿಸಿದ್ದರಿಂದ ಪ್ರವಾಸ ವೇಳಾಪಟ್ಟಿ ರೂಪಿಸಿದ್ದು, ನನ್ನನ್ನು ನಾಯಕನಾಗಿ ಆರಿಸಿದ್ದಾರೆ~ ಎಂದರು.

ಚರಂಡಿ, ಪಾದಚಾರಿ ರಸ್ತೆ ಅಭಿವೃದ್ಧಿ, ತ್ಯಾಜ್ಯ ವಿಲೇವಾರಿ ಅಂಥ ಮೂಲ ಸಮಸ್ಯೆಗಳನ್ನು ಉಲ್ಲೇಖಿಸಿ ಇವುಗಳನ್ನು ಸರಿಪಡಿಸಲು ಪ್ರವಾಸ ಅಗತ್ಯವಿದೆಯಾ ಎಂಬ ಪ್ರಶ್ನೆಗೆ, ಇಲ್ಲ ಎಂಬುದು ಸರಿ. ಆದರೆ, ಈಗಾಗಲೇ ಕೆಲ ತಾಲ್ಲೂಕುಗಳ ಪಟ್ಟಣ ಪಂಚಾಯಿತಿಗಳಲ್ಲಿ ಹೀಗೆ ಪ್ರವಾಸ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.ನಗರವನ್ನು ಒಂದು ಸುತ್ತು ಹಾಕಿದರೆ ನಗರಸಭೆ ಕೆಲಸ ಮಾಡುತ್ತಿದೆಯಾ ಎಂಬ ಅನುಮಾನ ಬರುವುದು ನಿಜ. ಇನ್ನುಮಳೆ ಬಂದರಂತೂ ಹಳೆಯ ನಗರಗಳತ್ತ ಹೋಗುವುದು ಕಷ್ಟ ಸಾಧ್ಯ. ಮುಖ್ಯ ಬಡಾವಣೆಗಳು ಎಂದು ಹಣೆಪಟ್ಟಿ ಹೊತ್ತ ಬಡಾವಣೆಗಳ ರಸ್ತೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

 ಅಭಿವೃದ್ಧಿ ವಿಷಯ ತೆಗೆದುಕೊಂಡರೇ ನಗರಸಭೆಯ ಆವರಣಕ್ಕೆ ಕಾಯಕಲ್ಪ ಬೇಕಾಗಿದೆ. ಅಲ್ಲಿಯೂ ನೀರು ನಿಂತು ಭೇಟಿ ನೀಡುವ ಸಾರ್ವಜನಿಕರು ಓಡಾಡುವುದು ಕಷ್ಟವಾಗಲಿದೆ. ಇಂಥ ಸ್ಥಿತಿಯಲ್ಲಿ ಸದಸ್ಯರ ಪ್ರವಾಸ ಸಹಜವಾಗಿ ಜನರಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಸದಸ್ಯರಿಗೂ ಇಂಥದೇ ಪ್ರಶ್ನೆ ಮೂಡಿದರೆ ಪ್ರವಾಸದ ಹಣ ಅಭಿವೃದ್ಧಿಗೆ ಬಳಕೆ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT