ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನದಲ್ಲಿ ನಿರಂತರ ಗಂಭೀರತೆ ಇರಲಿ

Last Updated 6 ಜನವರಿ 2012, 7:55 IST
ಅಕ್ಷರ ಗಾತ್ರ

ದಾವಣಗೆರೆ: ಎಸ್ಸೆಸ್ಸೆಲ್ಸಿ, ಪಿಯುವರೆಗೆ ಗಂಭೀರವಾಗಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಆ ಬಳಿಕ ಅದೇ ರೀತಿ ಮುಂದುವರಿಯುವುದಿಲ್ಲ ಯಾಕೆ ಹೀಗೆ?

-ಹೀಗೆಂದು ಪ್ರಶ್ನಿಸಿದವರು ಬೆಂಗಳೂರಿನ ಫ್ಯೂಚರ್‌ವೇರ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನಯ್ಯ.

ನಗರದ ಬಾಪೂಜಿ ಹೈಟೆಕ್ ವಿದ್ಯಾಸಂಸ್ಥೆಯಲ್ಲಿ ಗುರುವಾರ `ಪರೀಕ್ಷೆ ಭಯ ಬೇಡ - ಇದೆ ಅಭಯ~ (Skills for Stressless Examination)  ಪರಿಕಲ್ಪನೆಯ ಪರೀಕ್ಷಾ ಭಯ ನಿವಾರಣಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಪದವಿ ಹಂತಕ್ಕೆ ಬಂದಾಗ ಹಿಂದೆ ಮಾಡುತ್ತಿದ್ದ ಕಠಿಣ ಪರಿಶ್ರಮ ಬಿಟ್ಟುಹೋಗುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ಆದರೆ, ಹಾಗೆ ಮಾಡದೇ ಪರಿಶ್ರಮದಿಂದ ಓದಿ ಒಳ್ಳೆಯ ಉದ್ಯೋಗಾವಕಾಶ ಪಡೆಯ ಬೇಕು ಎಂದು ಸಲಹೆ ಮಾಡಿದರು.

ಎಂಜಿನಿಯರಿಂಗ್ ಸೀಟು ಸಿಗದೇ ಹೋದರೆ ಆತಂಕ ಪಡಬೇಕಾಗಿಲ್ಲ ಬಿಸಿಎ ಕೋರ್ಸ್ ಸಹ ಎಂಜಿನಿಯರಿಂಗ್ ಪದವಿಗೆ ಸಮಾನವಾದದ್ದು. ಕೆಲವು ಕಂಪೆನಿಗಳು ಬಿಸಿಎ ಆದವರನ್ನೇ ನೇರ ನೇಮಕಾತಿ ಮಾಡಿಕೊಳ್ಳುತ್ತವೆ. ಅಥವಾ ಎಂಸಿಎ ವ್ಯಾಸಂಗ ಮುಂದುವರಿಸ ಬಹುದು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಡಾ.ಬಿ. ವೀರಪ್ಪ ಮಾತನಾಡಿ, ದೇಶದಲ್ಲಿ ಮುಂದೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿವೆ. ಮುಂದಿನ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ದುಪ್ಪಟ್ಟು ಹಣ ಮೀಸಲಿಡುವ ಬಗ್ಗೆ ಇತ್ತೀಚೆಗೆ ಪ್ರಧಾನಿ ಹೇಳಿದ್ದಾರೆ. ಆದ್ದರಿಂದ, ಎಲ್ಲರಿಗೂ ಸಾಕಷ್ಟು ಅವಕಾಶಗಳು ಇವೆ. ಬಿಸಿಎ ಕೂಡಾ ಸಾಕಷ್ಟು ಉದ್ಯೋಗಾವಕಾಶ ನೀಡಬಲ್ಲದು. ಆದ್ದರಿಂದ ಕೋರ್ಸ್‌ನ ಬಗ್ಗೆ ಕೀಳರಿಮೆ ಬೇಡ ಎಂದರು.

ಮಹಿಳೆಯರೂ ಎಲ್ಲ ಕ್ಷೇತ್ರಗಳಲ್ಲಿ ಹುಡುಗರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಅವರಿಗೂ ಒಳ್ಳೆಯ ಅವಕಾಶಗಳು ದೊರೆಯುತ್ತಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ನುಡಿದರು.

ಪಿಯು ವಿದ್ಯಾರ್ಥಿ ಜೀವನದ ಮಹತ್ವದ ತಿರುವು ವಿಷಯವನ್ನು ಅರ್ಥ ಮಾಡಿಕೊಂಡು ಓದಬೇಕು ಎಂದು ಸಲಹೆ ಮಾಡಿದರು.

ಕಾರ್ಯಾಗಾರದ ನೋಟ
ಕೌಶಲ ತರಬೇತುದಾರ ಕೆ. ಪ್ರದ್ಯುಮ್ನ ಅವರ ಕಾರ್ಯಾಗಾರ ಹೀಗಿತ್ತು.
ನಾವೆಲ್ಲಾ ಸೂಪರ್ ಸ್ಟೂಡೆಂಟ್ಸ್ ಆಗ್ಬೇಕು. ಯಾಕೆಂದರೆ ನಾವು ಸಾಮಾನ್ಯ ವಿದ್ಯಾರ್ಥಿಗಳಲ್ಲ. ಇಲ್ಲಿ ನಾವೆಲ್ಲ ಆಟಗಾರರು. ಚೆನ್ನಾಗಿ ಆಡಬೇಕು. ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಾ ಮಾತನಾಡಿದರು.

ನಾವು ಯಾಕೆ ಓದಬೇಕು ಎಂಬ ಮೂಲಭೂತ ಪ್ರಶ್ನೆಯೊಂದಿಗೆ ಮಾತು ಆರಂಭಿಸಿದ ಅವರು, ಶಿಕ್ಷಣ ಅಂದರೆ ಬರಿಯ ಓದು ಅಲ್ಲ. ಕಲಿಕೆ. ಅದರಿಂದ ಜ್ಞಾನ, ವ್ಯಕ್ತಿತ್ವ ವೃದ್ಧಿಸುತ್ತದೆ. 1700 ವರ್ಷಗಳ ಹಿಂದೆ ಪ್ರತಿ ಸಾವಿರ ವರ್ಷಕ್ಕೆ ಒಮ್ಮೆ ಏನಾದರೂ ಬದಲಾವಣೆ ಆಗುತ್ತಿತ್ತು. ಇಂದು ಹಾಗಲ್ಲ. ಪ್ರತಿ ನಿಮಿಷಕ್ಕೆ ಬದಲಾವಣೆಗಳು ಸಂಭವಿಸುತ್ತಿರುತ್ತವೆ. ಈ ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳಲು ನಾವು ಸಿದ್ಧರಾಗಬೇಕು. ಸದಾ ದೊಡ್ಡ ವಿಷಯಗಳನ್ನೇ ಯೋಚಿಸುವುದರಿಂದ ದೊಡ್ಡ ಸಾಧನೆ ಸಾಧ್ಯ. ಚಿಕ್ಕದಾಗಿ ಯೋಚಿಸಿದರೆ ಸಾಧನೆಯೂ ಅದೇ ಆಗಿರುತ್ತದೆ. ಇದು ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಇರುವ ವ್ಯತ್ಯಾಸ. ನಗರ ಪ್ರದೇಶದ ವಿದ್ಯಾರ್ಥಿಗಳು ಪ್ರಪಂಚವನ್ನು  ದೊಡ್ಡದಾಗಿ ನೋಡುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಇತಿಮಿತಿಯಲ್ಲಿ ಯೋಚಿಸುತ್ತಾರೆ ಎಂದು ವಿಶ್ಲೇಷಿಸಿದರು.

ಮನುಷ್ಯನ ಮೆದುಳಿಗೆ ಅಗಾಧವಾದ ಶಕ್ತಿಯಿದೆ. ನಾವು ಬಳಸಿಕೊಂಡಿರುವುದು ಕೇವಲ ಶೇ. 0.05ರಷ್ಟು ಮಾತ್ರ. ಆದ್ದರಿಂದ ನಿರಂತರ ಹೊಸ ವಿಷಯಗಳನ್ನು ಓದಬೇಕು. ಇಂಥ ಸಾಧನೆಗೆ ಸ್ಫೂರ್ತಿ ಬೇಕು ಎಂದರು.

ವಿದ್ಯಾರ್ಥಿಗಳಿಗೆ ಮನೆ, ಪರಿಸರ, ಆರ್ಥಿಕ ಸ್ಥಿತಿ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಆದರೆ, ಪರೀಕ್ಷಾ ಹಂತದಲ್ಲಿರುವ ವಿದ್ಯಾರ್ಥಿಗೆ ಅದಕ್ಕಿಂತಲೂ ಹೊರತಾದ ಸಮಸ್ಯೆಗಳು ಇರುತ್ತವೆ. ಆರೋಗ್ಯ, ಮಾನಸಿಕ ಒತ್ತಡ, ಏಕಾಗ್ರತೆ ಕೊರತೆ, ಸ್ಮರಣಶಕ್ತಿ, ಬರೆಯುವಿಕೆ, ವಿಷಯ ಮಂಡನೆ, ಸಮಯ ನಿರ್ವಹಣೆ ಸಮಸ್ಯೆ ತಲೆದೋರುತ್ತದೆ. ಆದರೆ, ಸ್ವಲ್ಪ ಕೌಶಲ ಬಳಸಿದರೆ ಅದೆಲ್ಲದರಿಂದ ಹೊರಬಂದು ಒಳ್ಳೆಯ ಸಾಧನೆ ಮಾಡಬಹುದು ಎಂದು ಹೇಳಿದರು.

ಪಠ್ಯ ಪುಸ್ತಕ - ತಾಯಿ; ನೋಟ್ಸ್ ಗೈಡ್ - ಆಂಟಿ: ಪಠ್ಯ ಪುಸ್ತಕ ತಾಯಿಯ ಹಾಗೆ. ವಿದ್ಯಾರ್ಥಿಗೆ ಬೇಕಾದ ಮೂಲ ಮಾಹಿತಿ, ಸಮಗ್ರ ವಿವರಗಳು ಸಿಗುತ್ತವೆ. ಅದಕ್ಕೆ ಮೊದಲ ಆದ್ಯತೆ ನೀಡಬೇಕು. ನೋಟ್ಸ್, ಗೈಡ್ ಆಂಟಿ ಇದ್ದ ಹಾಗೆ. ಅವುಗಳಿಗೆ ಎರಡನೇ ಆದ್ಯತೆ ನೀಡಬೇಕು. ವಿಪರ್ಯಾಸವೆಂದರೆ ವಿದ್ಯಾರ್ಥಿಗಳು `ಆಂಟಿ~ಗೇ ಹೆಚ್ಚು ಮಹತ್ವ ನೀಡುತ್ತಿದ್ದಾರೆ ಎಂದರು.

ಪರೀಕ್ಷಾ ಬರಹ, ಶೈಲಿ, ವಿಷಯ ಮಂಡನೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಸಿಇಟಿ ವಿಷಯ ಸಂಬಂಧಿಸಿದಂತೆ ಎಚ್.ಎಸ್. ವೆಂಕಟರಾಮಯ್ಯ (ಬಾಬು), ಲೆಕ್ಕಶಾಸ್ತ್ರ(ಅಕೌಂಟೆನ್ಸಿ) ಕುರಿತು ಎವಿಕೆ ಕಾಲೇಜಿನ ಪ್ರಾಧ್ಯಾಪಕ ಶಿವಪ್ರಕಾಶ್ ಮಾಹಿತಿ ನೀಡಿದರು. ಉಪನ್ಯಾಸಕ ಕೆ. ಸಿದ್ದಲಿಂಗಪ್ಪ ಕಾರ್ಯಕ್ರಮ ಸಂಯೋಜಿಸಿದ್ದರು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 540 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT