ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮದ ಊರುಗೋಲಿನೊಂದಿಗೆ ನಡಿಗೆ

Last Updated 5 ಮೇ 2012, 19:30 IST
ಅಕ್ಷರ ಗಾತ್ರ

ಸಕಲ ಜೀವರಾಶಿಗಳ ಬದುಕುವ ಹಕ್ಕಿನ `ನಿಸರ್ಗ ನ್ಯಾಯ~ವನ್ನು ಪ್ರತಿಪಾದಿಸುವ ಪಾದಯಾತ್ರೆಯೊಂದು ಇಂದಿನಿಂದ ಏಳು ದಿನಗಳ ಕಾಲ ನಡೆಯಲಿದೆ. ಕರ್ನಾಟಕದ ಕೈವಾರದಿಂದ ಆರಂಭಗೊಳ್ಳುವ ಈ ಯಾತ್ರೆ, ವಿಶ್ವದ ಅತಿ ದೊಡ್ಡ ಆಲದ ಮರ ಎನ್ನುವ ಅಗ್ಗಳಿಕೆಯ ಪ್ರಕೃತಿ ಮಹಾಕ್ಷೇತ್ರ ತಿಮ್ಮಮ್ಮನ ಆಲದಮರದಲ್ಲಿ ಕೊನೆಗೊಳ್ಳಲಿದೆ.

ಪಾದಯಾತ್ರೆಗಳ ಕಾಲವಿದು! ಚುನಾವಣೆಗಳು ಸನ್ನಿಹಿತ ಆದಂತೆಲ್ಲ `ಪಾದಯಾತ್ರೆ~ಗಳು ಹೆಚ್ಚುತ್ತವೆ. ಇಂಥ, ರಾಜಕೀಯ ಪ್ರೇರಿತ ಪಾದಯಾತ್ರೆಗಳಿಗೆ ಹೊರತಾಗಿ, ಸಾಮಾಜಿಕ ಕಳಕಳಿ - ಜಾಗೃತಿಯ ಉದ್ದೇಶಗಳನ್ನು ಹೊಂದಿದ ಪಾದಯಾತ್ರೆಗಳೂ ಆಗಾಗ ನಡೆಯುತ್ತಿರುತ್ತಿವೆ.

ಅಂಥದೊಂದು ಯಾತ್ರೆ, ಕೈವಾರದಿಂದ ತಿಮ್ಮಮ್ಮನ ಆಲದ ಮರದವರೆಗೆ ಏರ್ಪಾಡಾಗಿರುವ ಪಾದಯಾತ್ರೆ! ಪರಿಸರದ ಮಹತ್ವದ ಮನುಷ್ಯ ಮತ್ತು ಸಕಲ ಜೀವರಾಶಿಗಳ ಸಹಬಾಳ್ವೆಯ ಪ್ರತಿಪಾದನೆ ಈ ಪಾದಯಾತ್ರೆಯ ಉದ್ದೇಶ.

ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದ ನಾರೇಯಣರು (ಕೈವಾರ ತಾತಯ್ಯನವರು) ನಾಡಿನ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರು. ಸಾಮಾಜಿಕ ತರತಮದ ವಿರುದ್ಧ ಮಾತನಾಡುವ ಅವರ ರಚನೆಗಳು, ಪ್ರಕೃತಿಯೊಡನೆ ಮನುಷ್ಯನ ಸಹಬಾಳ್ವೆಯ ಅಗತ್ಯವನ್ನು ಪ್ರತಿಪಾದಿಸುತ್ತವೆ.

ಸಮಾಜದ ಓರೆಕೋರೆಗಳನ್ನು ತಿದ್ದಿಕೊಳ್ಳಲು ಅಧ್ಯಾತ್ಮವನ್ನು ಒಂದು ಮಾರ್ಗ-ಮಾಧ್ಯಮವಾಗಿ ಬಳಸಿದ ನಾರೇಯಣರು, ಭೂಮಿಯ ಮೇಲೆ ಮನುಷ್ಯರಷ್ಟೇ ಜೀವಿಸುವ ಹಕ್ಕು ಸಕಲ ಜೀವರಾಶಿಗಳಿಗೂ ಇದೆಯೆಂದು, ಆ `ನಿಸರ್ಗ ನ್ಯಾಯ~ವನ್ನು ಪಾಲಿಸಿದರೆ ನಿಸರ್ಗದ ಮುನಿಸು ತಪ್ಪಿಸಬಹುದೆಂದು ತಮ್ಮ ತತ್ವಪದಗಳಲ್ಲಿ ಹೇಳಿದ್ದಾರೆ.

ಗ್ರಾಮೀಣ ಜನತೆಯೊಡನೆ ಹಾಸು ಹೊಕ್ಕಾಗಿರುವ ತಾತಯ್ಯನವರ ಬೋಧನೆಗಳನ್ನು ಪ್ರಚಾರ ಮಾಡುತ್ತಿರುವ ನಾರೇಯಣ ಮಠ ಪ್ರಕೃತಿ ರಕ್ಷಣೆಯ ಜಾಗೃತಿ ಮೂಡಿಸುವ ಪಾದಯಾತ್ರೆಗಳನ್ನು ನಿರಂತರವಾಗಿ ಏರ್ಪಡಿಸುತ್ತಿದೆ.

ಈವರೆಗೆ ವರ್ಷದಲ್ಲಿ ಒಂದು ದಿನ, ನಾಡಿನೊಳಗೇ ಈ ಪಾದಯಾತ್ರೆಗಳು ನಡೆಯುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಕೈವಾರದಿಂದ 120 ಕಿ.ಮೀ ದೂರದ ತಿಮ್ಮಮ್ಮ ಆಲದ ಮರಕ್ಕೆ ಪಾದಯಾತ್ರೆ ನಡೆಯುತ್ತಿದೆ. ಈ ವರ್ಷದ ನಡಿಗೆಯ ಕಾರ್ಯಕ್ರಮ ಇಂದು(ಮೇ 6) ಆರಂಭವಾಗುತ್ತಿದ್ದು, ಮೇ 12ರವರೆಗೆ ನಡೆಯಲಿದೆ.

ಕರ್ನಾಟಕ-ಆಂಧ್ರಪ್ರದೇಶಗಳ ಸುಮಾರು 75 ಹಳ್ಳಿಗಳ ಮೂಲಕ ಪಾದಯಾತ್ರೆ ನಡೆಯಲಿದೆ. ದಾರಿಯುದ್ದಕ್ಕೂ ಪಾದಯಾತ್ರಿಗಳು ತಾತಯ್ಯನವರ ರಚನೆಗಳನ್ನು ಹಾಡಲಿದ್ದಾರೆ. 

ಪ್ರಕೃತಿ ಮಹಾಕ್ಷೇತ್ರ ಎಂದೇ ಪ್ರಸಿದ್ಧವಾದ ತಿಮ್ಮಮ್ಮ ಆಲದ ಮರ ಅಂತಿಂಥ ಮರವಲ್ಲ. ಈ ಮೊದಲು, ಐನೂರು ವರ್ಷಗಳಿಗೂ ಹಳೆಯದಾದ ಈ ಆಲದ ಮರ ಹನ್ನೊಂದು ಎಕರೆಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿತ್ತು.
 
ಈಗ ಐದು ಎಕರೆ ಪ್ರದೇಶದಲ್ಲಷ್ಟೇ ಇದೆ. ಬೆಂಗಳೂರಿನ ಹೊರಚಾಚು ರಾಮೋಹಳ್ಳಿಯ ಬಳಿಯೂ ಬೃಹತ್ ಆಲದ ಮರವಿದೆ. ಆದರೆ ಹರಹಿನಲ್ಲಿ ಇದನ್ನು ಮೀರಿಸುವಂತಿದೆ ತಿಮ್ಮಮ್ಮನ ಆಲದ ಮರ. ಕಥೆ, ದಂತಕಥೆಗಳೊಂದಿಗೆ ಅನೇಕ ಪಕ್ಷಿಗಳಿಗೂ ಮಹಾ ಮಾತೆಯೆನ್ನಿಸಿದೆ.

ಗಿನ್ನಿಸ್ ವಿಶ್ವದಾಖಲೆಗಳಲ್ಲಿ 1989ರಿಂದ ದಾಖಲಾಗಿರುವ ಈ ಬೃಹತ್ ಆಲದ ಮರ ಇರುವುದು ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ-ಬಾಗೇಪಲ್ಲಿ ಮೂಲಕ ಸಾಗಿದರೆ, 150 ಕಿ.ಮೀ. ದೂರದಲ್ಲಿರುವ ಈ `ತಿಮ್ಮಮ್ಮ ಮರ‌್ರಿಮಾನು~ ಜಗತ್ತಿನ ಅತಿದೊಡ್ಡ ಆಲದ ಮರ ಎಂದು ಹೆಸರುವಾಸಿಯಾಗಿದೆ.

ಈ ವೃಕ್ಷವನ್ನು ಕಣ್ತುಂಬಿಕೊಳ್ಳಲೆಂದೇ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸಸ್ಯಶಾಸ್ತ್ರಜ್ಞರಿಗೂ ಈ ಹಸಿರು ತಾಣ ಹಲವು ಅಚ್ಚರಿಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡ ಅಕ್ಷಯಪಾತ್ರೆಯಾಗಿದೆ.

ಆಂಧ್ರದ ಕದರಿಯಿಂದ 25 ಕಿಲೋಮೀಟರ್ ಕ್ರಮಿಸಿದರೆ ಸಿಗುವ ತಿಮ್ಮಮ್ಮ ಮಹಾವೃಕ್ಷ ಬಿಟ್ಟಿರುವ ಬಿಳಲುಗಳೇ ಸಾವಿರಕ್ಕೂ ಹೆಚ್ಚು. ಯಾವುದು ಬೇರು ಯಾವುದು ಬಿಳಲು ಎಂಬುದನ್ನು ಪತ್ತೆ ಮಾಡಲಾಗದಷ್ಟು ವಿಶಾಲವಾಗಿ ಹಬ್ಬಿಕೊಂಡಿರುವ ಇದು, ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾಸ್ಥಳ. ಈಗಂತೂ ಅದೊಂದು ಜನಪ್ರಿಯ ಪ್ರೇಕ್ಷಣೀಯ ಪ್ರದೇಶ.

ಕದರಿಗೂಟ ಬಯಲು ಗ್ರಾಮದ ಬಾಲ ವೀರರಾಯನ ಪತ್ನಿ ತಿಮ್ಮಮ್ಮ. ಅಚ್ಚಹಸಿರೇ ತುಂಬಿಕೊಂಡಿದ್ದ ಗೂಟಬಯಲು ಗ್ರಾಮದಲ್ಲಿ ಬೇಸಾಯ-ವ್ಯಾಪಾರ ನಡೆಸುತ್ತಿದ್ದ ಬಾಲ ವೀರರಾಯ ಅಕಾಲಿಕವಾಗಿ ಅಸುನೀಗುತ್ತಾನೆ.
 
ಆತನ ಪತ್ನಿ ತಿಮ್ಮಮ್ಮ ಚಿತೆಗೇರಿ ಆತ್ಮಾರ್ಪಣೆ ಮಾಡಿಕೊಂಡ ಪ್ರಸಂಗ ನಡೆಯುತ್ತದೆ. ಪತಿಯೊಡನೆ ಸಹಗಮನ ಮಾಡಿದ ತಿಮ್ಮಮ್ಮನ ಗುಣ ವೈಶಿಷ್ಟ್ಯಗಳು, ಆಕೆಯ ಪತಿವ್ರತಾ ನಿಷ್ಠೆಗಳು ಲಾವಣಿಗಳಾಗಿ ಜನಪದ ಕಥೆಗಳಾಗಿ ಇಂದೂ ಈ ಭಾಗದಲ್ಲಿ ಜೀವಂತವಾಗಿವೆ. ತಿಮ್ಮಮ್ಮ ಚಿತೆಗೇರಿದ ಸ್ಥಳದಲ್ಲಿ ನೆಟ್ಟ ಆಲದ ಸಸಿ ಈಗ ಜಗತ್ತಿನ ಮಹಾ ಮರವಾಗಿ ಬೆಳೆದು ನಿಂತು ಜನಾಕರ್ಷಣೆಯ ಕೇಂದ್ರವಾಗಿ ಮೈದಾಳಿದೆ.

ವೃತ್ತಿ ಗಾಯಕರು, ಹರಿಕಥಾದಾಸರು ತಿಮ್ಮಮ್ಮನನ್ನು ಆರಾಧಿಸುತ್ತ ಬಂದಿದ್ದು, ಆಕೆಯ ಜೀವಪರ ಧೋರಣೆಗಳನ್ನು ಉಲ್ಲೇಖಿಸುವಾಗ ಜೀವ ಕಳೆದುಕೊಂಡು ಎರಡು ಹಕ್ಕಿಗಳಿಗೆ ಜೀವಕೊಟ್ಟಳೆಂದೂ ಹಾಡುವ ಹಾಡುಗಳೂ ಇಲ್ಲಿ ಜನಜನಿತ.

ಆಲದ ಸಸಿ ನೆಟ್ಟ ಸ್ಥಳದಲ್ಲಿಯೇ ತಿಮ್ಮಮ್ಮನ ಪ್ರತಿಮೆಯೊಂದನ್ನು ಇಟ್ಟಿದ್ದು, ಕೈವಾರ ನಾರೇಯಣ ಮಠದವರು ಅಲ್ಲೊಂದು ಪುಟ್ಟ ತಿಮ್ಮಮ್ಮನ ಆಲಯವೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.

ಯಾತ್ರಾಸ್ಥಳವಾಗಿರುವ ತಿಮ್ಮಮ್ಮ ಮರ‌್ರಿಮಾನು ಪ್ರಕೃತಿಪ್ರಿಯ ನೆಚ್ಚಿನ ತಾಣ. ಸಸ್ಯಶಾಸ್ತ್ರ ವಿದ್ಯಾರ್ಥಿಗಳಿಗೂ ಅಧ್ಯಯನ ಸ್ಥಳ. ಈ ಎಲ್ಲದರ ಹಿನ್ನೆಲೆಯನ್ನು ಹೂರಣವಾಗಿಸಿಕೊಂಡು `ಪ್ರಕೃತಿ ಪಾದಯಾತ್ರೆ~ ಆರಂಭವಾಗಿದೆ. ಅಧ್ಯಾತ್ಮ ಮತ್ತು ಪರಿಸರ ಎರಡೂ ಜೀವಮುಖಿಯಾಗಿ ನಡೆಯುತ್ತಿರುವ ಅಪರೂಪದ ಉದಾಹರಣೆಯಿದು.ಇಂಥ ನಡಿಗೆಗಳು ನಿರಂತರವಾಗಿ ಇರಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT