ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮದ ದೃಶ್ಯ ಕಾವ್ಯ...

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

`ಒಂದು ರಾಷ್ಟ್ರದ ಸಾಹಿತ್ಯ ದೇಸೀ ಬಣ್ಣವನ್ನು ಪಡೆದಾಗಲೇ ಅಂತರರಾಷ್ಟ್ರೀಯ ನೆಲೆಯಲ್ಲೂ ಅದು ಗಮನ ಸೆಳೆಯುತ್ತದೆ~ ಎಂಬ ಮಾತು ಕಲಾವಿದ ಎ.ಎಸ್‌ಪಾಟೀಲ್ ಅವರ ಕಲಾಕೃತಿಯಲ್ಲಿ ಸಾಕಾರಗೊಂಡಿದೆ.

ಭಾರತದ ಮಣ್ಣಿನಲ್ಲಿ ಅಧ್ಯಾತ್ಮದ ಸೆಲೆಯಿದೆ. ಜನ ಆತ್ಮ, ಪರಮಾತ್ಮ, ಮೋಕ್ಷವನ್ನು ಬಹುವಾಗಿ ನಂಬುತ್ತಾರೆ. ಶಕಪುರುಷರು, ತತ್ವಜ್ಞಾನಿಗಳು, ಸನ್ಯಾಸಿಗಳು ಈ ಕುರಿತು ಸಾಕಷ್ಟು ಪ್ರಚಾರ ಹಾಗೂ ಸಾಹಿತ್ಯ ರಚನೆ ಮಾಡಿದ್ದಾರೆ. ಜನ ಮಾನಸದಲ್ಲಿ ಸ್ಥಾಯಿಯಾಗಿರುವ ಈ ಅಧ್ಯಾತ್ಮದ ಕಲ್ಪನೆಯನ್ನು ದೃಶ್ಯ ರೂಪಕ್ಕೆ ಇಳಿಸಿರುವುದು ಪಾಟೀಲರ ಹೆಗ್ಗಳಿಕೆ.

ಇವರ `ಮಿರರ್~ ಕಲಾಕೃತಿಯು, ಮನುಷ್ಯ ತನ್ನೊಳಗಿರುವ `ಅಹಂ~ ಬಿಟ್ಟು ಅದರಾಚೆಗೆ ತೆರೆದುಕೊಂಡಾಗ ಮಾತ್ರ ಅವನೊಳಗಿರುವ ಆತ್ಮ , ಪರಮಾತ್ಮನನ್ನು ಸಂಧಿಸಲು ಸಾಧ್ಯ ಎಂಬುದನ್ನು ಸಾರುತ್ತದೆ. `ಗೋಲ್ಡನ್ ಕೀ~ ಕಲಾಕೃತಿಯು, ಮನುಷ್ಯನ ವ್ಯಕ್ತಿತ್ವದಲ್ಲಿ ಶರಣಾಗತಿ ಮತ್ತು ಪ್ರಾಮಾಣಿಕತೆ ಮಿಳಿತಗೊಂಡಾಗ ದೇಹದೊಳಗಿರುವ ಆತ್ಮವು ಪರಮಾತ್ಮನನ್ನು ಸೇರಲು ಕೀಲಿ ಕೈಯಂತೆ ಕಾರ್ಯನಿರ್ವಹಿಸುತ್ತದೆ ಎಂಬ ಅಂಶವನ್ನು ಪ್ರತಿಪಾದಿಸುತ್ತದೆ.

`ಗೋಲ್ ಆಫ್ ಲೈಫ್~ನಲ್ಲಿ ವ್ಯಕ್ತಿ ಪ್ರಶಾಂತ ವಾತಾವರಣದಲ್ಲಿ ಕುಳಿತು ಮನಸ್ಸನ್ನು ಧ್ಯಾನದಲ್ಲಿ ಕೇಂದ್ರೀಕರಿಸಿ ಆತ್ಮನ ಮೂಲಕ ಪರಮಾತ್ಮನನ್ನು ಕಾಣಬಹುದು ಎಂಬುದನ್ನು ಸೂಚಿಸುತ್ತದೆ. ಮನುಷ್ಯನ ಬದುಕಿನಲ್ಲಿ ಎರಡು ಆಯ್ಕೆಗಳಿವೆ; ಒಂದು ಕೆಟ್ಟ ಮಾರ್ಗ. ಈ ಹಾದಿಯಲ್ಲಿ ಸಾಗುವವನು ತನ್ನ ಪಾಪದ ಕೊಡ ತುಂಬಿದಾಗ ನೇರವಾಗಿ ಪತನದ ಪ್ರಪಾತದೊಳಕ್ಕೆ ಬಿದ್ದು ಹೋಗುತ್ತಾನೆ. ಮತ್ತೊಂದು ಅಧ್ಯಾತ್ಮದ ಹಾದಿ. ಈ ಹಾದಿಯಲ್ಲಿ ನಡೆಯುವವನು ಪರಮಾತ್ಮನನ್ನು ನೇರವಾಗಿ ತಲುಪುತ್ತಾನೆ ಎಂಬುದನ್ನು ತೋರಿಸುತ್ತದೆ `ದಿ ಆರ್ಟ್ ಆಫ್ ಲಿವಿಂಗ್~ ಕಲಾಕೃತಿ.

ಇವರ ಈ ಎಲ್ಲ ಕಲಾಕೃತಿಗಳು ಅರಬಿಂದೋ ಆಶ್ರಮದಲ್ಲಿ ಒಡಮೂಡಿದವು. ಇದರಿಂದಾಗಿಯೇ ಇವರ ಪ್ರತಿ ಕಲಾಕೃತಿಯಲ್ಲೂ ಅಧ್ಯಾತ್ಮದ ಸೆಲೆ ಒಸರುತ್ತದೆ.
ಕಲಾವಿದ ವಿ.ಬಿ.ಬಡಿಗೇರ್ ಅವರು ಲಂಬಾಣಿಗಳ ನೋವು-ನಲಿವು, ಪ್ರಾಣಿಗಳ ಜೊತೆಗಿನ ಒಡನಾಟ, ಆಚರಣೆ, ಸಂಪ್ರದಾಯಗಳನ್ನು ಮೋಹಕವಾಗಿ ಚಿತ್ರಿಸಿದ್ದಾರೆ. ಇವುಗಳಿಗಿಂತ ಕಲಾರಸಿಕರ ಗಮನ ಸೆಳೆಯುವುದು ಇವರ ಕುಂಚದಲ್ಲಿ ಮೂಡಿರುವ ಕೃಷ್ಣ-ರಾಧೆಯ ಸರಣಿ ಚಿತ್ರಗಳು!

ಕಲಾವಿದ ಟಿ.ಶಂಕರ್ ಅವರ ಕಲಾಕೃತಿಗಳೆಲ್ಲವೂ 2ಡಿ ಮತ್ತು 3ಡಿ ಚಿತ್ರಣಗಳ ಸಂಯೋಜನೆಯಿಂದ ರಚಿತಗೊಂಡವು. ಇವರ ಕಲಾಕೃತಿಗಳಲ್ಲಿ ಶಿಲ್ಪಗಳು, ಬೊಂಬೆಗಳು ಮತ್ತು ನೇಪಥ್ಯಕ್ಕೆ ಸರಿದ ಪ್ರಾಚೀನ ಚೆಲುವು ಇವೆಲ್ಲವೂ ಮೇಳೈಸಿವೆ. ಇವರ ಬಹುತೇಕ ಕಲಾಕೃತಿಗಳೆಲ್ಲವೂ ಇದೇ ಮಾದರಿಯಲ್ಲಿ ರಚಿತಗೊಂಡವು. ಇವರ ಚಿತ್ರಗಳು ಯಾವುದೇ ವಿಷಯಾಧಾರಿತವಾಗಿಲ್ಲ. ಹಾಗಾಗಿ ನೋಡುಗ ಯಾವ ದೃಷ್ಟಿಯಲ್ಲಿ ಅದನ್ನು ಅರ್ಥೈಸಿಕೊಳ್ಳುತ್ತಾನೋ ಎಂಬುದು ಅವರಿಗೆ ಬಿಟ್ಟದ್ದು.
ಹಾಗೆಯೇ ಬಸವರಾಜ್ ಜಾನೆ ಮತ್ತು ಪ್ರಕಾಶ್ ಅವರ ಕಲಾಕೃತಿಯಲ್ಲಿ ಅಡಗಿರುವ ಶೃಂಗಾರದ ಹರವು ಆಪ್ತವೆನಿಸುತ್ತದೆ.

ಇವರ ಚಿತ್ರಗಳನ್ನು ಭಾನುವಾರದ ವರೆಗೆ ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್‌ನಲ್ಲಿ ನೋಡಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT