ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ತಗಾದೆ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನಿನ ಹೋರಾಟದಲ್ಲಿ ತೊಡಗಿರುವ ಕರ್ನಾಟಕದ ಪಾಲಿಗೆ ಇದೊಂದು ಸಣ್ಣ ಗೆಲುವು. ಕಾವೇರಿ ಐತೀರ್ಪನ್ನು ಪುನರ್‌ಪರಿಶೀಲಿಸಲು ನ್ಯಾಯಮಂಡಳಿಗೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸದೆ ವಿಚಾರಣೆಯನ್ನು ಮುಂದಿನ ಫೆಬ್ರುವರಿ ತಿಂಗಳಿಗೆ ಮುಂದೂಡಿದೆ. ಇದಕ್ಕೆ ಸಂಬಂಧಿಸಿದಂತೆ ಅವಶ್ಯಕತೆ ಇದ್ದರೆ ತಮಿಳುನಾಡು ನ್ಯಾಯಮಂಡಳಿಗೆ ನೇರವಾಗಿ ಮನವಿ ಮಾಡಬಹುದೆಂದು ಹೇಳಿರುವುದಷ್ಟೇ ಆ ರಾಜ್ಯಕ್ಕೆ ಸಮಾಧಾನ ಉಂಟುಮಾಡಿದ ಸಂಗತಿ.
 
2007ರ ಫೆಬ್ರುವರಿ ತಿಂಗಳಲ್ಲಿ ಕಾವೇರಿ ನ್ಯಾಯಮಂಡಳಿ ಅಂತಿಮ ಐತೀರ್ಪು ನೀಡಿದಾಗ ಅದನ್ನು ಮೊದಲು ಸ್ವಾಗತಿಸಿದ್ದು ತಮಿಳುನಾಡು ಸರ್ಕಾರ. ಆದರೆ ಆಗಿನ್ನೂ ಮಾಜಿ ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ಅವರು ಐತೀರ್ಪಿನಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದು ಬೊಬ್ಬಿಟ್ಟಾಗ ರಾಜಕೀಯ ಒತ್ತಡಕ್ಕೆ ಸಿಕ್ಕ ಮುಖ್ಯಮಂತ್ರಿ ಕರುಣಾನಿಧಿ ನ್ಯಾಯಮಂಡಳಿಗೆ `ಪರಿಶೀಲನಾ ಅರ್ಜಿ~ ಸಲ್ಲಿಸಿದ್ದರು.

ಅದರ ಜತೆಗೆ ಐತೀರ್ಪು ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಕರ್ನಾಟಕ ಮತ್ತು ಕೇರಳ ರಾಜ್ಯಗಳು ಅನಿವಾರ್ಯವಾಗಿ ತಮಿಳುನಾಡು ಹಿಡಿದ ದಾರಿ ಹಿಡಿದವು. ಈ ಕಾರಣದಿಂದಾಗಿ ಐತೀರ್ಪು ಪ್ರಕಟಗೊಂಡು ನಾಲ್ಕೂವರೆ ವರ್ಷ ಕಳೆದರೂ ಅದು ಇನ್ನೂ ಗೆಜೆಟ್‌ನಲ್ಲಿ ಪ್ರಕಟವಾಗಿಲ್ಲ. ಕಾನೂನು ಪ್ರಕಾರ ಅಂತಿಮ ಐತೀರ್ಪು ಪ್ರಕಟವಾದ ದಿನವೇ ಮಧ್ಯಂತರ ಐತೀರ್ಪು ರದ್ದಾಗುತ್ತದೆ. ಇದರಿಂದಾಗಿ ಕಾವೇರಿ ನೀರನ್ನು ಯಾವ ಆಧಾರದಲ್ಲಿ ಹಂಚಿಕೊಳ್ಳಬೇಕೆಂಬ ಬಗ್ಗೆ ಮೂರು ರಾಜ್ಯಗಳಲ್ಲಿಯೂ ಈಗ ಗೊಂದಲ ಇದೆ. ಕರ್ನಾಟಕ ರಾಜ್ಯ ಅಂತಿಮ ಐತೀರ್ಪನ್ನೇ ಅನುಸರಿಸುವುದಾಗಿ ಹೇಳುತ್ತಿದ್ದರೆ ತಮಿಳುನಾಡು ಅದನ್ನು ಒಪ್ಪುತ್ತಿಲ್ಲ.

ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಸಂಬಂಧಿತ ಮೂರೂ ರಾಜ್ಯಗಳು ಎದುರಿಸುತ್ತಿರುವ ಈಗಿನ ಅತಂತ್ರ ಸ್ಥಿತಿಗೆ ತಮಿಳುನಾಡು ಸರ್ಕಾರದ ಕಿಡಿಗೇಡಿತನವೇ ಕಾರಣ. ಜಲವಿವಾದಕ್ಕೆ ಸರ್ವಸಮ್ಮತ ಪರಿಹಾರವೊಂದನ್ನು ನೀಡುವುದು ಯಾವುದೇ ನ್ಯಾಯಾಲಯ-ನ್ಯಾಯಮಂಡಳಿಗೆ ಸಾಧ್ಯ ಇಲ್ಲ.

ಇದಕ್ಕಾಗಿಯೇ  ವಿವಾದವನ್ನು ಪಂಚಾಯಿತಿ ಮೂಲಕ ಇತ್ಯರ್ಥ ಪಡಿಸಲು ಸುಪ್ರೀಂ ಕೋರ್ಟ್ ಪ್ರತ್ಯೇಕ ನ್ಯಾಯಮಂಡಳಿಯನ್ನು ರಚಿಸಿರುವುದು. ಸುದೀರ್ಘಾವಧಿಯ ವಿಚಾರಣೆ ನಡೆಸಿ ಎಲ್ಲ ರಾಜ್ಯಗಳ ಅಹವಾಲುಗಳನ್ನು ಆಲಿಸಿ ನ್ಯಾಯಮಂಡಳಿ ಅಂತಿಮ ಐತೀರ್ಪು ನೀಡಿದ ನಂತರ ಅದನ್ನು ಒಪ್ಪಬೇಕಾಗಿರುವುದು ಸಂಬಂಧಿತ ರಾಜ್ಯಗಳ ಧರ್ಮ. ಆದರೆ ತಮಿಳುನಾಡು ಅನಗತ್ಯವಾಗಿ ವಿವಾದವನ್ನು ಕಾನೂನಿನ ಸುಳಿಗೆ ತಳ್ಳಿರುವ ಕಾರಣ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಕೂಡಾ ಕಾನೂನಿನ ಹೋರಾಟ ನಡೆಸಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಕೇಂದ್ರ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಿಂದ ಕಾವೇರಿ ನ್ಯಾಯಮಂಡಳಿಯನ್ನು ಬರ್ಖಾಸ್ತುಗೊಳಿಸದೆ ಮುಂದುವರಿಸಿಕೊಂಡು ಬಂದಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆ. ಇದಕ್ಕೆ ತಮಿಳುನಾಡು ಸರ್ಕಾರವೇ ಹೊಣೆ.  ತಮಿಳುನಾಡಿನ ಈ ವರೆಗಿನ ಎಲ್ಲ ಸರ್ಕಾರಗಳು ರಾಜಕೀಯ ಕಾರಣಕ್ಕಾಗಿ ಕಾವೇರಿ ವಿವಾದವನ್ನು ದುರ್ಬಳಕೆ ಮಾಡುತ್ತಾ ಬಂದಿವೆ. ಈಗಲೂ ಕಾಲ ಮೀರಿಲ್ಲ. ಕಾವೇರಿ ಕಣಿವೆಯ ಮೂರೂ ರಾಜ್ಯಗಳು ಪರಸ್ಪರ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ವಿವಾದವನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT