ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಫ್ಲೆಕ್ಸ್: ಆದಾಯಕ್ಕೆ ಕತ್ತರಿ

Last Updated 24 ಡಿಸೆಂಬರ್ 2012, 8:41 IST
ಅಕ್ಷರ ಗಾತ್ರ

ಗದಗ: ರಾಜ್ಯದಲ್ಲಿ ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. ಆದರೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಈಗಲೇ ಫ್ಲೆಕ್ಸ್‌ಗಳ ಆರ್ಭಟ ಶುರುವಾಗಿದೆ.

ಜನನಿಬಿಡ ಪ್ರದೇಶ, ಪ್ರಮುಖ ವೃತ್ತಗಳಲ್ಲಿ ಹಾಕಿರುವ ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮ, ಹುಟ್ಟುಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್‌ಗಳಲ್ಲಿ ಸಮಾಜ ಸೇವಕರು, ರಾಜಕೀಯ ಮುಖಂಡರ  ಭಾವಚಿತ್ರಗಳು ರಾರಾಜಿಸುತ್ತಿವೆ.
ಅವಳಿ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಹಾಗೂ ಜಾಹೀರಾತು ಫಲಕಗಳನ್ನು ಹಾಕಿರುವುದರಿಂದ ನಗರದ ಸೌಂದರ್ಯ ಹಾಳಾಗುವುದರ ಜತೆಗೆ ನಗರಸಭೆಯ ಆದಾಯಕ್ಕೂ ಕತ್ತರಿ ಬಿದ್ದಿದೆ.

ಫ್ಲೆಕ್ಸ್ ಅಳವಡಿಸಲು ದಶಕಗಳ ಹಿಂದೆ ನಗರಸಭೆ ನಿಗದಿ ಪಡಿಸಿದ ಬಾಡಿಗೆ ದರವೇ ಈಗಲೂ ಚಾಲ್ತಿಯಲ್ಲಿ ಇರುವುದರಿಂದ ನಗರಸಭೆಗೆ ಆದಾಯ ಬರುತ್ತಿಲ್ಲ. 2003ರಲ್ಲಿ ನಿಗದಿ ಪಡಿಸಿದ ಶುಲ್ಕ ವರ್ಷಕ್ಕೆ ಒಂದು ಚದರ ಅಡಿಗೆ ರೂ. 20. ಈಗಲೂ ಇದೇ ಶುಲ್ಕ ಜಾರಿಯಲ್ಲಿದೆ.

ಅವಳಿ ನಗರದ ಪ್ರಮುಖ ಸ್ಥಳಗಳಾದ ಗಾಂಧಿ ವೃತ್ತ, ಮುಳಗುಂದ ನಾಕಾ, ಭೂಮರಡ್ಡಿ ವೃತ್ತ, ಹಾತಲಗೇರಿ ನಾಕಾ, ಕೋರ್ಟ್ ಮುಂಭಾಗ, ಸಹಸ್ರಾರ್ಜುನ ವೃತ್ತ,  ಹಳೇ ಡಿಸಿ ಕಚೇರಿ ವೃತ್ತ ಹೀಗೆ 20 ಸ್ಥಳಗಳನ್ನು ಗುರುತಿಸಿ ಒಟ್ಟು 461 ಫ್ಲೆಕ್ಸ್ ಹಾಗೂ ಜಾಹೀರಾತು ಫಲಕಗಳನ್ನು ಹಾಕಲು ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದವರು ಹೆಚ್ಚು ಹಣ ಪಡೆದು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.

10x20 ಅಳತೆಯ ಫ್ಲೆಕ್ಸ್ ತಯಾರಿಸಲು ರೂ. 3 ಸಾವಿರ, 8x16 ಅಳತೆಗೆ ರೂ. 2600 ಖರ್ಚಾಗಲಿದೆ. ನಗರ ಸೌಂದರ್ಯದ ಬಗ್ಗೆ ಕೊಂಚವು ಅರಿವಿಲ್ಲದೆ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳನ್ನು ಹಾಕು ತ್ತಿದ್ದರೂ ನಗರಸಭೆ ಸಿಬ್ಬಂದಿ ಕಣ್ಮುಚ್ಚಿ ಕುಳಿತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರಸಭೆ ವ್ಯಾಪ್ತಿಗೆ ಬರುವ ವಿವಿಧ ಸ್ಥಳಗಳಲ್ಲಿ  ಫ್ಲೆಕ್ಸ್, ಜಾಹೀರಾತು ಫಲಕ, ಭಿತ್ತಿಪತ್ರ ಹಾಕಬೇಕಾದರೆ ಅನುಮತಿ ಪತ್ರ ಪಡೆಯಬೇಕು.  ನಗರಸಭೆ  ಕ್ರಮ ಜರುಗಿಸಿಲ್ಲ ಎಂಬುದಕ್ಕೆ ಕಾರ್ಯಕ್ರಮ ಮುಗಿದರೂ ಫ್ಸೆಕ್ಸ್‌ಗಳನ್ನು ತೆರವುಗೊಳಿಸದಿರುವುದೇ ಸಾಕ್ಷಿ.

`ಎಲ್ಲೆಂದರಲ್ಲಿ ಫ್ಲೆಕ್ಸ್ ಹಾಗೂ ಜಾಹೀರಾತು ಫಲಕ ಹಾಕುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಆಗಲಿದೆ.  ಕಾರ್ಯಕ್ರಮ ಮುಗಿದು ವಾರ ಕಳೆದರೂ ಅವುಗಳನ್ನು ತೆರವುಗೊಳಿಸುವುದಿಲ್ಲ. ಮಳೆ ಮತ್ತು ಜೋರು ಗಾಳಿ ಬೀಸಿದ ಸಂದರ್ಭದಲ್ಲಿ ಫ್ಲೆಕ್ಸ್‌ಗಳು ರಸ್ತೆಗೆ  ಬಿದ್ದಿರುವ ಉದಾಹರಣೆಗಳು ಇವೆ. ಸೂಕ್ತ ಸ್ಥಳ ಗುರುತಿಸಿ ಸರಿಯಾದ ಶುಲ್ಕ ನಿಗದಿ ಮಾಡಬೇಕು ಎಂದು ನಗರಸಭೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ' ಎಂದು ವಕೀಲ ಬಿ.ಎನ್.ದಾಯಮ್ಮನವರ ನಗರಸಭೆ ಆಡಳಿತದ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಪೌರಾಯುಕ್ತ ಎಂ.ಬಿ.ನಡುವಿನ ಮನಿ, `ನಗರದಲ್ಲಿ ಹಾಕಲಾಗಿರುವ ಫ್ಲೆಕ್ಸ್ ಹಾಗೂ ಜಾಹೀರಾತು ಫಲಕಗಳ ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಅನಧಿಕೃತವಾಗಿ ಅಳವಡಿಸಿದ್ದರೆ ದಂಡ ವಿಧಿಸಲಾಗುವುದು. ಈ ಬಾರಿ ಯಾರಿಗೂ ಗುತ್ತಿಗೆ ಪರವಾನಗಿಯನ್ನು ನವೀಕರಿಸಿಲ್ಲ. ಸಂಚಾರ ಮತ್ತು ಪಾದಚಾರಿಗಳಿಗೆ ತೊಂದರೆಯಾಗದಂತ ಸ್ಥಳಗಳನ್ನು ಗುರುತಿಸಲಾಗುವುದು. ಸಭೆಯಲ್ಲಿ ಚರ್ಚಿಸಿ ಶುಲ್ಕವನ್ನು ಹೆಚ್ಚಳ ಮಾಡಲಾಗುವುದು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT