ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವು

Last Updated 16 ಅಕ್ಟೋಬರ್ 2012, 8:30 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾಕಿದ್ದ ಪ್ರಚಾರದ ಫಲಕಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಹಾಕಿರುವ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್‌ಗಳನ್ನು ನಗರಸಭೆ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು.

ನಗರದ ಹೊಳಲ್ಕೆರೆ ರಸ್ತೆ, ಗಾಂಧಿವೃತ್ತ, ಜಿಲ್ಲಾ ಆಸ್ಪತ್ರೆ ಹತ್ತಿರ ಹಾಗೂ ಜಿಲ್ಲಾಧಿಕಾರಿ ಕಚೇರಿ ಹತ್ತಿರ ಹಾಗೂ ಚಳ್ಳಕೆರೆ ಟೋಲ್ ಗೇಟ್ ಬಳಿ ಇದ್ದ ಫಲಕಗಳನ್ನು ತೆರವುಗೊಳಿಸಲಾಯಿತು. ಪರವಾನಿಗೆ ಇಲ್ಲದೆ ಭಿತ್ತಿಪತ್ರ ಮತ್ತು ಯಾವುದೇ ಜಾಹೀರಾತು ಫಲಕ ಅಳವಡಿಸಿದಲ್ಲಿ ಅಂತಹವರನ್ನು ಶಿಕ್ಷೆಗೆ ಒಳಪಡಿಸುವ ಅವಕಾಶವಿದೆ. ಈ ಕಾಯ್ದೆ ಅನ್ವಯ 6 ತಿಂಗಳವರೆಗೆ ವಿಸ್ತರಿಸಬಹುದಾದಂತಹ ಜೈಲು ಶಿಕ್ಷೆ ಅಥವಾ ರೂ 1,000 ವರೆಗೆ ವಿಸ್ತರಿಸಬಹುದಾದಂತಹ ದಂಡ ಅಥವಾ ಎರಡನ್ನೂ ವಿಧಿಸಿ ಶಿಕ್ಷಿಸಬಹುದಾಗಿದೆ.

ಆದ್ದರಿಂದ ಈಗಾಗಲೇ ಅನಧಿಕೃತವಾಗಿ ಪ್ರಚುರಪಡಿಸಿರುವ ಭಿತ್ತಿಪತ್ರ, ಬ್ಯಾನರ್, ಬಂಟಿಂಗ್ಸ್‌ಗಳನ್ನು, ಇತರೆ ಪ್ರಚಾರ ಸಾಮಗ್ರಿಗಳನ್ನು ನಗರಸಭೆಯ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿ ಇರುವುದನ್ನು ತೆರವುಗೊಳಿಸಲಾಗಿದೆ. ಪುನ: ಜಾಹೀರಾತು ಪ್ರಚುರಪಡಿಸಲು ಉದ್ದೇಶಿಸಿದವರು ನಗರಸಭೆಯಿಂದ ಪರವಾನಗಿ ಪಡೆದುಕೊಂಡು ತಮ್ಮ ಸಂಸ್ಥೆಗಳ ಜಾಹೀರಾತು ಫಲಕ ಮತ್ತು ಫ್ಲೆಕ್ಸ್ ಹಾಗೂ ಬೋರ್ಡ್ ಇತರೆ ಜಾಹೀರಾತು ಸಂಬಂಧಿಸಿದ ಸಾಮಗ್ರಿ ಪ್ರಚುರಪಡಿಸಬೇಕು ಎಂದು ಪೌರಾಯುಕ್ತೆ ಎಸ್. ಭಾರತಿ ಮನವಿ ಮಾಡಿದ್ದಾರೆ.

ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಪೌರಾಯುಕ್ತೆ ಎಸ್. ಭಾರತಿ, ಕಂದಾಯ ಅಧಿಕಾರಿ ಎ. ವಾಸಿಂ ತೆರವು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

ನೋಟಿಸ್: ನಗರಸಭೆ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕಟ್ಟಡದ ಮಾಲೀಕರು ಅಂದಾಜು ರೂ 1 ಕೋಟಿ ಕಟ್ಟಡ ಕಂದಾಯ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ  ಸೋಮವಾರ ನೋಟಿಸ್ ನೀಡಲಾಯಿತು.

ನಗರಸಭೆ ಪೌರಾಯುಕ್ತೆ ಎಸ್. ಭಾರತಿ, ಕಂದಾಯ ಅಧಿಕಾರಿ ಎ. ವಾಸಿಂ, ಕಂದಾಯ ನಿರೀಕ್ಷಕ ಟಿ. ಗೋಪಾಲಕೃಷ್ಣ ಮತ್ತು ನಾಸಿರ್ ಬಾಷಾ ಮತ್ತು ಕಂದಾಯ ಸಿಬ್ಬಂದಿ ವರ್ಗದವರು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ ಕೆಲವು ಕಟ್ಟಡ ಮಾಲೀಕರಿಗೆ ನೋಟಿಸ್‌ಗಳನ್ನು ಜಾರಿ ಮಾಡಿದರು.

ಆದರೆ, ಮಾಲೀಕರು ನೋಟಿಸ್‌ಗಳನ್ನು ತಿರಸ್ಕರಿಸಿದ್ದಕ್ಕೆ ಕಟ್ಟಡಗಳ ಗೋಡೆಗೆ ನೋಟೀಸ್‌ಗಳನ್ನು ಅಂಟಿಸಿ ವಸೂಲಿ ಕಾರ್ಯವನ್ನು ಚುರುಕುಗೊಳಿಸಿದರು. ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ಕಂದಾಯ ಬಾಕಿ ಉಳಿಸಿಕೊಂಡಿರುವವರಿಂದ ವಸೂಲಿ ಪಾವತಿಸುವಂತೆ ತಿಳಿಸಿ ಬಾಕಿದಾರರ ಪಟ್ಟಿ ಮತ್ತು ವಿವರವನ್ನು ನೀಡಲಾಯಿತು ಎಂದು ಎಸ್. ಭಾರತಿ ತಿಳಿಸಿದ್ದಾರೆ.

ಶೀಘ್ರ ಸಭೆ ಕರೆದು ಕಂದಾಯ ಬಾಕಿ ಪಾವತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಎಪಿಎಂಸಿ ಉಪಕಾರ್ಯದರ್ಶಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT