ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹಗೊಂಡಿರುವ ಸದಸ್ಯರಿಗೂ ನೋಟಿಸ್ ಜಾರಿ!

Last Updated 4 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಸಭೆ
ಉಪ್ಪಿನಂಗಡಿ:
ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಪ್ರಥಮ ಅವಧಿ ಮುಕ್ತಾಯ ಹಂತದಲ್ಲಿದ್ದು, 2ನೇ ಅವಧಿಗೆ ಮೀಸಲಾತಿ ನಿಗದಿಗೆ ನೋಟಿಸ್ ಜಾರಿ ಮಾಡಿರುವ ಪುತ್ತೂರು ತಾಲ್ಲೂಕು ಕಚೇರಿ, ಬರ್ಖಾಸ್ತು ಗೊಂಡಿರುವ ಹಿರೇಬಂಡಾಡಿ ಗ್ರಾಮ ಪಂಚಾಯಿತಿಯ ಸದಸ್ಯರಿಗೂ ನೋಟಿಸ್ ಜಾರಿ ಮಾಡಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಅನರ್ಹಗೊಂಡಿರುವ ಸದಸ್ಯರು ಮತ್ತೆ ಅರ್ಹ ಸದಸ್ಯರಾದರೇ ಎನ್ನುವ ಕುತೂಹಲದ ಪ್ರಶ್ನೆ ಇದರಿಂದ ಎದುರಾಗಿದೆ.


ತಾಲ್ಲೂಕಿನ ಗ್ರಾ.ಪಂ. ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಸಲುವಾಗಿ ಗುರುವಾರ ಸಭೆ ಕರೆ ಕರೆಯಲಾಗಿದೆ. ಎಲ್ಲ ಗ್ರಾ.ಪಂ. ಸದಸ್ಯರನ್ನು ಆಹ್ವಾನಿಸಲಾಗಿದೆ. ಸದಸ್ಯತನ ಅನರ್ಹಗೊಂಡಿರುವ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸದಸ್ಯರಿಗೂ ನೋಟಿಸ್ ಜಾರಿ ಮಾಡಲಾಗಿದೆ.

ಕಳೆದ ವರ್ಷದ ಅಕ್ಟೋಬರ್ 10ರಂದು ನಡೆದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಮತ್ತು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ ಎಂದು ತಿಳಿಸಿ ಗ್ರಾಮ ಪಂಚಾಯಿತಿಯನ್ನು ವಿಸರ್ಜಿಸಿ ಅಲ್ಲಿಗೆ ಆಡಳಿತಾಧಿಕಾರಿಯನ್ನು ಸಕ್ರಾ ನೇಮಕ ಮಾಡಿತ್ತು.
ಹೈಕೋರ್ಟ್‌ನಲ್ಲಿ ದಾವೆ: ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ದಾಸರಮೂಲೆ ಗ್ರಾಮ ಪಂಚಾಯಿತಿ ಬರ್ಖಾಸ್ತು ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. 2011 ಡಿಸೆಂಬರ್ 15ರಂದು ಪೂರ್ವಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಆದೇಶಿಸಿತ್ತು.

ಅಧ್ಯಕ್ಷರು ಹೈಕೋರ್ಟ್‌ನಲ್ಲಿ ಎರಡನೇ ದಾವೆ ಹೂಡಿ `ಗ್ರಾಮ ಪಂಚಾಯಿತಿ ಕರೆದ ಸಭೆಗೆ ನಿರಂತರವಾಗಿ ಗೈರು ಹಾಜರಿ ಆಗಿರುವ 7 ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ, ನಿರಂತರವಾಗಿ ಸಭೆಗೆ ಹಾಜರಾದ ಸದಸ್ಯರಿಗೆ ಅಧಿಕಾರ ನೀಡಬೇಕು ಎಂದು ನಿವೇದಿಸಿದ್ದಾರೆ. ಈ ದಾವೆ ವಿಚಾರಣೆ ಹಂತದಲ್ಲಿದೆ.

`ನಾನೇನೂ ಹೇಳಲಾರೆ~: `ನನಗೆ ನೋಟಿಸ್ ನೀಡಿದ್ದಾರೆ. ಅದನ್ನು ಸ್ವೀಕರಿಸಿದ್ದೇನೆ. ಆದರೆ ಪಂಚಾಯಿತಿ ಬರ್ಕಾಸ್ತು ವಿಚಾರ ಹೈಕೋರ್ಟಿನಲ್ಲಿ ಇರುವುದರಿಂದ ನಾನೇನು ಈ ಬಗ್ಗೆ ಹೇಳಲಾರೆ“ ಎಂದು ಮಾಜಿ ಅಧ್ಯಕ್ಷೆ ಗೀತಾ ದಾಸರಮೂಲೆ ಪ್ರತಿಕ್ರಿಯಿಸಿದ್ದಾರೆ.

ಸಾಮೂಹಿಕ ಪ್ರಕ್ರಿಯೆ-ಜಿಲ್ಲಾಧಿಕಾರಿ: ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆ ಸಾಮೂಹಿಕವಾಗಿ ನಡೆಯುವಂಥದ್ದು, ಅದಕ್ಕೆ ಬರ್ಕಾಸ್ತು, ಹೈಕೋರ್ಟು ದಾವೆ ಅನ್ವಯವಾಗುವುದಿಲ್ಲ. ನೋಟಿಸ್ ಜಾರಿ ಆಗಿದ್ದರ ಮಾಹಿತಿ ಇಲ್ಲ. ಆದರೂ ಈ ಸಭೆಯಲ್ಲಿ ಸಾರ್ವಜನಿಕರು ಯಾರೂ ಭಾಗವಹಿಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT