ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಶಿಶುಗಳಿಗೆ ಪುನರ್ಜನ್ಮದ ತಾಣ

Last Updated 8 ಅಕ್ಟೋಬರ್ 2012, 4:30 IST
ಅಕ್ಷರ ಗಾತ್ರ

ವಿಜಾಪುರ:`ಅನಾಥ ಮಗು ಅನ ಬ್ಯಾಡ್ರಿ. ತಂದಿ-ತಾಯಿಗಿಂತ ಹೆಚ್ಚಾಗಿ ನಾವು-ನಮ್ಮ ಸಿಬ್ಬಂದಿ ಆ ಮಗುವನ್ನು ಆರೈಕೆ ಮಾಡ್ತಾ ಇದ್ದೀವಿ. ಎರಡು ತಿಂಗಳಿಗೊಬ್ಬರಾದರೂ ಇಂತಹ ಅಪರೂಪದ ಅತಿಥಿಗಳನ್ನ ನಮ್ಮಲ್ಲಿಗೆ ಕರಕೊಂಡು ಬರತಾರ. ನಮ್ಮ ಮಕ್ಕಳಿಗಿಂತ ಹೆಚ್ಚಾಗಿ ಅವರನ್ನ ಆರೈಕೆ ಮಾಡಿ ಕಳಿಸ್ತೀವಿ...~

ಹೀಗೆ ಹೇಳುತ್ತ ಜಿಲ್ಲಾ ಸರ್ಜನ್ ಡಾ.ಆರ್.ಎಂ. ಸಜ್ಜನ ಅವರು ಇಲ್ಲಿಯ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ಅತಿ ದಕ್ಷತಾ ವಿಭಾಗಕ್ಕೆ ಕರೆ ದೊಯ್ದರು. ಸ್ಟಾಫ್ ನರ್ಸ್ ಒಬ್ಬರು ನನಗೆ ಮೇಲುಡುಗೆ ತೊಡಿಸಿ  ಒಳಗಡೆ ಕರೆದೊಯ್ದರು. `ಸರ್, ಇದೆ ನೋಡಿ. ನೀವು ಹುಡುಕಿಕೊಂಡು ಬಂದಿರುವ ಮಗು~ ಎಂದು ಆ ಮಗುವನ್ನು ತೋರಿಸಿದರು.

ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ಅತಿ ದಕ್ಷತಾ ವಿಭಾಗದ `ವಾರ್ಮರ್, ಫೋಟೊಥೆರಪಿ ಯೂನಿಟ್~ನ ಪುಟ್ಟ ಹಾಸಿಗೆಯ ಮೇಲೆ ಮಲಗಿದ್ದ ಕಂದ ಕೈಕಾಲು ಬೀಸುತ್ತ ಆಡುತ್ತಿತ್ತು. ಹುಟ್ಟಿದ ದಿನವೇ ಈ ಮಗುವನ್ನು ತಾಯಿ ದೂರ ಮಾಡಿದ್ದಳು. ತಾಯಿಯ ಬಿಗಿ ಅಪ್ಪುಗೆ ಇಲ್ಲದಿದ್ದರೇನಂತೆ? ಆ ಮಗು ಪುಟ್ಟ ಬೆಡ್‌ನಲ್ಲಿ ಮಲಗಿ ಯಂತ್ರದ ಬೆಚ್ಚನೆಯ ಗಾಳಿಗೆ ಮೈಚಳಿ ಬಿಟ್ಟು ಆಡುತ್ತಿತ್ತು!

ಆ ಮಗುವಿನ ಎರಡು ಬೆಡ್ ಆಚೆ ಇನ್ನೊಂದು ಕಂದಮ್ಮ ಇತ್ತು. ಮೈಬಣ್ಣ ಹಳದಿ ಆಗಿತ್ತು. `ಆ ಮಗುವಿನ ಬಣ್ಣ ಹೀಗೇಕಾಗಿದೆ~ ಎಂದೆ. `ಈ ಮಗು ಈಗಷ್ಟೇ ಇಹಲೋಕ ಯಾತ್ರೆ ಮುಗಿಸಿತು. ಪಾಪ! ಅದರ ತಂದೆ- ತಾಯಿ, ಮನೆಯವರೆಲ್ಲರ ಪ್ರಾರ್ಥನೆ, ನಮ್ಮೆಲ್ಲರ ಪ್ರಯತ್ನ ಫಲ ಕೊಡಲಿಲ್ಲ. ಹುಟ್ಟಿದ ದಿನವೇ ತಾಯಿಯಿಂದ ದೂರವಾದರೂ ಈ ಮಗು ಹೇಗೆ ಹಾಯಾಗಿದೆ ನೋಡಿ. ಎಲ್ಲವೂ ವಿಧಿ ಲೀಲೆ~ ಎಂದರು ಆತ. ನನ್ನಿಂದ ಮಾತೇ ಹೊರಡಲಿಲ್ಲ. ಅಲ್ಲಿಂದ ಹೊರಬಂದೆ...

ಯಾರೀ ಕಂದಮ್ಮ?: ಸೆಪ್ಟೆಂಬರ್ 11ರಂದು ರಾತ್ರಿ 12 ಗಂಟೆಯ ಸುಮಾರ ವಿಜಾಪುರದ ರೈಲ್ವೆ ನಿಲ್ದಾಣದಲ್ಲಿ ಕುಳಿತಿದ್ದ ಇಲ್ಲಿಯ ಕುಷ್ಠರೋಗಿಗಳ ಕಾಲೊನಿಯ ನಿವಾಸಿ ಬೋರಮ್ಮ ಲಮಾಣಿ ಅವರ ಉಡಿಯಲ್ಲಿ ಈ ಮಗುವನ್ನು ಹಾಕಿ ಹೋದ ಆ ತಾಯಿ ವಾಪಸ್ಸು ಬಂದಿಲ್ಲ.
 
`ತಾನು ಮೂತ್ರ ವಿಸರ್ಜನೆ ಮಾಡಿ ಬರುವುದಾಗಿ ಹಾಗೂ ಅಲ್ಲಿಯವರೆಗೆ ಈ ಮಗುವನ್ನು ಇಟ್ಟುಕೊಳ್ಳುವಂತೆ ಬಲವಂತ ಮಾಡಿ ಮಗುವನ್ನು ಒಬ್ಬ ಹುಡುಗಿ ಕೊಟ್ಟು ಹೋದಳು. ಆಕೆ ವಾಪಸ್ಸು ಬರಲೇ ಇಲ್ಲ~ ಎಂದು ಬೋರಮ್ಮ, ಮಗುವನ್ನು ತೆಗೆದು ಕೊಂಡು ಮನೆಗೆ ಹೋಗಿದ್ದರು. ತನಗೆ ಎಷ್ಟೇ ಕಷ್ಟ ಬಂದರೂ ಆ ಮಗುವನ್ನು ಸಾಕುವ ಸಂಕಲ್ಪ ತೊಟ್ಟಿದ್ದರು.

ಆದರೆ, ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಗುವನ್ನು ತಮ್ಮ ವಶಕ್ಕೆ ತೆಗೆದು ಕೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಿ ಸಿದ್ದರು. ಹಡೆದವ್ವ-ಪಡೆದವ್ವ ಇಬ್ಬ ರಿಂದಲೂ ದೂರವಾಗಿರುವ ಮಗು ಈಗ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು- ದಾದಿಯರ ಆರೈಕೆಯಲ್ಲಿ `ಹೊಸ ಹುಟ್ಟು~ ಪಡೆಯುತ್ತಿದೆ.

`12.9.2012ರಂದು ಈ ಮಗು ನಮ್ಮಲ್ಲಿ ದಾಖಲಾದಾಗ 900 ಗ್ರಾಂ ತೂಕವಿತ್ತು. ಕಡಿವೆು ತೂಕ- ಅಪೌಷ್ಟಿಕತೆಯಿಂದ ಬಳಲುತ್ತಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಮಗುವನ್ನು ಅತಿ ದಕ್ಷತಾ ವಿಭಾಗದಲ್ಲಿಟ್ಟು ಆರೈಕೆ ಮಾಡುತ್ತಿದ್ದೇವೆ. ಈಗ ದೇಹದ ತೂಕ 1.25 ಕೆ.ಜಿ.ಗೆ ಹೆಚ್ಚಿದ್ದು, ಮಗು ಚೇತರಿಸಿಕೊಳ್ಳುತ್ತಿದೆ.

ಸಂಪೂರ್ಣ ಚೇತರಿಕೆಯಾದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸುತ್ತೇವೆ. ಆಗಸ್ಟ್ 20ರಂದು ಗಾಂಧಿ ಚೌಕ್ ಪೊಲೀಸರು ತಂದು ದಾಖಲಿಸಿದ್ದ ಒಂದು ವರ್ಷದ ಮತ್ತೊಂದು ಅನಾಥ ಮಗುವಿಗೂ ಉಚಪರಿಸಿ ಕಳಿಸಿದ್ದೇವೆ. 2-3 ತಿಂಗಳಿ ಗೊಮ್ಮೆಯಾದರೂ ಇಂತಹ ಅನಾಥ ಮಕ್ಕಳನ್ನು ತಂದು ನಮ್ಮಲ್ಲಿಗೆ ದಾಖಲಿಸುತ್ತಾರೆ~ ಎಂದರು ಡಾ.ಆರ್.ಎಂ. ಸಜ್ಜನ.

`ಯಾವುದೇ ಮಗು ದೊರೆಯಲಿ. ನಮಗೆ ಮೊದಲು ನೆನಪಾಗುವುದು ಸರ್ಕಾರಿ ಆಸ್ಪತ್ರೆ. ಆ ಮಗುವಿನ ಆರೋಗ್ಯದ ಬಗೆಗಿನ ಕಾಳಜಿ ಒಂದೆಡೆಯಾದರೆ, ಅಗತ್ಯ ಪ್ರಕ್ರಿಯೆ ಮುಗಿಯುವವರೆಗೆ ತಕ್ಷಣಕ್ಕೆ ಆ ಮಗುವಿಗೆ ಆಸರೆ ಕಲ್ಪಿಸಬೇಕಿರುತ್ತದೆ. ಅನಾಥ ಮಕ್ಕಳು-ನವಜಾತ ಶಿಶುಗಳಿಗೆ ಮೊದಲ ಉಪಚಾರ ನೀಡುವವರು ಸರ್ಕಾರಿ ಆಸ್ಪತ್ರೆಯವರೇ~ ಎಂಬುದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ.

ಮಕ್ಕಳಿಗೆ ಸಕಲ ಸೌಲಭ್ಯ
ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೆ ಹೆಚ್ಚು. ವಿಜಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ಆರೈಕೆಗೆ ಸಕಲ ಸೌಲಭ್ಯ ಕಲ್ಪಿಸಲಾಗಿದೆ.

`ನವಜಾತ ಶಿಶುಗಳ ಆರೈಕೆಗೆ ಹತ್ತು ಹಾಸಿಗೆಗಳ ಅತಿ ದಕ್ಷತಾ ವಿಭಾಗವಿದೆ. ಎರಡು ಹಾಸಿಗೆಯ ಮಕ್ಕಳ ಅತಿ ದಕ್ಷತಾ ವಿಭಾಗ, ಪೌಷ್ಟಿಕಾಂಶಗಳಿಂದ ಬಳಲುತ್ತಿರುವ ಮಕ್ಕಳ ಆರೈಕೆಗೆ ಹತ್ತು ಹಾಸಿಗೆಗಳ ಪ್ರತ್ಯೇಕ ಕೇಂದ್ರ, ಇತರೆಲ್ಲ ಮಕ್ಕಳ ಆರೈಕೆಗೆ 20 ಹಾಸಿಗೆಗಳ ವಿಭಾಗವಿದೆ. ಡಾ.ಬೀದಿಮನಿ, ಡಾ.ಎಸ್.ಎಚ್. ದಶರಥ ಎಂಬಿಬ್ಬರು ಮಕ್ಕಳ ತಜ್ಞರು ಇದ್ದಾರೆ.

ಡಾ. ರೇಣುಕಾ ಪಾಟೀಲ ಎಂಬ ಮತ್ತೊಬ್ಬ ತಜ್ಞೆಯನ್ನು ನೇಮಿಸಿ ಕೊಳ್ಳಲಾಗಿದೆ. ಡಾ.ಅರುಣಾ ಎಂಬ ವೈದ್ಯರು ಇದೇ ವಿಭಾಗ ನೋಡಿಕೊಳ್ಳುತ್ತಿದ್ದಾರೆ. 12 ಜನ ಸ್ಟಾಫ್ ನರ್ಸ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ~ ಎಂದು ಜಿಲ್ಲಾ ಸರ್ಜನ್ ಹೇಳಿದರು.

`ನವಜಾತ ಶಿಶುಗಳು, ಮಕ್ಕಳಿಗೆ ಈ ಎಲ್ಲ ವಿಭಾಗಗಳಲ್ಲಿ ಉಚಿತ ಉಪಚಾರ ನೀಡಲಾಗುತ್ತಿದೆ. ಎಪಿಎಲ್, ಬಿಪಿಎಲ್ ಯಾವುದೇ ಕುಟುಂಬವಿರಲಿ. ಅವರಿಗೆ ಇಲ್ಲಿ ಚಿಕಿತ್ಸೆ ಉಚಿತ. ನಮ್ಮಲ್ಲಿಯೇ ಬ್ಲಡ್ ಬ್ಯಾಂಕ್ ಇದೆ. ಅವಶ್ಯಬಿದ್ದರೆ ರಕ್ತವನ್ನೂ ಉಚಿತವಾಗಿ ನೀಡುತ್ತೇವೆ. ಮಕ್ಕಳಿಗೆ ಎಲ್ಲ ಬಗೆಯ ಲಸಿಕೆಯನ್ನು ನಿತ್ಯವೂ ಉಚಿತವಾಗಿ ನೀಡಲಾ ಗುತ್ತಿದೆ. ಇವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು~ ಎನ್ನುವ ಕಳಕಳಿ ಇವರದ್ದು.

426 ಹಾಸಿಗೆಗಳ ಈ ಆಸ್ಪತ್ರೆಗೆ ಸರ್ಕಾರ ಕಲರ್ ಡಾಪ್ಲರ್ ಯಂತ್ರ ಕಳಿಸಿದೆ. ಟೆಲಿ ಮೆಡಿಸಿನ್ ಸೌಲಭ್ಯವೂ ಇದೆ. ನೆಪ್ರಾಲಾಜಿಸ್ಟ್ ಇದ್ದಾರೆ. ಆದರೆ, ಫಿಜಿಷಿಯನ್ ಇಲ್ಲ. ಹೀಗಾಗಿ ಇಲ್ಲಿರುವ ಆರು ವೆಂಟಿ ಲೇಟರ್, 10 ಐಸಿಯು ಬೆಡ್‌ಗಳ ಬಳಕೆ ಇಲ್ಲದಾಗಿದೆ. ಹೃದಯ ತಜ್ಞರ ಅಗತ್ಯವೂ ಇದೆ ಎನ್ನುತ್ತಾರೆ ಅಲ್ಲಿಯ ಸಿಬ್ಬಂದಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT