ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯ: ಅಮರಸಿಂಗ್ ಗೆ ಹೈಕೋರ್ಟ್ ಜಾಮೀನು

Last Updated 24 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಸಂಸದ ಅಮರಸಿಂಗ್ ಅವರಿಗೆ ದೆಹಲಿ ಹೈಕೋರ್ಟ್ ಅಸ್ವಾಸ್ಥ್ಯದ ಕಾರಣಕ್ಕಾಗಿ ಸೋಮವಾರ ಜಾಮೀನು ನೀಡಿತು.
 
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕೇಟ್ ಅವರ ಏಕಸದಸ್ಯ ಪೀಠವು ಅಮರಸಿಂಗ್ ಅವರಿಗೆ 50 ಲಕ್ಷ ರೂಪಾಯಿಯ ವೈಯಕ್ತಿಕ ಬಾಂಡ್‌ ನೀಡುವಂತೆ  ಮತ್ತು ಅಷ್ಟೇ ಮೊತ್ತದ ಎರಡು ಭದ್ರತಾ ಖಾತರಿಗಳನ್ನು ನೀಡುವಂತೆಯೂ ಸೂಚಿಸಿತು. ಜೊತೆಗೆ  ತನ್ನ ಅನುಮತಿ ಇಲ್ಲದೆ ದೇಶ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂಬ ಷರತ್ತನ್ನೂ ವಿಧಿಸಿತು.

ನ್ಯಾಯಾಲಯಕ್ಕೆ ಪಾಸ್ ಪೋರ್ಟ್ ನ್ನು ಒಪ್ಪಿಸುವಂತೆ ಮತ್ತು ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರದಂತೆಯೂ ಪೀಠವು ಸಿಂಗ್ ಅವರಿಗೆ ಆಜ್ಞಾಪಿಸಿತು.

ಈ ಜಾಮೀನು ಲಭಿಸಿದ ಕಾರಣ ಅಮರ್ ಸಿಂಗ್ ಅವರು ವಿಚಾರಣಾ ಅವಧಿಯುದ್ದಕ್ಕೂ ಸೆರೆಮನೆಯಿಂದ ಹೊರಗಿರಬಹುದು.

ಸಂಸತ್ ಸದಸ್ಯರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದು, ನಿರಂತರ ನಿಗಾ ಅಗತ್ಯ ಇದೆ ಎಂಬುದಾಗಿ ದೆಹಲಿಯ ಏಮ್ಸ್ ನೀಡಿದ ವೈದ್ಯಕೀಯ ವರದಿಯನ್ನು ಪೊಲೀಸರು ಸಲ್ಲಿಸಿದ ಬಳಿಕ ನ್ಯಾಯಾಲಯವು ಸಿಂಗ್ ಅವರಿಗೆ ಈ ಜಾಮೀನು ಮಂಜೂರು ಮಾಡಿತು.

ಸ್ಥಳೀಯ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕ್ರಮವನ್ನು  ಪ್ರಶ್ನಿಸಿ ಅಮರಸಿಂಗ್ ಅವರು ಸಲ್ಲಿಸಿದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಆದೇಶ ನೀಡಿದೆ.

ಸಿಂಗ್ ಅವರು ಸೆಪ್ಟೆಂಬರ 6 ರಂದು ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದ ಸಮನ್ಸ್‌ಗೆ ಉತ್ತರಿಸಲು ಸ್ಥಳೀಯ ತೀಸ್ ಹಜಾರಿ ಕೋರ್ಟ್‌ಗೆ ಹಾಜರಾದ ವೇಳೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಬಂಧನದ ನಂತರ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿ ಅವರಿಗೆ ವಾಂತಿ ಭೇದಿಯಾದ ಕಾರಣ ಅವರನ್ನು ಸೆಪ್ಟೆಂಬರ್ 12 ರಂದು ದೆಹಲಿಯ ಎಐಐಎಂಎಸ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯವು ಅವರಿಗೆ ಸೆಪ್ಟೆಂಬರ್ 15ರ ವರೆಗೆ ಮಧ್ಯಂತರ ಜಾಮೀನು ನೀಡಿತ್ತು.

ನಂತರ ಅದನ್ನು ಸೆಪ್ಟೆಂಬರ್ 28ರ ವರೆಗೆ ವಿಸ್ತರಿಸಿತ್ತು. ಬಳಿಕಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿ ಕೋರ್ಟ್ ಕಾಯಂ ಜಾಮೀನು ಹಾಗೂ ಮಧ್ಯಂತರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು. 






 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT