ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯಕ್ಕೆ ಬೀಗ ಮುದ್ರೆ! ಭಾಗ 10

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಅದಿತಿ ಮುದ್ರೆ
ಈ ಮುದ್ರೆಯ ಅಭ್ಯಾಸದಿಂದ ಆಕಳಿಕೆ, ಸೀನು ತಡೆಗಟ್ಟಬಹುದು.
ಅಭ್ಯಾಸ ಕ್ರಮ: ಹೆಬ್ಬೆರಳಿನ ಅಗ್ರ ಭಾಗವನ್ನು ಉಂಗುರ ಬೆರಳಿನ ಕೆಳಗೆ ಮೃದುವಾಗಿ ಒತ್ತಿ ಇಡಬೇಕು.
ಪ್ರಯೋಜನ
ಮುಂಜಾನೆ ಎದ್ದಾಗ ಕೆಲವೊಮ್ಮೆ ಬರುವ ಸೀನನ್ನು ತಡೆಗಟ್ಟಬಹುದು. ಧ್ಯಾನ, ಪ್ರಾಣಾಯಾಮ, ಜಪದ ಸಂದರ್ಭದಲ್ಲಿ ಬರುವ ಆಕಳಿಕೆ, ಸೀನನ್ನು ನಿವಾರಿಸುವಲ್ಲಿ ಸಹಕಾರಿ. ಸಾಧನೆ ಮಾಡುವ ಮುಂಚೆ ಸುಮಾರು 5-– 10 ನಿಮಿಷ ಅಭ್ಯಾಸ ಮಾಡಿದರೆ ಸಾಕು.

ಶೂನ್ಯ ವಾಯು ಮುದ್ರೆ
ಈ ಮುದ್ರೆಯ ಅಭ್ಯಾಸದಿಂದ ಕಿವಿ ನೋವು ಮತ್ತು ತಲೆ ನೋವಿಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಬಹುದು.

ಅಭ್ಯಾಸ ಕ್ರಮ: ಈ  ಮುದ್ರೆಯಲ್ಲಿ ತೋರು ಬೆರಳು ಮತ್ತು ಮಧ್ಯದ ಬೆರಳುಗಳನ್ನು ಹೆಬ್ಬೆರಳಿನ ಬುಡಕ್ಕೆ ಮೃದುವಾಗಿ ಒತ್ತಿ ಇಡಬೇಕು.  ಹೆಬ್ಬೆರಳನ್ನು ಮಡಚಿದ ಬೆರಳ ಮೇಲೆ ಇಡಬೇಕು. ಉಳಿದ ಉಂಗುರ ಬೆರಳು ಮತ್ತು ಕಿರುಬೆರಳನ್ನು ನೇರವಾಗಿಸಬೇಕು.
ಪ್ರಯೋಜನ
ತಲೆ ನೋವು, ಕಿವಿ ನೋವು, ಬೆನ್ನು ನೋವು, ಗಂಟಲು ನೋವು ಮತ್ತು ಸಂದು ನೋವುಗಳ ನಿಯಂತ್ರಣಕ್ಕೆ ಈ ಮುದ್ರೆ ತುಂಬಾ ಸಹಕಾರಿ. ಸುಮಾರು 20-– 30 ನಿಮಿಷದವರೆಗೆ ಅಭ್ಯಾಸ ಮಾಡಿದರೆ ಸಾಕು. ಬಳಿಕ 10 ನಿಮಿಷ ಪ್ರಾಣ ಮುದ್ರೆಯನ್ನು ಅಭ್ಯಾಸ  ಮಾಡಬೇಕು.

ಯೋನಿ ಮುದ್ರೆ
ಎರಡೂ ಕೈಗಳ ಬೆರಳುಗಳನ್ನು ಪರಸ್ಪರ ಸೇರಿಸಿ, ಹೆಬ್ಬೆರಳಿನ ತುದಿಯನ್ನು ತಾಗಿಸಿ ಅದನ್ನು ಮೇಲ್ಮುಖವಾಗಿರುವಂತೆ ಹಿಡಿಯಬೇಕು. 

ತೋರು ಬೆರಳುಗಳನ್ನು ಒಂದಕ್ಕೊಂದು ತುದಿ ತಾಗುವಂತೆ ಕೆಳಮುಖವಾಗಿ ಇಡಬೇಕು. ಉಳಿದ ಬೆರಳುಗಳು ಪರಸ್ಪರ ಒಂದರೊಳಗೊಂದು ಸೇರಿರಬೇಕು. ಹೀಗೆ ಮಾಡಿದ ಈ ಮುದ್ರೆಯನ್ನು ಹೊಟ್ಟೆಗೆ ತಾಗಿಸಿ ಹಿಡಿಯಬೇಕು. ಹೆಬ್ಬೆರಳು ಮೇಲ್ಮುಖವಾಗಿಯೂ ತೋರು ಬೆರಳು ಕೆಳಮುಖವಾಗಿಯೂ ಇರುವಂತೆ ನೋಡಿಕೊಳ್ಳಬೇಕು.
ಪ್ರಯೋಜನ
ಗರ್ಭಾಶಯದ ಆರೋಗ್ಯ ವೃದ್ಧಿ, ತಿಂಗಳ ಸ್ರಾವದ ನೋವು ಗುಣವಾಗುತ್ತದೆ. ಋತುಚಕ್ರದ ಇತರ ಸಮಸ್ಯೆ ಪರಿಹಾರ­ಆಗುತ್ತದೆ. ಅಲ್ಲದೆ ಚೈತನ್ಯ ಮೂಡಿ ಮನಸ್ಸು ನಿರ್ಮಲವಾಗುತ್ತದೆ. 15 ನಿಮಿಷ ಈ ಮುದ್ರೆಯನ್ನು ಮಾಡಬಹುದು.
 

ಗಮನಿಸಿ
ಮುದ್ರೆಗಳನ್ನು ಕುಳಿತಾಗ, ನಿಂತಾಗ, ಪ್ರಯಾಣಿಸುವಾಗ, ಮಲಗಿದ್ದಾಗ, ಟಿ.ವಿ ವೀಕ್ಷಿಸುವಾಗ... ಹೀಗೆ ಯಾವಾಗ ಬೇಕಾದರೂ ಮಾಡಬಹುದು. ಆದರೆ ವಿಶೇಷವಾಗಿ ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ, ನೆಮ್ಮದಿ ದೊರಕುತ್ತದೆ. ಎರಡೂ ಕೈಗಳಿಂದ ಮಾಡಿದರೆ ಹೆಚ್ಚು ಲಾಭ. ಮುದ್ರೆಗಳನ್ನು ಮಾಡುವಾಗ ಮನಸ್ಸು ನಿರ್ಮಲವಾಗಿರಲಿ. ಕೈಗಳು ಸಡಿಲವಾಗಿರಲಿ. ಹಸ್ತ ಮೇಲ್ಮಖವಾಗಿರಲಿ. ಮುಖದಲ್ಲಿ ಮುಗುಳ್ನಗು ಇರಲಿ.
ಚಿಕಿತ್ಸಾ ರೂಪದಲ್ಲಿ ಯಾವುದೇ ಮುದ್ರೆಗಳನ್ನು ಮಾಡುವವರು ಕೊನೆಯಲ್ಲಿ 10 ನಿಮಿಷ ಪ್ರಾಣಮುದ್ರೆ ಹಾಕಬೇಕಾದುದು ಕಡ್ಡಾಯ. ಮುದ್ರೆಗಳನ್ನು ಮಾಡುವಾಗ ಉಸಿರಾಟ ಸಹಜವಾಗಿರಲಿ.

-ಗೋಪಾಲಕೃಷ್ಣ ದೇಲಂಪಾಡಿ
 

ಇತ್ತೀಚೆಗೆ ಬಹುತೇಕರು ಪದೇ ಪದೇ ಒತ್ತಡಕ್ಕೆ ಒಳಗಾಗಿ ರೋಗಗಳಿಗೆ ತುತ್ತಾಗುವುದನ್ನು ಕಾಣುತ್ತೇವೆ. ಉತ್ತಮ ಜೀವನ ಶೈಲಿ ಮತ್ತು ಆರೋಗ್ಯ ರಕ್ಷಣೆಗೆ ಪತಂಜಲಿ ಋಷಿಗಳ ಅಷ್ಟಾಂಗ ಯೋಗದೊಂದಿಗೆ ನಮ್ಮ ಪೂರ್ವಜರು ತಿಳಿಸಿರುವ ಮುದ್ರೆಗಳು ಬಹಳ ಸಹಕಾರಿ. ಮುಖ್ಯವಾಗಿ ಇದರಿಂದ ಕೈ-ಕಾಲಿನ ಬೆರಳುಗಳ ಹೊರ ವಲಯದಲ್ಲಿ ಚೈತನ್ಯ ಶಕ್ತಿ ಹರಿದು ಹೋಗುತ್ತದೆ. ಈ ಶಕ್ತಿಯನ್ನು ದೇಹದ ಒಳಕ್ಕೆ ತರಲು ಮುದ್ರೆಗಳು ನೆರವಾಗುತ್ತವೆ. ನರಮಂಡಲವನ್ನು ಚೇತನಗೊಳಿಸಿ, ದೇಹದಲ್ಲಿ ಶಕ್ತಿ ಸಂಚಾರವನ್ನು ಸುಗಮಗೊಳಿಸುತ್ತವೆ.
ಮುದ್ರೆಗಳಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಅದ್ಭುತ ಪರಿಣಾಮ ಬೀರುವ ಮುದ್ರೆಗಳನ್ನು ನಿತ್ಯ ಮಾಡುತ್ತಾ ಬಂದಲ್ಲಿ ಸದೃಢವಾಗಿ, ಆರೋಗ್ಯಕರವಾಗಿ ಬಾಳಬಹುದು. ಯಾರ ಸಹಾಯವೂ ಇಲ್ಲದೆ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಮುದ್ರೆಗಳಂತಹ ಸರಳ, ಸುಂದರ, ಸಹಜ ತಕ್ಷಣದ ಉಪಾಯ ಮತ್ತೊಂದಿಲ್ಲ.
(ಸರಣಿ ಕೊನೆಗೊಂಡಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT