ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಹುತಕ್ಕೆ ಬಾಯ್ದೆರೆದ ಗುಂಡಿಗಳು!

Last Updated 28 ಫೆಬ್ರುವರಿ 2011, 7:10 IST
ಅಕ್ಷರ ಗಾತ್ರ

ರಾಯಚೂರು: ನಗರದ ಹದಗೆಟ್ಟ ರಸ್ತೆ ದುರಸ್ತಿಯ ಬಗ್ಗೆ ಕೊನೆಗೂ ಎಚ್ಚೆತ್ತ ನಗರಸಭೆಯು ವಿಶೇಷ ಸಭೆ ನಡೆಸಿ ನಗರದ ವಿವಿಧ ವಾರ್ಡ್‌ನಲ್ಲಿರುವ 71 ಪ್ರಮುಖ ರಸ್ತೆ ದುರಸ್ತಿಗೆ 10 ಕೋಟಿ ದೊರಕಿಸಲು ಜಿಲ್ಲಾಧಿ ಕಾರಿಗಳಿಗೆ ಮನವಿ ಮಾಡಿದೆ. ಆದರೆ ಇಲ್ಲೊಂದು ರಸ್ತೆ ಇದೆ. ನಗರದ ಅತ್ಯಂತ ಪ್ರಮುಖ ಹಾಗೂ ಭಾರಿ ವಾಹನ ಸಂಚಾರ ದಿಂದ ಕೂಡಿರುವ ಈ ರಸ್ತೆ ಕಳೆದ ಮೂರ್ನಾಲ್ಕು ತಿಂಗಳಿಂದ ದುರ್ನಾತ ಬೀರುತ್ತಿದೆ!

ನಗರದ ಬಸವೇಶ್ವರ ವೃತ್ತದಿಂದ ಗಂಜ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಗೋಶಾಲಾ ರಸ್ತೆಯ ಗೋಳಿದು. ಹೆಚ್ಚು ವಾಹನ ಸಂಚಾರ ದಟ್ಟಣೆ ಯಿಂದ ಕೂಡಿರುವ ಈ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವುದು, ದ್ವಿಚಕ್ರವಾಹನದಲ್ಲಿ ತೆರಳಲು ಭಯ ಹುಟ್ಟಿಸುವಂತಿದೆ. ಯಮಸ್ವರೂಪಿ ವಾಹನಗಳು ಅಬ್ಬರಿಸುತ್ತ ಬರುತ್ತಿದ್ದರೆ ರಸ್ತೆ ಪಕ್ಕ ನಿಲ್ಲಲೂ ಜಾಗೆ ಇಲ್ಲದಂಥ ಸ್ಥಿತಿ ಇದೆ.

ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಹೊಸದಾಗಿ ಪೈಪ್ ಲೈನ್ ಅಳವಡಿಕೆಗೆ ಎಲ್ಲೆಂದರಲ್ಲಿ ಅಗೆದಿದ್ದರೆ ಮತ್ತೊಂದೆಡೆ ಚರಂಡಿಗಳು ಮುಚ್ಚಿ ಹೋಗಿವೆ!
ಚರಂಡಿಯಲ್ಲಿ ಹರಿದು ಮುಖ್ಯ ನಾಲೆಗೆ ಸೇರಿಕೊಳ್ಳಬೇಕಾದ ಚರಂಡಿ ನೀರು, ತ್ಯಾಜ್ಯ ಎಲ್ಲವೂ ಈ ರಸ್ತೆ ಪಕ್ಕವೇ ಎಲ್ಲೆಂದರಲ್ಲಿ ಗುಂಡಿಯಾಗಿ ನಿಲ್ಲುತ್ತಿದೆ. ಆಸ್ಪತ್ರೆ, ಹೊಟೆಲ್‌ನ ತ್ಯಾಜ್ಯದ ದುರ್ವಾಸನೆ ವಾಂತಿ ಬರಿಸುತ್ತದೆ.
 
ಒಂದಲ್ಲ ಎರಡಲ್ಲ. ಮೂರ್ನಾಲ್ಕು ತಿಂಗಳಿಂದ ಇದೇ ರೀತಿ ಚರಂಡಿ ನೀರು ಹರಿಯುತ್ತಿದೆ. ದುರಸ್ತಿ ಕಾಮಗಾರಿ ಮಾತ್ರ ಕೈಗೊಂಡಿಲ್ಲ. ಎಲ್ಲೆಂದರಲ್ಲಿ ಮ್ಯಾನ್‌ಹೋಲ್‌ಗಳು ಅನಾಹುತಕ್ಕೆ ಬಾಯ್ತೆರೆದು ಕುಳಿತಿವೆ. ದ್ವಿಚಕ್ರ ವಾಹನ ಸವಾರರು ಅಪ್ಪಿತಪ್ಪಿ ರಸ್ತೆ ಬಿಟ್ಟು ಪಕ್ಕಕ್ಕೆ ಇಳಿದರೆ ಮ್ಯಾನ್‌ಹೋಲ್ ಪಾಲಾಗುವಂಥ ಅಪಾಯದ ಸ್ಥಿತಿ ಕಂಡು ಬರುತ್ತದೆ.

ಕುಡಿಯುವ ನೀರು ಪೈಪ್ ಅಳವಡಿಕೆ ಕಾರಣದಿಂದ ಈ ರೀತಿ ಆಗಿದೆ. ದುರಸ್ತಿಪಡಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ಭರವಸೆ ನೀಡುತ್ತಾರೆ. ಆದರೆ, ಈ ಚರಂಡಿ ನೀರು ಹರಿಯುತ್ತಿರುವುದು ಮೂರ್ನಾಲ್ಕು ತಿಂಗಳಿಂದ. ಹೀಗಾಗಿ ಅಧಿಕಾರಿಗಳು ಈ ರೀತಿ ಉತ್ತರಿಸುವ ಮೂಲಕ ಸಾರ್ವಜನಿಕರನ್ನೇ ದಿಕ್ಕುತಪ್ಪಿಸುವ ಯತ್ನ ಮಾಡಿದ್ದಾರೆ. ಈ ಸ್ಥಿತಿಯಲ್ಲಿ ರಸ್ತೆ ಪಕ್ಕದ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುವುದು ಹೇಗೆ? ಜೀವನ ನಡೆಸುವುದು ಹೇಗೆ ಎಂದು ವ್ಯಾಪಾರಸ್ಥರು ಸಮಸ್ಯೆ ಹೇಳಿಕೊಳ್ಳುತ್ತಾರೆ. ಈ ರಸ್ತೆ ಇಲ್ಲಿಯವರೆಗೆ ಸದಾ ಧೂಳು, ಭಾರಿ ವಾಹನ ಸದ್ದಿನಿಂದ, ಟ್ರಾಫಿಕ್ ಕಿರಿ ಕಿರಿಯಿಂದ ಕೂಡಿರುತ್ತಿತ್ತು.

ಈಗ ಈ ಚರಂಡಿ ದುರ್ನಾತ ಅದಕ್ಕೆ ಸೇರ್ಪಡೆಯಾಗಿದೆ. ದುರ್ನಾ ತಕ್ಕೆ ಜನತೆ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಓಡಾಡಬೇಕಾಗಿದೆ. ಈ ಚರಂಡಿ ನೀರು ಮತ್ತು ತ್ಯಾಜ್ಯ ಕುಡಿಯುವ ನೀರು ಪೈಪ್ ಸೇರಿದರೆ ಜನರ ಗತಿಏನು? ಇನ್ನಾದರೂ ನಗರಸಭೆ ಎಚ್ಚೆತ್ತುಕೊಳ್ಳಬೇಕು ಎಂದು ಜನತೆ ಒತ್ತಾಯಿಸುತ್ತಿದ್ದಾರೆ. ನಗರಸಭೆ ಸದಸ್ಯನ ಗೋಳು: ಕಳೆದ ಎರಡು ಮೂರು ಸಭೆಯಲ್ಲಿ ನಗರಸಭೆ ಸದಸ್ಯ ಯೂಸೂಫ್‌ಖಾನ್ ಈ ವಿಷಯ ಪ್ರಸ್ತಾಪಿಸಿದರೂ ನಗರಸಭೆ ತಾಂತ್ರಿಕ ವಿಭಾಗದ ಅಧಿಕಾರಿಗಳು ಏನಾದರೊಂದು ಸಬೂಬು ಹೇಳಿಕೊಂಡು ಬಂದಿದ್ದಾರೆ.  ಶುದ್ಧ ನೀರು ಪೂರೈಸಲು ಹಾಕಿ ರುವ ಹೊಸ ಕೊಳವೆಯಲ್ಲಿ ಚರಂಡಿ ನೀರು ಮನೆ ಮನೆ ಸೇರಿ ಅಲ್ಲಿನ ಜನತೆ ಅನಾರೋಗ್ಯಕ್ಕೀಡಾಗುವ ಮುನ್ನ ನಗರಸಭೆ ನಿದ್ದೆಯಿಂದ ಎದ್ದರೆ ಒಳ್ಳೆಯದಾದೀತೇನೋ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT