ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಮೇಶನ್: ಅವಕಾಶಗಳ ಲೋಕ

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ಅ ನಿಮೇಶನ್‌ನ ಚಮತ್ಕಾರಿಕೆಗೆ ಮಾರುಹೋಗಿರುವ ಯುವಜನರು ಹೆಚ್ಚಾಗಿ ಅದರೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಅನಿಮೇಶನ್ ರಂಗದಲ್ಲಿ ವೃತ್ತಿ ಆರಂಭಿಸ ಬಯಸುವರಿಗೆ, ತಮ್ಮ ಸುತ್ತಲಿನ ಪ್ರಪಂಚದ ಆಗುಹೋಗುಗಳ ಬಗ್ಗೆ, ಹಲವಾರು ವಿಷಯಗಳ ಜ್ಞಾನ, ಬುದ್ಧಿ ಸಾಮರ್ಥ್ಯ ಮತ್ತು ಸೃಜನಶೀಲತೆ ಇರಬೇಕಾಗುತ್ತದೆ. ಕಂಪ್ಯೂಟರ್ ತಂತ್ರಜ್ಞಾನದ ಅಡಿಪಾಯದ ಮೇಲೆ ಹುಟ್ಟಿ ಬೃಹದಾಕಾರವಾಗಿ ಆಲದ ಮರದಂತೆ ಬೆಳೆದು ನಿಂತಿರುವ ಈ ಕಾರ್ಯಕ್ಷೇತ್ರದಿಂದಾಗಿ ಸಿನಿಮಾ ನಿರ್ಮಾಣದಲ್ಲಿ ಗಣನೀಯ ಬದಲಾವಣೆ ಉಂಟಾಗಿದೆ.
ಇಂದಿನ ಜಾಗತೀಕರಣ ಮತ್ತು ಖಾಸಗೀಕರಣದ ಯುಗದಲ್ಲಿ ಭಾರತ ಆನಿಮೇಶನ್ ಮತ್ತು ಕಂಪ್ಯೂಟರ್ ಗೇಮ್ಸ್ (ಆಟಗಳನ್ನು) ವೈಶಿಷ್ಟ್ಯ ಪೂರ್ಣವಾಗಿ ಅಭಿವೃದ್ಧಿಪಡಿಸುತ್ತಿರುವುದರಿಂದ, ಜಗತ್ತಿನ ಅತ್ಯುತ್ತಮ ಹೊರಗುತ್ತಿಗೆಯ ಮೂಲವಾಗಿ ಮೇಲ್ಪಂಕ್ತಿಯಲ್ಲಿ ನಿಂತಿದೆ.

ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಿನಿಮಾ ನಿರ್ಮಾಣ ಮತ್ತು ಕಂಪ್ಯೂಟರ್ ಗೇಮ್‌ಗಳನ್ನು (ಆಟ) ಅಭಿವೃದ್ಧಿ ಪಡಿಸುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಭಾರತದಲ್ಲಿನ ತಂತ್ರಜ್ಞರು ಕಂಪ್ಯೂಟರ್ ಗೇಮ್‌ಗಳನ್ನು ರೂಪಿಸಬಲ್ಲರು. ವಿದೇಶಿಗರಿಗೆ ಇದು ಲಾಭದಾಯಕವಾದರೆ, ಭಾರತದಲ್ಲಿ ಇದು ಅಸಂಖ್ಯಾತ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಕಳೆದ ದಶಕದಿಂದ ಇಲ್ಲಿಯವರೆಗೆ ಹಲವಾರು ಅತ್ಯುತ್ತಮ ಚಲನಚಿತ್ರ ನಿರ್ಮಾಣ ಗೃಹಗಳು, ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಕಂಪೆನಿಗಳು, ಭಾರತೀಯ ಆನಿಮೇಶನ್ ಕಂಪೆನಿಗಳೊಂದಿಗೆ ಕಾರ್ಯ ನಿರ್ವಹಿಸಿದಾಗ ಪಡೆದ ಲಾಭ ಮತ್ತು ಅತ್ಯುತ್ತಮ ವೃತ್ತಿಪರತೆಯ ಫಲಿತಾಂಶದಿಂದಾಗಿ ನಮ್ಮ ದೇಶ ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ.

ವಿಸ್ತಾರವಾದ ಕ್ಷೇತ್ರ: ಅನಿಮೇಶನ್ ಬಹು ವಿಸ್ತಾರವಾದ ಕ್ಷೇತ್ರ. ಅದರಲ್ಲಿ ಹಲವು ನಿರ್ದಿಷ್ಟ ವಲಯಗಳಿದ್ದು, ಬಹು ವಲಯಗಳ (ಮಲ್ಟಿ ಡಿಸಿಪ್ಲೀನರಿ) ಸಂಪರ್ಕ ಹೊಂದಿದೆ. ಇದರಲ್ಲಿ ಯಾವ ಕ್ಷೇತ್ರಕ್ಕೆ ಸರಿಹೊಂದುತ್ತೀರಿ, ಯಾವ ಕ್ಷೇತ್ರ ನಿಮ್ಮನ್ನು ಆಕರ್ಷಿಸುತ್ತದೆ ಎನ್ನುವುದನ್ನು ಅನಿಮೇಶನ್‌ನಲ್ಲಿ ವೃತ್ತಿ ಆರಂಭಿಸ ಬಯಸುವ ಯುವಜನರೇ ನಿರ್ಧರಿಸಬೇಕು.

ಅನಿಮೇಶನ್ ವೃತ್ತಿಯೊಳಗೊಂಡಿರುವ
ಕೆಲವು ವಿಷಯಗಳು ಹೀಗಿವೆ.

ಮಾಡೆಲಿಂಗ್: ಈ ವಲಯವು ವಿವಿಧ ಭಂಗಿಗಳ ಚಿತ್ರಗಳನ್ನು ಬರೆಯುವುದು, ಸ್ಕೆಚ್‌ಗಳನ್ನು ಮೂಡಿಸುವುದು, ಕ್ಲೇ ಮಾಡೆಲಿಂಗ್ ಮತ್ತು ಮೌಲ್ಡಿಂಗ್ ಅನ್ನು ಒಳಗೊಂಡಿದೆ.ಟೆಕ್ಸ್‌ಚರಿಂಗ್: ಇದು ಕಲರ್ ಥಿಯರಿ, ಪೇಂಟಿಂಗ್, ಪೆನ್ಸಿಲ್ ಶೇಡಿಂಗ್, ಫೋಟೊಷಾಪ್ ಒಳಗೊಂಡಿದೆ.ಲೈಟಿಂಗ್: ಲೈಟಿಂಗ್ ಫೋಟೊಗ್ರಫಿಯನ್ನು ಒಳಗೊಂಡಿದೆ.ರಿಗ್ಗಿಂಗ್: ರಿಗ್ಗಿಂಗ್ ಕಂಪ್ಯೂಟರ್‌ನ ಕಾರ್ಯಕ್ರಮಗಳಿಗೆ ಸಂಬಂಧಿಸಿದೆ. ಅದರಲ್ಲಿ ಲಾಂಗ್ವೇಜ್ ಪ್ರೋಗ್ರಾಂ ವಿಷಯಗಳಿರುತ್ತವೆ.

ಸಾಫ್ಟ್‌ವೇರ್ ಅಂಡ್ ಕೋಡಿಂಗ್: ಎಕ್ಸ್.ಹೆಚ್.ಟಿ.ಎಂ.ಎಲ್(XHTML) ಲ್ಯಾಂಗ್‌ವೇಜಸ್, ಸಿಎಸ್‌ಎಸ್‌ಎಕ್ಸ್ ಎಂ.ಎಲ್(CSSXML) ಜಾವ(JAVA) ಸ್ಕ್ರಿಪ್ಟ್ ಬೇಸಿಕ್ಸ್, ಫೋಟೋಶಾಪ್, ಸಿಎಸ್4 (C.S.4),ಅಡೋಬ್, ಫೈರ್‌ವರ್ಕ್ಸ್ ಸಿಎಸ್4, ಫ್ಲಾಶ್‌ವಿತ್ ಆಕ್ಷನ್ ಸ್ಕ್ರಿಪ್ಟ್, ಡ್ರೀಮ್ ವೀವರ್, ಮಾಯ ಡೈನಾಮಿಕ್ಸ್, ಬ್ಲಾಸ್ಟ್ ಕೋಡ್, ರಿಯಲ್, ಕಂಪ್ಯೂಟರ್ ಗ್ರಾಫಿಕ್ಸ್.

ಕಂಪ್ಯೂಟರ್ ಕ್ರೀಡೆಗಳನ್ನು ಅಭಿವೃದ್ಧಿಪಡಿಸುವ ಉದ್ಯಮವನ್ನು ಪ್ರವೇಶಿಸಬಯಸುವರಿಗೆ ಕಂಪ್ಯೂಟರ್ ಗೇಮ್ (ಆಟಗಳ) ಬ್ರವ್ಸರ್ ಬೇಸ್ ಗೇಮ್, ಪ್ಲೇಯರ್ ಇನ್‌ಫ್ರಾಸ್ಟ್ರಕ್ಚರ್ ಗೇಮ್ ಇಂಜಿನ್ ಪ್ರೋ ತ್ರೀಡಿ ಮತ್ತು ಟುಡಿ ಗ್ರಾಫಿಕ್ಸ್ ಅಭಿವೃದ್ಧಿಪಡಿಸಲು ವಿವಿಧ ತಳಹದಿಯ ಕೌಶಲ ಮತ್ತು ತಂತ್ರಜ್ಞಾನ ಅತ್ಯಾವಶ್ಯಕ.

ಅನಿಮೇಶನ್‌ನಲ್ಲಿ ಹಲವಾರು ಒಳ್ಳೆಯ ಶೈಕ್ಷಣಿಕ ಸಂಸ್ಥೆಗಳು ತರಬೇತಿ ನೀಡುತ್ತವೆ. ಈ ಕೋರ್ಸಿಗೆ ದಾಖಲಾಗುವ ಮುನ್ನ ಆಸಕ್ತರು ತಮ್ಮ ಬುದ್ದಿ ಸಾಮರ್ಥ್ಯದ ಬಗ್ಗೆ ಸರಿಯಾದ ಅರಿವು ಇದ್ದು, ಸ್ವಸಾಮರ್ಥ್ಯದ ಮೌಲ್ಯಮಾಪನವನ್ನು ಮಾಡಿಕೊಳ್ಳುವುದು ಹೆಚ್ಚು ಸೂಕ್ತ. ಸಾಮರ್ಥ್ಯ ಮತ್ತು ಆಸಕ್ತಿ ಇದ್ದರೆ ತರಬೇತಿಯ ನಂತರ ಈ ವಲಯದಲ್ಲಿ ಹೆಚ್ಚಿನ ಜ್ಞಾನ ಮತ್ತು ಪರಿಣಿತಿ ಲಭ್ಯವಾಗುತ್ತದೆ.

ಅನಿಮೇಶನ್ ಜಗತ್ತಿನಲ್ಲಿ ಸ್ಥಿರವಾದ ಹೆಜ್ಜೆಯೂರಲು ಬಯಸಿದ್ದಲ್ಲಿ ತಮ್ಮ ವೃತ್ತಿ ಕಾರ್ಯವನ್ನು ಅತ್ಯಂತ ಶ್ರದ್ಧೆ ಮತ್ತು ವಿಶಿಷ್ಟ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ತನ್ನ ಇತರ ಕೆಲಸ ಕಾರ್ಯಗಳಿಗೆ ಅಲ್ಪ ಮಹತ್ವ ನೀಡಿ ಸಮಯದ ಪರಿವೆಯೇ ಇಲ್ಲದೇ ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ಒಬ್ಬ ಅನಿಮೇಟರ್, ಗುಂಪು ಕ್ರೀಡೆಗಳ ಒಬ್ಬ ಉತ್ತಮ ಆಟಗಾರನಂತೆ ಇತರ ಆಟಗಾರರೊಂದಿಗೆ ಹೊಂದಾಣಿಕೆಯಿಂದ ಆಟವಾಡುವಂತೆಯೇ ಇತರ ವಿಭಾಗದ ವೃತ್ತಿಪರರೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ.ಗುಂಪಿನ ನಾಯಕರ (ಟೀಮ್ ಲೀಡರ್) ನಿರೀಕ್ಷೆಯನ್ನು ಸರಿಯಾಗಿ ಗ್ರಹಿಸಿ ಅತ್ಯಂತ ಉತ್ತಮವಾದ ಚಿತ್ರವನ್ನು ನೀಡುವ ಸಾಮರ್ಥ್ಯವಿರಬೇಕಾಗುತ್ತದೆ.

ಅನಿಮೇಶನ್ ಫಿಲ್ಮ್ ಅಥವಾ ಗೇಮ್ ಯಶಸ್ವಿಯಾಗಿ ರೂಪಿತವಾಗಬೇಕಾದರೆ, ಅದನ್ನು ನಿರ್ಮಿಸುವ ವ್ಯಕ್ತಿಯ ಕೆಲಸಕ್ಕಿಂತ ಅದನ್ನು ಕ್ರಿಯಾತ್ಮಕವಾಗಿ ರೂಪಿಸಬಲ್ಲ ಗುಂಪಿನ ಸಾಮರ್ಥ್ಯವೇ ಮುಖ್ಯವಾಗುತ್ತದೆ.ಕ್ರಿಯಾಶೀಲತೆ: ಇಲ್ಲಿ ಸ್ವಲ್ಪ ಕ್ರಿಯಾಶೀಲತೆ ಅವಶ್ಯಕ. ಆದರೆ ಈ ವಲಯದಲ್ಲಿ ವೃತ್ತಿ ಆರಂಭಿಸುವವರಿಗೆ ಹೆಚ್ಚಿನ ಕಲ್ಪನಾ ಶಕ್ತಿಯಿದ್ದರೆ ಈ ವೃತ್ತಿಯಲ್ಲಿ ತುಂಬಾ ಉಪಯೋಗಕ್ಕೆ ಬರುವುದು. ದೃಶ್ಯಗಳ ಹಂಚಿಕೆ, ದೃಶ್ಯವಿವರ, ಚಿತ್ರಣ, ಪಾತ್ರಗಳ ಪ್ರವೇಶದ ವಿವರಗಳನ್ನು ಮಾನಸಿಕವಾಗಿ ಸಿದ್ದ ಪಡಿಸಿಕೊಂಡು, ತೆರೆಯ ಮೇಲೆ ಆಕರ್ಷಕವಾಗಿ ತರಲು ಅಧಿಕ ವಿಸ್ತೃತವಾದ ಜ್ಞಾನ ಮತ್ತು ಕೌಶಲ್ಯದ ತಳಹದಿ ಈ ವಲಯದಲ್ಲಿ ಕಾರ್ಯನಿರ್ವಹಿಸಬೇಕಾದವರಿಗೆ ಇರಬೇಕಾಗುತ್ತದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಆನಿಮೇಶನ್ ಅಥವಾ ಕಂಪ್ಯೂಟರ್ ಗೇಮ್‌ಅನ್ನು ವೃತ್ತಿಯನ್ನಾಗಿ ಕೈಗೆತ್ತಿಕೊಳ್ಳಬಹುದು. ಅನಿಮೇಶನ್ ಇಂಡಸ್ಟ್ರಿ ಬೆಳವಣಿಗೆಯಿಂದಾಗಿ ಶಿಕ್ಷಣದಲ್ಲಿ ಮಾರ್ಪಾಡುಗಳಾಗಿವೆ. ಹಲವಾರು ತರಬೇತಿ ಸಂಸ್ಥೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡುತ್ತವೆ.

ಯಾವ ಕೋರ್ಸ್‌ಅನ್ನು ಆಯ್ಕೆಮಾಡಿಕೊಳ್ಳಬೇಕೆಂಬುದು ಅಭ್ಯರ್ಥಿಯ ಬುದ್ಧಿ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ.
ತರಬೇತಿಗೆ ಪ್ರವೇಶ ಪಡೆಯುವ ಮೊದಲು  ಅ ಸಂಸ್ಥೆಯ ಖ್ಯಾತಿ, ಯಶಸ್ಸು, ಕೀರ್ತಿ ಅಲ್ಲಿನ ಆ ಸಂಸ್ಥೆ ನೀಡುವ ಸೌಕರ್ಯ ಹಾಗೂ ಸವಲತ್ತುಗಳು, ಈವರೆಗೆ ಅಲ್ಲಿಂದ ಶಿಕ್ಷಣದ ನಂತರ ವಿದ್ಯಾರ್ಥಿಗಳಿಗೆ ದೊರಕಿರುವ ನೌಕರಿ ಆ ಕೋರ್ಸಿನ ಶುಲ್ಕ ಇತ್ಯಾದಿ ಅಂಶಗಳನ್ನು ಪರಿಗಣಿಸಬೇಕು. ಒಂದೇ ಕೋರ್ಸಿಗೆ ಬೇರೆ ಬೇರೆ ಸಂಸ್ಥೆಗಳಲ್ಲಿ ಶುಲ್ಕ ಬೇರೆ ಇರುತ್ತದೆ. ಅನಿಮೇಶನ್ ಶುಲ್ಕದ ಮೌಲ್ಯ ರೂ. 10,000 ದಿಂದ ಒಂದು ಲಕ್ಷದವರೆಗೂ ಇದೆ.

ಅನಿಮೇಶನ್ ಕೋರ್ಸ್ ನೀಡುವ ವಿವಿಧ ಕಾಲೇಜುಗಳ ವಿವರ :
ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಕಂಪ್ಯೂಟರ್ ಗ್ರಾಫಿಕ್ಸ್ ಹೈದರಾಬಾದ್‌ನ ಜವಾಹರ್‌ಲಾಲ್ ನೆಹರು ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಸಹಯೋಗದೊಂದಿಗೆ ಮಲ್ಟಿ ಮೀಡಿಯದಲ್ಲಿ ಎಂ.ಎಸ್ಸಿ ಪದವಿಯನ್ನು ನೀಡುತ್ತದೆ.

ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿನಿಮಾ ಮತ್ತು ಟೆಲಿವಿಷನ್‌ನ ತಂತ್ರಜ್ಞರಿಗಾಗಿ ಅನಿಮೇಶನ್ ಮತ್ತು ಗ್ರಾಫಿಕ್ಸ್ ಮತ್ತು ವಿಶಿಷ್ಟ ಸಿನಿಮಾ ಕತೆ ಬರವಣಿಗೆಯಲ್ಲಿ ಒಂದೂವರೆ ವರ್ಷ ಅವಧಿಯ ಸರ್ಟಿಫಿಕೇಟ್ ಕೋರ್ಸನ್ನು ನಡೆಸುತ್ತದೆ. ಆನಿಮೇಶನ್ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ ಕೋರ್ಸಿಗೆ ದಾಖಲಾಗಲು ವಿದ್ಯಾರ್ಹತೆ ದ್ವಿತೀಯ ಪಿ.ಯು.ಸಿ. ಅಥವಾ (10+2) ಉತ್ತೀರ್ಣರಾಗಿರಬೇಕು. ಫೈನ್ ಆರ್ಟ್ಸ್ ಕಾಲೇಜುಗಳಲ್ಲಿ ಡಿಪ್ಲೊಮಾ ತೇರ್ಗಡೆಯಾದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
 
ಈ ಕೋರ್ಸನ್ನು ಅಭ್ಯಸಿಸಲು ತಗಲುವ ವೆಚ್ಚ ಸುಮಾರು 1,80,000 ರೂಪಾಯಿಗಳು. ಚಲನಚಿತ್ರಕಥೆ ಬರವಣಿಗೆ ಕೋರ್ಸಿಗೆ ವಿದ್ಯಾರ್ಹತೆ ಯಾವುದೇ ಪದವಿಯಲ್ಲಿ ಉತ್ತೀರ್ಣ. ಈ ಕೋರ್ಸಿನ ಶುಲ್ಕ 75,000/- ರೂಪಾಯಿಗಳು.  ಕೋರ್ಸಿಗೆ ದಾಖಲಾತಿ, ಪ್ರವೇಶ ಪರೀಕ್ಷೆಯ ಮೂಲಕ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ £££.i|qgb.esp ವೆಬ್‌ಸೆ ಟ್‌ನ್ನು ನೋಡಿ. ದೆಹಲಿಯ ಪಿಕಾಸೋ ಆನಿಮೇಶನ್ ಕಾಲೇಜು ಆನಿಮೇಶನ್‌ನಲ್ಲಿ ಎಂ.ಎಸ್ಸಿ  ಪದವಿಯನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ www.picasso.co.in ವೆಬ್‌ಸೈಟ್‌ನ್ನು ನೋಡಿ.

ಪ್ರಾಣ್‌ಸ್ ಮೀಡಿಯ ಇನ್‌ಸ್ಟಿಟ್ಯೂಟ್ ಆನಿಮೇಶನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ www.pran.in ವೆಬ್‌ಸೈಟ್‌ನ್ನು ನೋಡಿ.

ವಿಸ್‌ಲಿಂಗ್ ವುಡ್ಸ್ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಸಿನಿಮಾ, ಟೆಲಿವಿಷನ್, ಆನಿಮೇಶನ್ ಮತ್ತು ಮಾಧ್ಯಮ ಕಲೆಯ ಸಂಸ್ಥೆಯಾಗಿದ್ದು (ಫಿಲ್ಮ್, ಟೆಲಿವಿಶನ್, ಅನಿಮೇಶನ್ ಅಂಡ್ ಮೀಡಿಯ ಆರ್ಟ್ಸ್ ಇನ್‌ಸ್ಟಿಟ್ಯೂಟ್) ಫಿಲ್ಮ್ ಟೆಲಿವಿಶನ್, ಅನಿಮೇಶನ್ ಅಂಡ್ ಮೀಡಿಯ ಆರ್ಟ್ಸ್ ಟ್ರೈನಿಂಗ್ ಅನ್ನು ನೀಡುತ್ತದೆ. ಈ ತರಬೇತಿಯು ಅನಿಮೇಶನ್ ಜಗತ್ತಿನ ಸಂಪೂರ್ಣ ಕಾರ್ಯ ವ್ಯಾಪ್ತಿಯನ್ನೊಳಗೊಂಡಿದೆ. ಇನ್ನು ಹೆಚ್ಚಿನ ವಿವರ ತಿಳಿಯಲು www.wwischoolofanimation.com  ವೆಬ್‌ಸೈಟ್‌ನ್ನು ನೋಡಿ.
ಡಿ. ಎಸ್.ಕೆ. ಸುಪಿನ್‌ಫೋಕಾಂ ಸಹ ಅನಿಮೇಶನ್ ತರಬೇತಿ ಸಂಸ್ಥೆಯಾಗಿದ್ದು, ಆನಿಮೇಶನ್‌ನಲ್ಲಿ ಹೆಚ್ಚು ಬೇಡಿಕೆಯಿರುವ ಕೋರ್ಸ್‌ಗಳಿಗೆ ತರಬೇತಿ ನೀಡುತ್ತದೆ.  www.dsksic.com

 ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಸಿನಿಮ್ಯಾಟಿಕ್ಸ್, ಅರೆನಾ ಅನಿಮೇಶನ್, ಬಿಗ್ ಎ.ಐ.ಎಮ್.ಎಸ್ (ಎಐಎಂಎಸ್) ಪಿಕ್ಸಿಯಾನ್ ಮತ್ತು ಅನಿಮೇಶನ್ ಗ್ಯಾರೇಜ್. ಇವು ಅನಿಮೇಶನ್‌ನಲ್ಲಿ  ತರಬೇತಿ ನೀಡುತ್ತಿರುವ ಕೆಲವು ಖ್ಯಾತ  ಶಿಕ್ಷಣ ಸಂಸ್ಥೆಗಳು.

ಗೇಮ್ ಇಂಡಸ್ಟ್ರಿಯ ನುರಿತ ತಂತ್ರಜ್ಞರ ಪ್ರಕಾರ ಸಾವಿರಾರು ಯುವಜನರು ಅನಿಮೇಶನ್ ಕಡೆಗೆ ಆಕರ್ಷಿತರಾಗಿ ಈ ವಲಯಕ್ಕೆ ಅಡಿ ಇಡುತ್ತಾರೆ. ಅದರಲ್ಲಿ ಹೆಚ್ಚಿನವರಿಗೆ ಅದು ಹೇಗೆ ಕಾರ್ಯ ನಿರ್ವಹಿಸುವುದೆಂದು ತಿಳಿದಿರುವುದಿಲ್ಲ. ಆದರೆ ಈ ಉದ್ಯಮವು ಅಲ್ಪ ಕೌಶಲ್ಯ ಮತ್ತು ಕ್ರಿಯಾಶೀಲತೆ, ಉನ್ನತವಾದುದು ಸಾಧಿಸುವ ಇಚ್ಛೆ ಇದ್ದು ಕಷ್ಟಪಟ್ಟು ಕೆಲಸ ಮಾಡುವವರಿಗೆ ಅಸಂಖ್ಯಾತ ಅವಕಾಶದ ಬಾಗಿಲುಗಳನ್ನು ತೆರೆಯುವುದರಲ್ಲಿ ಎರಡು ಮಾತಿಲ್ಲ.

 ಕಲಿಕಾ ವಿಧಾನ ಸರಿ ಇಲ್ಲ...
ನಿಜವಾಗಿ ಹೇಳಬೇಕೆಂದರೆ ಅಮೆರಿಕದಲ್ಲಿ ಮಾತ್ರವೇ ಅನಿಮೇಶನ್ ಕಲಿಕೆ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಅಲ್ಲಿ ನಮಗಿಂತಲೂ 30 ವರ್ಷಗಳ ಹಿಂದೆಯೇ ಇದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಭಾರತದಲ್ಲಿ ಅನಿಮೇಶನ್ ಕಲಿಕಾ ಪದ್ಧತಿ ಸರಿಯಾಗಿಲ್ಲ. ಇಲ್ಲಿ ಕೇವಲ 6 ತಿಂಗಳ ಕೋರ್ಸ್ ಮಾಡಿದವರೂ ಬೇರೆ ಸಂಸ್ಥೆಯಲ್ಲಿ ಫ್ಯಾಕಲ್ಟಿಯಾಗಿ  ಕೆಲಸ ಶುರುಮಾಡುತ್ತಾರೆ.

ಒಂದೂವರೆ ವರ್ಷಗಳ ಕಾಲ ಅನಿಮೇಶನ್ ಕಲಿತ ಕೆಲವರು ನನ್ನಲ್ಲಿಗೆ ಬಂದಿದ್ದರು. ನಿಜಕ್ಕೂ ನನಗೆ ಶಾಕ್ ಆಯ್ತು. ಅಂದರೆ ಅವರು ಇನ್ನೂ ಬೇಸಿಕ್ ಹಂತದಲ್ಲಿಯೇ ಇದ್ದರು. ದುಡ್ಡು ಸುರಿದರೂ ಸರಿಯಾದ ಕಲಿಕೆ ಸಿಗದಿರುವ ಪರಿಸ್ಥಿತಿ ಇದೆ. ನಮ್ಮಲ್ಲಿ ಏನಾಗಿದೆ ಅಂದರೆ, ಬಿ.ಎ., ಬಿಎಸ್ಸಿ., ಬಿ.ಕಾಂ.,ನಲ್ಲಿ ಚೆನ್ನಾಗಿ ಸ್ಕೋರ್ ಆಗಿಲ್ಲ ಎನ್ನುವ ಕಾರಣಕ್ಕೆ ಕೆಲವರು ಅನಿಮೇಶನ್ ಕೋರ್ಸ್‌ಗೆ ಸೇರುತ್ತಾರೆ. ಇದನ್ನು ಕಲಿತರೆ ಉದ್ಯೋಗ ಸಿಗಬಹುದು ಎಂಬ ಭ್ರಮೆಯಲ್ಲಿ ಸಾಕಷ್ಟು ಹಣ ಚೆಲ್ಲುತ್ತಾರೆ. ಇದರಲ್ಲಿ ದುಡ್ಡು ಮಾಡಬಹುದು ಎಂಬ ಹುಸಿನಂಬಿಕೆ ಕೂಡ ನಮ್ಮಲ್ಲಿ ಪ್ರಚಲಿತದಲ್ಲಿದೆ. ಅನಿಮೇಶನ್ ಎನ್ನೋದು ಬಿಸಿನೆಸ್ ಅಲ್ಲ, ಅದೊಂದು ಕಲೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾದರೆ, ಅಥವಾ ಇದನ್ನು ಕಲಿಯಬೇಕಾದರೆ ನಿಮಗೆ ನಿಜವಾಗಿಯೂ ಈ ಬಗ್ಗೆ ಪ್ಯಾಶನ್ ಇರಬೇಕು. ಇದೊಂದು ಡೆಡಿಕೇಟೆಡ್ ಫೀಲ್ಡ್ ಅನ್ನೋದನ್ನು ಮರೆಯಬಾರದು.
ಕೃಷ್ಣಮೂರ್ತಿ ವೈ.ದೊಡ್ಡಮನಿ, ಸೀನಿಯರ್ ಅನಿಮೇಟರ್

ಕೌಶಲವೇ ಶ್ರೀರಕ್ಷೆ...
ಅನಿಮೇಶನ್ ಕ್ಷೇತ್ರದಲ್ಲಿ ಮುಂದೆ ಬರಬೇಕೆಂದರೆ ನಿಮ್ಮಲ್ಲಿ ಕೌಶಲ ಇರಬೇಕು. ಉತ್ತಮ ಕೋರ್ಸ್ ಮಾಡಿ, ಅದರಲ್ಲಿ ಅತ್ಯಧಿಕ ಅಂಕ ಪಡೆದವರೂ ಕೆಲವೊಮ್ಮೆ  ವೃತ್ತಿಯಲ್ಲಿ ಮುಂದೆ ಬರಲು ಹರಸಾಹಸ ಪಡಬೇಕಾಗುತ್ತದೆ. ಕಾರಣ ಇಷ್ಟೆ. ಎಲ್ಲರಿಗೂ ಇದರಲ್ಲಿ  ಸ್ಕಿಲ್ ಇರೋಲ್ಲ. ಇನ್ನು ಉದ್ಯೋಗಾವಕಾಶದ ಬಗ್ಗೆ ಹೇಳುವುದಾದರೆ ಇಲ್ಲಿ ನಿಮಗೆ ನೀವೇ ಉದ್ಯೋಗ ಸೃಷ್ಟಿಸಿಕೊಳ್ಳಬೇಕು. ಸ್ಟುಡಿಯೋ ಹಾಕಿಕೊಂಡೋ, ಯಾವು ದಾದರೂ ಒಳ್ಳೆಯ ಪ್ರಾಜೆಕ್ಟ್ ಪಡೆದುಕೊಂಡೋ ನಿಮ್ಮ ವೃತ್ತಿ ಬದುಕನ್ನು ಕಟ್ಟಿಕೊಳ್ಳಬೇಕು. ನಾನು ಪುಣೆಯ  ‘ಮ್ಯಾಕ್’ ಸಂಸ್ಥೆಯಲ್ಲಿ  15 ತಿಂಗಳ ಅನಿಮೇಶನ್ ಡಿಪ್ಲೊಮಾ ಮಾಡಿದ್ದೇನೆ. ಇದರಲ್ಲಿ ಎಂ.ಎ ಮಾಡುವ ಹಂಬಲ ಕೂಡ ಇದೆ. ಈಗಾಗಲೇ ಸ್ಕಾಟ್‌ಲೆಂಡ್‌ನಲ್ಲಿ ಇದಕ್ಕೆ ಅವಕಾಶ ದೊರೆತಿದೆ. ನಿಮ್ಮಲ್ಲಿರುವ ಕೌಶಲ ಹಾಗೂ ಡೆಡಿಕೇಶನ್ ಮೇಲೆ  ಈ ಕ್ಷೇತ್ರದಲ್ಲಿ ಉದ್ಯೋಗ ಲಭ್ಯವಾಗುತ್ತದೆ.

ಸ್ವಯಂಪ್ರಭಾ ಹೆಗಡೆ
ಅನಿಮೇಶನ್ ವಿದ್ಯಾರ್ಥಿನಿ

ಕಲಿಕೆಗಿಂತ ಹಣಕ್ಕೇ ಮಹತ್ವ...

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅನಿಮೇಶನ್ ಇದೀಗ ತುಸು ಬೇಡಿಕೆ ಕಳೆದುಕೊಂಡಿದೆ ಅನ್ನಿಸುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿ ಅನಿಮೇಶನ್ ಕೋರ್ಸ್ ನಡೆಸುವ ಸಂಸ್ಥೆಗಳಲ್ಲಿ ಸರಿಯಾದ ಬೋಧಕ ಸಿಬ್ಬಂದಿ ಇಲ್ಲದಿರುವುದು. ಸಂಸ್ಥೆಗಳಿಗೆ  ಹಣ ಮಾಡುವುದೇ ಮುಖ್ಯ ಉದ್ದೇಶವಾದಾಗ ಪರಿಪೂರ್ಣ ಕಲಿಕೆ ಮರೀಚಿಕೆಯಾಗಿಬಿಡುತ್ತದೆ. ಸರಿಯಾದ ತರಬೇತಿಯೇ ಸಿಗದಿರುವ ಸಂದರ್ಭದಲ್ಲಿ ನಾವು ಪ್ರಾಜೆಕ್ಟ್ ಮಾಡೋದಾದರೂ ಹೇಗೆ ಹೇಳಿ?

ಇವತ್ತು ಈ ಕೋರ್ಸ್ ಮಾಡೋಕೆ ಲಕ್ಷ ಲಕ್ಷ ಹಣ ಸುರಿಬೇಕಾಗುತ್ತದೆ. ಹಾಗಾಗಿ ಕಾಲೇಜು ಹಂತದಲ್ಲಿಯೇ ಅನಿಮೇಶನ್ ಅನ್ನು ಒಂದು ಪಠ್ಯವಾಗಿ ಅಳವಡಿಸಿದರೆ ಆಸಕ್ತ ವಿದ್ಯಾರ್ಥಿಗಳು ಇದರಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ಇನ್ನೊಂದು ಅಂಶವೆಂದರೆ ಅನಿಮೇಶನ್ ಕಲಿತರೆ ನಾವು ಸ್ವಂತವಾಗಿ ಏನಾದರೂ ಮಾಡುವ ಮಟ್ಟಕ್ಕೆ ಏರಬೇಕು. ಕೋರ್ಸ್ ಮಾಡಿದವರು ಒಂದು ತಂಡ ಮಾಡಿಕೊಂಡು ಕಂಪೆನಿಗಳಿಗೆ ಪ್ರಾಜೆಕ್ಟ್ ಮಾಡಿಕೊಡಬಹುದು.
ಹರ್ಷಿತಾ ಕೆ.
ಕಲಾವಿದೆ

ವಿಶುವಲೈಸ್ ಮಾಡುವವರು ತುಂಬಾ ವಿರಳ...
ಅನಿಮೇಶನ್ ಕಲಿಸುವ ಸಂಸ್ಥೆಯವರು ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸಾಕಷ್ಟು ಇದೆ ಎನ್ನುತ್ತಾರೆ. ಆದರೆ ಅದು ಅರ್ಧ ಸತ್ಯ ಮಾತ್ರ. ನಾನು ಈಗಾಗಲೇ ಈ ಫೀಲ್ಡ್‌ನಲ್ಲಿ  ಸುಮಾರು ಐದಾರು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಆದರೆ ಬೆಂಗಳೂರಿನಂಥ ನಗರದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುವುದು ಬಹಳ ಕಷ್ಟವೇ ಸರಿ.

ನಮ್ಮಲ್ಲಿ ಅನಿಮೇಶನ್ ಮಾಡುವವರು ಇದ್ದಾರೆ ನಿಜ, ಆದರೆ ಅದನ್ನು ವಿಶುವಲೈಸ್ ಮಾಡುವವರೇ ಇಲ್ಲ. ಇದ್ದರೂ ಬೆರಳೆಣಿಕೆಯಷ್ಟು ಮಂದಿ ಮಾತ್ರ.  ಈ ಕ್ಷೇತ್ರದಲ್ಲಿ  ಔಟ್‌ಸೋರ್ಸ್ ಹೆಚ್ಚು. ಗುಣಮಟ್ಟದ ಕೆಲಸಕ್ಕೆ ಮಾತ್ರವೇ ಬೆಲೆ. ಅನಿಮೇಶನ್ ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಸುಮ್ಮನೆ ಕಲಿಯುವುದಕ್ಕಿಂತ ಯಾವುದಾದರೂ ಒಳ್ಳೆಯ ಪ್ರಾಜೆಕ್ಟ್ ಮುಖೇನ ಕಲಿಯುತ್ತ ಸಾಗಬೇಕು.
ಎಂ.ಎಸ್.ಸುಧೀಂದ್ರ
ಸೀನಿಯರ್ 3ಡಿ ಆರ್ಟಿಸ್ಟ್ 

ಸಂದರ್ಶನ:
ಪೂರ್ಣಿಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT