ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರ್ದಿಷ್ಟ ಕಾಲ ರಸ್ತೆ ತಡೆ ಬೆದರಿಕೆ

ಟೋಲ್ ಸಂಗ್ರಹಕ್ಕೆ ವಿರೋಧ
Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಸರ್ಕಾರ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಆರಂಭಿಸಿದ ದಿನದಿಂದಲೇ ರಾಜ್ಯದಾದ್ಯಂತ ರಸ್ತೆ ತಡೆ ಚಳವಳಿ ಆರಂಭಿಸಲಾಗುವುದು' ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಮಹಾಮಂಡಳದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ಮಂಗಳವಾರ ಇಲ್ಲಿ ತಿಳಿಸಿದರು.

`ಸರ್ಕಾರವು ಹತ್ತು ರಾಜ್ಯ ಹೆದ್ದಾರಿಗಳನ್ನು ಟೋಲ್ ಸಂಗ್ರಹಕ್ಕೆ ಒಳಪಡಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಸಾಗಣೆ ಉದ್ಯಮದ ಮುಖಂಡರೊಂದಿಗೆ ಚರ್ಚಿಸಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

`ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಇದಕ್ಕೆ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ' ಅವರು, `ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು' ಎಂದು ಒತ್ತಾಯಿಸಿದರು.

`ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಗ್ರಹಿಸುವ ಟೋಲ್ ದರ ತುಂಬಾ ದುಬಾರಿಯಾಗಿದೆ. ಆದರೆ ರಸ್ತೆ ನಿರ್ಮಾಣಕ್ಕೆಂದು ಕೇಂದ್ರ ಸರ್ಕಾರ 1996-97ರಿಂದಲೇ ಡೀಸೆಲ್ ಹಾಗೂ ಪೆಟ್ರೋಲ್ ಮೇಲೆ ಎರಡು ರೂಪಾಯಿ ಸುಂಕ ವಿಧಿಸುತ್ತಿದ್ದು, ವರ್ಷಕ್ಕೆ 30,000 ಕೋಟಿ ರೂಪಾಯಿ ಸಂಗ್ರಹವಾಗುತ್ತಿದೆ. ಜತೆಗೆ ದೇಶದಾದ್ಯಂತ 17,000 ಕಿ.ಮೀ ರಸ್ತೆಗಳಲ್ಲಿ ಟೋಲ್ ಸಂಗ್ರಹಿಸಲಾಗುತ್ತದೆ. ಈಗ ರಾಜ್ಯ ಸರ್ಕಾರ ಕೂಡಾ ಸುಂಕ ವಿಧಿಸಲು ಹೊರಟಿದೆ. ರಸ್ತೆ ನಿರ್ಮಾಣದ ವೆಚ್ಚವನ್ನು ಲಾರಿ ಹಾಗೂ ಇತರ ವಾಹನಗಳ ಮಾಲೀಕರಿಗೆ ವರ್ಗಾಯಿಸಬಾರದು' ಎಂದು ಅವರು ಆಗ್ರಹಿಸಿದರು.

`ನೈಸ್ ಸಂಸ್ಥೆಯು 36 ಕಿ.ಮೀ ಹುಬ್ಬಳ್ಳಿ ಬೈಪಾಸ್ ರಸ್ತೆ ನಿರ್ಮಿಸಲು 68 ಕೋಟಿ ರೂಪಾಯಿ ವೆಚ್ಚ ಮಾಡಿತ್ತು.  ಆದರೆ ಈಗಾಗಲೇ ಟೋಲ್ ರೂಪದಲ್ಲಿ ಈ ರಸ್ತೆಯಲ್ಲಿ 400 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಸಂಗ್ರಹವಾಗಿದೆ. ಇದನ್ನು 21 ವರ್ಷಗಳವರೆಗೆ ಮುಂದುವರಿಸುವುದು ಸರಿಯೇ' ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT