ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರ್ವಚನ, ಇ ನಿರ್ವಚನ

Last Updated 29 ಜನವರಿ 2014, 19:30 IST
ಅಕ್ಷರ ಗಾತ್ರ

ಸುಮಾರು ಹನ್ನೊಂದು ವರ್ಷಗಳ ಹಿಂದೆ ವಚನಗಳ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು ಹಿರಿಯ ಭಾಷಾತಜ್ಞ ಓ.ಎಲ್‌. ನಾಗಭೂಷಣಸ್ವಾಮಿ. ವಚನಗಳ ಅಧ್ಯಯನಕ್ಕೆ ಸಮಗ್ರ ವಚನ ಸಂಪುಟಗಳನ್ನು ಮತ್ತೆ ಮತ್ತೆ ತಿರುವಿ ಹಾಕುವ ಶ್ರಮ, ವಚನಗಳನ್ನು ಹುಡುಕುವುದು, ಅವುಗಳನ್ನು ಗುರುತು ಮಾಡಿಕೊಂಡು ಅಧ್ಯಯನ ಶುರುಮಾಡುವುದು, ಇದೆಲ್ಲವೂ ತುರ್ತು ಬದುಕಿನ ಅಮೂಲ್ಯ ವೇಳೆಯನ್ನು ಕಸಿದುಕೊಳ್ಳುವ ಸಾಹಸ ಎಂದೆನಿಸಿತು ಅವರಿಗೆ.

ಈ ಶ್ರಮವೇ ಅವರಲ್ಲಿ ಹೊಸತೊಂದು ಆಲೋಚನೆಗೆ ಸ್ಫೂರ್ತಿಯಾಯಿತು. ಅಧ್ಯಯನಕ್ಕೆ ಬೇಕಾಗುವ ವಚನಗಳು, ಅದರಲ್ಲಿ ಬಳಕೆಯಾಗಿರುವ ಪದಗಳು ಸುಲಭವಾಗಿ ಕೈಗೆಟುಕುವಂತಿದ್ದರೆ? ಕಂಪ್ಯೂಟರ್‌ ಮುಂದೆ ಕುಳಿತು ಸ್ವತಃ ಪ್ರಮುಖ ಐದು ಸಾವಿರ ವಚನಗಳನ್ನು ಟೈಪಿಸಿದರು.

ತಮಗೆ ಬೇಕಾದ ಪದಗಳನ್ನು ‘ಫೈಂಡ್‌’ ಮೂಲಕ ಹುಡುಕಿ ಶ್ರಮದ ಭಾರವನ್ನು ತುಸು ಇಳಿಸಿಕೊಂಡರು. ಹೈದರಾಬಾದಿನ ಗೌತಮ್‌ ಸೆನ್‌ಗುಪ್ತ ಎನ್ನುವವರು ಬಸವಣ್ಣ ಮತ್ತು ಅಕ್ಕಮಹಾದೇವಿಯ ವಚನಗಳನ್ನು ಅಧ್ಯಯನಕ್ಕೆ ಯೋಗ್ಯವಾಗುವ ಮಾದರಿಯಲ್ಲಿ ಒಂದೆಡೆ ಕಲೆಹಾಕಲು ನೆರವಾದರು.

ನಿರ್ದಿಷ್ಟ ಪದವನ್ನು ಯಾವ ಯಾವ ವಚನಗಳಲ್ಲಿ ಹೇಗೆ ಬಳಸಿದ್ದಾರೆ ಎನ್ನುವುದನ್ನು ಕ್ಷಣ ಮಾತ್ರದಲ್ಲಿ ಅರಿತುಕೊಳ್ಳಲು ನೆರವಾಗುವ ಪ್ರಯತ್ನವದು. ಆದರೆ ಅದು ಮುಂದುವರೆಯಲಿಲ್ಲ.

ಒಮ್ಮೆ ಕಥೆಗಾರ ವಸುಧೇಂದ್ರ ಅವರ ಬಳಿ ಮಾತನಾಡುವಾಗ ಓಎಲ್‌ಎನ್‌ ವಚನಗಳ ಅನುವಾದದಲ್ಲಿ ಎದುರಾಗುವ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ವಚನಗಳ ಸಾಫ್ಟ್‌ ಕಾಪಿ ಇದ್ದರೆ ಅವುಗಳ ಅನುಕ್ರಮಣಿಕೆ ಅತಿ ಸುಲಭ ಎಂದರು ವಸುಧೇಂದ್ರ.

ಸಾಹಿತ್ಯ ವಲಯದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ದುಡಿಯುತ್ತಿರುವ ಮನಸ್ಸುಗಳಿಗೆ ಭಾಷೆ, ಸಾಹಿತ್ಯ ಸಂಪತ್ತಿನ ರಕ್ಷಣೆ ಮತ್ತು ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಹೊಸ ಸಾಧ್ಯತೆಗಳು ಕಂಡರೆ ಅದನ್ನು ಕಾರ್ಯಗತಗೊಳಿಸುವವರೆಗೆ ನೆಮ್ಮದಿ ಇರಲಾರದು.

ಈ ಹಳೆ ಬೇರುಗಳಿಗೆ ಸಿಕ್ಕಿದ್ದು ಓಂಶಿವಪ್ರಕಾಶ್‌ ಎಚ್‌.ಎಲ್‌., ಪವಿತ್ರಾ ಎಚ್‌. ಮತ್ತು
ದೇವರಾಜ್‌ ಕೆ. ಎಂಬ ಹೊಸ ಚಿಗುರಿನ ಭರವಸೆಗಳು. ಹನ್ನೊಂದು ವರ್ಷದ ಹಳೆಯ ಕನಸಿಗೆ ಬಣ್ಣ ಸಿಕ್ಕಿದ್ದು ಈಗ. ಈ ಹಳೆ ಬೇರಿನ ಸಾಹಿತ್ಯಿಕ ಜ್ಞಾನ, ಹೊಸ ಚಿಗುರಿನ ತಾಂತ್ರಿಕ ಪರಿಣತಿಯ ಸಂಗಮದ ಫಲವೇ www.vachana.sanchaya.net
ಈ ವೆಬ್‌ಸೈಟಿನ ಒಳಹೊಕ್ಕರೆ ಹನ್ನೆರಡು ಮತ್ತು ಹದಿಮೂರನೇ ಶತಮಾನದ ವಚನ ಚಳವಳಿಯ ಫಲಗಳ ತೋಟವೇ ಕಣ್ಣಮುಂದೆ ಬರುತ್ತದೆ.

259 ವಚನಕಾರರ 20930ಕ್ಕೂ ಅಧಿಕ ವಚನಗಳನ್ನು ಒಡಲಲ್ಲಿ ಇರಿಸಿಕೊಂಡಿದೆ ವಚನ ಸಂಚಯ. ಈ ವಚನ ಸಮುಚ್ಚಯದಲ್ಲಿ ಇರುವುದು 2,09,876ಕ್ಕೂ ಅಧಿಕ ಪದಗಳು. ಅಧ್ಯಯನ, ಸಂಶೋಧನೆ, ಕುತೂಹಲಗಳಿಗೆ ವಚನ ಸಂಚಯದ ಭಂಡಾರ ತಾಂತ್ರಿಕ ಅನುಕೂಲತೆಗಳನ್ನೂ ಕಲ್ಪಿಸಿದೆ. ಈ ಪರಿಕಲ್ಪನೆಯ ಉದ್ದೇಶವೂ ಅದೇ. ಸರ್ಕಾರವೂ ವಚನ ಸಾಹಿತ್ಯಗಳನ್ನು ವೆಬ್‌ ತಾಣಗಳಿಗೆ ತಂದಿದೆ. ಆ ತಾಣಗಳನ್ನು ಪ್ರವೇಶಿಸಿ ತಮಗೆ ಬೇಕಾದ ವಚನಗಳನ್ನು ಹುಡುಕಿ ತೆಗೆಯುವ ಶ್ರಮಕ್ಕೂ ಪುಸ್ತಕದಲ್ಲಿ ಪುಟಗಳನ್ನು ತಿರುವಿಸುವ ಕೆಲಸಕ್ಕೂ ದೊಡ್ಡ ವ್ಯತ್ಯಾಸವಾಗಲಾರದು. ಆದರೆ ವಚನ ಸಂಚಯದೊಳಗೆ ಈ ಸಮಸ್ಯೆ ಕಾಡುವುದಿಲ್ಲ.

ನಿಮಗೆ ಬೇಕಾದ ವಚನಕಾರನ ಎಲ್ಲಾ ವಚನಗಳನ್ನೂ ಪಟಪಟನೆ ಮೊಗೆಯಬಹುದು. ನಿರ್ದಿಷ್ಟ ಪದ ಬಳಕೆಯ ಬಗ್ಗೆ ಕುತೂಹಲವೊಂದಿದ್ದರೆ ಆ ಪದವನ್ನು ಟೈಪಿಸಿದರೆ ಸಾಕು, ಎಷ್ಟು ವಚನಕಾರರು, ಎಷ್ಟು ಬಾರಿ, ಎಷ್ಟು ವಚನಗಳಲ್ಲಿ ಆ ಪದವನ್ನು ಬಳಸಿದ್ದಾರೆ ಎಂಬ ಮಾಹಿತಿ ಕ್ಷಣಮಾತ್ರದಲ್ಲಿ ತೆರೆದುಕೊಳ್ಳುತ್ತದೆ. ವಚನಕಾರರ ಹೆಸರು ಮತ್ತು ವಚನಗಳ ಆರಂಭಿಕ ಪದಗಳನ್ನು ವರ್ಣಮಾಲೆಯ ಅಕ್ಷರಗಳನ್ನು ಕ್ಲಿಕ್ಕಿಸುವ ಮೂಲಕ ನೇರವಾಗಿ ಹುಡುಕುವ ಕೊಂಡಿಗಳೂ ಲಭ್ಯ. ಇದಿನ್ನೂ ಈ ಮಹತ್ವಾಕಾಂಕ್ಷಿ ಯೋಜನೆಯ ಅಂಬೆಗಾಲಿನ ದಿನಗಳು. ಮುಂದೆ ನಡಿಗೆ ಶುರುಮಾಡಿದಂತೆ ಅದರ ವ್ಯಾಪ್ತಿಯೂ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಪೂರಕವಾದ ಸಾಧ್ಯತೆಗಳನ್ನು ಅಳವಡಿಸುತ್ತಿದೆ ಈ ತಂಡ.

ಓ.ಎಲ್‌. ನಾಗಭೂಷಣಸ್ವಾಮಿ ಮತ್ತು ವಸುಧೇಂದ್ರ ಅವರ ಮಾರ್ಗದರ್ಶನದಲ್ಲಿ ಒಂದು ವರ್ಷದಿಂದ ದುಡಿಯುತ್ತಿರುವ ಈ ಮೂವರು ಯುವ ಉತ್ಸಾಹಿಗಳ ತಂಡದ ಹಿನ್ನೆಲೆ ನೋಡಿದರೆ ಅಚ್ಚರಿಯಾಗುತ್ತದೆ. ಇವರು ಸಾಹಿತ್ಯ ಪರಿಚಾರಿಕೆಯಲ್ಲಿ ತೊಡಗಿಕೊಂಡವರಲ್ಲ. ಅವರ ಬದುಕಿನ ಹಾದಿಗಳೇ ಬೇರೆ. ಓಂ ಶಿವಪ್ರಕಾಶ್‌ ಕಾರ್ಮಾಟೆಕ್‌ ಐಟಿ ಸಲ್ಯೂಷನ್ಸ್‌ ಕಂಪೆನಿಯಲ್ಲಿ ತಂತ್ರಜ್ಞಾನ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾಗಿದ್ದರೆ, ಅವರ ಪತ್ನಿ ಪವಿತ್ರಾ ಟ್ರೆಂಡ್‌ ಮೈಕ್ರೊ ಎಂಬ ಐಟಿ ಕಂಪೆನಿಯ ಉದ್ಯೋಗಿ. ದೇವರಾಜ್‌ ಕೂಡ ಕಾರ್ಮಾಟೆಕ್‌ ಕಂಪೆನಿಯಲ್ಲಿ ಡೆವಲಪಿಂಗ್‌ ವಿಭಾಗದಲ್ಲಿ ದುಡಿಯುತ್ತಿರುವವರು.

ದಿನವಿಡೀ ಕಚೇರಿಯಲ್ಲಿ ದುಡಿಯುವ ಈ ಮನಸುಗಳು ವಾರಾಂತ್ಯದಲ್ಲಿ ಈ ಲಾಭರಹಿತ ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆ. ಎಲ್ಲರಿಗೂ ಮುಕ್ತ ಪ್ರವೇಶ ನೀಡುವ, ತಮಗೆ ಬೇಕಾದುದ್ದನ್ನು ಹುಡುಕಿಕೊಳ್ಳಲು ನೆರವಾಗುವ, ಈ ಸೇವೆಗೆ ತಮ್ಮ ಕಾಣಿಕೆಗಳನ್ನು ಸಲ್ಲಿಸಲೂ ಅವಕಾಶ ನೀಡುವ ಸರಳ, ಬಳಕೆದಾರಸ್ನೇಹಿ ತಾಣವನ್ನು ರೂಪಿಸಲು ಹಗಲು ರಾತ್ರಿ ಶ್ರಮಿಸಿದ್ದಾರೆ. ತಂತ್ರಾಂಶವನ್ನು ಬಳಕೆದಾರರಿಗೆ ಅನುಕೂಲವಾಗುವಂತೆ ಕೋಡಿಂಗ್‌ ಮಾಡುವ ಹೊಣೆಗಾರಿಕೆ ಹೊತ್ತುಕೊಂಡವರು ದೇವರಾಜ್‌.

ಮಂಡ್ಯ ಮೂಲದ ದೇವರಾಜ್‌, ಮಾತನಾಡುವುದು ತಂತ್ರಾಂಶಗಳೊಂದಿಗೆ ಮಾತ್ರ ಎನ್ನುವಷ್ಟು ಮೌನಿ. ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಇಂಥ ಅನೇಕ ಪ್ರಾಜೆಕ್ಟ್‌ಗಳನ್ನು ಲೀಲಾಜಾಲವಾಗಿ ಮಾಡುವ ಈ ಪರಿಣತರಿಗೆ ಈ ಕೆಲಸ ಕಷ್ಟವಲ್ಲ ಎನಿಸಿತು. ಸವಾಲು ಇದ್ದದ್ದು ಸೂಕ್ತ ತಂತ್ರಾಂಶಗಳನ್ನು ತಯಾರಿಸುವಲ್ಲಿ ಮತ್ತು ಪಠ್ಯಗಳನ್ನು ಪರಿವರ್ತಿಸುವಲ್ಲಿ. ಯೋಜನಾಬದ್ಧವಾಗಿ ಅವುಗಳನ್ನು ಕಾರ್ಯರೂಪಕ್ಕೆ ತಂದ ತಂಡಕ್ಕೆ ಅವುಗಳು ದೊಡ್ಡ ಸವಾಲಾಗಲಿಲ್ಲ. ಅವರಿಲ್ಲಿ ವ್ಯಯಿಸಿದ್ದು ತಮ್ಮ ಶ್ರಮ ಮತ್ತು ಸಮಯವನ್ನು. ಕೇವಲ 100 ಮೆಗಾಬೈಟ್‌ ಸಾಮರ್ಥ್ಯವನ್ನು ಬಳಸಿ ಅಮೂಲ್ಯ ವಚನಗಳ ಮಂಟಪ ಕಟ್ಟಿದ್ದಾರೆ.

ಕನ್ನಡದ ಅಪೂರ್ವ ಸಾಹಿತ್ಯ ಕೃತಿಗಳನ್ನು ಆಧುನಿಕ ಯುಗದ ಮಿಡಿತಗಳಿಗೆ ಒಗ್ಗಿಸಿ ತರುವ ಕಾರ್ಯ ಯಾವುದೇ ಒಂದು ವಲಯದಿಂದ ಸಾಧ್ಯವಿಲ್ಲ. ಬರೀ ಸಾಹಿತಿಗಳು ತಾಂತ್ರಿಕ ಕೆಲಸಗಳನ್ನು ಮಾಡುವಷ್ಟು ಪರಿಣತರಲ್ಲ. ತಂತ್ರಜ್ಞರು ಸಾಹಿತಿಗಳ ನೆರವಿಲ್ಲದೆ ಈ ಕಾರ್ಯ ಮಾಡಲು ಸಾಧ್ಯವಿಲ್ಲ. ಇಬ್ಬರೂ ಸೇರಿಕೊಂಡರೆ ಮಾತ್ರ ಇಂಥ ಪ್ರಯತ್ನಗಳು ಯಶಸ್ವಿಯಾಗುತ್ತವೆ ಎನ್ನುತ್ತಾರೆ ಓ.ಎಲ್‌. ನಾಗಭೂಷಣ ಸ್ವಾಮಿ. ವೆಬ್‌ಸೈಟ್‌ಗೊಂದು ಚೆಂದದ ಚೌಕಟ್ಟು ಹಾಕಿಕೊಡುವ ಪ್ರಯತ್ನದಲ್ಲಿ ಅವರದೂ ತಾರುಣ್ಯದ ಉತ್ಸಾಹ.

ತಂತ್ರಜ್ಞಾನದಲ್ಲಿ ಪರಿಣತರೂ ಆಗಿರುವ ವಸುಧೇಂದ್ರ ಸಾಹಿತ್ಯ ಮತ್ತು ತಂತ್ರಜ್ಞಾನ ಎರಡಕ್ಕೂ ಸಹವರ್ತಿ. ಸಮಾನಮನಸ್ಕ ಮತ್ತು ಬದ್ಧತೆಯುಳ್ಳ ಈ ತಂಡ ಮುಖಾಮುಖಿಯಾಗಿದ್ದು ಮೊನ್ನೆ ಮೊನ್ನೆಯಷ್ಟೇ. ಒಂದು ವರ್ಷದಿಂದಲೂ ಫೋನ್‌, ಇ–ಮೇಲ್‌ ಮಾತುಕತೆಗಳ ಮೂಲಕವೇ ಕನ್ನಡ ಕಟ್ಟುವ ಚಳವಳಿಯನ್ನು ಹುಟ್ಟುಹಾಕಿದೆ.

ಆರಂಭಿಕ ಯೋಜನೆಗಳು ಯಶಸ್ವಿಯಾಗಿರುವುದರಿಂದ ಅದನ್ನು ಮತ್ತಷ್ಟು ಸುಧಾರಿಸುವ ಉದ್ದೇಶಗಳು ಅವರ ಮುಂದಿವೆ. ಅದರಲ್ಲಿ ಮುಖ್ಯವಾಗಿ ಇರುವುದು ಮೊಬೈಲ್‌ ಅಪ್ಲಿಕೇಷನ್‌. ಯಾವ ಸ್ಥಳದಲ್ಲಿ ಬೇಕಾದರೂ ಮೊಬೈಲ್‌ ಫೋನ್‌ ಅಪ್ಲಿಕೇಷನ್‌ ಬಳಸಿ ವೆಬ್‌ಸೈಟ್‌ ಅನ್ನು ಜಾಲಾಡಬಹುದು. ಅಂಧರಿಗಾಗಿ ಶ್ರಾವ್ಯ ರೂಪದಲ್ಲಿ ವಚನಗಳನ್ನು ನೀಡುವ ಮಹತ್ವದ ಗುರಿಯೂ ಅವರದು.

ಕೆಲವು ಪ್ರಮುಖ ವಚನಗಳನ್ನು ವಾಚಿಸಿ ಅವುಗಳನ್ನು ರೇಡಿಯೊ ಮಾದರಿಯಲ್ಲಿಯೂ ಕೇಳಲು ಸಾಧ್ಯವಾಗಿಸುವ ಆಯ್ಕೆಯೂ ಅವರ ಮುಂದಿದೆ. ಸದ್ಯ ವಚನಗಳು ಮಾತ್ರ ಇಲ್ಲಿ ಲಭ್ಯ. ವಚನಕಾರರ ಕುರಿತ ಮಾಹಿತಿಗಳನ್ನು, ವಚನಗಳ ಕುರಿತು ಬಂದಂಥ ಅಗ್ರಮಾನ್ಯ ಲೇಖನಗಳನ್ನು ಒದಗಿಸುವ ದಿನಗಳು ದೂರವಿಲ್ಲ. ಅಲ್ಲದೆ ಪದಗಳ ಅರ್ಥ ಅರಿಯುವ ಪದಕೋಶವೂ ಸೃಷ್ಟಿಯಾಗಲಿದೆ.

ಈ ಪ್ರಯೋಗ ವಚನ ಸಾಹಿತ್ಯಕ್ಕೆ ಸೀಮಿತವಾಗುತ್ತಿಲ್ಲ. ತಂತ್ರಾಂಶದ ನಿಟ್ಟಿನಲ್ಲಿ ಒಂದು ಸ್ಪಷ್ಟ ತಳಹದಿ ದೊರೆತಿರುವುದರಿಂದ ಅದರ ಆಧಾರದ ಮೇಲೆಯೇ ಹಳೆಗನ್ನಡ ಸಾಹಿತ್ಯ ಪರಂಪರೆಯನ್ನು ಜಾಲತಾಣಗಳಿಗೆ ವಿಸ್ತರಿಸುವ ಪ್ರಯತ್ನ ಅವರದು. ಎರಡನೇ ಹೆಜ್ಜೆಯಾಗಿ ಈಗಾಗಲೇ ದಾಸ ಸಾಹಿತ್ಯದ ಪಠ್ಯಗಳ ಸಂಗ್ರಹ ಕೆಲಸ ಮುಗಿದಿದೆ. ಕುಮಾರವ್ಯಾಸನಿಂದ ಮುದ್ದಣನವರೆಗಿನ ಸಾಹಿತ್ಯವನ್ನು ಇದೇ ಮಾದರಿಯಲ್ಲಿ ಕಲೆ ಹಾಕುವ ಹುರುಪು ಅವರಲ್ಲಿದೆ. ಈ ಎಲ್ಲಾ ಸಾಹಿತ್ಯ ಸಂಚಯಗಳನ್ನೂ kannada.sanchaya.net ಸೂರಿನಡಿ ತಂದು ಹಳೆಗನ್ನಡ ಸಾಹಿತ್ಯದ ಬೃಹತ್‌ ತಾಲತಾಣ ಸಂಪುಟವನ್ನು ಸೃಷ್ಟಿಸುವ ಗುರಿಗೆ ಟೊಂಕ ಕಟ್ಟಿದೆ ಈ ಹಿರಿ–ಕಿರಿ ಮನಸುಗಳು.

ಸಾಹಿತ್ಯ ಲೋಕದ ಗರಿಗಳನ್ನು ಒಟ್ಟುಗೂಡಿಸುವ ಈ ವಿಶಿಷ್ಟ ಕಾರ್ಯ ಎಲ್ಲರಿಗೂ ಮುಕ್ತ ಮುಕ್ತ. ಸಲಹೆಗಳನ್ನು ನೀಡುವ, ಸಾಹಿತ್ಯದ ಭಂಡಾರ ಒದಗಿಸುವ ಸಾಹಿತಿಗಳಿಗೆ ಮತ್ತು ನೂತನ ತಂತ್ರಜ್ಞಾನಗಳನ್ನು ಅಳವಡಿಸುವ, ಸಿದ್ಧ ಮಾದರಿಯಲ್ಲಿರುವ ಅಪ್ಲಿಕೇಶನ್‌ ಅನ್ನು ಸುಧಾರಿಸಲು ಆಸಕ್ತಿಯುಳ್ಳ ತಂತ್ರಜ್ಞರಿಗೆ ಇಲ್ಲಿ ಪ್ರೀತಿಯ ಆಹ್ವಾನ.

ಹುಚ್ಚುತನ ಮತ್ತು ಇಚ್ಛಾಶಕ್ತಿಯುಳ್ಳವರಿಂದ ಮಾತ್ರ ಈ ಕೆಲಸ ಸಾಧ್ಯ ಎನ್ನುತ್ತಾರೆ ವಸುಧೇಂದ್ರ. ಜಯಂತ ಕಾಯ್ಕಿಣಿ ಹೇಳುವ ‘ಒಳ್ಳೆಯ ಹುಚ್ಚು’ ಎಂಬ ಮಾತನ್ನು ನೆನಪಿಸಿಕೊಳ್ಳುತ್ತಾರೆ ಅವರು. ಇಂಥ ಕೆಲಸಗಳು ಸಂಘ ಸಂಸ್ಥೆಗಳಿಂದ ನಡೆಯುತ್ತದೆ ಎಂದುಕೊಂಡರೆ ಅದು ಸಾಧ್ಯವೇ ಇಲ್ಲ. ಕನ್ನಡದ ಕೆಲಸಗಳು ಆಗಿರುವುದೇ ಹೀಗೆ. ಬರಹ ಸೃಷ್ಟಿ ಮಾಡಿದ ವಾಸು, ನುಡಿ ರೂಪಿಸಿದ ಕೆ.ಪಿ. ರಾವ್‌ ಹೀಗೆ ಈ ರೀತಿಯ ತುಡಿತವುಳ್ಳ ಜನರಿಂದ ಕೆಲಸಗಳು ನಡೆದಿವೆ. ಇದರಿಂದ ಅವರಿಗೆ ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ ಎಂದು ಹೇಳುತ್ತಾರೆ ವಸುಧೇಂದ್ರ.

ಕನ್ನಡದ ಹಳೆಯ ವಿದ್ವಾಂಸರು ಭಾಷಾ ಪ್ರಯೋಗದ ಜ್ಞಾನವನ್ನು ಸ್ಮರಣೆಯಲ್ಲಿಟ್ಟುಕೊಂಡಿರುತ್ತಿದ್ದರು. ಮಿದುಳಿನ ಸ್ಮರಣೆಯ ಭಾಗ ಇದಕ್ಕೇ ಮೀಸಲಾಗಿರುತ್ತಿತ್ತು. ಈಗ ನಾವು ಆ ಸ್ಮರಣೆಯನ್ನು ಕಂಪ್ಯೂಟರ್‌ಗೆ ವರ್ಗಾಯಿಸುತ್ತಿದ್ದೇವೆ. ಹೀಗಾಗಿ ಮಿದುಳಿಗೆ ಸ್ವಲ್ಪ ಜಾಗ ಸಿಗುತ್ತದೆ. ಅದರೊಳಗೆ ವ್ಯಾಖ್ಯಾನ, ವಿಶ್ಲೇಷಣೆಗಳಿಗೆ ಅವಕಾಶ ಸಿಗುತ್ತದೆ ಎನ್ನುತ್ತಾರೆ ಓ.ಎಲ್‌.ಎನ್‌. ಸಾಹಿತ್ಯವನ್ನು ಒಂದೆಡೆ ತರುವ ಉದ್ದೇಶ ಮೂಲವಾದರೂ, ಪ್ರಮುಖ ಗುರಿ ಇರುವುದು ಸಂಶೋಧನೆಗಳಿಗೆ ನೆರವಾಗುವುದು. ಈ ಕಾರಣಕ್ಕಾಗಿಯೇ ನಿರ್ದಿಷ್ಟ ಪದಬಳಕೆಯನ್ನು ಹುಡುಕುವ ಆಯ್ಕೆ ಅವಕಾಶ ನೀಡಿರುವುದು. ಮುಂದೆ ಇದರ ಹರಿವೂ ಮತ್ತಷ್ಟು ವಿಸ್ತಾರವಾಗಲಿದೆ. ನಮಗೆ ಪುಸ್ತಕಗಳನ್ನು ಪರಾಮರ್ಶಿಸುವಾಗ ಸಿಗಲಾರದ ಸಂಶೋಧನೆಯ ಹೊಳಹುಗಳು ತಂತ್ರಜ್ಞಾನದ ಮೂಲಕ ದೊರಕುತ್ತವೆ.

ಇದು ಯುನಿಕೋಡ್‌ನಲ್ಲಿ ಲಭ್ಯವಿರುವುದರಿಂದ ಮತ್ತು ಉಚಿತ ತಂತ್ರಾಂಶದ ಸರಳ ಅಪ್ಲಿಕೇಷನ್‌ ಆಗಿರುವುದರಿಂದ ಬಳಕೆ ಸುಲಭ. ಸ್ವತಂತ್ರ ದತ್ತಾಂಶಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಅಧ್ಯಯನ, ಸಂಶೋಧನೆ ಮಾಡುವವರು ತಮಗೆ ಬೇಕಾದುದ್ದನ್ನು ಹುಡುಕಿ ಅಪ್ಲಿಕೇಷನ್‌ಗಳನ್ನು ಸೃಷ್ಟಿಸಿಕೊಳ್ಳಬಹುದು. ವಿಕಿಪೀಡಿಯಾ, ವಿಕಿ ಸೋರ್ಸ್‌ಗಳಿಗೆ ಬರೆಯುವವರೆಗೂ ಅಧಿಕೃತ ಮತ್ತು ಪರಿಪೂರ್ಣ ಮಾಹಿತಿಗಳನ್ನು ಒದಗಿಸುವ ಪ್ರಯತ್ನ ನಡೆದಿದೆ. ಅದಕ್ಕೆ ಭಾಷಾ ವಿದ್ವಾಂಸರು, ಸಾಹಿತಿಗಳಿಗೆ ಸಂಪಾದಕತ್ವದ ಹೊಣೆಗಾರಿಕೆ ನೀಡುವ ಉದ್ದೇಶವಿದೆ. ಅನೇಕ ಯುವ ತಂತ್ರಜ್ಞರೂ ಈ ತಂಡದೊಂದಿಗೆ ಕೈಜೋಡಿಸಲು ಮುಂದೆ ಬರುತ್ತಿದ್ದಾರೆ.

ನಾವಿಲ್ಲಿ ತಂತ್ರಾಂಶವನ್ನು ಅಭಿವೃದ್ಧಿಪಡಿಸುವವರಾಗಿಲ್ಲ. ಬಳಕೆದಾರರಾಗಿಯೇ ಈ ಕಾರ್ಯದಲ್ಲಿ ತೊಡಗಿದ್ದೇವೆ. ಬಳಕೆದಾರನ ಅಗತ್ಯಗಳು ಮತ್ತು ಅಧ್ಯಯನಕ್ಕೆ ಪೂರಕವಾದ ಸೌಲಭ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸೃಷ್ಟಿಸಿದ್ದೇವೆ ಎನ್ನುತ್ತಾರೆ ಓಂಶಿವಪ್ರಕಾಶ್‌. ಒಂದು ಪದವನ್ನು ಹುಡುಕುವ ಮೂಲಕ ಅದರ ಅರ್ಥ, ಅದರ ಬಳಕೆಯ ಕುರಿತ ಮಾಹಿತಿಗಳ ಸಂಪೂರ್ಣ ವಿವರ ತೆರೆದಿಡುವ ಇಂಗ್ಲಿಷ್‌ನ ವರ್ಡ್‌ ನೆಟ್‌ನ ಮಾದರಿಯನ್ನು ಕನ್ನಡದಲ್ಲಿಯೂ ತಯಾರಿಸಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯ. ವಚನ ಸಂಚಯಕ್ಕೆ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುವವರು vachana-sanchaya@googlegroups.com ವಿಳಾಸವನ್ನು ಸಂಪರ್ಕಿಸಬಹುದು.

ಮತ್ತಷ್ಟು ಹೊಸತುಗಳು
ಸದ್ಯ www.vachana.sanchaya.net ನಲ್ಲಿ ವಚನಗಳು ಮತ್ತು ಅದರಲ್ಲಿನ ಪದಗಳನ್ನು ಹುಡುಕುವ ಸೌಲಭ್ಯಗಳಿವೆ. ಅದನ್ನು ಇನ್ನಷ್ಟು ಸುಧಾರಿಸುವ ಮೂಲಕ ಹೊಸ ಆಯ್ಕೆಯ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಪದಗಳನ್ನು ಹುಡುಕುವಂತೆಯೇ ನಿರ್ದಿಷ್ಟ ಸಾಲುಗಳನ್ನು ಹುಡುಕುವ, ಜನಪ್ರಿಯ ವಚನಗಳನ್ನು ಒಂದೆಡೆ ಲಭ್ಯವಾಗುವಂತೆ ಮಾಡುವ, ಪದಗಳ ವ್ಯಾಕರಣಬದ್ಧ ಮಾಹಿತಿ ನೀಡುವ ಅಂಶಗಳು ಭವಿಷ್ಯದಲ್ಲಿ ಸೇರ್ಪಡೆಯಾಗುತ್ತಿವೆ. ಇದನ್ನು ಮುಖ್ಯವಾಗಿ ವಿಶ್ವವಿದ್ಯಾನಿಲಯಗಳಿಗೆ ಕೊಂಡೊಯ್ಯುವುದು ಈ ತಂಡದ ಆಶಯ.

ಮೊಬೈಲ್‌ ಫೋನ್‌ ಬಳಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ಮಾದರಿಯ ಫೋನ್‌ಗಳಿಗೂ ಹೊಂದಿಕೊಳ್ಳುವ ಸರಳ ಅಪ್ಲಿಕೇಷನ್‌ ಅನ್ನು ತಯಾರಿಸಲಾಗುತ್ತಿದೆ. ದಾಸ ಸಾಹಿತ್ಯ, ಕುಮಾರವ್ಯಾಸ, ಪಂಪ, ರನ್ನ, ಪೊನ್ನ ಹೀಗೆ ಹಳಗನ್ನಡದ ಎಲ್ಲಾ ಪ್ರಮುಖ ಕಾವ್ಯಗಳೂ ಇಲ್ಲಿ ಸಮಾಗಮಗೊಳ್ಳಲಿವೆ.

ಓ.ಎಲ್‌.ನಾಗಭೂಷಣಸ್ವಾಮಿ

ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಪ್ರಸಿದ್ಧ ಭಾಷಾತಜ್ಞ ಮತ್ತು ವಿಮರ್ಶಕರು. ಶಿವಮೊಗ್ಗ, ಶಿಕಾರಿಪುರ, ಆನೇಕಲ್‌, ಮೈಸೂರು ಮುಂತಾದೆಡೆ ಉಪನ್ಯಾಸಕರಾಗಿ, ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಭಾಷಾಂತರ ವಿಭಾಗ, ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗದ ಮುಖ್ಯಸ್ಥ, ಮಹಾರಾಣಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಅನುವಾದ ಕೃತಿಗಳು, ಕವನ ಸಂಕಲನ, ಪ್ರವಾಸ ಕಥನ ಮತ್ತು ವಿಮರ್ಶಾತ್ಮಕ ಲೇಖನಗಳನ್ನು ಅವರು ಪ್ರಕಟಿಸಿದ್ದಾರೆ.

ಇವರ ಆಸಕ್ತಿ ಮತ್ತು ತಜ್ಞತೆಯ ವ್ಯಾಪ್ತಿ ದೊಡ್ಡದು. ವಿಮರ್ಶೆಯ ಪರಿಭಾಷಾ ಕೋಶವೊಂದನ್ನು ರಚಿಸುವುದರಿಂದ ಆರಂಭಿಸಿ ಟಾಲ್‌ಸ್ಟಾಯ್ ಅವರ ‘ವಾರ್ ಅಂಡ್ ಪೀಸ್’ ಕೃತಿಯ ಕನ್ನಡ ಅನುವಾದದ ತನಕದ ಅನೇಕ ಕೆಲಸಗಳನ್ನು ನೋಡಿದರೆ ಇವರ ಆಸಕ್ತಿಯ ಹರಹು ಎಷ್ಟು ವಿಸ್ತಾರವಾದುದೆಂದು ತಿಳಿಯುತ್ತದೆ. ಸಾಹಿತಿಗಳಲ್ಲಿ ಯೂನಿಕೋಡ್ ಅನ್ನು ಒಗ್ಗಿಸಿಕೊಂಡವರಲ್ಲಿ ಓ.ಎಲ್.ಎನ್. ಮೊದಲಿಗರು.

ಇವರು ವಚನ ಸಂಚಯ ಪರಿಕಲ್ಪನೆಯ ರೂವಾರಿ. ಕೇವಲ ಪಠ್ಯವನ್ನು ಡಿಜಿಟೈಜ್ ಮಾಡಿದರಷ್ಟೇ ಸಾಕಾಗದು ಎಂಬ ಅವರ ನಿಲುವಿಗೆ ಕನಿಷ್ಠ ಒಂದು ದಶಕದಷ್ಟು ದೀರ್ಘ ಇತಿಹಾಸವಿದೆ. ವಚನ ಸಾಹಿತ್ಯದ ಜೊತೆಗೆ ಹಳಗನ್ನಡದ ಎಲ್ಲಾ ಕೃತಿಗಳನ್ನೂ ಆನ್‌ಲೈನ್‌ಗೆ ತರುವ ಹೆಬ್ಬಯಕೆ ಅವರದು. ಸಾಹಿತ್ಯದ ಸಂಪಾದನೆ ಮತ್ತು ಮಾರ್ಗದರ್ಶನದ ಮೂಲಕ ಸಂಚಯಕ್ಕೆ ಸುಂದರ ಚೌಕಟ್ಟು ನೀಡುತ್ತಿದ್ದಾರೆ.

ವಸುಧೇಂದ್ರ

ತಂತ್ರಜ್ಞಾನ, ಬರವಣಿಗೆ, ಪ್ರಕಾಶನ, ಪ್ರವಾಸ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿರುವ ವಸುಧೇಂದ್ರ ಅವರದು ಕ್ರಿಯಾಶೀಲ ವ್ಯಕ್ತಿತ್ವ. ಕತೆ, ಕಾದಂಬರಿ, ಲಲಿತ ಪ್ರಬಂಧ ಮುಂತಾದ ಬರಹ ಪ್ರಕಾರಗಳ ಮೂಲಕ ಪರಿಚಿತರು. ಬಳ್ಳಾರಿಯ ಸಂಡೂರಿನವಾರ ವಸುಧೇಂದ್ರ, ಸುರತ್ಕಲ್‌ನಲ್ಲಿ ಎಂ.ಇ. ಪದವಿ ಪೂರೈಸಿ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡಿದವರು.

ಹೀಗಾಗಿ ಸಾಹಿತ್ಯ ಮತ್ತು ತಂತ್ರಜ್ಞಾನ ಎರಡರಲ್ಲೂ ಅವರಿಗೆ ಅಪಾರ ಆಸಕ್ತಿ ಹಾಗೂ ಪರಿಣತಿ. ವಚನ ಸಂಚಯದ ಸಾಹಿತ್ಯಿಕ ಮತ್ತು ತಾಂತ್ರಿಕ ಸಂಗತಿಗಳೆರಡರಲ್ಲಿಯೂ ಅದರ ಹಿಂದಿರುವ ಶಕ್ತಿಯಾಗಿ ಹಾಗೂ ಓದುಗನಾಗಿ ಅವರು ಗುಣಮಟ್ಟ ಸುಧಾರಣೆಯ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.


ದೇವರಾಜ್

ದೇವರಾಜ್‌ ಮಂಡ್ಯ ಜಿಲ್ಲೆಯ ಭೀಮನಹಳ್ಳಿ ಮೂಲದವರು. ಓದಿದ್ದು ಬೆಂಗಳೂರಿನಲ್ಲಿ. ಎಂಜಿನಿಯರಿಂಗ್‌ ಪದವಿ ಪೂರೈಸಿದಾಗ ಅಂಕ ಕಡಿಮೆ ಇದೆ ಎಂಬ ಕಾರಣಕ್ಕೆ ಕೆಲಸ ಸಿಗಲಿಲ್ಲ. ಆರು ತಿಂಗಳ ಪ್ರಯತ್ನದ ಬಳಿಕ ಕಾರ್ಮಾಟೆಕ್‌ ಐಟಿ ಸಲ್ಯೂಷನ್ಸ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಅದೇ ಕಂಪೆನಿಯಲ್ಲಿದ್ದ ಓಂಶಿವಪ್ರಕಾಶ್‌ ಪರಿಚಯ ತಕ್ಕಮಟ್ಟಿಗಿತ್ತು. ಅವರ ಕನ್ನಡ ವಿಕಿಪೀಡಿಯಾ ಚಟುವಟಿಕೆ ಬಗ್ಗೆ ದೇವರಾಜ್‌ಗೆ ಕುತೂಹಲ ಮೂಡಿತು.

ದೇವರಾಜ್‌ ಅವರ ಶ್ರದ್ಧೆ ಗಮನಿಸಿದ ಶಿವಪ್ರಕಾಶ್‌ ಪುಟ್ಟದೊಂದು ಅಪ್ಲಿಕೇಶನ್‌ ತಯಾರಿಸುವ ಹೊಣೆಗಾರಿಕೆ ಕೊಟ್ಟರು. ಆರಂಭದಲ್ಲಿ ಚಿಕ್ಕದಿದ್ದರೂ ಕ್ರಮೇಣ ಅದು ಬೆಳೆಯತೊಡಗಿತು. ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವೂ ದೇವರಾಜ್‌ಗೆ ಇರಲಿಲ್ಲ. ಶಿವಪ್ರಕಾಶ್‌ ಹೇಳಿದ್ದನ್ನು ಅನುಸರಿಸುತ್ತಿದ್ದರು ಅಷ್ಟೇ. ವಚನ ಸಂಚಯದ ಸೃಷ್ಟಿ ಒಂದು ಹಂತಕ್ಕೆ ತಲುಪಿದ ಬಳಿಕವೇ ಇದೊಂದು ಬಹುದೊಡ್ಡ ಯೋಜನೆ ಎಂದು ಶಿವಪ್ರಕಾಶ್‌ ತಿಳಿಸಿದ್ದು. ಅಲ್ಲಿಂದ ನಿರಂತರವಾಗಿ ವಾರಾಂತ್ಯದಲ್ಲಿ ನಿದ್ದೆಗೆಟ್ಟು ಕೆಲಸ ಮಾಡಿದರು. ಈಗ ವಚನ ಸಂಚಯದ ಕೋಡಿಂಗ್‌, ಪ್ರೋಗ್ರಾಮಿಂಗ್‌ ಮತ್ತಿತರ ಡೆವಲಪಿಂಗ್‌ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ಓಂಶಿವಪ್ರಕಾಶ್

ಓಂಶಿವಪ್ರಕಾಶ್ -ಹುಟ್ಟಿದ್ದು ಮೈಸೂರಿನಲ್ಲಿ. ಬೆಂಗಳೂರಿನಲ್ಲಿ -ಎಂ.ಬಿ.ಎ -ಪದವಿ ಪಡೆದು ಕಾರ್ಮಾಟೆಕ್ ಎಂಬ ಐ.ಟಿ ಕಂಪೆನಿಯಲ್ಲಿ ತಂತ್ರಜ್ಞಾನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಚನ ಸಂಚಯದ ತಾಂತ್ರಿಕ ವಿನ್ಯಾಸ, ತಂತ್ರಜ್ಞಾನ ಆಯ್ಕೆ, ಬಳಕೆ, ಸುರಕ್ಷತೆ, ಮೂಲ ವ್ಯವಸ್ಥೆ (infrastructure), ಯೋಜನಾ ಸಹಯೋಗ, ಯೋಜನಾ ನಿರ್ವಹಣೆ, ಸಾಮಾಜಿಕ ಸಹಭಾಗಿತ್ವ, ಕ್ರಿಟಿಕಲ್ ಹ್ಯಾಕ್ಸ್ ಇತ್ಯಾದಿಗಳನ್ನು ನಿರ್ವಹಿಸುತ್ತಾರೆ. ಇದರಾಚೆಗೆ ಕನ್ನಡದಲ್ಲಿ ತಂತ್ರಜ್ಞಾನದ ಕುರಿತು ಬರೆಯುವುದು ಇವರ ಮುಖ್ಯ ಆಸಕ್ತಿ. ಲೀನಕ್ಸ್ ಕುರಿತ ಇವರ ‘ಲೀನಕ್ಸಾಯಣ’ ಅಂತರ್ಜಾಲದಲ್ಲಿ ಜನಪ್ರಿಯ.

ಪವಿತ್ರ ಹಂಚಗಯ್ಯ

ಪವಿತ್ರ ಹಂಚಗಯ್ಯ ಬೆಂಗಳೂರಿನ ಟ್ರೆಂಡ್ ಮೈಕ್ರೋ ಇಂಡಿಯಾ ಎಂಬ ಖಾಸಗಿ ಕಂಪೆನಿಯಲ್ಲಿ ಸೆಕ್ಯೂರಿಟಿ ಲಾಬ್ಸ್, ಸಾಫ್ಟ್‌ವೇರ್ ಅಭಿವೃದ್ಧಿ ವಿಭಾಗದ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಹುಟ್ಟೂರು ಶಿಂಷಾ. ಬೆಳೆದದ್ದು ಮಳವಳ್ಳಿಯಲ್ಲಿ. ಬೆಂಗಳೂರಿನ ಪಿ.ಇ.ಎಸ್‌. ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ, ಬಿಟ್ಸ್‌ ಪಿಲಾನಿಯಲ್ಲಿ ಎಂ.ಎಸ್. ಇನ್ ಸಾಫ್ಟ್‌ವೇರ್ ಸಿಸ್ಟಮ್ಸ್ ದೂರ ಶಿಕ್ಷಣ ಪದವಿ ಪೂರೈಸಿದರು. ವಚನ ಸಂಚಯದಲ್ಲಿ -ದತ್ತ ಸಂಚಯದ ವ್ಯವಸ್ಥಿತ ಮರುಬಳಕೆಗೆ ಅವಶ್ಯವಿರುವ ಅನೇಕ ತಂತ್ರಾಂಶಗಳ ಅಭಿವೃದ್ಧಿ ಜೊತೆಗೆ ತಾಂತ್ರಿಕ ಅಭಿವೃದ್ಧಿ ರೂಪುರೇಷಗಳ ಕುರಿತ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಇವರ ಆಸಕ್ತಿಯಲ್ಲಿ ಛಾಯಾಗ್ರಹಣವೂ ಸೇರಿಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT