ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ ಕಮತಿ ಗಡಿಯಲ್ಲಿ ಕನ್ನಡ ಜಾಗೃತಗೊಳಿಸಿದ ಶಕ್ತಿ

Last Updated 4 ಡಿಸೆಂಬರ್ 2012, 8:35 IST
ಅಕ್ಷರ ಗಾತ್ರ

ಚಿಕ್ಕೋಡಿ: ಡಾ.ಅನಿಲ ಕಮತಿ ವತ್ತಿಯಿಂದ ವೈದ್ಯರಾದರೂ, ಪ್ರವೃತಿಯಿಂದ ಕನ್ನಡ ಭಾಷೆ-ಸಂಸ್ಸೃತಿಯ ಚಿಕಿತ್ಸಕ. ಸ್ಪಷ್ಟ ನುಡಿ, ದಿಟ್ಟ ನಿಲುವಿನ ನಗುಮುಖದ ಅನಿಲ ಕಮತಿ ಅವರು ವ್ಯಕ್ತಿಯಲ್ಲ, ಕನ್ನಡದ ಶಕ್ತಿ. ನಾಡಿನ ಉತ್ತರದ ಗಡಿಯಲ್ಲಿ ಎಂಬತ್ತರ ದಶಕದಲ್ಲಿ ಜಡತ್ವಗೊಂಡಿದ್ದ ಕನ್ನಡದ ಕ್ರಿಯೆಗೆ ಚುರುಕು ಮುಟ್ಟಿಸಿದ ಕನ್ನಡಪ್ರೇಮಿ.

ಗಡಿಯಲ್ಲಿ ಕನ್ನಡದ ಯೋಗಕ್ಷೇಮ ಕಾಪಾಡುವ ಉದ್ದೇಶದಿಂದ ಯಕ್ಸಂಬಾದಲ್ಲಿ ಡಾ.ಅನಿಲ  ಕಮತಿ ಅವರು 1988ರಲ್ಲಿ ಅವರು ಸಹಚರರೊಂದಿಗೆ ಹುಟ್ಟು ಹಾಕಿದ  ಗೆಳೆಯರ ಬಳಗ  ಹಚ್ಚಿದ ಕನ್ನಡದ ದೀಪ ಇನ್ನೂ ಮಿನುಗುತ್ತಿದೆ. ಕನ್ನಡದ ಸಾರಸ್ವತ ಲೋಕದ ದಿಗ್ಗಜರೊಂದಿಗೆ ಸಾಮರಸ್ಯ ಬೆಳೆಸಿಕೊಂಡಿದೆ, ತನ್ನ ಕ್ರಿಯಾಶೀಲತೆಯನ್ನು ಉಳಿಸಿಕೊಂಡೇ ಪ್ರಸಕ್ತ ವರ್ಷವೇ 25ನೇ ವಸಂತಗಳನ್ನು ಪೂರೈಸಿದೆ.

ಕಳೆದ ಎರಡೂವರೆ ದಶಕಗಳಿಂದ ಪ್ರತಿ ವರ್ಷ ನ.1 ರಂದು ಕನ್ನಡೋತ್ಸವವನ್ನು ವಿಧಾಯಕವಾಗಿ ಆಚರಿಸುವ ಮೂಲಕ ಗಮನ ಸೆಳೆದಿದೆ. ಗೆಳೆಯರ ಬಳಗದ ಕನ್ನಡೋತ್ಸವಕ್ಕೆ ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರೆ, ಡಾ.ಶಿವರಾಮ ಕಾರಂತ, ಎಸ್.ನಿಜಲಿಂಗಪ್ಪ, ಎಂ.ವೀರಪ್ಪ ಮೊಯಿಲಿ, ಶಾಂತಾದೇವಿ ಮಾಳವಾಡ, ಸಿದ್ದಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಪಾಟೀಲ, ಪಾಟೀಲ ಪುಟ್ಟಪ್ಪ, ಹಾ.ಮಾ.ನಾಯಕ,  ಚಿಂದೋಡಿ ಲೀಲಾ, ಮಾಸ್ಟರ್ ಹಿರಣ್ಣಯ್ಯ, ಸುಧಾಮೂರ್ತಿ, ಜಯಂತ ಕಾಯ್ಕಿಣಿ, ಕುಂ.ವೀರಭದ್ರಪ್ಪ, ಎಂ.ಎಂ.ಕಲಬುರ್ಗಿ, ಚನ್ನವೀರ ಕಣವಿ, ಏಣಗಿ ಬಾಳಪ್ಪ, ಡಾ.ಸಾ.ಶಿ.ಮರುಳಯ್ಯ, ಮಹಾದೇವ ಬಣಕಾರ ಸೇರಿದಂತೆ ನಾಡಿನ ಹೆಸರಾಂತ ವಿದ್ವಾಂಸರು, ಸಾಹಿತಿಗಳು ನಾಡಿನ ಗಡಿಗೆ ಕರೆಯಿಸಿ ಗಡಿಕನ್ನಡಿಗರಲ್ಲಿ  ಹುರುಪು ತುಂಬಿಸಿದ್ದಾರೆ.

ಕೇವಲ ಭಾಷಣ, ಕಾರ್ಯಕ್ರಮಗಳಿಂದಲೇ ಇಲ್ಲಿನ ನೆಲದಾಳದಲ್ಲಿ ಕನ್ನಡದ ಹರಡಲಿಕ್ಕಿಲ್ಲ ಎಂಬ ಉದ್ದೇಶದಿಂದ ಡಾ.ಅನಿಲ  ಕಮತಿ ಅವರು ಮಿತ್ರರೊಂದಿಗೆ ಕೂಡಿಕೊಂಡು ಇಲ್ಲಿಯ ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ಬಳಗದ ಮೂಲಕ  ಶಾರದಾಲಯ ವನ್ನು ಕಟ್ಟಿದರು. ಇಂದು ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಬಳಗದ ದಶಮಾನೋತ್ಸವದ ಸವಿನೆಪಿಗಾಗಿ ಹೊರರತಂದ ಸೀಮೆ ಸಂಪಾದಿತ ಕತಿ, ಗಡಿಯೀಚೆ ಗಡಿಯಾಚೆ, ಏಡ್ಸ್ ಒಂದು ಯಕ್ಷಪ್ರಶ್ನೆ, ತಂತ್ರ ಕಾದಂಬರಿ, ಪ್ರಶಸ್ತಿ ಪುರಾಣ, ಒಡನಾಡಿ, ಗಡಿಯಲ್ಲಿ ಕನ್ನಡದ ಕಲರವ ಮುಂತಾದ ಕಮತಿ ಅವರ ಕೃತಿಗಳು ಮೌಲಿಕವಾಗಿವೆ. ಕಾಲಕಾಲಕ್ಕೆ ಕನ್ನಡಪರ ಲೇಖನಗಳನ್ನು ವತ್ತ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ವ್ಯವಸ್ಥೆಗೂ ಚುರುಕು ಮುಟ್ಟಿಸುವ ಕೆಲಸವನ್ನು ಅವರು ಮಾಡಿದ್ದಾರೆ.

ಗಡಿಯಲ್ಲಿನ ಕನ್ನಡದ ಸೇವೆಯನ್ನು ಮನಗಂಡ ಸರ್ಕಾರ ಡಾ.ಅನಿಲ ಕಮತಿ ಅವರಿಗೆ 2002ರಲ್ಲಿ  ರಾಜ್ಯೋತ್ಸವವನ್ನು ನೀಡಿ ಗೌರವಿಸಿದೆ. ಆದರೆ ನ.1 ರಂದೇ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವುದು ವಾಡಿಕೆ. ಯಕ್ಸಂಬಾದಲ್ಲೂ ಬಳಗವು ಅದೇ ದಿನ ಕನ್ನಡೋತ್ಸವವನ್ನು ಆಚರಿಸುತ್ತದೆ.

ಈ ಹಿನ್ನೆಲೆಯಲ್ಲಿ ಊರಹಬ್ಬವನ್ನು ಬಿಟ್ಟು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳದೇ ಯಕ್ಸಂಬಾದಲ್ಲಿ ಆಯೋಜಿಸಿದ್ದ ಕನ್ನಡೋತ್ಸವದಲ್ಲಿ ಅವರು ಭಾಗಿಯಾಗಿದ್ದು, ಅವರಲ್ಲಿನ ನಾಡ ಅಭಿಮಾನವನ್ನು ಪ್ರತಿಬಿಂಬಿಸುತ್ತದೆ. ಸರ್ಕಾರದ ಪ್ರತಿನಿಧಿಗಳು ಚಿಕ್ಕೋಡಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದನ್ನು ಸ್ಮರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT