ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ ಕೊಳವೆ ಮಾರ್ಗದ ಮೇಲೆ ದಾಳಿ

Last Updated 5 ಫೆಬ್ರುವರಿ 2011, 15:55 IST
ಅಕ್ಷರ ಗಾತ್ರ

ಕೈರೊ/ ಎಲ್-ಆರಿಶ್ (ಈಜಿಪ್ಟ್) (ಎಪಿ/ಪಿಟಿಐ): ಅನಿಲ ತುಂಬಿಸುವ ಕೇಂದ್ರ ಮತ್ತು ಅನಿಲ ಸರಬರಾಜು ಕೊಳವೆ ಮಾರ್ಗವನ್ನು ಸಂರಕ್ಷಿಸಲು ಈಜಿಪ್ಟ್ ಸೇನೆ ಕಾರ್ಯೋನ್ಮುಖವಾಗಿದೆ. ಇಸ್ರೇಲ್ ಮತ್ತು ಜೋರ್ಡಾನ್‌ಗೆ ಅನಿಲ ಪೂರೈಸುವ ಮಾರ್ಗ ಇದಾಗಿದ್ದು, ಸ್ಫೋಟದಿಂದ ಸಂಭವಿಸಿರಬಹುದಾದ ಸಾವು- ನೋವಿನ ಬಗ್ಗೆ ಏನೂ ವರದಿಯಾಗಿಲ್ಲ. ಇದರಿಂದ ಇಸ್ರೇಲ್, ಜೋರ್ಡಾನ್‌ಗಳಿಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆಯೇ ಎಂಬುದೂ ಖಚಿತಪಟ್ಟಿಲ್ಲ.

ಇದೇ ವೇಳೆ, ವಿಧ್ವಂಸಕರು ಗಾಜಾಪಟ್ಟಿ ಸಮೀಪದ ಉತ್ತರ ಸಿನಾಯ್ ಪ್ರದೇಶದಲ್ಲಿ ಶನಿವಾರ ಸರಣಿ ಸ್ಫೋಟದ ದಾಳಿ ಮಾಡಿ ಇಸ್ರೇಲ್ ಮತ್ತು ಜೋರ್ಡಾನ್‌ಗಳಿಗೆ ಅನಿಲ ಪೂರೈಸುವ ಪ್ರಮುಖ ಕೊಳವೆ ಮಾರ್ಗಕ್ಕೆ ಹಾನಿ ಎಸಗಿದ್ದಾರೆ. ಇದರಿಂದ 240 ಕಿ.ಮೀ. ಉದ್ದದ ಈ ಕೊಳವೆ ಮಾರ್ಗದ ಮೂಲಕ ಅನಿಲ ಸರಬರಾಜನ್ನು ಈಜಿಪ್ಟ್ ಸೇನೆ ಸ್ಥಗಿತಗೊಳಿಸಿದೆ.

ಗಾಜಾ ಪಟ್ಟಿಯಿಂದ 70 ಕಿ.ಮೀ. ದೂರದ ಎಲ್-ಆರಿಶ್ ಸಮೀಪ ಇರುವ ಸಿನಾಯ್ ಪಟ್ಟಣದ ವಿಮಾನ ನಿಲ್ದಾಣದ ಸಮೀಪ ಈ ಅನಿಲ ಮಾರ್ಗ ಹಾದು ಹೋಗಿದೆ.

ಇಸ್ರೇಲ್ ತನಗೆ ಅಗತ್ಯವಾದ ಅನಿಲ ಪೂರೈಕೆಗೆ ಈಜಿಪ್ಟ್ ಅನ್ನು ಬಹುವಾಗಿ ಅವಲಂಬಿಸಿದ್ದು, ಇದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ.

 ಈಜಿಪ್ಟ್‌ನಲ್ಲಿ ಅಧ್ಯಕ್ಷರ ಪದಚ್ಯುತಿಗೆ ನಡೆದಿರುವ ಜನಾಂದೋಲನದಿಂದ ಅನಿಲ ಪೂರೈಕೆ ಸ್ಥಗಿತವಾಗಬಹುದು ಎಂದು ಇಸ್ರೇಲ್ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಸ್ಫೋಟ ಸಂಭವಿಸಿದೆ.

ಪತ್ರಿಕಾ ಛಾಯಾಗ್ರಾಹಕ ಸಾವು: ಈಜಿಪ್ಟ್ ಸರ್ಕಾರದ ವಿರುದ್ಧ ದಂಗೆ ಎದ್ದಿರುವ ಜನರ ಪ್ರತಿಭಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಾಗ ಸಂಭವಿಸಿದ ಗಲಭೆಯಲ್ಲಿ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಪತ್ರಿಕಾ ಛಾಯಗ್ರಾಹಕನೊಬ್ಬ ಶುಕ್ರವಾರ ಮೃತಪಟ್ಟಿದ್ದಾನೆ.

ಪತ್ರಿಕೆ ಹೊರತಂದ ಪ್ರತಿಭಟನಾಕಾರರು!: ಹೋಸ್ನಿ ಮುಬಾರಕ್ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಪ್ರತಿಭಟನಾಕಾರರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಸ್ವಂತ ಪತ್ರಿಕೆ ಹೊರತಂದಿದ್ದಾರೆ.

ಸರ್ಕಾರದ ವಿರುದ್ಧದ ದಂಗೆಯ ಪ್ರತಿ ಮಾಹಿತಿ ಕುರಿತು ಜನರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ‘ಮೈದಾನ್ ತಹ್ರೀರ್’ ಎಂಬ ಹೆಸರಿನ ಒಂದು ಪುಟದ ಪತ್ರಿಕೆಯನ್ನು ಪ್ರತಿಭಟನಾನಿರತರು ಪ್ರಕಟಿಸಲು ಆರಂಭಿಸಿದ್ದು ಶೀಘ್ರ ಸ್ವಂತ ರೇಡಿಯೊ ಕೇಂದ್ರವನ್ನೂ ಆರಂಭಿಸುವುದಾಗಿ ಹೇಳಿದ್ದಾರೆ.

 ಪ್ರಧಾನಿ, ಆರ್ಥಿಕ ಸಚಿವರ ಜತೆ ಮುಬಾರಕ್ ಚರ್ಚೆ
ಕಳೆದ 12 ದಿನಗಳಿಂದ ತಮ್ಮ ವಿರುದ್ಧ ನಡೆದಿರುವ ತೀವ್ರ ಪ್ರತಿಭಟನೆ ರಾಷ್ಟ್ರದ ವಾಣಿಜ್ಯ ವಹಿವಾಟನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ಶನಿವಾರ ಪ್ರಧಾನ ಮಂತ್ರಿ, ಆರ್ಥಿಕ ಸಚಿವರು ಹಾಗೂ ಕೇಂದ್ರ ಬ್ಯಾಂಕ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು.

ರಾಷ್ಟ್ರಾಧ್ಯಕ್ಷರ ಅರಮನೆಯಲ್ಲಿ ನಡೆದ ಈ ಸಭೆಯಲ್ಲಿ ನೂತನ ಪ್ರಧಾನಿ ಶಫೀಕ್, ಹೊಸ ಆರ್ಥಿಕ ಸಚಿವ ಸಮೀರ್ ರಾದ್ವನ್, ಕೇಂದ್ರ ಬ್ಯಾಂಕ್ ಗವರ್ನರ್ ಫಾರೂಖ್ ಅಲ್ ಒಖ್‌ದಾ, ತೈಲ, ವಾಣಿಜ್ಯ ಮತ್ತು ಸಾಮಾಜಿಕ ಸುರಕ್ಷತಾ ಸಚಿವರು ಪಾಲ್ಗೊಂಡಿದ್ದರು. ಗಲಭೆಯಿಂದಾಗಿ ಮುಚ್ಚಿರುವ ಬ್ಯಾಂಕುಗಳಲ್ಲಿ ಕೆಲ ಬ್ಯಾಂಕುಗಳನ್ನು ಭಾನುವಾರದಿಂದ ಪುನಃ ತೆರೆಯುವ ಬಗ್ಗೆ, ಇದೇ ವೇಳೆ ಬ್ಯಾಂಕುಗಳಿಂದ ನಗದು ಪಡೆಯಲು ಮಿತಿ ಹೇರುವ ಕುರಿತು ಚರ್ಚಿಸಲಾಯಿತು. ಷೇರು ವಿನಿಮಯ ಮಂಡಳಿ ಪುನರಾರಂಭಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಸ್ಥಿರತೆಯಿಂದಾಗಿ ರಾಷ್ಟ್ರದ ಆರ್ಥಿಕ ಬೆಳವಣಿಗೆ ಕಳೆದ ವರ್ಷದ ಶೇ 5.3ರಷ್ಟಿದ್ದ ಆರ್ಥಿಕ ಬೆಳವಣಿಗೆ ಶೇ 3.7ಕ್ಕೆ ಇಳಿಯಬಹುದೆಂದು ಹಣಕಾಸು ವಿಶ್ಲೇಷಣಾ ಸಂಸ್ಥೆಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT